ಆಂಧ್ರದಲ್ಲಿ ಚಂದ್ರಬಾಬು, ಪವನ್ ಕಲ್ಯಾಣ್ ಮೈತ್ರಿ..? ಜಗನ್ ವಿರುದ್ಧ ಪ್ರಬಲ ಮೈತ್ರಿಕೂಟ ಸೃಷ್ಟಿಗೆ ಯತ್ನ..!
ಆಂಧ್ರದಲ್ಲಿ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ಮೈತ್ರಿ ಮಾಡಿಕೊಳ್ಲಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಟಿಡಿಪಿ ಮುಖ್ಯಸ್ಥನ ಮನೆಗೆ ತೆರಳಿ ನಟ, ರಾಜಕಾರಣಿ ಭೇಟಿಯಾಗಿದ್ದು, ಸಿಎಂ ಜಗನ್ ವಿರುದ್ಧ ಪ್ರಬಲ ಮೈತ್ರಿಕೂಟ ಸೃಷ್ಟಿಗೆ ಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಹೈದರಾಬಾದ್: 2024ರಲ್ಲಿ ನಡೆಯಬೇಕಿರುವ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೆ ತೆಲುಗುದೇಶಂ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹಾಗೂ ಪ್ರಸಿದ್ಧ ಚಿತ್ರ ನಟ ಪವನ್ ಕಲ್ಯಾಣ್ ಅವರ ನಡುವೆ ಮೈತ್ರಿ ಏರ್ಪಡುವ ಸಾಧ್ಯತೆ ಗೋಚರಿಸಿದೆ. ಜನಸೇನಾ ಪಕ್ಷದ ನಾಯಕರಾಗಿರುವ ಪವನ್ ಕಲ್ಯಾಣ್ ಅವರು ಚಂದ್ರಬಾಬು ನಾಯ್ಡು ಮನೆಗೇ ತೆರಳಿ ಮಾತುಕತೆ ನಡೆಸಿದ್ದಾರೆ. ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ, ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಭಾನುವಾರ ಹೈದರಾಬಾದ್‌ನಲ್ಲಿರುವ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ನಿವಾಸದಲ್ಲಿ ಅವರನ್ನು ಭೇಟಿಯಾಗಿದ್ದಾರೆ .ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಉಭಯ ನಾಯಕರು ರಾಜ್ಯದ ಇತ್ತೀಚಿನ ರಾಜಕೀಯ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದ್ದಾರೆ.
ಚಂದ್ರಬಾಬು ನಾಯ್ಡು (Chandrababu Naidu) ಮತ್ತು ಪವನ್ ಕಲ್ಯಾಣ್ (Pawan Kalyan) ಮುಂದಿನ ಚುನಾವಣೆಯಲ್ಲಿ (Election) ಅನುಸರಿಸಬೇಕಾದ ರಾಜಕೀಯ ಕಾರ್ಯತಂತ್ರದ (Political Strategy) ಬಗ್ಗೆ ಚರ್ಚಿಸಲು ಬಯಸಿದ ಕಾರಣ ಎರಡೂ ಕಡೆಯ ಇತರೆ ಯಾವುದೇ ಹಿರಿಯ ನಾಯಕರು ಅವರೊಂದಿಗೆ ಹೋಗಲಿಲ್ಲ ಎಂದು ತಿಳಿದುಬಂದಿದೆ. ಆಂಧ್ರ ಪ್ರದೇಶದಲ್ಲಿ (Andhra Pradesh) ಇಬ್ಬರು ವಿರೋಧ ಪಕ್ಷದ ನಾಯಕರ ನಡುವಿನ ಎರಡನೇ ಸಭೆ ಇದಾಗಿದೆ. ಈ ಹಿನ್ನೆಲೆ, ಮುಂಬರುವ ಚುನಾವಣೆಯಲ್ಲಿ ಟಿಡಿಪಿ (TDP) ಜೊತೆ ಮೈತ್ರಿ ಮಾಡಿಕೊಳ್ಳಲು ಜನಸೇನಾ (Janasena) ಮುಂದಾಗುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ: ರಸ್ತೆಯಲ್ಲಿ ಸಭೆ ಸಮಾವೇಶ ನಡೆಸಲು ಅನುಮತಿ ಇಲ್ಲ: ಆಂಧ್ರಪ್ರದೇಶ ಸರ್ಕಾರ ಆದೇಶ
ಚಂದ್ರಬಾಬು ನಾಯ್ಡು ಅವರು ಶನಿವಾರ ರಾತ್ರಿಯೇ ತಮ್ಮ ತವರು ಕ್ಷೇತ್ರ-ಕುಪ್ಪಂಗೆ ಭೇಟಿ ನೀಡಿದ ಬಳಿಕ ಹೈದರಾಬಾದ್‌ಗೆ ಮರಳಿದರು. ರಸ್ತೆಗಳಲ್ಲಿ ರೋಡ್‌ಶೋಗಳು, ರ್‍ಯಾಲಿಗಳು ಮತ್ತು ಸಭೆಗಳನ್ನು ನಿಷೇಧಿಸಲು ಹೊರಡಿಸಲಾದ ಹೊಸ ಸರ್ಕಾರಿ ಆದೇಶದ ನೆಪದಲ್ಲಿ ಪೊಲೀಸರು ಈ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪ್ರವಾಸಕ್ಕೆ ಹೇಗೆ ನಿರ್ಬಂಧ ಹೇರಿದರು ಎಂದು ಮಾಜಿ ಸಿಎಂ ಚಂದ್ರಬಾಬು ನಾಯ್ಡು ವಿವರಿಸಿದ್ದಾರೆಂದು ಹೇಳಲಾಗಿದೆ.
ಇತ್ತೀಚೆಗೆ ಆಂಧ್ರದ ವೈಎಸ್ಸಾರ್ ಕಾಂಗ್ರೆಸ್ ಸರ್ಕಾರ ರಾಜಕೀಯ ಪಕ್ಷಗಳ ರ್‍ಯಾಲಿ ಹಾಗೂ ಸಾರ್ವಜನಿಕ ಸಮಾವೇಶಗಳಿಗೆ ನಿರ್ಬಂಧ ಹೇರಿದೆ. ಇದರ ವಿರುದ್ಧ ಇಬ್ಬರೂ ನಾಯಕರು ಜಂಟಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಇಬ್ಬರೂ ನಾಯಕರು ಹತ್ತಿರವಾಗುವ ಸ್ಪಷ್ಟ ಸುಳಿವು ಗೋಚರವಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಚಂದ್ರಬಾಬು ನಾಯ್ಡು ರ್‍ಯಾಲಿ ವೇಳೆ ಮತ್ತೆ ಕಾಲ್ತುಳಿತ: ಮೂವರ ಸಾವು, ಹಲವರಿಗೆ ಗಾಯ
“ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಪೊಲೀಸರಿಂದ ಇಂತಹ ಪ್ರಜಾಪ್ರಭುತ್ವ ವಿರೋಧಿ ಧೋರಣೆಯನ್ನು ನಾನು ನೋಡಿಲ್ಲ. ಇದು ನನ್ನ ಪ್ರವಾಸದ ಬಗ್ಗೆ ಅಲ್ಲ. ಇದು ಪ್ರಜಾಪ್ರಭುತ್ವದ ಬಗ್ಗೆ. ನಾವು ಅವರ ಸರ್ಕಾರವನ್ನು ಒಗ್ಗಟ್ಟಿನಿಂದ ಎದುರಿಸಬೇಕಾಗಿದೆ” ಎಂದು ಪವನ್ ಕಲ್ಯಾಣ್‌ಗೆ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.
ಒಂದೆರಡು ತಿಂಗಳ ಹಿಂದೆ ವಿಶಾಖಪಟ್ಟಣಕ್ಕೆ ಭೇಟಿ ನೀಡಿದಾಗ ಪವನ್ ಕಲ್ಯಾಣ್ ಸಹ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದರು. ರೋಡ್ ಶೋ ನಡೆಸಲು ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ಬಂದರು ನಗರದಲ್ಲಿ ಪವನ್ ಕಲ್ಯಾಣ್ ಸಭೆಯನ್ನು ಸ್ಥಗಿತಗೊಳಿಸಿ ವಿಜಯವಾಡ ತಲುಪಿದ್ದಾರೆ. ನಂತರ ಚಂದ್ರಬಾಬು ನಾಯ್ಡು ಅವರು ಹೋಟೆಲ್‌ಗೆ ತೆರಳಿ ಪವನ್ ಕಲ್ಯಾಣ್ ಅವರೊಂದಿಗೆ ಚರ್ಚೆ ನಡೆಸಿದ್ದರು.
ಇದನ್ನೂ ಓದಿ: ಚಂದ್ರಬಾಬು ನಾಯ್ಡು ರೋಡ್‌ಶೋದಲ್ಲಿ ಭೀಕರ ಕಾಲ್ತುಳಿತ, 8 ಸಾವು ಹಲವರು ಗಂಭೀರ!
ಮುಂದಿನ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ಸೋಲನ್ನು ಖಚಿತಪಡಿಸಿಕೊಳ್ಳಲು ಆಡಳಿತ ವಿರೋಧಿ ಮತಗಳಲ್ಲಿ ವಿಭಜನೆಗೆ ಅವಕಾಶ ನೀಡುವುದಿಲ್ಲ ಎಂದು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಈಗಾಗಲೇ ಘೋಷಿಸಿದ್ದರು. ಆದರೆ, ಮೈತ್ರಿ ಬಗ್ಗೆ ಅಧಿಕೃತ ಘೋಷಣೆಗಾಗಿ ಎರಡೂ ಪಕ್ಷಗಳ ಕಾರ್ಯಕರ್ತರು ಕಾತರದಿಂದ ಕಾಯುತ್ತಿದ್ದಾರೆ.
ಈ ನಡುವೆ, ಈ ಬೆಳವಣಿಗೆಯನ್ನು ಪವನ್ ಕಲ್ಯಾಣ್ ಅವರ ಅವಕಾಶವಾದಿ ರಾಜಕಾರಣದ ಮತ್ತೊಂದು ನಿದರ್ಶನ ಎಂದು ವೈಎಸ್ಸಾರ್ ಕಾಂಗ್ರೆಸ್ ಬಣ್ಣಿಸಿದೆ. ಮತ್ತೊಂದೆಡೆ, ಕಾಪು ಸಮುದಾಯ ತನ್ನವರನ್ನೇ ಮುಖ್ಯಮಂತ್ರಿ ಮಾಡುವ ಕನಸು ಕಾಣುತ್ತಿದೆ. ನಾಯ್ಡು ಜತೆ ಕೈಜೋಡಿಸಿದರೆ ಕಾಪುಗಳಿಗೆ ಹೇಗೆ ಸಿಎಂ ಹುದ್ದೆ ಒಲಿಯುತ್ತದೆ ಎಂದು ಜನಸೇನಾದ ಮಿತ್ರಪಕ್ಷ ಬಿಜೆಪಿ ಟಾಂಗ್ ಕೊಟ್ಟಿದೆ.
ಇದನ್ನೂ ಓದಿ: ಟಿಡಿಪಿ ಮತ್ತೆ ಎನ್‌ಡಿಎ ಬಳಗಕ್ಕೆ: ನಾಯ್ಡು ಕರೆತರಲು ರಾಮೋಜಿ ಮಧ್ಯಸ್ಥಿಕೆ?