ಶಿರಸಿಯಲ್ಲಿ ಈವರೆಗೆ ಸೋಲನ್ನೇ ಕಾಣದ ಕಾಗೇರಿ ಗೆಲುವಿನ ಓಟ ಮುಂದುವರಿಸ್ತಾರಾ?
ಸುದೀರ್ಘ ರಾಜಕೀಯ ಜೀವನದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಲಿನ ನೋವು ಏನೆನ್ನುವುದೇ ತಿಳಿಯದ ರಾಜಕಾರಣಿ ಇದ್ದರೆ ಅದು ವಿಶ್ವೇಶ್ವರ ಹೆಗಡೆ ಕಾಗೇರಿ ಮಾತ್ರ. ವಿಧಾನಸಭೆ ಅಧ್ಯಕ್ಷರಾದ ಕಾಗೇರಿ ಅವರಿಗೆ ಈ ಬಾರಿ ಎದುರಾಳಿ ಯಾರು, ಕಾಗೇರಿ ಅವರನ್ನು ಹಿಮ್ಮೆಟ್ಟಿಸಲು ಯಾರು ಬರಲಿದ್ದಾರೆ ಎನ್ನುವುದೇ ಸದ್ಯದ ಕುತೂಹಲ.
ವಸಂತಕುಮಾರ್ ಕತಗಾಲ
ಕಾರವಾರ (ಮಾ.31): ಸುದೀರ್ಘ ರಾಜಕೀಯ ಜೀವನದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಲಿನ ನೋವು ಏನೆನ್ನುವುದೇ ತಿಳಿಯದ ರಾಜಕಾರಣಿ ಇದ್ದರೆ ಅದು ವಿಶ್ವೇಶ್ವರ ಹೆಗಡೆ ಕಾಗೇರಿ ಮಾತ್ರ. ವಿಧಾನಸಭೆ ಅಧ್ಯಕ್ಷರಾದ ಕಾಗೇರಿ ಅವರಿಗೆ ಈ ಬಾರಿ ಎದುರಾಳಿ ಯಾರು, ಕಾಗೇರಿ ಅವರನ್ನು ಹಿಮ್ಮೆಟ್ಟಿಸಲು ಯಾರು ಬರಲಿದ್ದಾರೆ ಎನ್ನುವುದೇ ಸದ್ಯದ ಕುತೂಹಲ. ಬಿಜೆಪಿಯಲ್ಲೂ ಕೆಲವರು ಸ್ಪರ್ಧಿಸಲು ಉತ್ಸಾಹ ತೋರಿದ್ದರಾದರೂ ಮುಖ್ಯಮಂತ್ರಿ ಬೊಮ್ಮಾಯಿ ಶಿರಸಿಗೆ ಬಂದು ಕಾಗೇರಿ ಅವರೇ ಈ ಬಾರಿಯೂ ಸ್ಪರ್ಧಿಸಲಿದ್ದಾರೆಂದರೆ, ಸ್ವತಃ ಕಾಗೇರಿ ಮುಂದೆಯೂ ನಾನೇ ಆಯ್ಕೆಯಾಗುತ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳಿದ ತರುವಾಯ ಉಳಿದ ಆಕಾಂಕ್ಷಿಗಳು ತಣ್ಣಗಾಗಿದ್ದಾರೆ.
ಹೀಗಾಗಿ ಮುಂದಿನ ಚುನಾವಣೆಯಲ್ಲಿ ಕಾಗೇರಿ ಅವರೇ ಬಿಜೆಪಿಯ ಅಭ್ಯರ್ಥಿ ಎಂಬುದು ಖಚಿತ. ಸತತ ಆರು ಬಾರಿ (ಮೂರು ಸಲ ಅಂಕೋಲಾ ಕ್ಷೇತ್ರ ಹಾಗೂ ಮೂರು ಬಾರಿ ಶಿರಸಿ ಕ್ಷೇತ್ರದಲ್ಲಿ) ಗೆಲುವು ಸಾಧಿಸುವ ಮೂಲಕ ಕಾಗೇರಿ ಕ್ಷೇತ್ರದಲ್ಲಿ ದಾಖಲೆ ಬರೆದಿದ್ದಾರೆ. ಈ ಬಾರಿ ಕಾಗೇರಿ ಎದುರು ಯಾರು ಸೆಣಸಲಿದ್ದಾರೆ? ಕಾಗೇರಿ ಅವರ ಗೆಲುವಿನ ನಾಗಾಲೋಟ ಮುಂದುವರಿಯಲಿದೆಯೇ ಅಥವಾ ಕಾಗೇರಿ ಗೆಲುವಿನ ಓಟಕ್ಕೆ ಬ್ರೇಕ್ ಬೀಳಲಿದೆಯೇ ಎನ್ನುವುದು ಸದ್ಯದಲ್ಲಿ ಶಿರಸಿ, ಸಿದ್ದಾಪುರ ಕ್ಷೇತ್ರದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಸಂಗತಿ.
ನೀತಿ ಸಂಹಿತೆ ವೇಳೆ ಕೋಮು ದ್ವೇಷ ಹರಡಿದರೆ ಹುಷಾರ್: ಜಿಲ್ಲಾಧಿಕಾರಿ ರವಿಕುಮಾರ್
ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಎದುರು ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ವೆಂಕಟೇಶ ಹೆಗಡೆ ಹೊಸಬಾಳೆ, ಭೀಮಣ್ಣ ನಾಯ್ಕ ಉತ್ಸುಕರಾಗಿರುವವರಲ್ಲಿ ಪ್ರಮುಖ ಹೆಸರು. ಎ.ರವಿ ನಾಯ್ಕ ಸೇರಿ ಇನ್ನೂ ಕೆಲವರು ಆಸಕ್ತರೂ ಇದ್ದಾರೆ. ಈ ನಡುವೆ ಶ್ರೀನಿವಾಸ ಹೆಬ್ಬಾರ್ ಅವರ ಹೆಸರೂ ತೇಲಿಬಂದಿದೆ. ಆದರೆ, ಅವರಿನ್ನೂ ಅಧಿಕೃತವಾಗಿ ಏನನ್ನೂ ಬಹಿರಂಗಪಡಿಸಿಲ್ಲ. ವಿಶ್ವೇಶ್ವರ ಹೆಗಡೆ ಅವರು ಕ್ಷೇತ್ರದಲ್ಲಿ ಬಹುಸಂಖ್ಯಾತರರಿರುವ ಹವ್ಯಕ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಹೀಗಾಗಿ ಹವ್ಯಕ ಬ್ರಾಹ್ಮಣ ಜಾತಿಯ ವೆಂಕಟೇಶ ಹೆಗಡೆ ಅವರನ್ನು ಕಣಕ್ಕಿಳಿಸುವ ಮೂಲಕ ಪ್ರಬಲ ಸ್ಪರ್ಧೆಯೊಡ್ಡಲು ಕಾಂಗ್ರೆಸ್ ಚಿಂತನೆ ನಡೆಸುತ್ತಿದ್ದರೆ, ಮತ್ತೊಂದು ಬಹುಸಂಖ್ಯಾತ ಸಮಾಜವಾದ ಈಡಿಗ ಸಮಾಜದ ಭೀಮಣ್ಣ ನಾಯ್ಕ ಅವರನ್ನು ಕಣಕ್ಕಿಳಿಸುವ ಮಾತುಗಳೂ ಕೇಳಿಬರುತ್ತಿದೆ.
ಇತ್ತೀಚೆಗೆ ಜೆಡಿಎಸ್‌ಗೆ ಸೇರ್ಪಡೆಯಾದ ಉಪೇಂದ್ರ ಪೈ ಜೆಡಿಎಸ್‌ನಿಂದ ಸ್ಪರ್ಧಿಸುವುದು ಖಚಿತವಾಗಿದೆ. ಎರಡು ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡ ಶಶಿಭೂಷಣ ಹೆಗಡೆ ಬಿಜೆಪಿ ಸೇರ್ಪಡೆಗೆ ಮುಹೂರ್ತ ಸಮೀಪಿಸುತ್ತಿದೆ. ಶಶಿಭೂಷಣ ಸೇರ್ಪಡೆಯಿಂದ ಬಿಜೆಪಿಗೆ ಮತ್ತಷ್ಟುಬಲ ಬರಲಿದೆ. ಶಿಕ್ಷಣ ಸಚಿವರಾಗಿ, ವಿಧಾನಸಭಾ ಅಧ್ಯಕ್ಷರಾಗಿ ಹೆಸರು ಮಾಡಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಿರಸಿ ಕ್ಷೇತ್ರದ ಮೇಲೂ ತಮ್ಮದೇ ಆದ ಹಿಡಿತ ಹೊಂದಿದ್ದಾರೆ. ಅದರಲ್ಲೂ ಈ ಬಾರಿ ಅಭಿವೃದ್ಧಿ ಕಾಮಗಾರಿಗಳಿಂದ ಅವರು ಹೆಚ್ಚಿನ ಗಮನ ಸೆಳೆದಿದ್ದಾರೆ. ಹೀಗಾಗಿ ಕಾಗೇರಿ ಅವರನ್ನೇನಾದರೂ ಕಟ್ಟಿಹಾಕಬೇಕಿದ್ದರೆ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಭಾರೀ ಪ್ರಯತ್ನ ನಡೆಸಬೇಕಾಗಿದೆ.
ಕ್ಷೇತ್ರದ ಇತಿಹಾಸ: ಈ ಹಿಂದೆ ಮೀಸಲು ಕ್ಷೇತ್ರವಾಗಿದ್ದ ಶಿರಸಿ, ಪುನರ್ ವಿಂಗಡಣೆ ತರುವಾಯ ಸಾಮಾನ್ಯ ಕ್ಷೇತ್ರವಾಗಿದ್ದು ನಂತರ ನಡೆದ ಮೂರೂ ಚುನಾವಣೆಗಳಲ್ಲಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಗೆಲುವು ಸಾಧಿಸಿದ್ದಾರೆ. ಈ ಹಿಂದೆ ಈ ಕ್ಷೇತ್ರದಲ್ಲಿ ಗೆದ್ದ ಪಿ.ಎಸ್.ಜೈವಂತ ಸಚಿವರಾಗಿದ್ದರು.
ಮೀಸಲಾತಿ ವಿಚಾರದಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಮತದಾರರು: ಕ್ಷೇತ್ರದಲ್ಲಿ ಒಟ್ಟು 1.97ಲಕ್ಷ ಮತದಾರರಿದ್ದಾರೆ. ಇದರಲ್ಲಿ ಹವ್ಯಕರು 52 ಸಾವಿರ ಹಾಗೂ ನಾಮಧಾರಿ ಸಮಾಜದ ಮತಗಳು 50 ಸಾವಿರದಷ್ಟಿವೆ. ಮುಸ್ಲಿಂ 14 ಸಾವಿರ, ಒಕ್ಕಲಿಗರು 15 ಸಾವಿರದಷ್ಟಿದ್ದಾರೆ. ಬಹುತೇಕ ಹವ್ಯಕರು ಹಾಗೂ ನಾಮಧಾರಿಗಳೇ ಇಲ್ಲಿ ನಿರ್ಣಾಯಕ ಮತದಾರರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.