ಮೀಸಲಾತಿ ವಿಚಾರದಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಹಿಂದುಳಿದ ವರ್ಗಗಳಿಗೆ ಶೇ.17 ಮೀಸಲಾತಿಯನ್ನು ನೀಡಿ ಶಕ್ತಿ ತುಂಬಿದ್ದೇವೆ, ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಹಿಂದುಳಿದ ವರ್ಗಗಳಿಗೆ 20 ನಿಗಮ ನೀಡಿದ್ದಾರೆ.
ಉಡುಪಿ (ಮಾ.30): ಹಿಂದುಳಿದ ವರ್ಗಗಳಿಗೆ ಶೇ.17 ಮೀಸಲಾತಿಯನ್ನು ನೀಡಿ ಶಕ್ತಿ ತುಂಬಿದ್ದೇವೆ, ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಹಿಂದುಳಿದ ವರ್ಗಗಳಿಗೆ 20 ನಿಗಮ ನೀಡಿದ್ದಾರೆ. ದೇವರಾಜ ಅರಸು ನಂತರ ಬಿಜೆಪಿ ಮೀಸಲಾತಿಯ ಜೇನುಗೂಡಿಗೆ ಕೈ ಹಾಕಿ, ಎಲ್ಲ ಸಮುದಾಯಗಳಿಗೆ ಸಿಹಿ ಹಂಚಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಉಡುಪಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೆ ಧರ್ಮದ ಆಧಾರದಲ್ಲಿದ್ದ ಮೀಸಲಾತಿಯಲ್ಲಿ ಸ್ಪಷ್ಟತೆ ಇರಲಿಲ್ಲ, ಈಗ ಸ್ಪಷ್ಟಗೊಳಿಸಲಾಗಿದ್ದು, ಇದರಿಂದ ಅಲ್ಪಸಂಖ್ಯಾತರ ಮೀಸಲಾತಿಯನ್ನು ತೆಗೆದಿಲ್ಲ, ಅವರಿಗೆ ಅನ್ಯಾಯವೂ ಆಗಿಲ್ಲ, ಬದಲಿಗೆ ಹೆಚ್ಚು ನ್ಯಾಯ ಸಿಗಲಿದೆ ಎಂದವರು ಹೇಳಿದರು.
ಗುಡುಗು ಸಿಡಿಲು ಸಾಮಾನ್ಯ: ಚುನಾವಣೆಯ ಸಂದರ್ಭದಲ್ಲಿ ಪಕ್ಷದಲ್ಲಿ ಚರ್ಚೆ, ಭಿನ್ನಾಭಿಪ್ರಾಯದಂಥ ಗುಡುಗು ಸಿಡಿಲು ಸಾಮಾನ್ಯ. ಈಗಾಗಲೇ ವರಿಷ್ಠರು ಸಮೀಕ್ಷೆ ನಡೆಸಿದ್ದಾರೆ. ಪುನಃ ಪ್ರತಿ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ನಡೆಯಲಿದೆ, ನಂತರ ಶಾಸಕರು, ಆಕಾಂಕ್ಷಿಗಳಲ್ಲಿ ಯಾರಿಗೆ ಟಿಕೆಟ್ ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ. ಆರ್‌ಎಸ್‌ಎಸ್ ಸಕ್ರಿಯ ರಾಜಕಾರಣ ಮಾಡುವುದಿಲ್ಲ, ಸಲಹೆ ಸೂಚನೆಗಳನ್ನು ಕೊಡುತ್ತದೆ ಎಂದರು.
ಎಚ್ಡಿಕೆಯಿಂದ ಒಕ್ಕಲಿಗ ನಾಯಕರ ತುಳಿಯುವ ಕೆಲಸ: ಎಲ್.ಆರ್.ಶಿವರಾಮೇಗೌಡ
ಕಾರ್ಕಳದಲ್ಲಿ ಬಿಜೆಪಿಗೆ ಗೆಲವು: ಕಾರ್ಕಳದಲ್ಲಿ ಪ್ರಮೋದ್ ಮುತಾಲಿಕ್ ಸ್ಪರ್ಧಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಸಚಿವರು, ಯಾವುದೇ ಸಂಘಟನೆಗಳು, ಯಾರೇ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಬಹುದು, ಅದರಂತೆ ಮುತಾಲಿಕ್ ಸ್ಪರ್ಧಿಸಿದ್ದಾರೆ. ಅವರ ಮೇಲೆ ನಮಗೆ ಗೌರವ ಇದೆ ಎಂದರು.
ಕುಚ್ಚಲಕ್ಕಿ ಭರವಸೆ ಪ್ರಚಾರಕ್ಕೆ ಅಲ್ಲ: ಕರಾವಳಿಯಲ್ಲಿ ಕುಚ್ಚಲು ಅಕ್ಕಿ ನೀಡುತ್ತೇವೆ ಎಂದು ಹೇಳಿದ್ದು ಕೇವಲ ಪ್ರಚಾರಕ್ಕೆ ಅಲ್ಲ, ನಿಜವಾಗಿಯೂ ಪ್ರಯತ್ನ ಮಾಡಿದ್ದೇವೆ. ಆದರೆ ಕುಚ್ಚಲು ಅಕ್ಕಿ ತಯಾರಿಸಲು 1 ಲಕ್ಷ ಕ್ವಿಂಟಲ್ ಭತ್ತದ ಅವಶ್ಯಕತೆ ಇದೆ. ಅದಕ್ಕಾಗಿ ಭತ್ತ ಖರೀದಿ ಕೇಂದ್ರಗಳನ್ನು ತೆರೆದಾಗ ಮುಖ್ಯಮಂತ್ರಿಗಳು 350 ಕೋಟಿ ರು. ಅನುದಾನ ನೀಡಿದರು, ಹೆಚ್ಚುವರಿ ಬೆಲೆ ನೀಡಿ ಭತ್ತ ಖರೀದಿ ಮಾಡಿದರೂ, ನಮ್ಮ ಊಹೆಯ ಪ್ರಮಾಣದಲ್ಲಿ ಭತ್ತ ಖರೀದಿ ಕೇಂದ್ರಕ್ಕೆ ಬರಲಿಲ್ಲ ಎಂದು ಸಚಿವರು ಹೇಳಿದರು.
ಕಂದಾಯ ಇಲಾಖೆ ಜನಸ್ನೇಹಿಯಾಗಬೇಕು: ಸಾರ್ವಜನಿಕರ ಬಹುತೇಕ ಸಮಸ್ಯೆಗಳು ಕಂದಾಯ ಇಲಾಖೆಗೆ ಸಂಬಂಧಪಟ್ಟಿದ್ದು, ಪಾರದರ್ಶಕತೆಯಿಂದ ಜನಸಾಮಾನ್ಯರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವ ಮೂಲಕ ಇಲಾಖೆ ಜನಸ್ನೇಹಿಯಾಗಿರಬೇಕು ಎಂದು ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಗುರುವಾರ 10 ಕೋಟಿ ರು. ವೆಚ್ಚದ ಬ್ರಹ್ಮಾವರ ತಾಲೂಕು ಆಡಳಿತ ಸೌಧವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿದರು.
ಅಭಿವೃದ್ಧಿಯಲ್ಲಿ ಎಂದೂ ರಾಜಕೀಯ ಮಾಡಿಲ್ಲ: ಸಚಿವ ಸಿ.ಸಿ.ಪಾಟೀಲ್
ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಹಿ.ವ. ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ವಾರಂಬಳ್ಳಿ ಗ್ರಾ.ಪಂ. ಅಧ್ಯಕ್ಷೆ ನಾಗವೇಣಿ ಪಂಡರೀನಾಥ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಎಂ.ಹಾಕೆ, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ಕರ್ನಾಟಕ ಗೃಹ ಮಂಡಳಿ ಇಂಜಿನಿಯರ್ ಸಹನಾ ಮತ್ತಿತರರು ಉಪಸ್ಥಿತರಿದ್ದರು. ಬ್ರಹ್ಮಾವರ ತಹಸೀಲ್ದಾರ್ ರಾಜಶೇಖರ ಮೂರ್ತಿ ಸ್ವಾಗತಿಸಿದರು. ಕಂದಾಯ ನಿರೀಕ್ಷಕ ಲಕ್ಷ್ಮೀನಾರಾಯಣ ಭಟ್ ವಂದಿಸಿದರು.