ಕೊನೆಗೂ ಅಂಜಲಿ ಹತ್ಯೆ ಪ್ರಕರಣ ತನಿಖೆ ಸಿಐಡಿಗೆ: ಗೃಹ ಸಚಿವ ಪರಮೇಶ್ವರ್
ಯುವತಿ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ತಿಳಿಸಿದರು.
ಹುಬ್ಬಳ್ಳಿ (ಮೇ 20): ಯುವತಿ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ತಿಳಿಸಿದರು. ಹುಬ್ಬಳ್ಳಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹತ್ಯೇಗೀಡಾದ ಇಬ್ಬರು ಯುವತಿಯರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದ, ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಅವರು ಮಾತನಾಡಿದರು. ವಿಪಕ್ಷದವರು ನೇಹಾ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ. ಅನೇಕ ವಿಚಾರಗಳನ್ನು ತಮ್ಮ ಮುಂದೆ ಹೇಳಲು ಆಗುವುದಿಲ್ಲ. ಇದರಿಂದ ತನಿಖೆಗೆ ಅಡ್ಡಿಯಾಗುತ್ತದೆ. ಕೃತ್ಯಕ್ಕೆ ಕಾರಣ ಏನೆಂಬುದನ್ನು ಈಗಲೇ ಹೇಳಲಾಗುವುದಿಲ್ಲ ಎಂದರು.
ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು ಎಂಬ ಉದ್ದೇಶದಿಂದ ಈ ಎರಡು ಕೊಲೆ ಪ್ರಕರಣಗಳನ್ನು ಸಿಐಡಿಗೆ ವಹಿಸಲಾಗಿದೆ. ಸ್ಥಳೀಯ ಪೊಲೀಸರು ಒತ್ತಡಕ್ಕೆ ಒಳಗಾಗಿದ್ದಾರೆ ಎಂಬ ಆರೋಪಗಳು ಬರಬಹುದು. ಹೀಗಾಗಿ ಸಿಐಡಿಗೆ ವಹಿಸಲಾಗಿದೆ ಎಂದು ತಿಳಿಸಿದರು. ವಿಪಕ್ಷದವರು ನೇಹಾ ಹತ್ಯೆ ಪ್ರಕರಣಕ್ಕೆ ರಾಜಕೀಯ ಬಣ್ಣಕಟ್ಟುವ ಪ್ರಯತ್ನ ಮಾಡಿದರು. ಅನೇಕರ ಹೇಳಿಕೆಯನ್ನು ಪೊಲೀಸ್ ಇಲಾಖೆ ಗಮನಿಸಿದೆ. ಪ್ರಕರಣದ ಆರೋಪಿ ಯಾವ ಉದ್ದೇಶಕ್ಕಾಗಿ ಕೃತ್ಯ ಎಸಗಿದ ಎಂಬುದು ತನಿಖೆಯಿಂದ ಹೊರಬರಬೇಕಿದೆ. ಮೂಲಾಂಶವನ್ನು ತನಿಖೆಯಿಂದ ಹೊರತರಬೇಕು ಎಂಬುದು ನಮ್ಮ ಉದ್ದೇಶ. ಇಲಾಖೆ ಆ ಕೆಲಸವನ್ನು ಈಗಾಗಲೇ ಮಾಡುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶ ಎಂದು ಹೇಳಿದರು.
ಮಲೆನಾಡು, ಬಯಲುಸೀಮೆಯಲ್ಲಿ ಮಳೆಯ ಆರ್ಭಟ: ಚಾರ್ಮಾಡಿ ಘಾಟ್‌ನಲ್ಲಿ ಟ್ರಾಫಿಕ್ ಜಾಮ್!
ಅಂಜಲಿ ಅಂಬಿಗೇರ ಅವರ ನಿವಾಸಕ್ಕೆ ಭೇಟಿ ನೀಡಿದ ವೇಳೆ ಯುವತಿಯ ಅಜ್ಜಿಯನ್ನು ಮಾತನಾಡಿಸಿದೆ. ದೂರು ಕೊಡಲು ಠಾಣೆಗೆ ಹೋಗಿರುವುದಾಗಿ ಹೇಳಿದರು. ಈ ವೇಳೆ ಅಲ್ಲಿ ಸರಿಯಾಗಿ ಸ್ಪಂದಿಸಿಲ್ಲ. ಅದಕ್ಕೆ ಬೇಸರ ಆಯ್ತು ಎಂದರು. ದೂರು ನೀಡಿದ ಕೂಡಲೇ ಕ್ರಮ ತೆಗೆದುಕೊಂಡಿದ್ದರೆ ಕೃತ್ಯ ಸಂಭವಿಸುತ್ತಿರಲಿಲ್ಲ ಎಂಬುದು ಗೊತ್ತಾಗಿದೆ. ನಿರ್ಲಕ್ಷ್ಯ ತೋರಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಮಾನತುಗೊಳಿಸಿ, ಇಲಾಖಾ ವಿಚಾರಣೆಗೆ ಒಳಪಡಿಸಲಾಗಿದೆ. ಅದರ ವರದಿ ಬದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು. ಯಾರೇ ತಪ್ಪೆಸಗಿದ್ದರು ಸುಮ್ಮನೆ ಬಿಡುವ ಪ್ರಮೇಯವಿಲ್ಲ ಎಂದು ಎಚ್ಚರಿಸಿದರು.
ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬ ಬಿಜೆಪಿಯವರ ಆರೋಪದ ಕುರಿತು ಪ್ರತಿಕ್ರಿಯಿಸಿ, ಬಿಜೆಪಿಯವರ ಅವಧಿಯಲ್ಲಿ 2021 ಜನವರಿ ತಿಂಗಳಿನಿಂದ ಏಪ್ರಿಲ್‌ವರೆಗೆ (4 ತಿಂಗಳ ಅಂಕಿ-ಅಂಶ) 499 ಕೊಲೆ ಪ್ರಕರಣಗಳು, 2022 ಜನವರಿಯಿಂದ ಏಪ್ರಿಲ್‌ವರೆಗೆ 466, 2023 ಜನವರಿಯಿಂದ ಏಪ್ರಿಲ್‌ವರೆಗೆ 431, 2024 ಜನವರಿಯಿಂದ ಏಪ್ರಿಲ್‌ವರೆಗೆ 430 ಕೊಲೆ ಪ್ರಕರಣಗಳು ವರದಿಯಾಗಿವೆ. ಈ ಅಂಕಿ-ಅಂಶಗಳನ್ನು ಗಮನಿಸಿದರೆ, ಯಾರ ಅವಧಿಯಲ್ಲಿ ಹೆಚ್ಚು ಕೊಲೆ ಪ್ರಕರಣಗಳು ವರದಿಯಾಗಿವೆ ಎಂಬುದು ಸ್ಪಷ್ಟವಾಗುತ್ತದೆ ಎಂದರು.
ಕಾನೂನು ಸುವ್ಯವಸ್ಥೆ ಸ್ಥಿರ: ಕೊಲೆ ಪ್ರಕರಣವನ್ನು ಆಧರಿಸಿ ರಾಜ್ಯದಲ್ಲಿ ಕಾನೂನಿ ಸುವ್ಯವಸ್ಥೆ ಕುಸಿದಿದೆ ಎಂದು ಬಿಂಬಿಸುತ್ತಿರುವುದು ಸರಿಯಲ್ಲ. ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ದುರುದ್ದೇಶದಿಂದ ಹೇಳಿಕೆ ನೀಡುತ್ತಿದ್ದಾರೆ ಎಂಬುದನ್ನು ಅಂಕಿ-ಅಂಶಗಳು ಹೇಳುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿಲ್ಲ. ಸ್ಥಿರವಾಗಿದೆ ಎಂದು ಸ್ಪಷ್ಟಪಡಿಸಿದರು. ನಮ್ಮ ಸರ್ಕಾರ ಬಂದನಂತರ ರಾಜ್ಯದ ಅನೇಕ ಕಡೆ ನಡೆದ ಗಣೇಶ ಉತ್ಸವ, ಹೋಳಿ ಹಬ್ಬ, ರಂಜಾನ್ ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಅವಘಡ ಸಂಭವಿಸದಂತೆ ಎಚ್ಚರಿಕೆ ವಹಿಸಿ ಇಲಾಖೆ ಕೆಲಸ ಮಾಡಿದೆ. ಲೋಲಸಭಾ ಚುನಾವಣೆಯ ರಾಜ್ಯದಲ್ಲಿ ನಡೆದ ಎರಡು ಹಂತಗಳಲ್ಲಿಯೂ ಸುರಕ್ಷಿತವಾಗಿ ಮತದಾನ ನಡೆಸಿಕೊಟ್ಟಿದ್ದಾರೆ ಎಂದು ತಿಳಿಸಿದರು. ಪೆನ್‌ಡ್ರೈವ್ ಪ್ರಕರಣದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿಬಿಐಗೆ ವಹಿಸುವ ಅಗತ್ಯತೆ ಇಲ್ಲ. ನಮ್ಮ ಪೊಲೀಸರು ಸಮರ್ಥರಾಗಿದ್ದಾರೆ ಎಂದರು.
Lok Sabha Elections 2024: 'ಬಿಹಾರಿ ಬಾಬುಗಳ' ಎಲೆಕ್ಷನ್ ಲಡಾಯಿ: ಈಶಾನ್ಯ, ಪೂರ್ವ ದೆಹಲಿ ಕ್ಷೇತ್ರ ಹೇಗಿದೆ?
ಕದ್ದಾಲಿಕೆಯಾಗಿದ್ದರೆ ದೂರು ನೀಡಲಿ: ಫೋನ್ ಟ್ಯಾಪಿಂಗ್ ಆಗಬೇಕಾದರೆ ಸರ್ಕಾರದ ಆದೇಶವಾಗಬೇಕಾಗುತ್ತದೆ. ಹೆಚ್.ಡಿ.ಕುಮಾರಸ್ವಾಮಿ ಅವರ ಫೋನ್ ಕದ್ದಾಲಿಯಾಗಿದ್ದರೆ ದೂರು ನೀಡಲಿ. ಕ್ರಮ ಕೈಗೊಳ್ಳುತ್ತೇವೆ. ಸರ್ಕಾರ ಮಾಡಿಸುತ್ತಿದೆ ಎಂಬುದಾದರೆ ದಾಖಲೆ ನೀಡಲಿ ಎಂದು ಹೇಳಿದರು.