ತಮ್ಮ ವಿರುದ್ಧದ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಪಟ್ಟು ಹಿಡಿದಿರುವ ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ, ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿಗಾಗಿ ಗುರುವಾರ ಸಂಜೆ ದೆಹಲಿಗೆ ಆಗಮಿಸಿದ್ದಾರೆ. 

ಬೆಳಗಾವಿ/ದೆಹಲಿ (ಫೆ.03): ತಮ್ಮ ವಿರುದ್ಧದ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಪಟ್ಟು ಹಿಡಿದಿರುವ ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ, ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿಗಾಗಿ ಗುರುವಾರ ಸಂಜೆ ದೆಹಲಿಗೆ ಆಗಮಿಸಿದ್ದಾರೆ. ಎರಡು ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದ ಜಾರಕಿಹೊಳಿ, ಈ ಸಿಡಿ ಪ್ರಕರಣ ತಮ್ಮ ವಿರುದ್ಧ ನಡೆಸಲಾದ ಷಡ್ಯಂತ್ರ. 

ಇದರ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತವರ ಗ್ಯಾಂಗ್‌ನ ಕೈವಾಡವಿದೆ. ಅಲ್ಲದೆ, ಡಿಕೆಶಿಗೆ ಸಂಬಂಧಿಸಿದ ಸಿಡಿ, ಸಾಕ್ಷ್ಯಗಳು ತಮ್ಮ ಬಳಿಯೂ ಇದೆ. ಇವೆಲ್ಲದರ ಬಗ್ಗೆ ಸಿಬಿಐನಿಂದ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದರು. ಅಲ್ಲದೆ, ಇತ್ತೀಚೆಗೆ ಬೆಳಗಾವಿಗೆ ಆಗಮಿಸಿದ್ದ ಅಮಿತ್‌ ಶಾ ಅವರನ್ನು ಭೇಟಿಯಾಗಿ, ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಮನವಿ ಮಾಡಿದ್ದರು.

ಈ ಸಂಬಂಧ ಮಾತುಕತೆ ನಡೆಸಲು ದೆಹಲಿಗೆ ಆಗಮಿಸುವಂತೆ ಶಾ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ದೆಹಲಿಯ ಖಾಸಗಿ ಹೋಟೆಲ್‌ನಲ್ಲಿ ಅವರು ವಾಸ್ತವ್ಯ ಹೂಡಿದ್ದು, ಡಿ.ಕೆ.ಶಿವಕುಮಾರ್‌ಗೆ ಸಂಬಂಧಿಸಿದ ಸಿಡಿ, ಆಡಿಯೋ ದಾಖಲೆಗಳು, ಇನ್ನಿತರ ಸಾಕ್ಷ್ಯಗಳನ್ನು ತಂದಿದ್ದಾರೆ. ಅಮಿತ್‌ ಶಾಗೆ ಈ ದಾಖಲೆಗಳನ್ನು ನೀಡಲಿದ್ದಾರೆ ಎನ್ನಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಅಂದರೆ ಕರ್ನಾಟಕ ಪ್ರದೇಶ ಸಿಡಿ ಕಂಪನಿ ಅಧ್ಯಕ್ಷ: ಲಖನ್‌ ಜಾರಕಿಹೊಳಿ

ಇದೇ ವೇಳೆ, ದೆಹಲಿಯ ಮಹಾರಾಷ್ಟ್ರ ಭವನದಲ್ಲಿ ತಮ್ಮ ರಾಜಕೀಯ ಗುರು, ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್‌ ಅವರನ್ನು ಭೇಟಿ ಮಾಡಿ, ಸಿಡಿ ಷಡ್ಯಂತ್ರದ ಬಗ್ಗೆ ತಮ್ಮಲ್ಲಿರುವ ಸಾಕ್ಷ್ಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಫಡ್ನವೀಸ್‌ ಮೂಲಕ ಬಿಜೆಪಿ ಹೈಕಮಾಂಡ್‌ ನಾಯಕರ ಮನವೊಲಿಕೆಗೆ ಪ್ಲ್ಯಾನ್‌ ಮಾಡಿದ್ದಾರೆ. ಜೊತೆಗೆ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್‌, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿ ಹಲವರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ ಎಂದು ಜಾರಕಿಹೊಳಿ ಅವರ ಆಪ್ತಮೂಲಗಳು ತಿಳಿಸಿವೆ.