ಬಹು ನಿರೀಕ್ಷಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ (ಜಾತಿಗಣತಿ ವರದಿ-2015) ವರದಿಯು ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದ್ದು, ದತ್ತಾಂಶಗಳ ಅಧ್ಯಯನ ವರದಿ ಪರಿಶೀಲನೆ ಬಳಿಕ ಅನುಷ್ಠಾನ ಕುರಿತು ಸಚಿವ ಸಂಪುಟ ಸಭೆ ಯಾವ ತೀರ್ಮಾನ ಮಾಡಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಬೆಂಗಳೂರು (ಏ.10): ಬಹು ನಿರೀಕ್ಷಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ (ಜಾತಿಗಣತಿ ವರದಿ-2015) ವರದಿಯು ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದ್ದು, ದತ್ತಾಂಶಗಳ ಅಧ್ಯಯನ ವರದಿ ಪರಿಶೀಲನೆ ಬಳಿಕ ಅನುಷ್ಠಾನ ಕುರಿತು ಸಚಿವ ಸಂಪುಟ ಸಭೆ ಯಾವ ತೀರ್ಮಾನ ಮಾಡಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಬರೋಬ್ಬರಿ 169 ಕೋಟಿ ರು. ವೆಚ್ಚದಲ್ಲಿ ಸಿದ್ಧಪಡಿಸಿರುವ ವರದಿಯನ್ನು ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿದ್ದು, ವರದಿಯಲ್ಲಿನ ಅಂಶಗಳ ಬಗ್ಗೆ ಸದಸ್ಯರೊಂದಿಗೆ ಚರ್ಚಿಸಲಿದ್ದಾರೆ.
ಈ ವೇಳೆ ವರದಿಯಲ್ಲಿನ ದತ್ತಾಂಶಗಳನ್ನು ಅಧ್ಯಯನ ನಡೆಸಲು ಪ್ರತ್ಯೇಕ ಸಮಿತಿ ರಚಿಸಬೇಕೇ ಅಥವಾ ನೇರವಾಗಿ ಅನುಷ್ಠಾನ ಮಾಡಬೇಕೇ ಎಂಬ ಕುರಿತು ಚರ್ಚಿಸಲಾಗುತ್ತದೆ. ಸದ್ಯಕ್ಕೆ ವಿಧಾನಮಂಡಲ ಅಧಿವೇಶನ ಇಲ್ಲ. ಜತೆಗೆ ಆಯೋಗದ ವರದಿಯಾಗಿರುವುದರಿಂದ ಸದನದಲ್ಲಿ ಮಂಡಿಸುವ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದರೆ ಸಚಿವ ಸಂಪುಟ ಸಭೆಯಲ್ಲೇ ಅನುಷ್ಠಾನದ ಅಂತಿಮ ತೀರ್ಮಾನ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದಿಂದ ವರದಿ ಅನುಷ್ಠಾನಕ್ಕೆ ವಿರೋಧ ವ್ಯಕ್ತವಾಗಿದೆ. ಸ್ವಪಕ್ಷೀಯರೇ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಯಾವ ನಡೆ ಅನುಸರಿಸಲಿದೆ ಎಂಬ ಬಗ್ಗೆ ಕುತೂಹಲ ಮೂಡಿದೆ.
ಕೂಸು ಬೆಳೆದಿಲ್ಲ, ಅಬಾರ್ಷನ್ ಮಾಡಿಸಿ ಬಿಡಿ: ಕೆಮಿಕಲ್ ಫ್ಯಾಕ್ಟರಿ ಎಫೆಕ್ಟ್ ಆರೋಪ
10 ವರ್ಷಗಳ ಇತಿಹಾಸ: ಜಾತಿಗಣತಿ ನಡೆಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನ ಅವಧಿಯಲ್ಲಿ (2014) ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಎಚ್.ಕಾಂತರಾಜು ಅವರನ್ನು ನೇಮಿಸಿದ್ದರು. ಹತ್ತು ವರ್ಷಗಳ ಬಳಿಕ ಕಳೆದ ವರ್ಷ ಪೂರ್ಣ ಪ್ರಮಾಣದ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆ ಮೂಲಕ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ವರದಿ ವೈಜ್ಞಾನಿಕವಾಗಿಲ್ಲ. ಮನೆ-ಮನೆಗೂ ಹೋಗಿ ಸಮೀಕ್ಷೆ ನಡೆಸಿಲ್ಲ. ಜತೆಗೆ ಮೂಲ ವರದಿ ನಾಪತ್ತೆಯಾಗಿದ್ದು, ವರದಿಯಲ್ಲಿ ಆಯೋಗದ ಅಧ್ಯಕ್ಷರು, ಸದಸ್ಯರ ಸಹಿ ಇಲ್ಲ ಎಂಬೆಲ್ಲ ಆರೋಪಗಳು ಕೇಳಿ ಬಂದಿದ್ದವು. ಸಿದ್ದರಾಮಯ್ಯ ಅವರು ವರದಿ ಜಾರಿಗೆ ಮುಂದಾಗ ಸ್ವಪಕ್ಷೀಯ ಶಾಸಕರೇ ಆಕ್ಷೇಪ ವ್ಯಕ್ತಪಡಿಸಿದ್ದರು.
ಪದೇ ಪದೇ ಮುಂದೂಡಿಕೆ: 2024 ಅಕ್ಟೋಬರ್‌ನಲ್ಲಿ ಬಿಜೆಪಿ ಪರಿಷತ್ ಸದಸ್ಯ ಎನ್.ರವಿಕುಮಾರ್, ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್ ಸೇರಿ ಹಿಂದುಳಿದ ವರ್ಗಗಳ 30 ಸಚಿವರು, ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ವರದಿ ಅನುಷ್ಠಾನಕ್ಕೆ ಮನವಿ ಮಾಡಿದ್ದರು. ಈ ವೇಳೆ ಅ.18 ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಮಂಡಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಬಳಿಕ ಅ.25 ರ ಸಂಪುಟದಲ್ಲಿ ಮಂಡಿಸುವುದಾಗಿ ಹೇಳಿ ಮುಂದೂಡಿದರು. ಇದರ ಬೆನ್ನಲ್ಲೇ ಉಪಚುನಾವಣೆ ನೀತಿ ಸಂಹಿತೆ ಘೋಷಣೆಯಾಗಿದ್ದರಿಂದ ಸಿದ್ದರಾಮಯ್ಯ ತಟಸ್ಥರಾದರು. ಬಳಿಕ 2025ರ ಜನವರಿ ತಿಂಗಳಲ್ಲಿ ಮತ್ತೆ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವುದಾಗಿ ಹೇಳಿ ಸಿದ್ದರಾಮಯ್ಯ ಅವರು ತಾತ್ಕಾಲಿಕವಾಗಿ ಹಿಂದೆ ಸರಿದಿದ್ದರು. ಇದೀಗ ಶುಕ್ರವಾರ ಸಚಿವ ಸಂಪುಟ ಸಭೆ ಅಜೆಂಡಾ ಪ್ರಕಾರವೇ ನಡೆದರೆ ಮೊದಲ ಬಾರಿಗೆ ವರದಿ ಮಂಡನೆಯಾಗಲಿದೆ.
ವಿದ್ಯುತ್ ಆಯ್ತು, ಈಗ ಕುಡಿಯುವ ನೀರಿನ ದರ ಏರಿಕೆ: 4 ಸ್ಲ್ಯಾಬ್‌ನಡಿ ಪರಿಷ್ಕರಣೆ
ನಳಿನ್‌ಕುಮಾರ್ ಕಟೀಲ್ ‘ಜಿ’ ಕೆಟಗರಿ ನಿವೇಶನ ಬಗ್ಗೆ ಚರ್ಚೆ: ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ‘ಜಿ’ ಕೆಟಗರಿ ನಿವೇಶನ ಮಂಜೂರು ಮಾಡಿತ್ತು. ಹೊಸೂರು ಸರ್ಜಾಪುರ ರಸ್ತೆ, ಸೆಕ್ಟರ್ 3ನೇ ಬಡಾವಣೆಯಲ್ಲಿ ಹಂಚಿಕೆಯಾಗಿರುವ 13/ಬಿ1 ನಿವೇಶನವನ್ನು ಗುತ್ತಿಗೆ ಅವಧಿಯಲ್ಲಿಯೇ ಶುದ್ಧ ಕ್ರಯ ನೋಂದಾಯಿಸಿ ಕೊಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮಂಡನೆಯಾಗಲಿದೆ.
