ಹಳೆ ಎದುರಾಳಿಗಳು, ಪಕ್ಷ ಅದಲು ಬದಲು; ಕಾಗವಾಡ ಯಾರ ಪಾಲು?
ಕಾಂಗ್ರೆಸ್ಸಲ್ಲಿದ್ದ ಶ್ರೀಮಂತ ಪಾಟೀಲ್ ಈಗ ಬಿಜೆಪಿ ಅಭ್ಯರ್ಥಿ, ಬಿಜೆಪಿಯಲ್ಲಿದ್ದ ಕಾಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ | ಕಾರ್ಯಕರ್ತರು, ಮತದಾರರಿಗೆ ಗೊಂದಲ | ಲಿಂಗಾಯತ ಪ್ರಾಬಲ್ಯ ಕ್ಷೇತ್ರದಲ್ಲಿ ಬಿಜೆಪಿ ಮರಾಠ ಅಭ್ಯರ್ಥಿ ಗೆಲ್ತಾರಾ?
ಬೆಳಗಾವಿ (ನ. 28): ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವಲ್ಲಿ ಪಾತ್ರ ನಿರ್ವಹಿಸಿದ ಜಿಲ್ಲೆಯ ಮೂರು ಕ್ಷೇತ್ರಗಳ ಪೈಕಿ ಕಾಗವಾಡವೂ ಒಂದು. ಈ ಮೂಲಕ ರಾಜ್ಯದ ಗಮನ ಸೆಳೆದಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನೇರ ಹಣಾಹಣಿ ನಡೆದಿರುವ ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ದಿನದಿಂದ ದಿನಕ್ಕೆ ರಂಗೇರಿದೆ.
2018ರಲ್ಲಿ ನಡೆದ ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಂದ ಸೆಣಸಾಟ ನಡೆಸಿದ್ದ ಅಭ್ಯರ್ಥಿಗಳೇ ಸದ್ಯ 2019ರ ಉಪಚುನಾವಣೆಯಲ್ಲೂ ಪರಸ್ಪರ ಪಕ್ಷಾಂತರಗೊಂಡು ಅಖಾಡಕ್ಕಿಳಿಯುವ ಮೂಲಕ ತೊಡೆತಟ್ಟಿದ್ದಾರೆ.
ಸರ್ವಜ್ಞನ ನಾಡಲ್ಲಿ ಕೌರವನ ಸತ್ವಪರೀಕ್ಷೆ; ಬಿ.ಸಿ.ಪಾಟೀಲ್ ಕ್ಷೇತ್ರ ಉಳಿಸಿಕೊಳ್ತಾರಾ?
ಆದರೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಾತ್ರ ಗೊಂದಲದಲ್ಲಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. 2018ರಲ್ಲಿ ನಡೆದ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಚುನಾಯಿತರಾಗಿದ್ದ ಶ್ರೀಮಂತ ಪಾಟೀಲ ಎದುರು ಬಿಜೆಪಿಯ ಭರಮಗೌಡ (ರಾಜು) ಕಾಗೆ ಅವರು ಸೋಲಿನ ರುಚಿ ಅನುಭವಿಸಿದ್ದರು. ಆದರೆ ಬದಲಾದ ರಾಜ್ಯ ರಾಜಕಾರಣದಲ್ಲಿ ಕಳೆದ ಚುನಾವಣೆಯಲ್ಲಿ ತನ್ನ ವಿರುದ್ಧ ತೊಡೆತಟ್ಟಿದ್ದ ಅನರ್ಹ ಶಾಸಕ ಶ್ರೀಮಂತ ಪಾಟೀಲ ಅವರನ್ನೇ ಬಿಜೆಪಿ ತನ್ನ ಹುರಿಯಾಳನ್ನಾಗಿ ಕಣಕ್ಕಿಳಿಸಿದೆ.
ಇದಕ್ಕೆ ಕಾಂಗ್ರೆಸ್ ಕೂಡ ಹೊರತಾಗಿಲ್ಲ. ಪಕ್ಷದ ವಿರುದ್ಧ ಸಮರ ಸಾರಿದ್ದ ರಾಜು ಕಾಗೆ ಅವರನ್ನು ತಮ್ಮ ಪಕ್ಷದ ಅಭ್ಯರ್ಥಿಯನ್ನಾಗಿ ಚುನಾವಣಾ ಅಖಾಡಕ್ಕೆ ಇಳಿಸಿದೆ. ಉಭಯ ಪಕ್ಷಗಳ ವರಿಷ್ಠರು ತೆಗೆದುಕೊಂಡ ಈ ನಿರ್ಧಾರದಿಂದ ಸ್ಥಳೀಯ ಪಕ್ಷನಿಷ್ಠ ಕಾರ್ಯಕರ್ತರಲ್ಲಿ ಅಸಮಾಧಾನವಿದೆ.
ಬಿಎಸ್‌ವೈ, ಹುಕ್ಕೇರಿ ಭೇಟಿ ಸಂಚಲನ
ಕಾಂಗ್ರೆಸ್‌ನ ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಕೂಡ ಇದೇ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ರಾಜು ಕಾಗೆ ಅವರಿಗೆ ಅಥಣಿ ಕೊಡಿ, ತಮಗೆ ಈ ಕ್ಷೇತ್ರವಿರಲಿ ಎಂದು ಹೈಕಮಾಂಡ್ ಮುಂದೆ ಪ್ರಬಲವಾಗಿ ಪ್ರಭಾವ ಬೀರುವ ಯತ್ನ ಮಾಡಿದ್ದರು. ಆದರೆ, ಹೈಕಮಾಂಡ್ ಹುಕ್ಕೇರಿ ಬದಲು ಕಾಗೆ ಅವರಿಗೆ ಮಣೆ ಹಾಕಿತು.
ಇದರಿಂದಾಗಿ ಸಹಜವಾಗಿ ಮನನೊಂದ ಹುಕ್ಕೇರಿ ಇತ್ತೀಚೆಗಷ್ಟೇ ಪ್ರಚಾರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ಕಾಗವಾಡ ಕ್ಷೇತ್ರದಲ್ಲಿ ಪ್ರಕಾಶ್ ಹುಕ್ಕೇರಿ ಹಿಡಿತ ಇರುವುದರಿಂದ ಈ ಭೇಟಿ ಮತ್ತಷ್ಟುಮಹತ್ವ ಪಡೆದುಕೊಂಡಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಇದು ಒಳಹೊಡೆತ ಕೊಡುವ ಲಕ್ಷಣಗಳು ಕಾಣುತ್ತಿವೆ.
ರಾಣೆಬೆನ್ನೂರು ಉಪಚುನಾವಣೆ: ಹಳೆ ಹುಲಿ ಕೋಳಿವಾಡಗೆ ಯುವಕನ ಸವಾಲ್
ಇನ್ನು ಜೆಡಿಎಸ್‌ನ ಶ್ರೀಶೈಲ ತೂಗಶೆಟ್ಟಿಅವರು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜಾರಿಗೊಳಿಸಿದ ಸಾಲಮನ್ನಾ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಕಾಗವಾಡ ಕ್ಷೇತ್ರದಲ್ಲಿ ಜೆಡಿಎಸ್ ಕೂಡ ರಾಷ್ಟ್ರೀಯ ಪಕ್ಷಗಳ ವಿರುದ್ಧ ತೊಡೆತಟ್ಟಿದೆ. ಇನ್ನು ಉತ್ತಮ ಪ್ರಜಾಕೀಯ ಪಕ್ಷದಿಂದ ಸಚಿನ್ ಅಲಗೂರೆ, ಪಕ್ಷೇತರ ಅಭ್ಯರ್ಥಿಗಳಾಗಿ ಮುರುಗೆಪ್ಪ ದೇವರಡ್ಡಿ, ದೀಪಕ್ ಬುರ್ಲಿ, ಅರ್ಚನಾ ಮೋಳೆಕರ, ಸಂದೀಪ್ ಕಾಂಬಳೆ ಹಾಗೂ ವಿವೇಕ್ ಶೆಟ್ಟಿಕೂಡ ತಮ್ಮ ಅದೃಷ್ಟಪರೀಕ್ಷೆಗಿಳಿದಿದ್ದಾರೆ.
ಲಿಂಗಾಯತರ ಪ್ರಾಬಲ್ಯ
ಕಾಗವಾಡ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಪ್ರಾಬಲ್ಯ ಹೆಚ್ಚಿದೆ. ನಂತರ ಜೈನ, ಕುರುಬ, ಮರಾಠಾ, ಮುಸ್ಲಿಂ, ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ ಸಮುದಾಯದ ಮತದಾರರಿದ್ದಾರೆ. ಕಾಂಗ್ರೆಸ್‌ನ ರಾಜು ಕಾಗೆ ಲಿಂಗಾಯತ ಸಮುದಾಯವರಾದ್ದರಿಂದ ವರದಾನವಾಗಲಿದೆ. ಕಾಂಗ್ರೆಸ್‌ಗೆ ಲಿಂಗಾಯತರಷ್ಟೇ ಅಲ್ಲದೆ ಕುರುಬ, ಮುಸ್ಲಿಂ ಹಾಗೂ ಎಸ್‌ಸಿ, ಎಸ್‌ಟಿ ಸಮುದಾಯ ಬೆಂಬಲ ನೀಡುವುದಾಗಿ ತಿಳಿಸಿವೆ. ಬಿಜೆಪಿ ಮುಖಂಡರನ್ನು ಹೊರತುಪಡಿಸಿ, ಕಾರ್ಯಕರ್ತರು ಮಾನಸಿಕವಾಗಿ ರಾಜು ಕಾಗೆ ಅವರೊಂದಿಗೆ ಇರುವುದರಿಂದ ಸ್ವಲ್ಪಮಟ್ಟಿಗೆ ನಿರಾಳತೆ ಹೊಂದಿದ್ದಾರೆ.
ಸತತ 20 ವರ್ಷಗಳಿಂದ ಕಾಗವಾಡ ಕ್ಷೇತ್ರದಲ್ಲಿ ರಾಜು ಕಾಗೆ ಶಾಸಕರಾಗಿದ್ದರು. 2018ರಲ್ಲಿ ನಡೆದ ಚುನಾವಣೆಯಲ್ಲಿ ಬದಲಾವಣೆ ಬಯಸಿದ್ದರಿಂದ ಶ್ರೀಮಂತ ಪಾಟೀಲ್ ಆಯ್ಕೆಯಾಗಿದ್ದರು. ಶ್ರೀಮಂತ್ ಪಾಟೀಲ್ ಮರಾಠಾ ಸಮುದಾಯಕ್ಕೆ ಸೇರಿದವರಾಗಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದಾಗಿ ಲಿಂಗಾಯತ ಮತದಾರರು ತಮ್ಮನ್ನು ಬೆಂಬಲಿಸುವ ವಿಶ್ವಾಸದಲ್ಲಿದ್ದಾರೆ.
2018ರ ಚುನಾವಣೆ ಪೂರ್ವದಲ್ಲಿ ಶ್ರೀಮಂತ ಪಾಟೀಲ್ ಕಬ್ಬು ಬೆಳೆದ ರೈತರಿಗೆ ಹೆಚ್ಚಿನ ದರ ನೀಡುವುದು, ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದು, ನೀರಿನ ಕೊರತೆ ಆಗದಂತೆ ನೆರೆಯ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಹರಿಸುವುದಾಗಿ ಭರವಸೆ ನೀಡಿದ್ದರು. ಆದ್ದರಿಂದ ಕಾಗವಾಡ ಕ್ಷೇತ್ರದ ಜನರು ಶ್ರೀಮಂತ ಪಾಟೀಲ ಅವರನ್ನು ಆಯ್ಕೆ ಮಾಡಿದ್ದರು. ಆದರೆ ಚುನಾವಣೆ ನಂತರ ಈ ಭರವಸೆಗಳು ಈಡೇರಿಲ್ಲ.
ಕರದಂಟು ಮೆಲ್ಲಲು ಸಹೋದರರ ಪೈಪೋಟಿ; ಜಾರಕಿಹೊಳಿದ್ವಯರ ಪೈಕಿ ಗೆಲ್ಲೋರು ಯಾರು?
ಇನ್ನು ರಾಜು ಕಾಗೆ ಕ್ಷೇತ್ರಕ್ಕೆ ಸತತ ನಾಲ್ಕು ಬಾರಿ ಶಾಸಕರಾಗಿದ್ದವರು. ಕ್ಷೇತ್ರದ ಆಳ ಅಗಲ ಪರಿಚಯದ ಜತೆಗೆ ಯಾರನ್ನೇ ಕಂಡರೂ ಹೆಸರು ಹಿಡಿದು ಕರೆಯುವಷ್ಟರ ಮಟ್ಟಿಗೆ ಚಿರಪರಿಚಿತರು. ಕಾಂಗ್ರೆಸ್‌ನವರು ನನಗೆ ಸಾವಿರ ಕೋಟಿ ಕೊಟ್ಟರೂ ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ ಎಂದು ಕ್ಷೇತ್ರದ ಜನರಿಗೆ ಹೇಳಿದ ಎರಡೇ ದಿನಗಳಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರಿಂದ ರಾಜು ಕಾಗೆ ಮೇಲೆ ಸ್ವಲ್ಪ ಮಟ್ಟಿಗೆ ಅಸಮಾಧಾನವಿದೆ.
ಬೆಂಬಲಿಗರೂ ಪಕ್ಷಾಂತರ
ಕಳೆದ ಹಲವು ದಶಕಗಳಿಂದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಸಂಘಟನೆ ಮಾಡಿದ ಪಕ್ಷನಿಷ್ಠರಿಗೆ ಸದ್ಯದ ರಾಜಕೀಯ ಬೆಳವಣಿಗೆ ಹಾಗೂ ಬದಲಾದ ನಾಯಕರನ್ನು ಸಲೀಸಾಗಿ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ರಾಜು ಕಾಗೆ ಬಿಜೆಪಿಯಲ್ಲಿ ಗುರುತಿಸಿಕೊಂಡು, ಪಕ್ಷ ಸಂಘಟನೆ ಜತೆಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಸದ್ಯ ಬಿಜೆಪಿಯಿಂದ ಕಾಂಗ್ರೆಸ್‌ಗೆ ಪಕ್ಷಾಂತರವಾಗಿದ್ದರಿಂದ ತಮ್ಮ ಬೆಂಬಲಿಗರನ್ನು ಪಕ್ಷಾಂತರಿಸುವ ಕಾರ್ಯವನ್ನೂ ಕೈಗೊಂಡಿದ್ದಾರೆ.
ಅದೇ ರೀತಿ 2013ರಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತರಾಗಿದ್ದ ಶ್ರೀಮಂತ ಪಾಟೀಲ, ಜೆಡಿಎಸ್‌ನಿಂದ ಕಣಕ್ಕಿಳಿದಿದ್ದರು. ಆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನೇರ ಹಣಾಹಣಿ ನಡೆಸಿದ್ದವು. ಕೇವಲ 2,887 ಮತಗಳಿಂದ ಜೆಡಿಎಸ್ ಅಭ್ಯರ್ಥಿ ಸೋಲುಂಡಿದ್ದರು. ಬಿಜೆಪಿಯ ರಾಜು ಕಾಗೆ 41,784 ಮತಗಳನ್ನು ಪಡೆದು ಚುನಾಯಿತರಾಗಿದ್ದರು. 2018ರಲ್ಲಿ ನಡೆದು ಚುನಾವಣೆಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶ್ರೀಮಂತ ಪಾಟೀಲರನ್ನು ಜೆಡಿಎಸ್ ಕಾರ್ಯಕರ್ತರು ಕೈಹಿಡಿದಿದ್ದರು. ಆದರೆ ಮೂಲ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನದ ಹೊಗೆ ಬಹಿರಂಗವಾಗಿತ್ತು.
ಸದ್ಯಅನರ್ಹ ಶಾಸಕ ಶ್ರೀಮಂತ ಪಾಟೀಲ್ ಕೈ ಬಿಟ್ಟು, ಕಮಲ ಹಿಡಿದಿರುವುದು ಹಾಗೂ ಮಾಜಿ ಶಾಸಕ ರಾಜು ಕಾಗೆ ಕಮಲ ಬಿಟ್ಟು ಕೈ ಹಿಡಿದಿರುವುದರಿಂದ ಅವರ ಬೆಂಬಲಿಗರ ಪಕ್ಷಾಂತರ ಅನಿವಾರ್ಯವಾಗಿದ್ದರೂ, ಮೂಲ ಕಾರ್ಯಕರ್ತರು ಅಸಮಾಧಾನ ಹೊಂದಿದ್ದಾರೆ ಎಂಬುದನ್ನು ತಳ್ಳಿಹಾಕುವಂತಿಲ್ಲ. ಒಟ್ಟಿನಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಈ ಕ್ಷೇತ್ರದ ಜನತೆಯ ಕಾರುಣ್ಯ ಯಾರಿಗೆ ಒಲಿಯಲಿದೆ ಎಂಬುದನ್ನು ಕಾದುನೋಡಬೇಕಿದೆ.
- ಜಗದೀಶ ವಿರಕ್ತಮಠ