ಗೊಡ್ಡು ಬೆದರಿಕೆಗೆ ನಾವು ಮಣಿಯಲ್ಲ, ಮುಡಾ ಪಾದಯಾತ್ರೆ ನಿಶ್ಚಿತ: ವಿಜಯೇಂದ್ರ ಕಿಡಿ
ಇಡೀ ರಾಜ್ಯದ ಪರಿಶಿಷ್ಟ ಜಾತಿ, ಪಂಗಡಗಳ ಪರವಾಗಿ ನಮ್ಮ ಹೋರಾಟ ನಿರಂತರವಾಗಿ ಇರಲಿದೆ. ಪರಿಶಿಷ್ಟರ ಸಮುದಾಯದ ಹಣ ಲೂಟಿ ಮಾಡಿದ್ದಾರೆ. ಸಾವಿರಾರು ಕೋಟಿಯ ಭ್ರಷ್ಟಾಚಾರ ನಡೆಸಿದ್ದಾರೆ. ಇವುಗಳ ವಿರುದ್ಧ ಹೋರಾಟ ನಡೆಸದೆ ಇದ್ದರೆ ಭಗವಂತನೂ ನಮ್ಮನ್ನು ಕ್ಷಮಿಸುವುದಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
ಬೆಂಗಳೂರು(ಜು.30): ‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ನೀವು ಗೊಡ್ಡು ಬೆದರಿಕೆ ಹಾಕುವ ಮೂಲಕ ನಮ್ಮ ಹೋರಾಟವನ್ನು, ಪಾದಯಾತ್ರೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗುಡುಗಿದ್ದಾರೆ.
ಸೋಮವಾರ ನಗರದಲ್ಲಿ ನಡೆದ ‘ಮೈಸೂರು ಚಲೋ’ ಪಾದಯಾತ್ರೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ ಯಾವುದೇ ಬೆದರಿಕೆಗೆ ನಮ್ಮ ಕಾರ್ಯಕರ್ತರು ಅಂಜುವುದಿಲ್ಲ ಎಂದು ತೀಕ್ಷ್ಣವಾಗಿ ಹೇಳಿದರು.
ಇಡೀ ರಾಜ್ಯದ ಪರಿಶಿಷ್ಟ ಜಾತಿ, ಪಂಗಡಗಳ ಪರವಾಗಿ ನಮ್ಮ ಹೋರಾಟ ನಿರಂತರವಾಗಿ ಇರಲಿದೆ. ಪರಿಶಿಷ್ಟರ ಸಮುದಾಯದ ಹಣ ಲೂಟಿ ಮಾಡಿದ್ದಾರೆ. ಸಾವಿರಾರು ಕೋಟಿಯ ಭ್ರಷ್ಟಾಚಾರ ನಡೆಸಿದ್ದಾರೆ. ಇವುಗಳ ವಿರುದ್ಧ ಹೋರಾಟ ನಡೆಸದೆ ಇದ್ದರೆ ಭಗವಂತನೂ ನಮ್ಮನ್ನು ಕ್ಷಮಿಸುವುದಿಲ್ಲ ಎಂದರು.
ಮುಡಾ ಹಗರಣದ ವಿರುದ್ಧ ಹೋರಾಟಕ್ಕೆ ಬಿಜೆಪಿಗೆ ಕಾಂಗ್ರೆಸ್ಸಿಂದಲೇ ಒತ್ತಡ: ವಿಜಯೇಂದ್ರ
ವಾಲ್ಮೀಕಿ ಅಭಿವೃದ್ಧಿ ನಿಗಮದ ನೂರಾರು ಕೋಟಿ ಹಣವನ್ನು ಅಸ್ತಿತ್ವದಲ್ಲೇ ಇಲ್ಲದ ಕಂಪನಿಗಳ ಖಾತೆಗಳಿಗೆ ವರ್ಗಾಯಿಸಲಾಗಿತ್ತು. ಪರಿಶಿಷ್ಟ ಪಂಗಡಗಳಿಗೆ ಸೇರಿದ ಈ ಹಣವನ್ನು ಬಳಿಕ ಲೋಕಸಭಾ ಚುನಾವಣೆಯಲ್ಲಿ ದುರ್ಬಳಕೆ ಮಾಡಿದ್ದರು. ಆ ಹಣದಲ್ಲಿ ಹೆಂಡ ಖರೀದಿ ಕೂಡ ಮಾಡಿದ್ದನ್ನು ಜಾರಿ ನಿರ್ದೇಶನಾಲಯ ಉಲ್ಲೇಖಿಸಿದೆ. ಬಿಜೆಪಿಯು ವಾಲ್ಮೀಕಿ ನಿಗಮದ ಹಗರಣ ಮತ್ತು ಮುಡಾ ಹಗರಣ ವಿರುದ್ಧ ನಿರಂತರ ಹೋರಾಟ ಮಾಡುತ್ತ ಬಂದಿದೆ. ಮುಡಾದಲ್ಲಿ ಸಿದ್ದರಾಮಯ್ಯನವರ ಕುಟುಂಬ ಪಡೆದ 14 ನಿವೇಶನಗಳು ಮುಡಾಕ್ಕೆ ವಾಪಸ್ ಬಂದು ಬಡವರಿಗೆ ಹಂಚಿಕೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
3ರಿಂದ 4 ಸಾವಿರ ಕೋಟಿ ರು. ಬೆಲೆಬಾಳುವ ನಿವೇಶನಗಳನ್ನು ಮನಸೋ ಇಚ್ಛೆ ಕೊಡಲಾಗಿದೆ. ಸ್ವತಃ ಸಿದ್ದರಾಮಯ್ಯನವರೇ ನೇಮಿಸಿದ ಮುಡಾ ಅಧ್ಯಕ್ಷ ಮರಿಗೌಡರೇ ಇದನ್ನು ಬಾಯಿಬಿಟ್ಟಿದ್ದಾರೆ. ಇನ್ನುಮುಂದೆ ನಿವೇಶನ ಹಂಚದಿರಲು ಕಡತದಲ್ಲಿ ಮುಡಾ ಅಧ್ಯಕ್ಷರೇ ಸೂಚಿಸಿದ್ದರು. ಜಿಲ್ಲಾಧಿಕಾರಿ ತನಿಖೆಯನ್ನೂ ಮಾಡಿಸಿದ್ದರು. ತನಿಖಾ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ಅದು ಸರಿ ಇರುವುದಾಗಿ ಸರ್ಕಾರವೂ ಹೇಳಿತ್ತು. ನಿವೇಶನ ನೀಡದಂತೆ ಸರ್ಕಾರದ ಆದೇಶದ ನಂತರವೂ ಮುಡಾ ಕಮೀಷನರ್ ಯಥೇಚ್ಛವಾಗಿ ನಿವೇಶನ ಹಂಚಿದ್ದರು ಎಂದು ಆಕ್ಷೇಪಿಸಿದರು.
ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ವಿ.ಸುನೀಲ್‌ಕುಮಾರ್, ಪ್ರೀತಂ ಗೌಡ, ಪಿ.ರಾಜೀವ್, ನಂದೀಶ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.