ಬಿಜೆಪಿಯಿಂದ ಬಿಎಸ್‌ವೈ ಕಡೆಗಣನೆ ವದಂತಿ ನಂಬಬೇಡಿ: ವಿಜಯೇಂದ್ರ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ಕಡೆಗಣಿಸಿಲ್ಲ. ಇದೊಂದು ವದಂತಿ ಮಾತ್ರ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಕಲಬುರಗಿ (ಜ.08): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ಕಡೆಗಣಿಸಿಲ್ಲ. ಇದೊಂದು ವದಂತಿ ಮಾತ್ರ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ಯಡಿಯೂರಪ್ಪನವರು ಪಕ್ಷದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಮೇಲಾಗಿ, ಅವರು ಕರ್ನಾಟಕದ ಮಟ್ಟಿಗೆ ಒಂದು ದೊಡ್ಡ ಶಕ್ತಿ ಎಂಬ ಮಾತನ್ನು ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೇ ಅನೇಕ ಬಾರಿ ಹೇಳಿದ್ದಾರೆ.
ಬಿಜೆಪಿ ಗೆಲುವಿಗೆ ಯಡಿಯೂರಪ್ಪ ಶ್ರಮಿಸುತ್ತಿದ್ದಾರೆ ಎಂದರು. ರಾಜ್ಯದಲ್ಲಿ ಯಡಿಯೂರಪ್ಪನವರ ಮುಂದಾಳತ್ವದಲ್ಲಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ 130ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ. ಈ ನಿಟ್ಟಿನಲ್ಲಿ ಯಡಿಯೂರಪ್ಪನವರು ಕಾರ್ಯೋನ್ಮುಖರಾಗಿದ್ದಾರೆ. ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸಲಾಗುತ್ತಿದೆ ಎನ್ನುವ ವದಂತಿಗೆ ಯಾರೂ ಕಿವಿಗೊಡುವುದು ಬೇಡ. ಈ ನಿಟ್ಟಿನಲ್ಲಿ ಯಾರಿಗೂ ಯಾವುದೇ ರೀತಿಯ ಅನುಮಾನ ಬೇಡವೆಂದರು.
ಅಂಬೇಡ್ಕರ್ ಹೆಸರು ಭಾರತರತ್ನಕ್ಕೆ ಶಿಫಾರಸು ಮಾಡಿದ್ದು ಅಟಲ್: ಸಿ.ಟಿ.ರವಿ
ಪ್ರಿಯಾಂಕ್ ಖರ್ಗೆಗೆ ಟಾಂಗ್: ಬಿಜೆಪಿ ಎಂದರೆ ಬ್ರೋಕರ್ ಪಾರ್ಟಿ ಮತ್ತು ವಿಧಾನಸೌಧ ಶಾಪಿಂಗ್ ಮಾಲ್ ಆಗಿಬಿಟ್ಟಿದೆ ಎಂಬ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಬಿವೈ ವಿಜಯೇಂದ್ರ ತಿರುಗೇಟು ನೀಡಿದರು. ಪ್ರಿಯಾಂಕ್ ಅವರ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದ ಹಾಗಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯೋಗ್ಯತೆ ಕಾಂಗ್ರೆಸ್ ಕಳೆದುಕೊಂಡಿದೆ. ಈ ಹಿಂದೆ ಕಾಂಗ್ರೆಸ್ 300ಕ್ಕೂ ಅಧಿಕ ಲೋಕಸಭೆ ಸ್ಥಾನಗಳನ್ನ ಗೆದ್ದಿತ್ತು. ಇಂದು ಕಾಂಗ್ರೆಸ್ ಪಕ್ಷದ ಗತಿ ಏನಾಗಿದೆ? ಕೇವಲ 50-60 ಸ್ಥಾನಗಳನ್ನು ಮಾತ್ರ ಗೆದ್ದು ದಾರುಣ ಸ್ಥಿತಿಗೆ ತಲುಪಿದೆ. ಆ ಪಕ್ಷದ ಮುಖಂಡರು ಮಾಡಿದ್ದ ಭ್ರಷ್ಟಾಚಾರದಿಂದ ಕಾಂಗ್ರೆಸ್ ಅಧೋಗತಿಗೆ ತಲುಪಿದೆ. ಚುನಾವಣೆ ಬಂದಾಗ ವಿಪಕ್ಷಗಳ ಟೀಕೆ ಸಾಮಾನ್ಯ. ಆದರೆ ರಾಜ್ಯದ ಜನರು ಎಲ್ಲವನ್ನೂ ತೀರ್ಮಾನ ಮಾಡುತ್ತಾರೆಂದರು.
ಕಾವೆಂಶ್ರೀಯವರ ನಿಸ್ವಾರ್ಥ ಸೇವೆ ಶ್ಲಾಘನೀಯ: ಕಳೆದ 25 ವರ್ಷಗಳಿಂದ ಕಲಾಚೇತನ ಎಂಬ ಸಂಸ್ಥೆಯ ಮೂಲಕ ಈ ಭಾಗದಲ್ಲಿ ಕಲೆ- ಸಂಸ್ಕೃತಿಯನ್ನು ಪಸರಿಸುವ ಕಾಯಕ ಮಾಡುತ್ತಿರುವ ಡಾ. ಕಾವೆಂಶ್ರೀ ಅವರ ನಿಸ್ವಾರ್ಥ ಸೇವೆ ಶ್ಲಾಘನೀಯವಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಕಲಾಚೇತನ ಆಕಾಡೆಮಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನವಿಲು ಚಿತ್ರ ಬಿಡಿಸುವ ಮೂಲಕ 'ಚಿತ್ರಸಂತೆ'ಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ
ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್‌ನಲ್ಲಿ ಕಾವೆಂಶ್ರೀ ಅವರ ಸಾಧನೆಯನ್ನು ಕೊಂಡಾಡಿರುವುದು ಗದಗ ಸೇರಿದಂತೆ ನಾಡಿಗೆ ಹೆಮ್ಮೆಯ ಸಂಗತಿಯಾಗಿದ್ದು, ನಮ್ಮ ಸಂಸ್ಕೃತಿ ಉಳಿದು- ಬೆಳೆದಿರುವುದೇ ಕಾವೆಂಶ್ರೀ ಅಂತಹ ಸಂಘಟಿಕರಿಂದ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ, ಈಶಣ್ಣ ಮುನವಳ್ಳಿ, ಕಲಾವಿದ ವಿಶ್ವನಾಥ ನಾಲವಾಡದ ಸೇರಿದಂತೆ ಕಲಾಚೇತನ ಆಕಾಡೆಮಿಯ ಸದಸ್ಯರು ಇದ್ದರು.