Asianet Suvarna News Asianet Suvarna News

ಸಿಡಿ ಹೊತ್ತು ತಂದ ಜಾರಕಿಹೊಳಿ ಜೊತೆ ಅಮಿತ್‌ ಶಾ ಮೀಟಿಂಗ್‌!

ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ಮನವಿ ಮಾಡಲು ದೆಹಲಿಗೆ ತೆರಳಿದ್ದ ರಮೇಶ್‌ ಜಾರಕಿಹೊಳಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರ ರಾತ್ರಿ ಅವರು ಅಮಿತ್ ಶಾರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
 

CD Case Ramesh Jarkiholi In Delhi to meet Union Home Minister Amit Shah san
Author
First Published Feb 3, 2023, 11:42 AM IST

ನವದೆಹಲಿ (ಫೆ.3):  ತಮ್ಮ ವಿರುದ್ಧದ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಪಟ್ಟು ಹಿಡಿದಿರುವ ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ, ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಗುರುವಾರ ರಾತ್ರಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಗುರುವಾರ ಸಂಜೆಯ ವೇಳೆಗೆ ದೆಹಲಿಗೆ ಆಗಮಿಸಿದ್ದ ಜಾರಕಿಹೊಳಿ, ಅಮಿತ್‌ ಶಾ ಅವರನ್ನು ಭೇಟಿ ಮಾಡಲೇಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದರು.  ಕೇಂದ್ರ ಗೃಹ ಸಚಿವ ಅಮಿತ್ ಶಾ ಗಾಗಿ ಕಾದು ಕುಳಿತಿದ್ದರು. ಅಮಿತ್‌ ಶಾ ಭೇಟಿಗೆ ಸಮಯ ಕೊಡುವಂತೆ ಕೇಳಿಕೊಂಡಿದ್ದರು. ಬೇರೆ ಬೇರೆ ಕಡೆಯಿಂದ ಭೇಟಿಗೆ ಅವಕಾಶ ಕೊಡಿಸುವಂತೆ ಒತ್ತಾಯವನ್ನೂ ಮಾಡಿದ್ದರು. ಇವೆಲ್ಲದರ ಫಲ ಎನ್ನುವಂತೆ ರಾತ್ರಿಯ ವೇಳೆಗೆ ಅಮಿತ್‌ ಶಾ ಅವರ ಭೇಟಿ ನಡೆದಿದೆ.

ಎರಡು ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದ ಜಾರಕಿಹೊಳಿ, ಈ ಸಿಡಿ ಪ್ರಕರಣ ತಮ್ಮ ವಿರುದ್ಧ ನಡೆಸಲಾದ ಷಡ್ಯಂತ್ರ. ಇದರ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತವರ ಗ್ಯಾಂಗ್‌ನ ಕೈವಾಡವಿದೆ. ಅಲ್ಲದೆ, ಡಿಕೆಶಿಗೆ ಸಂಬಂಧಿಸಿದ ಸಿಡಿ, ಸಾಕ್ಷ್ಯಗಳು ತಮ್ಮ ಬಳಿಯೂ ಇದೆ. ಇವೆಲ್ಲದರ ಬಗ್ಗೆ ಸಿಬಿಐನಿಂದ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದರು. ಅಲ್ಲದೆ, ಇತ್ತೀಚೆಗೆ ಬೆಳಗಾವಿಗೆ ಆಗಮಿಸಿದ್ದ ಅಮಿತ್‌ ಶಾ ಅವರನ್ನು ಭೇಟಿಯಾಗಿ, ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಮನವಿ ಮಾಡಿದ್ದರು. ಈ ಸಂಬಂಧ ಮಾತುಕತೆ ನಡೆಸಲು ದೆಹಲಿಗೆ ಆಗಮಿಸುವಂತೆ ಶಾ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

 

ಸಿಬಿಐಗೆ ಸಿಡಿ ಕೇಸ್‌: ಅಮಿತ್‌ ಶಾ ಭೇಟಿಗಾಗಿ ದೆಹಲಿಗೆ ತೆರಳಿದ ರಮೇಶ್‌ ಜಾರಕಿಹೊಳಿ

ದೆಹಲಿಯ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಅವರು, ಡಿ.ಕೆ.ಶಿವಕುಮಾರ್‌ಗೆ ಸಂಬಂಧಿಸಿದ ಸಿಡಿ, ಆಡಿಯೋ ದಾಖಲೆಗಳು, ಇನ್ನಿತರ ಸಾಕ್ಷ್ಯಗಳನ್ನು ತಂದಿದ್ದಾರೆ. ಅಮಿತ್‌ ಶಾಗೆ ಈ ದಾಖಲೆಗಳನ್ನು ನೀಡಿದ್ದಾರೆ ಎಂದು ಹೇಳಲಾಗಿದೆ. ದೆಹಲಿಯ ಮಹಾರಾಷ್ಟ್ರ ಭವನದಲ್ಲಿ ತಮ್ಮ ರಾಜಕೀಯ ಗುರು, ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್‌ ಅವರನ್ನು ಭೇಟಿ ಮಾಡಿ, ಸಿಡಿ ಷಡ್ಯಂತ್ರದ ಬಗ್ಗೆ ತಮ್ಮಲ್ಲಿರುವ ಸಾಕ್ಷ್ಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಬಿಜೆಪಿ ಪರ ಅಲೆಯಿದೆ- ಆದರೂ ಕಾಂಗ್ರೆಸ್‌ನವರು ಗೆದ್ದಿರುವಂತೆ ಪೋಸ್‌ ಕೊಡ್ತಿದ್ದಾರೆ: ಸಿಎಂ ಬೊಮ್ಮಾಯಿ

ಫಡ್ನವೀಸ್‌ ಮೂಲಕ ಬಿಜೆಪಿ ಹೈಕಮಾಂಡ್‌ ನಾಯಕರ ಮನವೊಲಿಕೆಗೆ ಪ್ಲ್ಯಾನ್‌ ಮಾಡಿದ್ದು ಅದರಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್‌, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿ ಹಲವರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ ಎಂದು ಜಾರಕಿಹೊಳಿ ಅವರ ಆಪ್ತಮೂಲಗಳು ತಿಳಿಸಿವೆ.
 

Follow Us:
Download App:
  • android
  • ios