ಪಾದಯಾತ್ರೆ ವಿಚಾರದಲ್ಲಿ ಜೆಡಿಎಸ್ ಅಪಸ್ವರ: ಗೃಹ ಸಚಿವ ಅಮಿತ್ ಶಾ, ನಡ್ಡಾ ಭೇಟಿ ಮಾಡಿದ ವಿಜಯೇಂದ್ರ
ಕಾಂಗ್ರೆಸ್ ವಿರುದ್ದದ ಪಾದಯಾತ್ರೆ, ಪಾದಯಾತ್ರೆ ವಿಚಾರದಲ್ಲಿ ಜೆಡಿಎಸ್ ನಾಯಕರ ಅಪಸ್ವರದ ಬಗ್ಗೆಯೂ ಚರ್ಚೆ ನಡೆಯಿತು. ಗೊಂದಲದ ಹಿನ್ನೆಲೆಯಲ್ಲಿ ಪಾದಯಾತ್ರೆ ಮುಂದುವರೆಸಬೇಕಾ?, ಬೇಡವಾ? ಎಂಬ ಬಗ್ಗೆ ಅಮಿತ್ ಶಾರಿಂದ ಸಲಹೆ ಪಡೆದರು ಎಂದು ತಿಳಿದು ಬಂದಿದೆ.
ನವದೆಹಲಿ(ಆ.01): ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬುಧವಾರ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದರು. ಅಲ್ಲದೆ, ರಾಜ್ಯ ಕಾಂಗ್ರೆಸ್ ಸರ್ಕಾರದ ಮುಡಾ ಮತ್ತು ವಾಲ್ಮೀಕಿ ಹಗರಣಗಳ ವಿರುದ್ಧ ನಡೆಸಬೇಕಾದ ಹೋರಾಟದ ಕುರಿತಾಗಿಯೂ ಮಾತುಕತೆ ನಡೆಸಿದರು ಎಂದು ತಿಳಿದು ಬಂದಿದೆ.
ದೆಹಲಿಯ ಸಂಸತ್ ಭವನದ ಕಚೇರಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ ವಿಜಯೇಂದ್ರ, ಬಿಜೆಪಿಯ ಕೆಲ ರಾಜ್ಯ ನಾಯಕರ ಅಸಹಕಾರ, ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದರು. ಅಲ್ಲದೆ, ಕಾಂಗ್ರೆಸ್ ವಿರುದ್ದದ ಪಾದಯಾತ್ರೆ, ಪಾದಯಾತ್ರೆ ವಿಚಾರದಲ್ಲಿ ಜೆಡಿಎಸ್ ನಾಯಕರ ಅಪಸ್ವರದ ಬಗ್ಗೆಯೂ ಚರ್ಚೆ ನಡೆಯಿತು. ಗೊಂದಲದ ಹಿನ್ನೆಲೆಯಲ್ಲಿ ಪಾದಯಾತ್ರೆ ಮುಂದುವರೆಸಬೇಕಾ?, ಬೇಡವಾ? ಎಂಬ ಬಗ್ಗೆ ಅಮಿತ್ ಶಾರಿಂದ ಸಲಹೆ ಪಡೆದರು ಎಂದು ತಿಳಿದು ಬಂದಿದೆ.
ಗೊಡ್ಡು ಬೆದರಿಕೆಗೆ ನಾವು ಮಣಿಯಲ್ಲ, ಮುಡಾ ಪಾದಯಾತ್ರೆ ನಿಶ್ಚಿತ: ವಿಜಯೇಂದ್ರ ಕಿಡಿ
ಬಳಿಕ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ, ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದರು. ಮಾತುಕತೆ ವೇಳೆ, ಕಾಂಗ್ರೆಸ್‌ನ ಮುಡಾ ಮತ್ತು ವಾಲ್ಮೀಕಿ ಹಗರಣಗಳ ಪ್ರಸ್ತಾಪವೂ ಆಯಿತು. ಮಾತುಕತೆ ವೇಳೆ, ಮೈತ್ರಿಕೂಟದ ನಾಯಕರು ಸೇರಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ವರಿಷ್ಠರು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ, ಗುರುವಾರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರನ್ನು ಅವರು ಭೇಟಿ ಮಾಡುವ ಸಾಧ್ಯತೆಯಿದೆ.