ಇಂಗ್ಲೀಷ್ ಹಿಂದಿಯಲ್ಲಿ ಮಾತ್ರ ಪರೀಕ್ಷೆಗೆ ಅವಕಾಶ: ಕೇಂದ್ರದ ವಿರುದ್ಧ ಹೆಚ್‌ಡಿಕೆ, ಡಿಕೆಶಿ ಆಕ್ರೋಶ

ಕೇಂದ್ರ ಸರ್ಕಾರ ಅಧೀನದಲ್ಲಿ ಬರುವ ವಿವಿಧ ಭದ್ರತಾ ಪಡೆಗಳಲ್ಲಿ ಇರುವ 24 ಸಾವಿರಕ್ಕೂ ಹೆಚ್ಚು ಕಾನ್‌ಸ್ಟೇಬಲ್‌ಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಲಿಖಿತ ಪರೀಕ್ಷೆಯನ್ನು ಹಿಂದಿ ಹಾಗೂ ಇಂಗ್ಲೀಷ್‌ನಲ್ಲಿ ಮಾತ್ರ ಬರೆಯಲು ಅವಕಾಶ ನೀಡಲಾಗಿದೆ. ಇದಕ್ಕೆ ರಾಜ್ಯದ ವಿವಿಧ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

central force constable written Exam allowed only in English Hindi, Jds leader HDK and DKS outrage against the Centre akb

ಬೆಂಗಳೂರು: ಕನ್ನಡ ರಾಜ್ಯೋತ್ಸವ ಅಂಗವಾಗಿ ಸರ್ಕಾರದ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ವತಿಯಿಂದ ನಿನ್ನೆ ಕೋಟಿ ಕಂಠ ಗಾಯನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.  ಅಂದಾಜು 1.20 ಕೋಟಿ ಜನರು ಏಕಕಾಲದಲ್ಲಿ ಕನ್ನಡದ 6 ಪ್ರಸಿದ್ಧ ಕವಿಗಳು ಬರೆದ ಹಾಡುಗಳನ್ನು ಹಾಡಿದರು. ಆ ಮೂಲಕ ವಿಶ್ವದಾಖಲೆಯನ್ನು ನಿರ್ಮಾಣ ಮಾಡಿದರು. ಕನ್ನಡ ಅಸ್ಮಿತೆಯನ್ನ ಸಾರುವ ವಿನೂತನ ಕಾರ್ಯಕ್ರಮಕ್ಕೆ ಬೆಂಗಳೂರು ಸೇರಿ ರಾಜ್ಯಾದ್ಯಂತ ಕಂಠಗಳು ಮೊಳಗಿದ್ದವು. ಆದರೆ ಇತ್ತ ಕೇಂದ್ರ ಸರ್ಕಾರ ಅಧೀನದಲ್ಲಿ ಬರುವ ವಿವಿಧ ಭದ್ರತಾ ಪಡೆಗಳಲ್ಲಿ ಇರುವ 24 ಸಾವಿರಕ್ಕೂ ಹೆಚ್ಚು ಕಾನ್‌ಸ್ಟೇಬಲ್‌ಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಲಿಖಿತ ಪರೀಕ್ಷೆಯನ್ನು ಹಿಂದಿ ಹಾಗೂ ಇಂಗ್ಲೀಷ್‌ನಲ್ಲಿ ಮಾತ್ರ ಬರೆಯಲು ಅವಕಾಶ ನೀಡಲಾಗಿದೆ. ಇದು ಕನ್ನಡ ಸಂಘಟನೆ ಸೇರಿದಂತೆ ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಜೆಡಿಎಸ್ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ (Kumaraswami) ಸರಣಿ ಟ್ವಿಟ್ ಮಾಡಿ ಕೇಂದ್ರ ಹಾಗೂ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ನಿನ್ನೆಯಷ್ಟೇ ಕೋಟಿ ಕಂಠ ಗಾಯನ ಕಾರ್ಯಕ್ರಮ ಮಾಡಿದ ರಾಜ್ಯ ಬಿಜೆಪಿ ಸರಕಾರ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಏನು ಹೇಳುತ್ತದೆ? ಕೋಟಿ ಕಂಠ ಗಾಯನ ಎನ್ನುತ್ತಲೇ ಕನ್ನಡದ ಕತ್ತು ಸೀಳುವುದಾ? ಕನ್ನಡಿಗರ ಅನ್ನ ಕಸಿದುಕೊಳ್ಳುವುದಾ? ಕನ್ನಡಿಗರ ಹಕ್ಕುಗಳಿಗೆ ಮರಣಶಾಸನ ಬರೆಯುವುದಾ? ಕನ್ನಡಿಗರಿಗೆ ಬೇಕಿದೆ ಉತ್ತರ ಎಂದು ಕುಮಾರಸ್ವಾಮಿ ಟ್ವಿಟ್ ಮಾಡಿದ್ದಾರೆ.

ಕೋಟಿ ಕಂಠ ಗಾಯನ ಎಂದರೆ ಕೋಟಿಗೂ ಹೆಚ್ಚು ಕನ್ನಡ  ಕಂಠಗಳಿಗೆ ಜೀವ ತುಂಬುವುದು, ಅನ್ನದ ದಾರಿ ತೋರಿಸುವುದು, ಬದುಕಿನ ಖಾತರಿ ಕೊಡುವುದು. ಕೇವಲ ನಾಲಿಗೆ ಮೇಲೆ ಕನ್ನಡ ಎಂದು ಹೇಳಿ, ಮನದಾಳದಲ್ಲಿ ಅದೇ ಕನ್ನಡದ ಮೇಲೆ ವಿಷ ಕಕ್ಕುವುದಲ್ಲ. ಅದನ್ನು ಕನ್ನಡಿಗರು ಎಂದಿಗೂ ಸಹಿಸುವುದೂ ಅಲ್ಲ.ಕೇಂದ್ರ @BJP4India ಸರಕಾರ ಈ ಅಪಾಯದ ಅರಿವು ಮಾಡಿಕೊಂಡು, ಕೂಡಲೇ ಈ ಕನ್ನಡ ವಿರೋಧಿ ಆದೇಶ ಹಿಂಪಡೆದು, ಹೊಸ ಆದೇಶ ಹೊರಡಿಸಿ ಕನ್ನಡವೂ ಸೇರಿ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ, ಬೀದಿಗಿಳಿದು ಕನ್ನಡಿಗರ ಶಕ್ತಿ ಏನೆಂದು ತೋರಿಸಬೇಕಾಗುತ್ತದೆ. 

ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಕನ್ನಡ ನಿರ್ಲಕ್ಷ್ಯ ವಿವಾದ, ಸೋಶಿಯಲ್‌ ಮೀಡಿಯಾದಲ್ಲಿ ಕೇಂದ್ರದ ವಿರುದ್ಧ ಕೆಂಗಣ್ಣು!

ಈ ಪರೀಕ್ಷೆ ಕೇವಲ ಹಿಂದಿ, ಇಂಗ್ಲೀಷ್ ನಲ್ಲಿ ಮಾತ್ರ ಇರುತ್ತದೆ. ಅಲ್ಲಿಗೆ ಹಿಂದಿ ಭಾಷಿಕರು (Hindi Language) ಬಿಟ್ಟರೆ ಬೇರೆ ಯಾರೂ ಆಯ್ಕೆ ಆಗಲೇಬಾರದು ಎನ್ನುವ ಹುನ್ನಾರ ಇದರಲ್ಲಿ ಅಡಗಿದೆ. ನನ್ನ ಅಭಿಪ್ರಾಯದಲ್ಲಿ, ಇದು ಕನ್ನಡ ವಿರೋಧಿ ಅಷ್ಟೇ ಅಲ್ಲ; ಭಾರತವನ್ನು ಉತ್ತರ(North), ದಕ್ಷಿಣ (South) ಎಂದು ವಿಭಜಿಸಲು ಕೇಂದ್ರ ಬಿಜೆಪಿ ಸರಕಾರವೇ ಕೊಡುತ್ತಿರುವ ಕುಮ್ಮಕ್ಕು. ಗಡಿ ಭದ್ರತಾ ಪಡೆ(BSF), ಕೇಂದ್ರೀಯ ಕೈಗಾರಿಕಾ ಪಡೆ (CISF), ಕೇಂದ್ರ ಪೊಲೀಸ್ ಮೀಸಲು ಪಡೆ (CRPF), ಇಂಡೋ ಟಿಬೆಟಿಯನ್ ಗಡಿ ಪೊಲೀಸ್(ITBP), ಸಶಸ್ತ್ರ ಸೀಮಾಬಲ(SSB), ಸಚಿವಾಲಯ ಭದ್ರತಾ ಪಡೆ, ಅಸ್ಸಾಂ ರೈಫಲ್ಸ್(Assam Rifles), ಮಾದಕ ವಸ್ತು ನಿಯಂತ್ರಣಾ ಇಲಾಖೆ ಸೇರಿ ಹಲವು ವಿಭಾಗಗಳಿಗೆ ಪೇದೆಗಳ ಆಯ್ಕೆಗೆ ಜನವರಿಯಲ್ಲಿ ಪರೀಕ್ಷೆ ನಡೆಯಲಿದೆ. 

ಪೇದೆ ಆಯ್ಕೆಗೆ ಅರ್ಜಿ ಕರೆದಿರುವ ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗ (ಎಸ್ ಎಸ್ ಸಿ) ಹಿಂದಿ, ಇಂಗ್ಲೀಷ್ ನಲ್ಲಿ ಮಾತ್ರ ಪರೀಕ್ಷೆ ಬರೆಯುವ ಅವಕಾಶ ನೀಡಿದೆ. ಹಾಗಾದರೆ, ಕನ್ನಡವೂ ಸೇರಿ ಇತರೆ ಪ್ರಾದೇಶಿಕ ಭಾಷೆಗಳನ್ನು ಮಾತನಾಡುವ ಅಭ್ಯರ್ಥಿಗಳು ಏನು ಮಾಡಬೇಕು? ಹಿಂದಿಗೆ ಬೆಣ್ಣೆ, ಕನ್ನಡಕ್ಕೆ ಸುಣ್ಣ ಇದೆಂಥಾ ನ್ಯಾಯ? ಕನ್ನಡದ ಕತ್ತು ಹಿಚುಕುವುದನ್ನೇ ನಿತ್ಯ ಕಾಯಕ ಮಾಡಿಕೊಂಡಿರುವ @BJP4India ಆಡಳಿತಕ್ಕೆ ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಮುಗಿಸಲೇಬೇಕು ಎನ್ನುವ ಹಪಾಹಪಿ, ತವಕ, ಹಠ ಉತ್ಕಟವಾಗಿದೆ ಎನ್ನುವುದಕ್ಕೆ ಇದು ಹೊಸ ಸಾಕ್ಷಿ ಎಂದು ಸರಣಿ ಟ್ವಿಟ್‌ಗಳ ಮೂಲಕ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಂಡನೆಯಾಯ್ತು ಕನ್ನಡ ಭಾಷಾ ವಿಧೇಯಕ, ತಪ್ಪು ಮಾಡಿದ್ರೆ ಬೀಳುತ್ತೆ ದಂಡ

ಹಾಗೆಯೇ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಟ್ವಿಟ್ ಮಾಡಿದ್ದಾರೆ. ಕಮಿಷನ್‌ BSF, CRPF, CISF, ITBP, SSB ಹುದ್ದೆಗಳಿಗೆ ನಡೆಯಬೇಕಾಗಿರುವ ಪರೀಕ್ಷೆಯಲ್ಲಿ ಕನ್ನಡವನ್ನು ನಿರ್ಲ್ಯಕ್ಷಿಸಿರುವುದು ಸ್ವೀಕಾರಾರ್ಹವಲ್ಲ. ಗಾಯನ ಮೊಳಗಿಸುತ್ತಿರುವ ಕೋಟಿ ಕಂಠಗಳು ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಪರೀಕ್ಷೆಯಲ್ಲಿ ಕನ್ನಡ ನಿರ್ಲಕ್ಷ್ಯದಿಂದ ಹಲವಾರು ಕನ್ನಡಿಗರು ಅವಕಾಶ ವಂಚಿತರಾಗುತ್ತಾರೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯಕ್ಕೆ ನ್ಯಾಯ ದೊರಕಿಸುವ ಪ್ರಯತ್ನ ಮಾಡಬೇಕು. ಇಲ್ಲವಾದಲ್ಲಿ  ಕನ್ನಡಿಗರ ಪರವಾಗಿ ಹೋರಾಟದ ಹಾದಿ ಹಿಡಿಯಬೇಕಾದೀತು. ಇದು ಒಬ್ಬ ಕನ್ನಡಿಗನ ಎಚ್ಚರಿಕೆ ಎಂದು ಡಿಕೆ ಶಿವಕುಮಾರ್ ಟ್ವಿಟ್ ಮಾಡಿದ್ದಾರೆ.

Latest Videos
Follow Us:
Download App:
  • android
  • ios