ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಮತದಾರರ ಮನೆ ಬಾಗಿಲಿಗೆ ತೆರಳಿ ಮತಯಾಚನೆ ನಡೆಸುತ್ತಿದ್ದಾರೆ. ಅಭ್ಯರ್ಥಿಗಳು ಜಿದ್ದಿಗೆ ಬಿದ್ದಂತೆ ಪ್ರಚಾರ ನಡೆಸುತ್ತಿದ್ದು, ಈ ಬಾರಿ ನನ್ನದೇ ಗೆಲುವು ಎಂದು ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಮತಯಾಚನೆ ನಡೆಸುತ್ತಿದ್ದಾರೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಏ.29): ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಮತದಾರರ ಮನೆ ಬಾಗಿಲಿಗೆ ತೆರಳಿ ಮತಯಾಚನೆ ನಡೆಸುತ್ತಿದ್ದಾರೆ. ಅಭ್ಯರ್ಥಿಗಳು ಜಿದ್ದಿಗೆ ಬಿದ್ದಂತೆ ಪ್ರಚಾರ ನಡೆಸುತ್ತಿದ್ದು, ಈ ಬಾರಿ ನನ್ನದೇ ಗೆಲುವು ಎಂದು ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಮತಯಾಚನೆ ನಡೆಸುತ್ತಿದ್ದಾರೆ. 

ಪಕ್ಷೇತರರಿಂದ ಅಬ್ಬರದ ಪ್ರಚಾರ: ಚುನಾವಣೆ ಮತದಾನಕ್ಕೆ ಕೆಲ ದಿನಗಳು ಅಷ್ಟೇ ಬಾಕಿ ಉಳಿದಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ವಿಧಾನಸಭಾ ಕ್ಷೇತ್ರದ ಕಣದಲ್ಲಿರುವ ಪ್ರತಿಯೊಬ್ಬ ಅಭ್ಯರ್ಥಿ ಕಾಲಿಗೆ ಚಕ್ರ ಕಟ್ಟಿ ಕೊಂಡಂತೆ ಮತದಾರರ ಮನೆ ಬಾಗಿಲಿಗೆ ತೆರಳಿ ಮತಯಾಚನೆ ಮಾಡುತ್ತಿದ್ದು, ಈ ಬಾರಿ ಗೆಲ್ಲಿಸುವಂತೆ ಮತದಾರರ ಬಳಿ ಮನವಿ ಮಾಡುತ್ತಿದ್ದಾರೆ. 

ಉಡುಪಿಯಲ್ಲಿ ಅಮಿತ್ ಶಾ ಬಿರುಸಿನ ಪ್ರಚಾರ: ಕಾಂಗ್ರೆಸ್‌ ಗ್ಯಾರೆಂಟಿ ಯೋಜನೆಗಳಿಗೆ ತಿರುಗೇಟು

ಚಿಕ್ಕಮಗಳೂರು ಜಿಲ್ಲೆಯ, ತರೀಕೆರೆ ತಾಲೂಕಿನ ಎಲ್ಲಾ ಅಭ್ಯರ್ಥಿಗಳು ಮತ ಪ್ರಚಾರದಲ್ಲಿ ತೊಡಗಿದ್ದು ಬಿಜೆಪಿ ಅಭ್ಯರ್ಥಿ ಡಿ ಎಸ್ ಸುರೇಶ್, ಕಾಂಗ್ರೇಸ್ ಅಭ್ಯರ್ಥಿ ಜಿ ಎಚ್ ಶ್ರೀನಿವಾಸ್, ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಗೋಪಿಕೃಷ್ಣ ಹಾಗೂ ಪಕ್ಷೇತರ ಅಭ್ಯರ್ಥಿ ದೊರಣಾಳು ಪರಮೇಶ್ ಮತ ಯಾಚನೆಯಲ್ಲಿ ಬ್ಯುಸಿಯಾಗಿದ್ದಾರೆ. ಶಾಸಕ ಡಿ ಎನ್ ಸುರೇಶ್ ಅಜ್ಜಂಪುರ ಭಾಗದಲ್ಲಿ ಹಳ್ಳಿ ಹಳ್ಳಿಗೆ ತೆರಳಿ ಮತಯಾಚನೆ ಮಾಡುತ್ತಿದ್ದು, ಅದೇ ರೀತಿ ಪಕ್ಷೇತರ ಅಭ್ಯರ್ಥಿಯಾದ ದೊರಣಾಳು ಪರಮೇಶ್ ಕಾಂಗ್ರೆಸ್ ನಲ್ಲಿ ಟಿಕೆಟ್ ಸಿಗದ ಹಿನ್ನೆಲೆ ಪಕ್ಷೇತರ ಅಭ್ಯರ್ಥಿಯಾಗಿ ನಿಂತಿದ್ದು, ನಾನು ಯಾವ ಅಭ್ಯರ್ಥಿಗೂ ಕಡಿಮೆ ಇಲ್ಲ ಈ ಬಾರಿ ಕ್ಷೇತ್ರದಲ್ಲಿ ಅಚ್ಚರಿ ಫಲಿತಾಂಶ ಸಿಗಲಿದೆ. ಎಂದು ತರೀಕೆರೆ ಪಟ್ಟಣದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.

ಕಾಂಗ್ರೆಸ್ ನಾಯಕ ಜೈ ರಾಮ್ ರಮೇಶ್ ಪ್ರಚಾರ: ಇನ್ನು ತರೀಕೆರೆ ಕ್ಷೇತ್ರಕ್ಕೆ ಕೈ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದ ಗೋಪಿಕೃಷ್ಣಗೂ ಟಿಕೆಟ್ ಕೈ ತಪ್ಪಿದ್ದು ಅವರು ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಅವರು ಕೂಡ ತರೀಕೆರೆ ನಗರದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದು, ಈಗಾಗಲೇ ಅವರಿಗೆ 11 ಜನ ಆಕಾಂಕ್ಷಿಗಳ ಬೆಂಬಲವೂ ಸಿಕ್ಕಿದೆ. ಕ್ಷೇತ್ರದ ಜನ ಎರಡು ಬಾರಿ ನನಗೆ ಸೋಲಿಸಿದ್ದು, ಈ ಬಾರಿ ಮಾತ್ರ ನನ್ನ ಕೈ ಹಿಡಿದೇ ಹಿಡಿಯುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದು, ಈ ಬಾರಿ ನನ್ನ ಗೆಲುವು ನಿಶ್ಚಿತ ಎಂದು ಮತದಾರರ ಬಳಿ ಮತ ಯಾಚನೆ ಮಾಡುತ್ತಿದ್ದಾರೆ. 

ಇನ್ನು ಮಾಜಿ ಶಾಸಕ ಜಿ ಎಚ್ ಶ್ರೀನಿವಾಸ್ ಕೂಡ ಅಬ್ಬರದ ಪ್ರಚಾರ ನಡೆಸುತ್ತಿದ್ದು, ಅಜ್ಜಂಪುರ ತಾಲೂಕಿನಲ್ಲಿ ಮತದಾರರ ಬಳಿ ಹೋಗಿ ಮತಯಾಚನೆ ಮಾಡುತ್ತಿದ್ದಾರೆ. ಬಿಜೆಪಿ 40% ಭ್ರಷ್ಟಾಚಾರ ಸರ್ಕಾರವಾಗಿದ್ದು, ಜನರು ಈ ಬಾರಿ ಖಂಡಿತವಾಗಿಯೂ ಬದಲಾವಣೆ ಮಾಡುತ್ತಾರೆ. ಈ ಬಾರಿ ನಾನು ಈ ಕ್ಷೇತ್ರದ ಶಾಸಕನಾಗುವುದು ಪಕ್ಕ ಎಂದು ಹೇಳುತ್ತಿದ್ದಾರೆ. ಇವರ ಪರ ಪ್ರಚಾರ ಮಾಡಲು ಕಾಂಗ್ರೆಸ್ ನಾಯಕ ಜೈ ರಾಮ್ ರಮೇಶ್ ಅಜ್ಜಂಪುರಕ್ಕೆ ಆಗಮಿಸಿದ್ದು, ಅವರು ಕೂಡ ಶ್ರೀನಿವಾಸ ಪರ ಮತಯಾಚನೆ ಮಾಡಿದರು. 

ಕಾಂಗ್ರೆಸ್ ಕಿತ್ತೊಗೆದು ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ

ಒಟ್ಟಾರೆಯಾಗಿ, ದಿನದಿಂದ ದಿನಕ್ಕೆ ಚುನಾವಣಾ ರಣಾ ಕಣಕಣ ರಂಗೆರುತ್ತಿದ್ದು, ಈ ಕ್ಷೇತ್ರದಲ್ಲಿ ನಾಲ್ಕು ಜನ ಅಭ್ಯರ್ಥಿಗಳು ಮತದಾರರ ಬಳಿಗೆ ಹೋಗಿ ಮತಯಾಚನೆ ಮಾಡುತ್ತ ನನಗೆ ಗೆಲ್ಲಿಸಿ ಎಂದು ಮನವಿ ಮಾಡುತ್ತಿದ್ದಾರೆ. ಆದರೆ ಮತದಾರ ಮಾತ್ರ ಯಾರಿಗೆ ಆಶೀರ್ವಾದ ಮಾಡಿ, ವಿಧಾನಸೌಧಕ್ಕೆ ಕಳಿಸುತ್ತಾನೆ ಎಂಬುದನ್ನು ಮಾತ್ರ ಕಾದು ನೋಡಬೇಕಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.