Asianet Suvarna News Asianet Suvarna News

ಕೆ ಆರ್ ಪುರ ಉಪಚುನಾವಣೆ: ಕಾಂಗ್ರೆಸ್‌ ಮತ ಛಿದ್ರವಾದರೆ ಬೈರತಿಗೆ ಸಲೀಸು

ಕೆ ಆರ್ ಪುರಂನಲ್ಲಿ ಬಿಜೆಪಿಯ ಬೈರತಿ ಬಸವರಾಜು ಅವರ ಅಬ್ಬರ ಕಂಡು ಬರುತ್ತಿದ್ದರೂ ಮತದಾರರು ಮಾತ್ರ ಗುಟ್ಟು ಬಿಟ್ಟು ಕೊಟ್ಟಿಲ್ಲ. ಜಾತಿ ಲೆಕ್ಕಾಚಾರವೇ ಪ್ರಮುಖವಾಗಿ ಕೆಲಸ ಮಾಡಿದಲ್ಲಿ ಬೈರತಿ ಅವರಿಗೆ ಕಷ್ಟವಾಗಬಹುದು. ಇಲ್ಲದಿದ್ದರೆ ಮಾತ್ರ ಗೆಲುವಿನ ನಗೆ ಬೀರಬಹುದು.

By Election 2019 K R pura ground report here
Author
Bengaluru, First Published Nov 30, 2019, 3:20 PM IST

- ಪ್ರಭುಸ್ವಾಮಿ ನಟೇಕರ್‌

ಬೆಂಗಳೂರು (ನ. 30): ಕಾಂಗ್ರೆಸ್‌ನಿಂದ ಎರಡು ಸಾರ್ವತ್ರಿಕ ಚುನಾವಣೆ ಎದುರಿಸಿ ಗೆದ್ದಿರುವ ಅನರ್ಹ ಶಾಸಕ ಬೈರತಿ ಬಸವರಾಜು ಅವರು ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಹ್ಯಾಟ್ರಿಕ್‌ ಬಾರಿಸುತ್ತಾರಾ ಎಂಬ ಕುತೂಹಲವಿದೆ.

ಅನರ್ಹ ಎಂಬ ಹಣೆಪಟ್ಟಿಯೊಂದಿಗೆ ಅಖಾಡಕ್ಕಿಳಿದಿರುವ ಬೈರತಿ ಬಸವರಾಜುಗೆ ಎದುರಾಳಿಯಾಗಿ ಕಾಂಗ್ರೆಸ್‌ನ ವಿಧಾನ ಪರಿಷತ್‌ ಸದಸ್ಯ ಎಂ. ನಾರಾಯಣಸ್ವಾಮಿ ಕಣದಲ್ಲಿದ್ದಾರೆ. ಜೆಡಿಎಸ್‌ನಿಂದ ಸಿ.ಕೃಷ್ಣಮೂರ್ತಿ ಸ್ಪರ್ಧಿಸಿದ್ದರಾದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದಾರೆ. ಹೀಗಾಗಿ, ಕೆ.ಆರ್‌.ಪುರ ಕ್ಷೇತ್ರದಲ್ಲಿ ಬೈರತಿ ಬಸವರಾಜು ಮತ್ತು ನಾರಾಯಣ ಸ್ವಾಮಿ ನಡುವೆ ತುರುಸಿನ ಪೈಪೋಟಿ ನಡೆದಿದೆ.

ಮೇಲ್ನೋಟಕ್ಕೆ ಬಿಜೆಪಿಯ ಬೈರತಿ ಬಸವರಾಜು ಅವರ ಅಬ್ಬರ ಕಂಡು ಬರುತ್ತಿದ್ದರೂ ಮತದಾರರು ಮಾತ್ರ ಗುಟ್ಟು ಬಿಟ್ಟು ಕೊಟ್ಟಿಲ್ಲ. ಜಾತಿ ಲೆಕ್ಕಾಚಾರವೇ ಪ್ರಮುಖವಾಗಿ ಕೆಲಸ ಮಾಡಿದಲ್ಲಿ ಬೈರತಿ ಅವರಿಗೆ ಕಷ್ಟವಾಗಬಹುದು. ಇಲ್ಲದಿದ್ದರೆ ಮಾತ್ರ ಗೆಲುವಿನ ನಗೆ ಬೀರಬಹುದು.

ಬಿಎಸ್‌ವೈ ತವರಿನಲ್ಲಿ ಬಿಜೆಪಿಗೆ ಕಠಿಣ ಪರೀಕ್ಷೆ; 2 ಸೋಲಿನ ಅನುಕಂಪದ ನಿರೀಕ್ಷೆಯಲ್ಲಿ ಕಾಂಗ್ರೆಸ್‌

ನಂದೀಶ್‌ ರೆಡ್ಡಿ ಮುನಿಸು ಶಮನ

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಸಹಾಯ ಮಾಡಿದ ಬೈರತಿ ಬಸವರಾಜುಗೆ ಟಿಕೆಟ್‌ ಖಚಿತ ಎಂಬುದು ಮನವರಿಕೆಯಾಗುತ್ತಿದ್ದಂತೆ ಮಾಜಿ ಶಾಸಕ ನಂದೀಶ್‌ ರೆಡ್ಡಿ ತೀವ್ರವಾಗಿ ಮುನಿಸಿಕೊಂಡಿದ್ದರು. ತಮಗೆ ಟಿಕೆಟ್‌ ಕೊಡದಿದ್ದರೂ ಪರವಾಗಿಲ್ಲ, ಬಿಜೆಪಿಯ ಬೇರೆ ಯಾವುದೇ ಮುಖಂಡರಿಗಾದರೂ ನೀಡಿ. ಆದರೆ, ಬೈರತಿ ಬಸವರಾಜುಗೆ ಮಾತ್ರ ಟಿಕೆಟ್‌ ನೀಡಬಾರದು ಎಂಬ ಒತ್ತಡವನ್ನು ಪಕ್ಷದ ಹೈಕಮಾಂಡ್‌ ಮೇಲೆ ಹಾಕಿದ್ದರು. ನಂದೀಶ್‌ ರೆಡ್ಡಿ ಮುನಿಸು ಬೈರತಿ ಬಸವರಾಜುಗೆ ಒಂದು ರೀತಿಯಲ್ಲಿ ಆತಂಕವನ್ನುಂಟು ಮಾಡಿತ್ತು.

ನಂದೀಶ್‌ ರೆಡ್ಡಿ ಅಸಮಾಧಾನವನ್ನು ಶಮನಗೊಳಿಸಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ರಾಜಕೀಯ ದಾಳ ಉರುಳಿಸಿ ಬಿಎಂಟಿಸಿ ಉಪಾಧ್ಯಕ್ಷ ಸ್ಥಾನ ನೀಡಿದರು. ಆದರೂ ನಂದೀಶ್‌ ರೆಡ್ಡಿ ಕೋಪ ಶಮನವಾಗಲಿಲ್ಲ. ಬಿಎಂಟಿಸಿ ಉಪಾಧ್ಯಕ್ಷ ಸ್ಥಾನವನ್ನು ನಿರಾಕರಿಸಿದರು. ಒಂದು ರೀತಿಯಲ್ಲಿ ಇದು ಮುಖ್ಯಮಂತ್ರಿಗೆ ಮಾತ್ರವಲ್ಲ, ಬೈರತಿ ಬಸವರಾಜುಗೂ ಆತಂಕವನ್ನುಂಟು ಮಾಡಿತು. ನಂತರ ಯಡಿಯೂರಪ್ಪ ಅವರು ಬಿಎಂಟಿಸಿ ಉಪಾಧ್ಯಕ್ಷ ಸ್ಥಾನದ ಬದಲು ಅಧ್ಯಕ್ಷ ಮತ್ತು ಸಚಿವ ಸಂಪುಟ ದರ್ಜೆಯ ಸ್ಥಾನಮಾನ ನೀಡಿದ ಬಳಿಕವೇ ನಂದೀಶ್‌ ರೆಡ್ಡಿ ಮುನಿಸು ಶಮನವಾಗಿ ಬೈರತಿ ಬಸವರಾಜು ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಬಿಜೆಪಿ, ಕಾಂಗ್ರೆಸ್‌ ನೇರ ಫೈಟ್‌

ಚುನಾವಣಾ ಅಖಾಡದಲ್ಲಿ ಒಟ್ಟು 13 ಅಭ್ಯರ್ಥಿಗಳಿದ್ದಾರೆ. ಆದರೆ, ನೇರ ಹಣಾಹಣಿ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಮಾತ್ರ. ಕ್ಷೇತ್ರದಲ್ಲಿ ಜೆಡಿಎಸ್‌ ಅಬ್ಬರವೇ ಇಲ್ಲ. ಒಕ್ಕಲಿಗ ಸಮುದಾಯದವರು ಹೆಚ್ಚಾಗಿದ್ದು, 65 ಸಾವಿರಕ್ಕೂ ಹೆಚ್ಚು ಮಂದಿ ಇದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯ ಇದ್ದು, 60 ಸಾವಿರಕ್ಕೂ ಹೆಚ್ಚು ಮತಗಳು ಇವೆ. ಯಾದವ ಸಮುದಾಯ 10 ಸಾವಿರ, ಕ್ರಿಶ್ಚಿಯನ್‌ 20 ಸಾವಿರ, ಮುಸ್ಲಿಂ ಸಮುದಾಯ 25 ಸಾವಿರಕ್ಕಿಂತ ಹೆಚ್ಚು ಮತ ಹೊಂದಿದೆ. ಅನರ್ಹ ಶಾಸಕ ಎಂಬ ಹಣೆಪಟ್ಟಿಯನ್ನು ಬೈರತಿ ಬಸವರಾಜು ಹೊಂದಿದ್ದರೂ, ಕ್ಷೇತ್ರದ ಅಭಿವೃದ್ಧಿ ಕೆಲಸಗಳು ಕೈಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಗಣಿನಾಡಿಗೆ ಮತ್ತೆ ಸಿಂಗ್‌ ಆಗ್ತಾರಾ ಕಿಂಗ್‌? ಗೆಲುವಿನ ಸರಣಿಗೆ ತಡೆಹಾಕಲು ಕಾಂಗ್ರೆಸ್‌ ಕಸರತ್ತು

ಕಾಂಗ್ರೆಸ್‌ ಪಕ್ಷವು ಕ್ಷೇತ್ರದಲ್ಲಿ ಅನರ್ಹ ಶಾಸಕ ಎಂಬ ಅಸ್ತ್ರವನ್ನಿಟ್ಟುಕೊಂಡು ಬೈರತಿ ಬಸವರಾಜು ವಿರುದ್ಧ ಪ್ರಚಾರ ನಡೆಸುತ್ತಿದೆ. ಒಕ್ಕಲಿಗ ನಾಯಕ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಜೈಲಿಗೆ ಕಳಿಸಿದ್ದು ಬಿಜೆಪಿ ಎಂಬ ಭಾವನೆ ಇದೆ.

ಒಕ್ಕಲಿಗ, ಕುರುಬ, ಕ್ರಿಶ್ಚಿಯನ್‌, ದಲಿತ ಮತ್ತು ಮುಸ್ಲಿಂ ಮತಗಳನ್ನು ತನ್ನತ್ತ ಸೆಳೆದರೆ ಮಾತ್ರ ಕಾಂಗ್ರೆಸ್‌ಗೆ ಗೆಲುವು ಸಾಧಿಸಲು ಸಾಧ್ಯವಿದೆ. ನಾರಾಯಣಸ್ವಾಮಿ ವೈಯಕ್ತಿಕ ವರ್ಚಸ್ಸು ಕ್ಷೇತ್ರದಲ್ಲಿಲ್ಲ ಕಾಣುತ್ತಿಲ್ಲ. ಮಾಜಿ ಸಚಿವರಾದ ಕೃಷ್ಣ ಬೈರೇಗೌಡ ಮತ್ತು ಡಿ.ಕೆ.ಶಿವಕುಮಾರ್‌ ಹಟ ಮಾಡಿದರೆ ಮಾತ್ರ ಒಕ್ಕಲಿಗ ಸಮುದಾಯದ ಮತಗಳನ್ನು ಕಾಂಗ್ರೆಸ್‌ನತ್ತ ಸೆಳೆಯುವ ಅವಕಾಶ ಇದೆ ಎಂಬ ಅಭಿಪ್ರಾಯಗಳಿವೆ.

ಸ್ಥಳೀಯ ಬಿಜೆಪಿ ನಾಯಕರು ಬೈರತಿ ಬಸವರಾಜು ಪರ ಪ್ರಚಾರ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ಮೇರೆಗೆ ಮತಯಾಚನೆಯಲ್ಲಿ ತೊಡಗಿದ್ದಾರೆ. ಆದರೆ, ಈ ಹಿಂದೆ ಬಿಜೆಪಿ ಕಾರ್ಯಕರ್ತರ ವಿರುದ್ಧ ದೌರ್ಜನ್ಯ ಎಸಗಿದ ಘಟನೆಗಳನ್ನು ಮರೆತಿದ್ದಾರೆಯೇ ಎಂಬುದು ಯಕ್ಷಪ್ರಶ್ನೆ. ಬೈರತಿ ಬಸವರಾಜುಗೆ ಟಿಕೆಟ್‌ ನೀಡಿರುವುದು ಮಾಜಿ ಶಾಸಕ ನಂದೀಶ್‌ ರೆಡ್ಡಿಗೆ ಕ್ಷೇತ್ರದ ಮೇಲೆ ಹಿಡಿತ ಕೈ ತಪ್ಪಿಸಲಿದೆಯೇ ಎಂಬ ಆತಂಕವು ಅವರ ಬೆಂಬಲಿಗರಲ್ಲಿ ಮೂಡಿದೆ. ಹೀಗಾಗಿ ಬಿಜೆಪಿ ಗೆಲುವಿಗೆ ಎಷ್ಟುನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವುದು ಕ್ಷೇತ್ರದ ಜನರ ಪ್ರಶ್ನೆಯಾಗಿದೆ.

By Election 2019 K R pura ground report here

ಮೂಲಸೌಕರ್ಯದ ಬಗ್ಗೆ ಸೊಲ್ಲಿಲ್ಲ

ಮತಯಾಚನೆ ವೇಳೆ ಅಭಿವೃದ್ಧಿ ಎಂಬುದು ಕೇವಲ ಹೆಸರಿಗೆ ಮಾತ್ರ ಬಳಕೆಯಾಗುತ್ತಿದ್ದು, ವೈಯಕ್ತಿಕ ಟೀಕೆಗಳೊಂದಿಗೆ ಪ್ರಚಾರ ನಡೆಸಲಾಗುತ್ತಿದೆ. ಮೂಲಸೌಕರ್ಯದ ಬಗ್ಗೆ ಅಭ್ಯರ್ಥಿಗಳು ಚಕಾರ ಎತ್ತುತ್ತಿಲ್ಲ. ನೀರಿನ ಸಮಸ್ಯೆ ಕ್ಷೇತ್ರದಲ್ಲಿದೆ. ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡುವ ವ್ಯವಸ್ಥೆ ಮಾಡಿದರೂ ಹೇಳಿಕೊಳ್ಳುವಂತಹ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

ಕಾಂಗ್ರೆಸ್‌ ಕೇವಲ ಅನರ್ಹತೆಯ ಆಧಾರದ ಮೇಲೆ ಮತಯಾಚನೆ ಕೈಗೊಂಡರೆ, ಮೈತ್ರಿ ಸರ್ಕಾರ ಕ್ಷೇತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಅನುದಾನ ನೀಡಿಲ್ಲ ಎಂಬ ಆರೋಪದೊಂದಿಗೆ ಬಿಜೆಪಿ ಬಿರುಸಿನ ಪ್ರಚಾರದಲ್ಲಿ ತೊಡಗಿದೆ.

ಹಳೆ ಎದುರಾಳಿಗಳು, ಪಕ್ಷ ಅದಲು ಬದಲು; ಕಾಗವಾಡ ಯಾರ ಪಾಲು?

ವರ್ತೂರು ಕ್ಷೇತ್ರದ ಭಾಗವಾಗಿದ್ದ ಕೆ.ಆರ್‌.ಪುರ ಕ್ಷೇತ್ರವು 2008ರಲ್ಲಿ ಅಸ್ತಿತ್ವಕ್ಕೆ ಬಂತು. ಬಿಜೆಪಿಯ ನಂದೀಶ್‌ ರೆಡ್ಡಿ ಗೆಲ್ಲುವ ಮೂಲಕ ಕ್ಷೇತ್ರವನ್ನು ಪಕ್ಷದ ತೆಕ್ಕೆಗೆ ತೆಗೆದುಕೊಂಡರು. ಆದರೆ, 2013ರಲ್ಲಿ ಬಿಜೆಪಿ ಅಲೆ ಮಾಯವಾಗಿ ಕಾಂಗ್ರೆಸ್‌ ಪಾರುಪತ್ಯ ಮೆರೆಯಿತು. ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಎ. ಕೃಷ್ಣಪ್ಪ ಬದಲಿಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬೈರತಿ ಬಸವರಾಜು ಅವರಿಗೆ ಟಿಕೆಟ್‌ ನೀಡಲಾಯಿತು. ಅವರು ಎರಡು ಚುನಾವಣೆಯಲ್ಲಿ ಗೆಲುವು ಸಾಧಿಸಿ ಕ್ಷೇತ್ರವನ್ನು ಕಾಂಗ್ರೆಸ್‌ನ ಭದ್ರಕೋಟೆಯನ್ನಾಗಿ ಮಾಡಿದ್ದರು.

ಇದೀಗ ಉಪಚುನಾವಣೆ ಕಣಕ್ಕಿಳಿಯುವ ಮೂಲಕ ಬಿಜೆಪಿಗೆ ಮತ್ತೊಮ್ಮೆ ಕ್ಷೇತ್ರದಲ್ಲಿ ಬಾಗಿಲು ತೆಗೆಯುವಂತೆ ಮಾಡುವಲ್ಲಿ ಮುಂದಾಗಿದ್ದಾರೆ. ಆದರೆ, ಕಾಂಗ್ರೆಸ್‌ ಇದಕ್ಕೆ ಕಡಿವಾಣ ಹಾಕಲು ಇನ್ನಿಲ್ಲದ ಕಸರತ್ತು ಆರಂಭಿಸಿದೆ. ಇದರಲ್ಲಿ ಯಶಸ್ವಿಯಾಗಲಿದೆಯೇ ಎಂಬುದನ್ನು ಫಲಿತಾಂಶ ಹೇಳಲಿದೆ.

Follow Us:
Download App:
  • android
  • ios