ಗಣಿನಾಡಿಗೆ ಮತ್ತೆ ಸಿಂಗ್ ಆಗ್ತಾರಾ ಕಿಂಗ್? ಗೆಲುವಿನ ಸರಣಿಗೆ ತಡೆಹಾಕಲು ಕಾಂಗ್ರೆಸ್ ಕಸರತ್ತು
ವಿಜಯನಗರದಲ್ಲಿ ಆನಂದ್ ಸಿಂಗ್ ಗೆಲುವಿನ ಸರಣಿಗೆ ತಡೆ ಹಾಕಲು ಕಾಂಗ್ರೆಸ್ ಕಸರತ್ತು | ಜೆಡಿಎಸ್‌ನಿಂದ ಬಿಜೆಪಿಗೆ ಲಾಭ ಸಾಧ್ಯತೆ | ಸಿಂಗ್ ಪಕ್ಷಾಂತರಿ ಎಂದು ಗೆಲ್ಲಲು ಕಾಂಗ್ರೆಸ್ ಪ್ಲಾನ್ | ಅಭ್ಯರ್ಥಿ ಹೊರಗಿನವರಾಗಿರುವುದರಿಂದ ಹಿನ್ನಡೆ ಸಂಭವ
- ಕೆ ಎಂ ಮಂಜುನಾಥ್
ಬಳ್ಳಾರಿ (ನ. 29): ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುನ್ನುಡಿ ಬರೆದ ಆನಂದ ಸಿಂಗ್ ಈಗ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ. ಸತತ ಮೂರು ಬಾರಿ ಗೆಲುವಿನ ಸಿಹಿ ಉಂಡಿರುವ ಅವರು ಉಪ ಚುನಾವಣೆಯಲ್ಲೂ ಗೆಲುವಿನ ಬಗ್ಗೆ ಅತೀವ ವಿಶ್ವಾಸದಲ್ಲಿದ್ದಾರೆ. ಆದರೆ, ಕಾಂಗ್ರೆಸ್ ಈ ಬಾರಿ ಸಿಂಗ್‌ಗೆ ಸೋಲಿನ ರುಚಿ ತೋರಿಸಲೇಬೇಕೆಂದು ಪಟ್ಟು ಹಿಡಿದು ಪ್ರಚಾರ ಕಣಕ್ಕೆ ಇಳಿದಿರುವ ಹಿನ್ನೆಲೆಯಲ್ಲಿ ವಿಜಯನಗರ ಕ್ಷೇತ್ರದಲ್ಲಿ ಭರ್ಜರಿ ಪೈಪೋಟಿ ಕಂಡು ಬಂದಿದೆ.
ಕಮಲ ಪಕ್ಷದೊಳಗಿನ ಭಿನ್ನಮತ, ಒಳ ಮುನಿಸುಗಳು, ಬಿಜೆಪಿ ಅಭ್ಯರ್ಥಿಯ ಪಕ್ಷಾಂತರ ಧೋರಣೆಯ ವಿರೋಧಗಳನ್ನು ಲಾಭ ಮಾಡಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್ ನಾಯಕರು ಕಡಿಮೆ ಅಂತರದಲ್ಲಾದರೂ ಸಿಂಗ್ ಜಯದ ಸರಣಿಗೆ ತಡೆಯೊಡ್ಡುವ ವಿಶ್ವಾಸದಲ್ಲಿದ್ದಾರೆ.
ಹಳೆ ಎದುರಾಳಿಗಳು, ಪಕ್ಷ ಅದಲು ಬದಲು; ಕಾಗವಾಡ ಯಾರ ಪಾಲು?
ಎರಡೂ ಪಕ್ಷಗಳ ತಂತ್ರ-ಪ್ರತಿತಂತ್ರದ ಕಾರ್ಯಾಚರಣೆಗಳು ಕ್ಷೇತ್ರದಲ್ಲಿ ಈಗಾಗಲೇ ದೃಗ್ಗೋಚರವಾಗಿವೆ. ಜೆಡಿಎಸ್ ಅಭ್ಯರ್ಥಿ ಸ್ಪರ್ಧೆಯಲ್ಲಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಸಾಂಪ್ರದಾಯಿಕ ಮತಗಳನ್ನು ಕಿತ್ತುಕೊಳ್ಳಬಹುದು ಎಂಬ ಲೆಕ್ಕಾಚಾರ ಬಿಟ್ಟರೆ ಗೆಲುವಿನ ಗೆರೆ ಮುಟ್ಟುವಷ್ಟುತೆನೆಹೊತ್ತ ಪಕ್ಷ ಇಲ್ಲಿ ಶಕ್ತವಾಗಿಲ್ಲ.
ಪಕ್ಷಕ್ಕಿಂತ ವರ್ಚಸ್ಸೇ ಹೆಚ್ಚು
ಪ್ರತಿ ಚುನಾವಣೆಯಲ್ಲೂ ಇಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆಯೇ ಜಿದ್ದಾಜಿದ್ದಿ ನಡೆಯುತ್ತದೆ. ಆದರೆ, ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಗತ ವರ್ಚಸ್ಸು ಹೆಚ್ಚು ಕೆಲಸ ಮಾಡುತ್ತದೆ ಎಂಬುದು ಈಗಾಗಲೇ ಹಿಂದಿನ ಚುನಾವಣೆಗಳಲ್ಲಿ ರುಜುವಾತಾಗಿದೆ. ಬಿಜೆಪಿಯಿಂದ ಸ್ಪರ್ಧಿಸಿರುವ ಆನಂದ ಸಿಂಗ್ ‘ಪಕ್ಷಾಂತರಿ’ ಎಂಬ ಆರೋಪ ಹೊತ್ತಿದ್ದಾರೆ. ಆನಂದ ಸಿಂಗ್ ಈ ಹಿಂದೆ ಕಮಲ ಪಕ್ಷ ತೊರೆದು ‘ಕೈ’ ಹಿಡಿದ ಮೇಲೂ ಇಲ್ಲಿನ ಮತದಾರರು ‘ಸಿಂಗ್ ಈಸ್ ಕಿಂಗ್’ ಎಂದಿದ್ದರು.
2008ರಲ್ಲಿ ಮೊದಲ ಬಾರಿಗೆ ಕಮಲ ಪಕ್ಷದಿಂದ ಗೆದ್ದು ವಿಧಾನಸಭೆಗೆ ಪ್ರವೇಶ ಪಡೆದ ಆನಂದ ಸಿಂಗ್, 2013ರಲ್ಲೂ ಇದೇ ಪಕ್ಷದಿಂದ ಪುನರಾಯ್ಕೆಯಾದರು. ಕಳೆದ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿ ಪಕ್ಷಾಂತರಿಯಾಗಿಯೂ ಗೆಲುವಿನ ದಡ ಮುಟ್ಟಿದರು.
ಇದೀಗ ಎದುರಾಗಿರುವ ಉಪ ಚುನಾವಣೆಯಲ್ಲಿ ಮತ್ತೆ ಪಕ್ಷಾಂತರಿ ಎಂಬ ಪಟ್ಟಹೊತ್ತು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ‘ಪ್ರತಿಪಕ್ಷದವರು ನನ್ನ ವಿರುದ್ಧ ಅದೇನೇ ಆರೋಪ ಮಾಡಲಿ ನಾನು ಗೆದ್ದು ತೋರಿಸುತ್ತೇನೆ’ ಎಂದು ಆನಂದ ಸಿಂಗ್ ಬೀಗುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಹೊರಗಿನವರು
ಸದ್ಯ ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಹೊರಗಿನವರು. ಬಿಜೆಪಿ ಅಭ್ಯರ್ಥಿ ಸ್ಥಳೀಯ ಎಂಬ ಮಾತನ್ನು ಕಮಲ ಪಾಳೆಯವೇ ಕ್ಷೇತ್ರದಲ್ಲಿ ಹರಿಬಿಟ್ಟಿದೆ. ಇದು ಮತಗಳ ಅಂತರ ಹಿಗ್ಗಿಸುತ್ತದೆ ಎಂಬುದು ಬಿಜೆಪಿಯ ಲೆಕ್ಕಾಚಾರ. ಇದಕ್ಕೆ ಪ್ರತಿಚಾಟಿ ಬೀಸುತ್ತಿರುವ ಕಾಂಗ್ರೆಸ್, ‘ಘೋರ್ಪಡೆ ರಾಜಮನೆತನದವರು. ಅವರು ನೂರಾರು ಎಕರೆ ಗಣಿಪ್ರದೇಶವನ್ನು ಸರ್ಕಾರಕ್ಕೆ ವಾಪಸು ಮಾಡಿದ್ದರು. ಆದರೆ, ಆನಂದಸಿಂಗ್ ಅದೇ ಗಣಿಯಲ್ಲಿ ಲೂಟಿ ಮಾಡಿದರು’ ಎಂದು ಪ್ರಚಾರ ಮಾಡುತ್ತಿದೆ.
ಸರ್ವಜ್ಞನ ನಾಡಲ್ಲಿ ಕೌರವನ ಸತ್ವಪರೀಕ್ಷೆ; ಬಿ.ಸಿ.ಪಾಟೀಲ್ ಕ್ಷೇತ್ರ ಉಳಿಸಿಕೊಳ್ತಾರಾ?
‘ನಾನು ಬೇರೆ ಜಿಲ್ಲೆಯಿಂದ ಬಂದಿಲ್ಲ. ನನ್ನದು ಸಹ ಬಳ್ಳಾರಿ ಜಿಲ್ಲೆಯೇ. ಹೊರಗಿನವರು ಎಂಬ ಮಾತೇ ಇಲ್ಲಿ ಅಪ್ರಸ್ತುತ. ಅಭಿವೃದ್ಧಿ ಬಗ್ಗೆ ಮಾತನಾಡಲು ಬಿಜೆಪಿ ಬಳಿ ಏನೂ ಇಲ್ಲ. ಹೀಗಾಗಿಯೇ ಹೊರಗಿನವರು ಎಂಬ ಗುಲ್ಲು ಎಬ್ಬಿಸಿದೆ’ ಎಂದು ಘೋರ್ಪಡೆ ಆರೋಪಿಸುತ್ತಾರೆ.
ಕಾಂಗ್ರೆಸ್ ಶಾಸಕರು ಕಾಣಿಸುತ್ತಿಲ್ಲ
ಇನ್ನು ಕಾಂಗ್ರೆಸ್‌ನ ಶಾಸಕರು ಮೈ ಕೊಡವಿ ಚುನಾವಣೆ ಪ್ರಚಾರದಲ್ಲಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಕಾಣಿಸಿಕೊಂಡ ಕೆಲವರು ಸಕ್ರಿಯವಾಗಿಲ್ಲ. ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ, ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ವಿಜಯನಗರ ಕ್ಷೇತ್ರದ ಕಡೆ ಕಣ್ಣೆತ್ತಿಯೂ ನೋಡಿಲ್ಲ. ಸಿದ್ದರಾಮಯ್ಯ ಬಂದ ಬಳಿಕವಷ್ಟೇ ಅವರು ಅಖಾಡಕ್ಕೆ ಇಳಿಯುತ್ತಾರೆ ಎಂದು ಕೆಲ ಕಾಂಗ್ರೆಸ್ ನಾಯಕರು ಹೇಳುತ್ತಿದ್ದು, ಅಲ್ಲಿಯವರೆಗೆ ಬೆರಳೆಣಿಕೆಯ ನಾಯಕರಷ್ಟೇ ಕೈ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯ ಎನಿಸಿದೆ. ಕೈ ಶಾಸಕರ ನಡೆ ಅಭ್ಯರ್ಥಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ. ಹೀಗಾಗಿ ಲಭ್ಯವಿರುವ ನಾಯಕರ ಜೊತೆಗೇ ಕ್ಷೇತ್ರದಲ್ಲಿ ಓಡಾಡಬೇಕಾಗಿದೆ.
ಭರ್ಜರಿ ಜಾತಿ ಲೆಕ್ಕಾಚಾರ
ಕ್ಷೇತ್ರದಲ್ಲಿ ಪರಿಶಿಷ್ಟಜಾತಿ- ಪರಿಶಿಷ್ಟಪಂಗಡ ಹಾಗೂ ವೀರಶೈವ- ಲಿಂಗಾಯತ ಮತಗಳು ನಿರ್ಣಾಯಕ. ಸ್ಥಳೀಯವಾಗಿ ವಾಲ್ಮೀಕಿ ಸಮಾಜದ ಹೆಚ್ಚಿನ ಮತದಾರರು ಆನಂದ ಸಿಂಗ್ ಬೆನ್ನಿಗೆ ನಿಂತಿದ್ದು, ವೀರಶೈವ ಲಿಂಗಾಯತ ಮತಗಳು ಬೇರೆ ಪಕ್ಷಕ್ಕೆ ಜಾರುವುದಿಲ್ಲ ಎಂಬುದು ಕಮಲ ಪಕ್ಷಕ್ಕಿರುವ ಖಾತ್ರಿ. ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯಲು ಲಿಂಗಾಯತರು ಬಿಜೆಪಿ ಬೆಂಬಲಿಸುತ್ತಾರೆ ಎಂಬ ವಿಶ್ವಾಸ ಪಕ್ಷದ ನಾಯಕರದ್ದು. ದೊಡ್ಡ ಸಮುದಾಯ ಎನಿಸಿರುವ ಮುಸ್ಲಿಂ ಹಾಗೂ ದಲಿತ ಸಮಾಜದ ಮತಗಳು ಜೆಡಿಎಸ್ ಸೇರಿದಂತೆ ಮೂರು ಪಕ್ಷಗಳಿಗೆ ಹಂಚಿಹೋಗುವ ಸಾಧ್ಯತೆಗಳು ಹೆಚ್ಚು. ಪರಿಶಿಷ್ಟಜಾತಿ ಮತಗಳು ಕಾಂಗ್ರೆಸ್ಸಿಗೆಂದು ನಿರ್ದಿಷ್ಟಗೊಂಡಿಲ್ಲ.
ರಾಣೆಬೆನ್ನೂರು ಉಪಚುನಾವಣೆ: ಹಳೆ ಹುಲಿ ಕೋಳಿವಾಡಗೆ ಯುವಕನ ಸವಾಲ್
ಇದರ ಜತೆಗೆ, ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ ಅರಸು ಅವರು ಬಿಜೆಪಿಯಿಂದ ಮತಗಳನ್ನು ಕಸಿದುಕೊಳ್ಳುವ ಸಾಧ್ಯತೆ ಇದೆ. ಇನ್ನು ಆನಂದ ಸಿಂಗ್‌ಗೆ ಸಡ್ಡು ಹೊಡೆಯಲು ಶಕ್ತರಾಗಿದ್ದ ಎಚ್.ಆರ್. ಗವಿಯಪ್ಪ ಅವರು ಉಪ ಚುನಾವಣೆಯಿಂದ ದೂರ ಉಳಿದಿದ್ದಾರೆ. ಕಳೆದ 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಗವಿಯಪ್ಪ ಅವರು ಆನಂದ ಸಿಂಗ್ ಬಿಜೆಪಿಗೆ ಮರಳುತ್ತಿದ್ದಂತೆಯೇ ತಟಸ್ಥರಾಗಿದ್ದಾರೆ.
ಗವಿಯಪ್ಪಗೆ ಟಿಕೆಟ್ ನೀಡಲು ಕಾಂಗ್ರೆಸ್ ತುದಿಗಾಲಲ್ಲಿ ನಿಂತಿತ್ತಾದರೂ ಪಕ್ಷಾಂತರ ಮಾಡಲು ಗವಿಯಪ್ಪ ಒಪ್ಪಿಕೊಳ್ಳಲಿಲ್ಲ. ಬಿಜೆಪಿಯಲ್ಲಿನ ಒಂದಷ್ಟುಭಿನ್ನಮತ ಹಾಗೂ ಪಕ್ಷಾಂತರ ಮಾಡಿದ ಆನಂದ ಸಿಂಗ್ ಅವರ ನಡೆಯನ್ನು ಟೀಕಿಸುತ್ತಲೇ ಕಾಂಗ್ರೆಸ್ ನಾಯಕರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಅಭ್ಯರ್ಥಿಗಳ ಜಾತಿ ನಗಣ್ಯ
ವಿಜಯನಗರ ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಜಾತಿಯ ಬೆಂಬಲವಿಲ್ಲ. ಇವರು ಪ್ರತಿನಿಧಿಸುವ ಜಾತಿಯ ಮತದಾರರ ಸಂಖ್ಯೆ ಕ್ಷೇತ್ರದಲ್ಲಿ ನಗಣ್ಯ. ಘೋರ್ಪಡೆ ಮರಾಠಾ ಸಮುದಾಯಕ್ಕೆ ಸೇರಿದ್ದರೆ ಆನಂದ ಸಿಂಗ್ ರಜಪೂತರು. ಈ ಸಮುದಾಯದ ಮತ ತೀರಾ ಅತ್ಯಲ್ಪ. ಈ ಕ್ಷೇತ್ರದ ರಾಜಕೀಯ ಇತಿಹಾಸ ನೋಡಿದರೆ 1957ರಿಂದ 2018ರ ಚುನಾವಣೆವರೆಗೆ ಗೆದ್ದಿರುವ ಬಹುತೇಕರು ಜಾತಿಯಿಂದ ಬಲಾಢ್ಯರಲ್ಲ. ವ್ಯಕ್ತಿ ವರ್ಚಸ್ಸಿನ ಮೇಲೆಯೇ ಬಹುತೇಕರು ಗೆದ್ದು ವಿಧಾನಸಭೆ ಪ್ರವೇಶ ಪಡೆದಿದ್ದಾರೆ.
ಅಥಣಿ ಉಪಚುನಾವಣೆ: ಕುಮಟಳ್ಳಿಯನ್ನು ಗೆಲ್ಲಿಸುವ ಹೊಣೆ ಸವದಿಗೆ
ಪ್ರತ್ಯೇಕ ಜಿಲ್ಲೆ ಕೂಗು ವರವಾಗುವುದೇ?
ಉಪ ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ವಿಜಯನಗರ ಪ್ರತ್ಯೇಕ ಜಿಲ್ಲೆಯ ಕೂಗನ್ನು ಮತ್ತಷ್ಟುಬಲಗೊಳಿಸಿದ ಬಿಜೆಪಿ ಅಭ್ಯರ್ಥಿ ಆನಂದ ಸಿಂಗ್, ಗೆಲುವಿಗೆ ಇದು ಹೆಚ್ಚು ಅನುಕೂಲಕರ ವಾತಾವರಣ ನಿರ್ಮಿಸಲಿದೆ ಎಂದು ನಂಬಿದ್ದಾರೆ. ಚುನಾವಣೆ ಪ್ರಚಾರದಲ್ಲಿ ಪ್ರತ್ಯೇಕ ಜಿಲ್ಲೆಯ ಬಗ್ಗೆಯೇ ಹೆಚ್ಚು ಒತ್ತು ನೀಡುತ್ತಿದ್ದು ‘ಇದು ನನ್ನ ಕೊನೆಯ ಚುನಾವಣೆ’ ಎನ್ನುವ ಮೂಲಕ ಮತದಾರರನ್ನು ಸೆಳೆಯುವ ತಂತ್ರ ರೂಪಿಸಿದ್ದಾರೆ. ಆದರೆ, ಇದು ಎಷ್ಟರ ಮಟ್ಟಿಗೆ ಲಾಭವಾಗುತ್ತದೆ ಎಂದು ಹೇಳುವಂತಿಲ್ಲ. ವಿದ್ಯಾವಂತರು ಮಾತ್ರ ಹೊಸ ಜಿಲ್ಲೆಯ ಬಗ್ಗೆ ಚರ್ಚಿಸುತ್ತಿದ್ದಾರೆಯೇ ವಿನಹ ಉಳಿದವರು ನಿರಾಸಕ್ತಿ ತೋರಿಸುತ್ತಿದ್ದಾರೆ.
ಕಣದಲ್ಲಿರುವ ಅಭ್ಯರ್ಥಿಗಳು
ಬಿಜೆಪಿಯಿಂದ ಆನಂದ ಸಿಂಗ್, ಕಾಂಗ್ರೆಸ್‌ನಿಂದ ವೆಂಕಟರಾವ್ ಘೋರ್ಪಡೆ, ಜೆಡಿಎಸ್‌ನಿಂದ ಎನ್.ಎಂ. ನಬಿ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದಿಂದ ಮಮತಾ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಪ.ಯ. ಗಣೇಶ, ಉತ್ತಮ ಪ್ರಜಾಕೀಯ ಪಕ್ಷದಿಂದ ಮಹೇಶ ಲಂಬಾಣಿ, ಪಕ್ಷೇತರ ಅಭ್ಯರ್ಥಿಗಳಾಗಿ ಅಲಿ ಹೊನ್ನೂರು, ಕೆ.ಉಮೇಶ್, ಕವಿರಾಜ ಅರಸು, ಕಿಚಡಿ ಕೊಟ್ರೇಶ್, ಕಂಡಕ್ಟರ್ ಪಂಪಾಪತಿ, ಮಾರ್ಕಂಡಪ್ಪ ಹಾಗೂ ಸಿ.ಎಂ. ಮಂಜುನಾಥ ಸ್ಪರ್ಧೆಯಲ್ಲಿದ್ದಾರೆ.