‘ನೋಡಿ, ಹೊಟ್ಟೇಲಿ ಕೂಸಿನ ತಲೆ ಸರಿಯಾಗಿ ಬೆಳೆದಿಲ್ಲ..! ಮುಂದೆ ತಾಯಿಗೂ ಸಮಸ್ಯೆಯಾಗಬಾರದು, ಮನೇಲಿ ಎಲ್ರೂ ವಿಚಾರ ಮಾಡಿ ಆಬಾರ್ಷನ್ ಮಾಡಿಸ್ಬಿಡಿ...!’
ಆನಂದ್ ಎಂ. ಸೌದಿ
ಯಾದಗಿರಿ (ಏ.10): ‘ನೋಡಿ, ಹೊಟ್ಟೇಲಿ ಕೂಸಿನ ತಲೆ ಸರಿಯಾಗಿ ಬೆಳೆದಿಲ್ಲ..! ಮುಂದೆ ತಾಯಿಗೂ ಸಮಸ್ಯೆಯಾಗಬಾರದು, ಮನೇಲಿ ಎಲ್ರೂ ವಿಚಾರ ಮಾಡಿ ಆಬಾರ್ಷನ್ ಮಾಡಿಸ್ಬಿಡಿ...!’ ಗರ್ಭಿಣಿಯಾದ ಸಂತಸದಲ್ಲಿ ಆರೋಗ್ಯ ತಪಾಸಣೆಗೆಂದು ಆಸ್ಪತ್ರೆಗೆ ತೆರಳಿದ್ದ ಶೆಟ್ಟಿಹಳ್ಳಿ ಗ್ರಾಮದ ಮಾಧವಿಗೆ ವೈದ್ಯರು ಈ ಮೇಲಿನಂತೆ ಸಲಹೆ ನೀಡಿದಾಗ, ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಾಗಿತ್ತು. ಯಾದಗಿರಿ ತಾಲೂಕಿನ, ಗುರುಮಠಕಲ್ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಕಡೇಚೂರು- ಬಾಡಿಯಾಳ ಕೈಗಾರಿಕಾ ಪ್ರದೇಶದಿಂದ ಕೂಗಳತೆ ದೂರದಲ್ಲಿರುವ ಶೆಟ್ಟಿಹಳ್ಳಿ ಗ್ರಾಮದ ಮಾಧವಿಗೆ ಇದು ಎರಡನೇ ಹೆರಿಗೆಯ ಸನ್ನಿವೇಶ. 27 ರ ಹರೆಯದ ಮಾಧವಿ ಅಲ್ಲಿನ ಸರ್ಕಾರಿ ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕರೂ ಹೌದು. ದಿನಂಪ್ರತಿ ನೂರಾರು ಮಕ್ಕಳಿಗೆ ಅಕ್ಷರ ಕಲಿಸುವ ಮಾಧವಿಗೆ ಮಕ್ಕಳೆ ಸರ್ವಸ್ವ. ಅಂತಹುದ್ದೊಂದು ದಿನದ ಸಂದಿಗ್ಧತೆಯ ಬಗ್ಗೆ ‘ಕನ್ನಡಪ್ರಭ’ ದೆದುರು ವಿವರಿಸುವಾಗ ಅವರ ಕಣ್ಣಾಲಿಗಳು ತುಂಬಿ ಬಂದಿದ್ದವು.
ಮೂರು ತಿಂಗಳು ತುಂಬಿದ ಖುಷಿಯಲ್ಲಿ ವೈದ್ಯರ ಸಲಹೆ ಪಡೆಯಲು ತೆರಳಿದ್ದಾಗ, ಸ್ಕ್ಯಾನಿಂಗ್ ಮಾಡಿಸಿದಾಗ ತಾಯಿ ಜೀವವನ್ನೂ ಗಮನದಲ್ಲಿಟ್ಟುಕೊಂಡು ವೈದ್ಯರ ಸಲಹೆಯಲ್ಲಿ ಕಳಕಳಿಯೂ ತುಂಬಿತ್ತು. ಕೆಮಿಕಲ್ ಕೈಗಾರಿಕೆಗಳಿಂದ ಜನ-ಜೀವನದ ಮೇಲೆ ಸದ್ದಿಲ್ಲದೆ ವ್ಯಾಪಿಸುತ್ತಿರುವ ದುಷ್ಪರಿಣಾಮಗಳ ಸಣ್ಣದಾದ ಸುಳಿವೊಂದನ್ನು ಆಗ ನೀಡಿದಂತಿತ್ತು. ಗ್ರಾಮೀಣ ಭಾಗದಲ್ಲಿ ಜನರ ಕಷ್ಟನಷ್ಟಗಳಿಗೆ ಸ್ಪಂದಿಸಿ, ನೊಂದವರಿಗೆ ಹೆಗಲಾಗುವ ಮಾಧವಿಯ ಪತಿ ಕಾಶೀನಾಥ್‌ಗೆ ದಿಕ್ಕೇ ತೋಚದಂತಾಗಿತ್ತಂತೆ. ಆದರೂ, ಮಹಾನಗರಗಳಿಗೆ ಹೋಗಿ ಬೆಳವಣಿಗೆಗೆ ಪೂರಕವಾಗುವ ಚಿಕಿತ್ಸೆ ನೀಡಿಸುವ ಮೂಲಕ ಶಿಶುವನ್ನು ಉಳಿಸಿಕೊಳ್ಳುವ ನಿರಂತರ ಅಲೆದಾಟಕ್ಕೆ ಸಾರ್ಥಕತೆ ಮೂಡಿದಂತಿದೆ. ಪತ್ನಿಯ ಗರ್ಭದಲ್ಲಿ ಶಿಶುವಿನ ಬೆಳವಣಿಗೆ ಒಂದು ಹಂತದಲ್ಲಿ ಚೆನ್ನಾಗಿ ನಡೆದಿದೆ ಎಂಬ ಮಾತುಗಳು ನಿಟ್ಟುಸಿರ ಮೂಡಿಸಿವೆಯಂತೆ.
ಇದನ್ನೂ ಓದಿ: ಕಡೇಚೂರು: ಬದುಕು ಚೂರು.. ಚೂರು..: ವಿಷಗಾಳಿಯ ಆಪತ್ತು, ಜೀವಕ್ಕೆ ಕುತ್ತು!
ತಮಗಾದ ಸಂಕಷ್ಟ ಮುಂದೆ ಬೇರೊಬ್ಬರಿಗೆ ಬಾರದಿರಲಿ ಎಂಬ ಕಾರಣಕ್ಕೆ ಕಾಶೀನಾಥ್- ಮಾಧವಿ ವ್ಯಕ್ತಪಡಿಸಿದ ಅಳಲು-ಆತಂಕ ಭವಿಷ್ಯದಲ್ಲಿ ಎಚ್ಚರಿಕೆ ಸಂದೇಶದಂತೆ. ನೈಜ ಮರೆಮಾಚಿ, ಬೇರೊಂದು ಹೆಸರಿನಲ್ಲಿ ನಮ್ಮ ನೋವನ್ನು ಹೊರಹಾಕುವ ಅವಶ್ಯಕತೆಯಿಲ್ಲ, ಪತ್ರಿಕೆಯಲ್ಲಿ ನೇರವಾಗಿ ನಮ್ಮನ್ನೇ ಹೆಸರಿಸಿ, ಇದು ಉಳಿದವರಿಗೂ ಗೊತ್ತಾಗಲಿ. ಮುಂದಿನ ದಿನಗಳಲ್ಲಿ ಮುಚ್ಚಿ ಹೋದ- ಹೋಗುತ್ತಿರುವ ಪ್ರಕರಣಗಳು ಬೆಳಕಿಗೆ ಬರಲಿ. ಗರ್ಭದಲ್ಲಿ ಶಿಶುವಿನ ಬೆಳವಣಿಗೆ ಕೊರತೆ ಜೊತೆಗೆ ಹುಟ್ಟುವ ಕೂಸುಗಳಿಗೂ ಈ ಭಾಗದಲ್ಲಿ ಕೆಮ್ಮು-ದಮ್ಮು-ಕಫ ಕಾಣಿಸುತ್ತಿರುವುದು ಭವಿಷ್ಯದಲ್ಲಿ ಪೀಳಿಗೆಗಳನ್ನು ಹೊಸಕಿ ಹಾಕಿದಂತಾಗುತ್ತಿದೆ.
ಇದಕ್ಕೊಂದು ಪರಿಹಾರವಾದರೂ ಸಿಗಲಿ ಎಂದು ‘ಕನ್ನಡಪ್ರಭ’ದೆದುರು ಕಾಶೀನಾಥ್ ಹೇಳಿದಾಗ, ಅವರ ಮಾತುಗಳಲ್ಲಿ ಎಂದಿನಂತೆ ಜನಪರ ಕಾಳಜಿ ವ್ಯಕ್ತವಾಗಿತ್ತು. ಕೈಗಾರಿಕೆಗಳಿಂದಲೇ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದಾಗಿ ಬಿಂಬಿಸಿ, ಹತ್ತಾರು ಹಳ್ಳಿಗಳ ಲಕ್ಷಾಂತರ ಜೀವಸಂಕುಲಕ್ಕೆ ಮಾರಕವಾಗುತ್ತಿರುವ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಿಂದ ಹೊರಸೂಸುತ್ತಿರುವ ವಿಷಗಾಳಿ ಭವಿಷ್ಯದಲ್ಲಿ ಮತ್ತೇನು ದುರಂತ ಕಾದಿದೆಯೋ ಅನ್ನೋ ಆತಂಕಗಳನ್ನು ಇಲ್ಲಿನವರಲ್ಲಿ ಮನೆ ಮಾಡಿಸಿ, ಊರು-ಕೇರಿ ತೊರೆದು ಬದುಕಲು ಗುಳೇ ಅನಿವಾರ್ಯವಾದಂತಾಗಿದೆ.
ಇದನ್ನೂ ಓದಿ: ಎಲೆಕೋಸು ಕೇಜಿಗೆ 80 ಪೈಸೆ, ಟೊಮೆಟೋ ಬೆಲೆ ಕುಸಿತ: ತರಕಾರಿ ರಸ್ತೆಗೆ ಸುರಿದು ರೈತರ ಪ್ರತಿಭಟನೆ
ನಮ್ಮದು ಮಧ್ಯಮ ಕುಟುಂಬ, ಒಂದಿಷ್ಟು ಹಣ ಹೊಂದಿಸಿ ಶಿಶುವಿನ ಬೆಳವಣಿಗೆಗೆ ಪೂರಕವಾದ ಚಿಕಿತ್ಸೆ ನೀಡಿಸಿದೆವು. ಹೀಗಾಗಿ, ಈಗ ತುಸು ನೆಮ್ಮದಿಯಿದೆ. ಆದರೆ, ನನ್ನ ಪತ್ನಿಗಾದಂತಹ ಸ್ಥಿತಿ ಈ ಭಾಗದಲ್ಲಿ ಅನೇಕರಲ್ಲಿ ಕಂಡು ಬಂದಿವೆ, ಬರುತ್ತಿವೆ. ಬೆಳಕಿಗೆ ಬಂದಿಲ್ಲವಷ್ಟೇ. ನಮ್ಮಲ್ಲಿ ಒಂದಿಷ್ಟು ಹಣ ಇತ್ತು ಖರ್ಚು ಮಾಡಿದ್ವಿ, ಬಡವರು ಏನ್ಮಾಡ್ಬೇಕು? ತುತ್ತು ಊಟಕ್ಕೆ ಪರದಾಡುತ್ತಿರುವರು ದೊಡ್ಡಾಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವರೆಲ್ಲಿಂದ ಹಣ ತರಬೇಕು? ಕೈಗಾರಿಕಾ ಪ್ರದೇಶದಲ್ಲಿನ ವಿಷಗಾಳಿ, ಹದಗೆಟ್ಟ ಪರಿಸರ ನಮ್ಮ ಜೀವಕ್ಕೆ ಕುತ್ತು ತರುತ್ತಿದೆ.
- ಕಾಶೀನಾಥ್, ಮಾಧವಿ ಪತಿ. ಶೆಟ್ಟಿಹಳ್ಳಿ ಗ್ರಾಮಸ್ಥರು.
