ಕರ್ನಾಟಕದಿಂದ ತೈಲ ಮಾರಾಟ ಕಂಪನಿಗಳಿಗೆ ನಿಗದಿ ಮಾಡಿರುವುದು 47 ಕೋಟಿ ಲೀಟರ್‌ ಎಥೆನಾಲ್‌ ಅಲ್ಲ, 116.30 ಕೋಟಿ ಲೀಟರ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಲ್ಹಾದ್ ಜೋಶಿಗೆ ತಿರುಗೇಟು ನೀಡಿದ್ದಾರೆ.

ಬೆಂಗಳೂರು (ನ.08): ‘ಕರ್ನಾಟಕದಿಂದ ತೈಲ ಮಾರಾಟ ಕಂಪನಿಗಳಿಗೆ ನಿಗದಿ ಮಾಡಿರುವುದು 47 ಕೋಟಿ ಲೀಟರ್‌ ಎಥೆನಾಲ್‌ ಅಲ್ಲ, 116.30 ಕೋಟಿ ಲೀಟರ್ ಎನ್ನುವ ಮೂಲಕ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಬೆತ್ತಲೆ ಸುಳ್ಳನ್ನು ನಿರ್ಲಜ್ಜವಾಗಿ ಹೇಳಿ ಸಚಿವ ಸ್ಥಾನದ ಮರ್ಯಾದೆ ಕಳೆದಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ರಾಜ್ಯದಿಂದ ತೈಲ ಕಂಪನಿಗಳಿಗೆ 47 ಕೋಟಿ ಲೀಟರ್‌ ಎಥೆನಾಲ್‌ ನಿಗದಿ ಮಾಡಿರುವುದಾಗಿ ಕೇಂದ್ರದ ಗ್ರಾಹಕ ವ್ಯವಹಾರಗಳು, ಆಹಾರ ಹಾಗೂ ನಾಗರಿಕ ಸರಬರಾಜು ಸಚಿವರಾದ ಜೋಶಿ ಅವರು ಆ.6ರಂದು ಲೋಕಸಭೆಯಲ್ಲೇ ಉತ್ತರ ನೀಡಿದ್ದಾರೆ.

ಈಗ ಉಲ್ಟಾ ಹೇಳಿಕೆ ನೀಡಿದ್ದಾರೆ. ಹಾಗಾದರೆ ಜೋಶಿ ಅವರು ಈಗ ನೀಡಿರುವ ಹೇಳಿಕೆ ಸುಳ್ಳಾಗಿರಬೇಕು, ಇಲ್ಲವಾದರೆ ಲೋಕಸಭೆಯಲ್ಲಿ ನೀಡಿದ್ದ ಉತ್ತರ ಸುಳ್ಳಾಗಿರಬಹುದು. ಯಾವ ಹೇಳಿಕೆಯನ್ನು ಒಪ್ಪಿಕೊಂಡರೂ ಜೋಶಿ ಅವರಿಗೆ ಸುಳ್ಳುಗಾರನ ಪಟ್ಟ ತಪ್ಪಿದ್ದಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಜೋಶಿ ಅವರ ಉತ್ತರದ ಸಹಿತ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜೋಶಿ ಅವರು ರೈತರಿಗೆ ಬಹಿರಂಗ ಕ್ಷಮೆ ಕೋರಬೇಕು. ಕೇಂದ್ರದಿಂದ ಆಗುತ್ತಿರುವ ಅನ್ಯಾಯ ಸರಿಪಡಿಸಿ ಪ್ರಾಯಃಶ್ಚಿತ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದಿಂದ ತೈಲ ಮಾರಾಟ ಕಂಪನಿಗಳಿಗೆ ಎಥೆನಾಲ್ ಹಂಚಿಕೆ ನಿಗದಿ ಆಗಿರುವುದು 116.30 ಕೋಟಿ ಲೀಟರೇ ಹೊರತು 47 ಕೋಟಿ ಲೀಟರ್ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರ್ಖಂಡ್ ರಾಜ್ಯದ ಲೆಕ್ಕ ನೀಡಿದ್ದಾರೆ ಎಂದು ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ. ತನ್ಮೂಲಕ ಸುಳ್ಳನ್ನೇ ಮನೆದೇವರು ಮಾಡಿಕೊಂಡಿರುವ ಬಿಜೆಪಿಯ ವಿಧೇಯ ಅನುಯಾಯಿ ಎಂದು ಸಾಬೀತುಪಡಿಸಿದ್ದಾರೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.

ನಾನು ಸುದ್ದಿಗೋಷ್ಠಿಯಲ್ಲಿ 2024-25ನೇ ಸಾಲಿನಲ್ಲಿ ತೈಲ ಮಾರಾಟ ಕಂಪನಿಗಳಿಗೆ ಹಂಚಿಕೆಯಾಗಿದ್ದ ಎಥೆನಾಲ್‌ ಪ್ರಮಾಣ ಸೀಮಿತವಾಗಿಟ್ಟುಕೊಂಡು ಮಾತನಾಡಿದ್ದೆ. 2024-25ನೇ ಸಾಲಿನಲ್ಲಿ ಕರ್ನಾಟಕದ 46 ಡಿಸ್ಟಿಲರಿಗಳ ಎಥೆನಾಲ್ ಉತ್ಪಾದನಾ ಸಾಮರ್ಥ್ಯ 270 ಕೋಟಿ ಲೀಟರ್, ನಮ್ಮಿಂದ ತೈಲ ಕಂಪನಿಗಳಿಗೆ ಹಂಚಿಕೆಯಾಗಿರುವುದು ಕೇವಲ 47 ಕೋಟಿ ಲೀಟರ್ ಎಂದು ಜೋಶಿ ಅವರೇ ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಬಹಿರಂಗಪಡಿಸಿದ್ದಾರೆ.

ಇದ್ಯಾವ ನ್ಯಾಯ?

ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ 879 ಕೋಟಿ ಲೀಟರ್‌ ಎಥೆನಾಲ್‌ ಉತ್ಪಾದನೆಯಾಗಿದ್ದರೆ ರಾಜ್ಯದಿಂದ 171 ಕೋಟಿ ಲೀಟರ್‌ ಮಾತ್ರ ಖರೀದಿಸಲಾಗಿದೆ. ಆದರೆ ಗುಜರಾತ್ ರಾಜ್ಯದ ವಾರ್ಷಿಕ ಎಥೆನಾಲ್ ಉತ್ಪಾದನಾ ಸಾಮರ್ಥ್ಯ 40 ಕೋಟಿ ಲೀಟರ್ ಇದ್ದರೆ, ತೈಲ ಮಾರಾಟ ಕಂಪನಿಗಳಿಗೆ 31 ಕೋಟಿ ಲೀಟರ್ ಹಂಚಿಕೆ ಮಾಡಲಾಗಿದೆ. ಇದ್ಯಾವ ನ್ಯಾಯ? ನಮ್ಮ ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಪ್ರಹ್ಲಾದ್ ಜೋಶಿ ಅವರು ಧ್ವನಿ ಎತ್ತಬೇಕಲ್ಲವೇ? ಕಬ್ಬಿನ ಎಫ್‌ಆರ್‌ಪಿ ಹಾಗೂ ಸಕ್ಕರೆಯ ಕನಿಷ್ಠ ಬೆಂಬಲ ಹೆಚ್ಚಳ ಮಾಡಲು ಪ್ರಯತ್ನಿಸಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.