Asianet Suvarna News Asianet Suvarna News

ಯತ್ನಾಳ್ ಕೋಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಬ್ಬರ: ಕಾಂಗ್ರೆಸ್ ವಿರುದ್ಧ ವಾಗ್ದಾಳಿ!

ಮೊನ್ನೆಯಷ್ಟೇ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಸ್ವತಃ ಅದೇ ಪಕ್ಷದ‌ ಶಾಸಕ ಯತ್ನಾಳ್ 40 ಸಾವಿರ ಕೋಟಿಯ ಕೋವಿಡ್ ಹಗರಣದ ಗಂಭೀರ ಆರೋಪ ಮಾಡಿದ್ದರು. ಇದಾದ ಬಳಿಕ ಬಿಜೆಪಿ ಪಕ್ಷದಲ್ಲಿನ ಆಂತರಿಕ ಬೇಗುದಿ ಹೊರಬಿದ್ದಿತ್ತು.‌ 

BY Vijayendra Indirectly Slams On Basangouda Patil Yatnal In Vijayapura gvd
Author
First Published Dec 30, 2023, 9:01 PM IST

ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಡಿ.30): ಮೊನ್ನೆಯಷ್ಟೇ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಸ್ವತಃ ಅದೇ ಪಕ್ಷದ‌ ಶಾಸಕ ಯತ್ನಾಳ್ 40 ಸಾವಿರ ಕೋಟಿಯ ಕೋವಿಡ್ ಹಗರಣದ ಗಂಭೀರ ಆರೋಪ ಮಾಡಿದ್ದರು. ಇದಾದ ಬಳಿಕ ಬಿಜೆಪಿ ಪಕ್ಷದಲ್ಲಿನ ಆಂತರಿಕ ಬೇಗುದಿ ಹೊರಬಿದ್ದಿತ್ತು.‌ ಯತ್ನಾಳ್ ಹಾಗೂ ಯಡಿಯೂರಪ್ಪ ನಡುವಿನ ಕದನ ತಾರಕಕ್ಕೆ ಏರಿರುವ ಸಮಯದಲ್ಲೆ ಈಗ ವಿಜಯಪುರಕ್ಕೆ ವಿಜಯೇಂದ್ರ ಏಂಟ್ರಿ ಕೊಟ್ಟಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ವಿಜಯಪುರಕ್ಕೆ ವಿಜಯೇಂದ್ರ ಆಗಮಿಸಿದ್ದ ಅಬ್ಬರಿಸಿದ್ರು. ಜಿಲ್ಲಾ ಬಿಜೆಪಿಯಿಂದ ವಿಜಯೇಂದ್ರಗೆ ಅದ್ದೂರಿ ಸ್ವಾಗತ ಕೋರಿದರು. 

ಗುಮ್ಮಟನಗರಿಯಲ್ಲಿ ವಿಜಯೇಂದ್ರಗೆ ಅದ್ದೂರಿಗೆ ಸ್ವಾಗತ: ಬಿಜೆಪಿ ಆಂತರಿಕ ಬಂಡಾಯ ಹಾಗೂ ಯಡಿಯೂರಪ್ಪ ವಿಜಯೇಂದ್ರ ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರದ ಆರೋಪ ಮಾಡುತ್ತಿರೋ ಶಾಸಕ ಯತ್ನಾಳರ ವಿಜಯಪುರ ನಗರ ಕ್ಷೇತ್ರದಲ್ಲಿಯೆ ಇಂದು ವಿಜಯೇಂದ್ರ ಅಬ್ಬರಿಸಿದ್ರು. ರಾಜ್ಯಾದ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಭೇಟಿ ನೀಡಿದ ವಿಜಯೇಂದ್ರಗೆ ಭರ್ಜರಿ ಸ್ವಾಗತ ಸಿಕ್ಕಿತ್ತು. ಯತ್ನಾಳ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರೋ ರಾಜ್ಯ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಎ ಎಸ್ ಪಾಟೀಲ್ ನಡಹಳ್ಳಿ, ಸಂಸದ ರಮೇಶ ಜಿಗಜಿಣಗಿ, ಅರುಣ ಶಹಾಪುರ ಖುದ್ದಾಗಿ ನಿಂತು ವಿಜಯೇಂದ್ರಗೆ ಸ್ವಾಗತ ಕೋರಿದರು. ನಗರದ ಹೊರ ಭಾಗದಲ್ಲಿ ಆಗಮಿಸದ ವಿಜಯೇಂದ್ರ ವೀರ್ ಸಾವರ್ಕರ್ ಮೂರ್ತಿಗೆ ಮಾಲಾರ್ಪನೆ ಮಾಡಿದರು. ಬಳಿಕ ಬೈಕ್ ರ್ಯಾಲಿ ಮೂಲಕ ಅವರನ್ನು ಸ್ವಾಗತಿಸಲಾಯಿತು. ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ ವಿಜಯೇಂದ್ರಗೆ ಜೆಸಿಬಿಗಳ ಮೂಲಕ ಹೂಮಳೆಗರೆಯಲಾಯಿತು

ಚಾಮುಂಡಿಬೆಟ್ಟ ಒಂದು ಧಾರ್ಮಿಕ ಕ್ಷೇತ್ರ. ಅಲ್ಲಿಗೆ ರೋಪ್‌ ವೇ ಬೇಡ: ಸಂಸದ ಪ್ರತಾಪ ಸಿಂಹ

ಬಿಜೆಪಿ ಕಚೇರಿಗೆ ಭೇಟಿ ; ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಬಳಿಕ ವಿಜಯಪುರ ಜಿಲ್ಲಾ ಕಚೇರಿಗೆ ಆಗಮಿಸಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ದ ಗುಡುಗಿದರು. ಕಾಂಗ್ರೆಸ್ ಸರ್ಕಾರ ಬಂದು ಏಳು ತಿಂಗಳು ಕಳೆದಿದೆ,  ಕಾಂಗ್ರೆಸ್ ನೀಡಿದ ಭರವಸೆಗಳು ಜನರಲ್ಲಿ ವಿಶ್ವಾಸ ಮೂಡಿಸಿದ್ದರಿಂದ ಕೈ ಪಕ್ಷಕ್ಕೆ ಬಹುಮತ ಬಂದಿದೆ. ಆದರೆ ಇಂದು ಕಾಂಗ್ರೆಸ್ ಗೆ ಮತ ಹಾಕಿದ ಮತದಾರರು ಶಾಪ ಹಾಕುತ್ತಿದ್ದಾರೆ.  ಸಿದ್ದರಾಮಯ್ಯ ಸರ್ಕಾರ ಆರು ತಿಂಗಳಲ್ಲೇ ಜನಪ್ರೀಯತೆ ಕಳೆದುಕೊಂಡಿದೆ. ಸದ್ಯ ರಾಜ್ಯದಲ್ಲಿ ಬರಗಾಲ ಇದೆ, ರೈತರು ಸಂಕಷ್ಟದಲ್ಲಿದ್ದಾರೆ.

ರೈತರಿಗೆ, ಕಬ್ಬು ಬೆಳೆಗಾರರಿಗೆ ಬೆಂಬಲ‌ ಬೆಲೆ ನೀಡಬೇಕು, ಆರ್ಥಿಕ ಶಕ್ತಿ ನೀಡಬೇಕು ಎಂದು ನಾವು ಸದನದಲ್ಲಿ ಒತ್ತಾಯಿಸಿದ್ದೇವೆ. ಆದರೆ ಸರ್ಕಾರ ಕಣ್ಣಿದ್ದೂ ಕುರುಡನಂತೆ, ಕಿವಿ ಇದ್ದೂ ಕಿವುಡನಂತೆ ವರ್ತಿಸುತ್ತಿದೆ. ಬರದ ವಿಚಾರದಲ್ಲಿ ಪ್ರಧಾನಿಗಳ ಭೇಟಿಗೆ ಸಿಎಂ ಹಾಗೂ ಇತರರು  ಐಶಾರಾಮಿ ವಿಮಾನದಲ್ಲಿ ಹೋಗಿ ಬಂದದಿದ್ದಾರೆಂದು ಕುಟುಕಿದರು. ಇನ್ನು ಬರಗಾಲದ ವಿಚಾರದಲ್ಲಿ ಉಸ್ತುವಾರಿ ಸಚಿವರು ಜಿಲ್ಲಾ ಪ್ರವಾಸ ಮಾಡಿ, ಬರಗಾಲದ ಸಭೆ ಮಾಡುತ್ತಿಲ್ಲ ಬದಲಾಗಿ  ಕಂದಾಯ ಸಚಿವರು ಎಸಿ ರೂಂ ನಲ್ಲಿ ಕುಳಿತು ಸಭೆ ಮಾಡುತ್ತಿದ್ದಾರೆಂದು ಆರೋಪ ಮಾಡಿದರು. ಕಾಂಗ್ರೆಸ್ ಸರ್ಕಾರಕ್ಕೆ ರೈತರಿಗೆ ಪರಿಹಾರ ಕೊಡುವ ಯೋಗ್ಯತೆ ಇಲ್ಲ. 

ಆದರೆ  10 ಸಾವಿರ ಕೋಟಿ ಅಲ್ಪಸಂಖ್ಯಾತರಿಗೆ ಕೊಡುತ್ತೇವೆಂದ ಸಿಎಂ ಆದೇಶವನ್ನೂ ಸಹ ಮಾಡಿದ್ದಾರೆಂದರು. ಸರ್ಕಾರಕ್ಕೆ ರೈತರಿಗಿಂತ ಅಲ್ಪಸಂಖ್ಯಾತರೇ ಆದ್ಯತೆಯಾಗಿದ್ದಾರೆಂದರು. ಅಲ್ಪಸಂಖ್ಯಾತರ ತುಷ್ಠಿಕರಣ ನೀತಿ ಲೋಕಸಭಾ ಚುನಾವಣೆಯಲ್ಲಿ ಎದುರಿಸಬೇಕಾಗುತ್ತದೆ ಎಂದು ಭವಿಷ್ಯವನ್ನು ನುಡಿದರು. ಇದೇ ವೇಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಚೆಕ್ ಬೌನ್ಸ್ ಪ್ರಕರಣ ಕುರಿತು ವಾಗ್ದಾಳಿ ನಡೆಸಿದರು. ರಾಜ್ಯದ ಹಣಕಾಸಿನ ಪರಸ್ಥಿತಿ ಹದೆಗೆಟ್ಟಿದೆ ಎಂದ ವಿಜಯೇಂದ್ರ ಹಣಕಾಸನನ್ನು ಹೊಂದಿಸಲು 14 ಬಾರಿ ಬಜೆಟ್ ಮಂಡನೆ ಮಾಡಿದ ಸಿಎಂ ವಿಲಿವಿಲಿ ಒದ್ದಾಡುತ್ತಿದಾರೆ. ಇವರಿಗೆ ಚುನಾವಣೆ ವೇಳೆ ಕೊಟ್ಟ ಗ್ಯಾರೆಂಟಿಗಳನ್ನು ನಿಭಾಯಿಸಲು ಇವರಿಗೆ ಆಗುತ್ತಿಲ್ಲವೆಂದು ಆರೋಪ ಮಾಡಿದರು. ಭಾಗ್ಯಗಳ ಕಾರಣ ಯಾವುದೇ ಶಾಸಕರಿಗೆ ಅನುದಾನ ಸಿಕ್ಕಿಲ್ಲಾ ಎಂದರು. 

ಯತ್ನಾಳ್ ಆರೋಪಕ್ಕೆ‌ ಉತ್ತರ ಕೊಟ್ಟ ವಿಜಯೇಂದ್ರ: ಇಷ್ಟೆಲ್ಲಾ ಕಾರ್ಯಕ್ರಮ ನಡೆಯುತ್ತಿದ್ದರೂ ನಗರ ಶಾಸಕ ಯತ್ನಾಳ ಗೈರು ಹಾಜರಿ ಮಾತ್ರ ಎಲ್ಲೆಡೆ ಎದ್ದು ಕಾಣುತ್ತಿತ್ತು. ಯಡಿಯೂರಪ್ಪ ಹಾಗೂ ವಿಜಯೇಂದ್ರ ಕುಟುಂಬ ರಾಜಕಾರಣ ಭ್ರಷ್ಟಾಚಾರ ಆರೋಪ ಮಾಡಿಕೊಂಡು ಬಂದಿರೋ ಯತ್ನಾಳ  ನಿರೀಕ್ಷೆಯಂತೆಯೇ ಗೈರಾಗಿದ್ದರು. ಇತ್ತ ಯತ್ನಾಳ ವಿರೋಧಿ ಪಡೆ ಮಾತ್ರ ವಿಜಯೇಂದ್ರ ಜೊತೆಗೆ ಅಬ್ಬರಿಸಿತ್ತು. ಇನ್ನು ಯತ್ನಾಳ ಯಡಿಯೂರಪ್ಪ ಸಿಎಂ ಆಗಿದ್ದಾಗ ಮಹಾಮಾರಿ ಕೊರೊನಾ ವೇಳೆಯಲ್ಲಿ 40 ಸಾವಿರ ಕೋಟಿ ಹಗರಣ ಆಗಿದೆ ಎಂದು ಬಹಿರಂಗವಾಗೇ ಹೇಳಿಕೆ ನೀಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೇ ವಿಚಾರವಾಗಿ ಹಾಗೂ ಯತ್ನಾಳ ವಿರುದ್ದ ಹೈಕಮಾಂಡ್ ಸಹ ಮೌನವಾಗಿದ್ದರ ಕುರಿತು ಇಂದು ಸುದ್ದಿಗೋಷ್ಟಿಯಲ್ಲಿ ಕೇಳಿನ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ ಆರೋಪದಲ್ಲಿ ಸತ್ಯಾಂಶ ಇದ್ದರೆ ಪ್ರತಿಕ್ರಿಯೆ ಬರುತ್ತದೆ, 

ಹುಡುಗಾಟಿಕೆ ಕೇಳಿಕೆ‌ ಇದ್ದರೆ ಬರಲ್ಲವೆಂದು ತಮ್ಮ ತಂದೆಯ ವಿರುದ್ದ ಯತ್ನಾಳ ಮಾಡಿರೋ ಆರೋಪ ಹುಡುಗಾಟದ್ದು ಎಂದು ಹೇಳಿದರು. ಇನ್ನು ನಾನು ರಾಜ್ಯಾದ್ಯಕ್ಷ ಆಗಿದ್ದು ನಮ್ಮ ತಂದೆಯ ಕೃಪೆಯಿಂದಲ್ಲಾ. ಯಡಿಯೂರಪ್ಪನವರು ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿಲ್ಲ. ಪ್ರಧಾನಿ ಮೊದಿ ಅವರು, ಜೆ ಪಿ ನಡ್ಡಾ, ಸೇರಿದಂತೆ ರಾಷ್ಟ್ರೀಯ ನಾಯಕರು ನನ್ನನ್ನು ರಾಜ್ಯ ಬಿಜೆಪಿ ಆದ್ಯಕ್ಷನನ್ನಾಗಿ ಮಾಡಿದ್ದಾರೆ. ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದ ಮೇಲೆ ಎಲ್ಲರೂ ಸಹಕಾರ, ಆಶೀರ್ವಾದ ಮಾಡಿದ್ದಾರೆಂದರು. ಹೊಸ ವರ್ಷದ ಹೊಸ್ತಿಲಲ್ಲಿ ನಾವು ಇದ್ದೇವೆ. ಎಲ್ಲ ಹಳೆ ವಿಚಾರಗಳನ್ನು ಬದಿಗಿಟ್ಟು ಎಲ್ಲರ ವಿಶ್ವಾಸ ತೆಗೆದುಕೊಂಡು ನಾನು ಮುನ್ನಡೆಯುತ್ತೇನೆಂದು ಹೇಳಿದ ಅವರು ಯತ್ನಾಳ ಹಾಗೂ ತಮ್ಮ ಮಧ್ಯದ ಶೀತಲ ಸಮರಕ್ಕೆ ಬ್ರೇಕ್ ಬೀಳಲಿದೆ ಎಂಬುದನ್ನು ಪರೋಕ್ಷವಾಗಿ ಹೇಳಿದರು. 

ಯತ್ನಾಳ್ ಪರ ವಿರೋಧ ಬಣಗಳ‌ ನಡುವೆ ಬ್ಯಾನರ್ ಪಾಲಿಟಿಕ್ಸ್: ಇನ್ನೂ ವಿಜಯೇಂದ್ರಗೆ ಭೇಟಿ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಯತ್ನಾಳ್ ಪರ ವಿರೋಧ ಬಣಗಳ ನಡುವಿನ ಜಟಾಪಟಿ ಬ್ಯಾನರ್‌ಗಳ ಮೂಲಕ ಹೊರ ಬಿತ್ತು. ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಿಜಯಪುರಕ್ಕೆ ಬರುತ್ತಿದ್ದರು ಸಹ ಯತ್ನಾಳ್ ಸುಳಿವೆ ಇರಲಿಲ್ಲ. ಇನ್ನೊಂದೆಡೆ ವಿಜಯೇಂದ್ರಗೆ ಸ್ವಾಗತ ಕೋರಿ ಒಂದೆ ಒಂದು ಬ್ಯಾನರ್ ಸಹ ಯತ್ನಾಳ್ ಬಣದವರು ಅಳವಡಿಕೆ ಮಾಡಿರಲಿಲ್ಲ.‌ ಇನ್ನು ಇದಕ್ಕೆ ಟಾಂಗ್ ಎನ್ನುವಂತೆ ಯತ್ನಾಳ್ ವಿರೋಧಿ ಬಣ ತಮ್ಮ ಬ್ಯಾನರ್‌ಗಳಲ್ಲಿ ಯತ್ನಾಳ್ ಭಾವಚಿತ್ರಕ್ಕೆ ಕೋಕ್ ಕೊಟ್ಟಿದ್ದು ಕಂಡು ಬಂತು.. ನಗರದಲ್ಲಿ ಹಾಕಲಾಗಿದ್ದ ಬಹುತೇಕ ಬ್ಯಾನರ್‌ಗಳಲ್ಲಿ ಯತ್ನಾಳ್ ಭಾವಚಿತ್ರ ಇರಲಿಲ್ಲ.‌ ಇದು ಬ್ಯಾನರ್ ಪಾಲಿಟಿಕ್ಸ್‌ಗೆ ಕಾರಣವಾಯ್ತು..

ವಿಜಯೇಂದ್ರ ಹೊಗಳಿದ ಮುರುಗೇಶ ನಿರಾಣಿ ; ಅಕ್ಕ ಸತ್ತರೆ ಅಮವಾಸ್ಯೆ ನಿಲ್ಲಲ್ಲ: ವಿಜಯೇಂದ್ರ ಸತ್ಕಾರದ ಬಳಿಕ ಮಾತನಾಡಿದ ಮುರುಗೇಶ ನಿರಾಣಿ ವಿಜಯೇಂದ್ರರನ್ನ ಹಾಡಿ ಹೊಗಳಿದ್ರು. ಹುಲಿ ಹೊಟ್ಟೆಯಲ್ಲಿ ಹುಲಿ ಹುಟ್ಟಿದೆ, ಆ ಮರಿ ಹುಲಿ ಈಗ ದೊಡ್ಡದಾಗಿದೆ ಎಂದು ಹೊಗಳಿದರು. ಹಿರಿಯರು ಪಕ್ಷದಲ್ಲಿ ಯಾರಿಗೆ ಏನು ಹೇಳಬೇಕು ಹೇಳಿ ಆಗಿದೆ. ಇನ್ನು ಅನುಷ್ಟಾನಕ್ಕೆ ತರುವುದು ಮಾತ್ರ ಭಾಕಿ‌ ಇದೆ ಎನ್ನುವ ಮೂಲಕ ಯತ್ನಾಳ ವಿರುದ್ದ ಕ್ರಮ ಇದೆ ಎನ್ನುವುದನ್ನು ಪರೋಕ್ಷವಾಗಿ ಹೇಳಿದರು. ಇನ್ನು ಯತ್ನಾಳ ಪಕ್ಷದಲ್ಲಿ ಇದ್ದರೆ ಎಷ್ಟು ಬಿಟ್ಟರೆ ಎಷ್ಟು ಎಂಬುದನ್ನೂ ಪರೋಕ್ಷವಾಗಿ ಮಾತನಾಡಿದ ನಿರಾಣಿ ಅಕ್ಕ ಸತ್ತರೆ ಅಮವಾಸ್ಯೆ ನಿಲ್ಲೋದಿಲ್ಲ,  ಇದು ನಿಮಗೆ ತಿಳಿದಿರಬೇಕು ಎಂದರು.  ಯತ್ನಾಳ್ ಇಲ್ಲದೇ  ಇದ್ದರೂ ಪಕ್ಷದ ಕೆಲಸ ನಿಲ್ಲೋದಿಲ್ಲ ಎಂದು ಸಂದೇಶ ಕೊಟ್ಟಂತಿತ್ತು.  ರಾಜ್ಯದಲ್ಲಿ ಯಡಿಯೂರಪ್ಪ ಸೈಕಲ್ ಮೇಲೆ ಅಡ್ಡಾಡಿ ಪಕ್ಷ ಕಟ್ಟಿದ್ದಾರೆ ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡಗುವುದು ಅನ್ನೋ ಮಾತೀತ್ತು. ಹಾಗೇ ವಿಜಯೇಂದ್ರ ಗುಡುಗಿದರೆ ವಿಜಯಪುರ ಜಿಲ್ಲೆ ಸೇರಿ 31 ಜಿಲ್ಲೆಗಳು ನಡಗುತ್ತವೆ ಎಂದು ವಿಜಯೇಂದ್ರ ಪರ ಬಹುಪರಾಕ್ ಹೊಗಳಿದರು. 
 
ಕಾಂಗ್ರೆಸ್ ವೈಫಲ್ಯ ಮರೆಮಾಚಲು ಸಿದ್ದರಾಮಯ್ಯ ಯತ್ನ: ಪ್ರಲ್ಹಾದ್‌ ಜೋಶಿ

ಜ್ಞಾನಯೋಗಾಶ್ರಮದಲ್ಲಿ ಎದುರುಬದುರಾದ ಶೆಟ್ಟರ್ ವಿಜಯೇಂದ್ರ: ವಿಜಯೇಂದ್ರ ಬಿಜೆಪಿ ಕಚೇರಿಯಲ್ಲಿ ನಡೆದ ಸಮಾರಂಭದ ಬಳಿಕ ಸಿದ್ದೇಶ್ವರ ಶ್ರೀಗಳ ಗುರುವಂದನಾ ಕಾರ್ಯಕ್ರಮ ನಿಮಿತ್ಯ ಜ್ಞಾನಯೋಗಾಶ್ರಮಕ್ಕೆ ತೆರಳಿದರು. ವಿಜಯೇಂದ್ರ ಭೇಟಿ ನೀಡಿದ್ದ ವೇಳೆ ಜಗದೀಶ ಶೆಟ್ಟರ್ ಸಹ ಆಶ್ರಮಕ್ಕೆ ಭೇಟಿ ನೀಡಿದರು. ದೀಪ ಬೆಳಗಿಸಿ ಗೋಷ್ಠಿ ಕಾರ್ಯಕ್ರಮಕ್ಕೆ‌ ಚಾಲನೆ ನೀಡಿದರು. ಆದರೆ ಇಬ್ಬರು ಪರಸ್ಪರ ಮಾತನಾಡದೆ ಕುಳಿತಿದ್ದು ಕಂಡು ಬಂತು.

Follow Us:
Download App:
  • android
  • ios