ಕಬ್ಬು ಖರೀದಿ ದರ ಹೆಚ್ಚಳಕ್ಕೆ ಆಗ್ರಹಿಸಿ ಕರ್ನಾಟಕದಲ್ಲಿ ಕಬ್ಬುಬೆಳೆಗಾರರ ಬೃಹತ್‌ ಹೋರಾಟದ ಬೆನ್ನಲ್ಲೇ ಕೇಂದ್ರ ಈಗ, ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಹಾಲಿ 31 ನಿಂದ 40ಗೆ ಹೆಚ್ಚಿಸುವ ಬೇಡಿಕೆ ಕುರಿತು ಪರಿಶೀಲಿಸುವುದಾಗಿ ಭರವಸೆ ನೀಡಿದೆ.

ನವದೆಹಲಿ (ನ.19): ಕಬ್ಬು ಖರೀದಿ ದರ ಹೆಚ್ಚಳಕ್ಕೆ ಆಗ್ರಹಿಸಿ ಕರ್ನಾಟಕದಲ್ಲಿ ಕಬ್ಬುಬೆಳೆಗಾರರ ಬೃಹತ್‌ ಹೋರಾಟದ ಬೆನ್ನಲ್ಲೇ ಕೇಂದ್ರ ಸರ್ಕಾರ ಈಗ, ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಹಾಲಿ 31 ರು.ನಿಂದ 40 ರು.ಗೆ ಹೆಚ್ಚಿಸುವ ಬೇಡಿಕೆ ಕುರಿತು ಪರಿಶೀಲಿಸುವುದಾಗಿ ಭರವಸೆ ನೀಡಿದೆ. ಅಕ್ಟೋಬರ್‌ನಲ್ಲಿ ಆರಂಭವಾಗುವ 2025-26ನೇ ಸಾಲಿನ ಮಾರುಕಟ್ಟೆ ವರ್ಷದಲ್ಲಿ 15 ಲಕ್ಷ ಟನ್‌ನಷ್ಟು ಸಕ್ಕರೆ ರಫ್ತಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಅದರ ಜತೆಗೆ, ಸಕ್ಕರೆ ಮಾರಾಟದ ಕನಿಷ್ಠ ದರ ಹೆಚ್ಚಿಸುವ ಉದ್ದಿಮೆಗಳ ಬೇಡಿಕೆ ಕುರಿತೂ ಪರಿಶೀಲನೆ ನಡೆಸಲಾಗುವುದು ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ. ಸದ್ಯ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಪ್ರತಿ ಕೆ.ಜಿ.ಗೆ 31 ರು. ಆಗಿದೆ. ಇದು 2019ರ ಫೆಬ್ರವರಿಯಲ್ಲಿ ನಿಗದಿಯಾದ ದರ. ಉತ್ಪಾದನಾ ವೆಚ್ಚ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ಕರೆ ಉದ್ಯಮದ ಅಗ್ರ ಸಂಸ್ಥೆಯಾದ ಇಸ್ಮಾ(ಐಎಸ್‌ಎಂಎ) ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಪ್ರತಿ ಕೆ.ಜಿ.ಗೆ 40.2 ರು.ಗೇರಿಸುವಂತೆ ಮನವಿ ಮಾಡುತ್ತಲೇ ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಜೋಶಿ ಅ‍ವರು, ನಾವು 10 ಲಕ್ಷ ಟನ್‌ ಸಕ್ಕರೆ ರಫ್ತಿಗೆ ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ 2024-25ರ ಅವಧಿಯಲ್ಲಿ ಸಕ್ಕರೆ ಬೆಲೆಯು ಸ್ಥಿರವಾಗಿತ್ತು. ನಾವು ಇತ್ತೀಚೆಗೆ 15 ಲಕ್ಷ ಟನ್‌ ಸಕ್ಕರೆ ರಫ್ತಿಗೆ ಅನುಮತಿ ನೀಡಿದ್ದೇವೆ ಎಂದು ಹೇಳಿದರು. ರಫ್ತಿನಿಂದ ಸಕ್ಕರೆ ದರದ ಮೇಲಾಗುವ ಪರಿಣಾಮ ಕುರಿತು ಸಚಿವಾಲಯ ಪರಿಶೀಲನೆ ನಡೆಸಲಿದೆ. ಆ ಬಳಿಕ ಸಕ್ಕರೆ ಮಾರಾಟದ ಕನಿಷ್ಠ ದರ ಹೆಚ್ಚಿಸುವ ಬೇಡಿಕೆ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಜೋಶಿ ತಿಳಿಸಿದರು.

8 ಲಕ್ಷ ಟನ್‌ನಷ್ಟು ಸಕ್ಕರೆ ರಫ್ತು

ಭಾರತವು 2024-25ನೇ ಮಾರ್ಕೆಟಿಂಗ್‌ ವರ್ಷ(ಅಕ್ಟೋಬರ್‌ನಿಂದ ಸೆಪ್ಟೆಂಬರ್‌)ದಲ್ಲಿ ಸುಮಾರು 8 ಲಕ್ಷ ಟನ್‌ನಷ್ಟು ಸಕ್ಕರೆ ರಫ್ತು ಮಾಡಿತ್ತು. ಇನ್ನು ಹಿರಿಯ ಆಹಾರ ಅಧಿಕಾರಿಯೊಬ್ಬರು ಕೂಡ ಸರ್ಕಾರ ಸಕ್ಕರೆಯ ಕನಿಷ್ಠ ಖರೀದಿ ದರ ಕುರಿತೂ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಕಬ್ಬಿನ ಖರೀದಿ ದರವು ಪ್ರತಿ ಕ್ವಿಂಟಲ್‌ಗೆ 275 ರು.ನಿಂದ 355 ರು.ಗೆ ಏರಿಕೆಯಾಗಿದೆ. ಅಂದರೆ ಶೇ.29ರಷ್ಟು ಹೆಚ್ಚಾಗಿದೆ. ಇದರಿಂದ ಸಕ್ಕರೆ ಉತ್ಪಾದನಾ ವೆಚ್ಚವೂ ಹೆಚ್ಚಾಗಿದೆ. ಹೀಗಾಗಿ ಸರ್ಕಾರವು 2025-26ನೇ ಮಾರುಕಟ್ಟೆ ವರ್ಷದಲ್ಲಿ ಸಕ್ಕರೆಯ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕೆ.ಜಿ.ಗೆ 40.2ರು.ಗೆ ಹೆಚ್ಚಿಸುವಂತೆ ಇಸ್ಮಾ ಒತ್ತಾಯಿಸಿದೆ.