ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಚಿತ್ರದುರ್ಗ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳಲ್ಲಿನ ಭಿನ್ನಮತ ನಿವಾರಿಸುವಲ್ಲಿ ಯಶಸ್ವಿಯಾದರು.

ಬೆಂಗಳೂರು(ಏ.02): ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನದ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಕಸರತ್ತು ನಡೆಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಚಿತ್ರದುರ್ಗ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳಲ್ಲಿನ ಭಿನ್ನಮತ ನಿವಾರಿಸುವಲ್ಲಿ ಯಶಸ್ವಿಯಾದರು.

ಪರಿಣಾಮ, ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದ ಶಾಸಕ ಚಂದ್ರಪ್ಪ ಪುತ್ರ ರಘುಚಂದನ್‌ ಅವರು ತಮ್ಮ ನಿಲುವಿನಿಂದ ಹಿಂದೆ ಸರಿದು ಪಕ್ಷದ ಅಧಿಕೃತ ಅಭ್ಯರ್ಥಿ ಗೋವಿಂದ ಕಾರಜೋಳ ಅವರ ಪರವಾಗಿ ಕೆಲಸ ಮಾಡುವುದಾಗಿ ಪ್ರಕಟಿಸಿದರು. ಸೋಮವಾರ ಶಾಸಕ ಚಂದ್ರಪ್ಪ, ಪುತ್ರ ರಘುಚಂದನ್ ಸೇರಿದಂತೆ ಚಿತ್ರದುರ್ಗದ ಹಲವು ಮುಖಂಡರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಸಮಾಲೋಚನೆ ನಡೆಸಿದರು.

ಹಾಸನದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ಸ್ಪರ್ಧೆ ಫಿಕ್ಸ್‌ ? ಪ್ರೀತಂ ಗೌಡ ಜೊತೆ ಅಂತರ ಕಾಯ್ದುಕೊಂಡ ರೇವಣ್ಣ ಪುತ್ರ!

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಪ್ಪ, ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ನಮಗೆ ಎಂದಿಗೂ ಅನ್ಯಾಯ ಮಾಡಿದವರು ಅಲ್ಲ. ಅವರ ಮಾತಿಗೆ ಗೌರವ, ಮರ್ಯಾದೆ ಕೊಟ್ಟಿದ್ದೇವೆ. ಮಗನಿಗೆ ಪಕ್ಷದಲ್ಲಿ ಮುಂದೆ ಉತ್ತಮ ಅವಕಾಶ ಕೊಡುವ ವಿಶ್ವಾಸ ಇದೆ. ನನ್ನ ಮಗ ಪಕ್ಷೇತರನಾಗಿ ಸ್ಪರ್ಧೆ ಮಾಡುವುದಿಲ್ಲ. ನಾವೆಲ್ಲರೂ ಪಕ್ಷದ ಪರ ಕೆಲಸ ಮಾಡುತ್ತೇವೆ. ಪಕ್ಷದ ಅಭ್ಯರ್ಥಿ ಕಾರಜೋಳ ಪರ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಹೇಳಿದರು.
ರಘುಚಂದನ್ ಮಾತನಾಡಿ, ಯಡಿಯೂರಪ್ಪ ಅವರು ನಮಗೆ ಗಾಡ್ ಫಾದರ್ ಇದ್ದಂತೆ. ಅವರ ನೆರಳಿನಲ್ಲೇ ರಾಜಕೀಯಕ್ಕೆ ಬಂದವರು ನಾವು. ಅವರು ನಮ್ಮ ತಂದೆ ಸ್ಥಾನದಲ್ಲಿದ್ದಾರೆ. ಅವರ ಮಾತನ್ನು ಕೇಳುತ್ತೇವೆ. ಇವತ್ತು ನಾವು ಬೆಂಬಲ ಕೊಡುವ ತೀರ್ಮಾನ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಹಾಸನ ಬಿಕ್ಕಟ್ಟು ಶಮನ:

ಬಳಿಕ ಖಾಸಗಿ ಹೋಟೆಲ್‌ವೊಂದರಲ್ಲಿ ಹಾಸನ ಜಿಲ್ಲೆಯ ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರೊಂದಿಗೆ ವಿಜಯೇಂದ್ರ ಸಭೆ ನಡೆಸಿ ಭಿನ್ನಮತ ಶಮನಕ್ಕೆ ಪ್ರಯತ್ನ ಮಾಡಿದ್ದು, ಬಹುತೇಕ ಯಶಸ್ವಿಯಾಗಿದೆ. ಸಭೆಯಲ್ಲಿ ಜೆಡಿಎಸ್‌ನ ಹಾಲಿ ಸಂಸದ ಪ್ರಜ್ವಲ್ ರೇವಣ್ಣ, ಬಿಜೆಪಿಯ ಮಾಜಿ ಶಾಸಕ ಪ್ರೀತಂ ಗೌಡ ಮತ್ತಿತರರು ಭಾಗಿಯಾಗಿದ್ದರು. ಪ್ರೀತಂಗೌಡ ತಟಸ್ಥ ಧೋರಣೆ ಅನುಸರಿಸುತ್ತಿರುವ ಬಗ್ಗೆ ಜೆಡಿಎಸ್ ನಾಯಕರು ಬಿಜೆಪಿ ನಾಯಕರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಸಭೆ ಆಯೋಜಿಸಲಾಗಿತ್ತು.

ಪ್ರೀತಂ ಗೌಡಗೆ ಸಹಕಾರ ನೀಡಿ: ಸಂಸದ ಪ್ರಜ್ವಲ್ ರೇವಣ್ಣ ಮನವಿ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಜ್ವಲ್ ರೇವಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪಕ್ಷದ ಮುಖಂಡರ ಮನವೊಲಿಸುತ್ತಾರೆ. ಪ್ರೀತಂಗೌಡ ಅವರೊಂದಿಗಿನ ಭಿನ್ನಮತ ಕೂಡ ಶಮನವಾಗಲಿದೆ. 4ರಂದು ನಾನು ನಾಮಪತ್ರ ಸಲ್ಲಿಸುತ್ತೇನೆ. ಅಂದು ಎಲ್ಲರೂ ಒಗ್ಗಟ್ಟಾಗಿ ಹೋಗುತ್ತೇವೆ. ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದು ತಿಳಿಸಿದರು.

ವಿಜಯೇಂದ್ರ ಮಾತನಾಡಿ, ಹಾಸನದಿಂದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಸ್ಫರ್ಧೆ ಮಾಡುತ್ತಿದ್ದಾರೆ. ಪ್ರಜ್ವಲ್ ಪರವಾಗಿ ನಾವೆಲ್ಲ ಶ್ರಮ ಹಾಕಿ ಗೆಲ್ಲಿಸುತ್ತೇವೆ. ಹಳೆಯದನ್ನೆಲ್ಲ ಮರೆತು ಒಗ್ಗಟ್ಟಾಗಿ ಜೊತೆಯಲ್ಲಿ ಹೋಗೋಣ ಎನ್ನುವ ನಿರ್ಧಾರ ಮಾಡಿದ್ದೇವೆ. ನಾಮ ಪತ್ರ ಸಲ್ಲಿಕೆಗೆ ನಾನು ಕೂಡ ಹೋಗುತ್ತೇನೆ. ಬಿಜೆಪಿ ಮುಖಂಡ ಪ್ರೀತಂಗೌಡ ಕೂಡ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತಾರೆ. ನಾನು ಮಾತನಾಡುವುದಿಲ್ಲವಾದರೂ ಕೆಲಸ ಮಾಡುತ್ತೇನೆ ಎಂದಿದ್ದಾರೆ ಎಂದು ಹೇಳಿದರು.