ಬಿಎಸ್‌ವೈ ತಂದೆ ಸಮಾನ, ಅವರ ಶಕ್ತಿ ಕುಂದಿಸಲಾಗದು: ಜನಾರ್ದನರೆಡ್ಡಿ
- ವಿಜಯೇಂದ್ರಗೆ ವರುಣಾ ಟಿಕೆಟ್ ನೀಡಿದ್ರೆ ಬಿಜೆಪಿಗೆ 130 ಸ್ಥಾನ ಬರ್ತಿತ್ತು
- ವಿಜಯೇಂದ್ರಗೆ ಸ್ಪರ್ಧಿಸದಂತೆ ತಡೆದಿದ್ದು ಹೈಕಮಾಂಡ್
- ನನ್ನನ್ನು ಮೊಳಕಾಲ್ಮುರಿಗೆ ಸೀಮಿತ ಮಾಡಿದ್ದೂ ಬಿಜೆಪಿ ಬಲ ಕುಸಿತಕ್ಕೆ ಕಾರಣ
ಬೆಂಗಳೂರು (ಡಿ.26): ‘ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನನಗೆ ತಂದೆಯ ಸಮಾನರು’ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದರು. ‘ಯಡಿಯೂರಪ್ಪ ಅವರ ಅಧಿಕಾರವನ್ನು ಕಿತ್ತುಕೊಳ್ಳಬಹುದು. ಆದರೆ ಅವರ ಶಕ್ತಿಯನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯಲು ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಸಜ್ಜಾಗಿ ಸಕಲ ಸಿದ್ಧತೆಯನ್ನೂ ನಡೆಸಿದ್ದರು. ಆದರೆ ಕೊನೆ ಕ್ಷಣದಲ್ಲಿ ನಾಮಪತ್ರ ಸಲ್ಲಿಸದಂತೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿತು. ಸ್ವತಃ ಯಡಿಯೂರಪ್ಪ ಅವರಿಂದಲೇ ವಿಜಯೇಂದ್ರ ಸ್ಪರ್ಧಿಸುವುದಿಲ್ಲ ಎಂದು ವೇದಿಕೆಯಲ್ಲಿ ಹೇಳಿಕೆ ಕೊಡಿಸಲಾಯಿತು. ತಂದೆಯೇ ಮಗ ಸ್ಪರ್ಧಿಸುವುದಿಲ್ಲ ಎಂದು ಹೇಳಲು ಎಷ್ಟುನೋವಾಗಿರಬೇಕು? ಟಿಕೆಟ್ ನಿರಾಕರಣೆ ಹಿಂದೆ ಯಾರದೋ ಒತ್ತಡ ಕೆಲಸ ಮಾಡಿದೆ’ ಎಂದು ರೆಡ್ಡಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
130 ಸ್ಥಾನ ಬರ್ತಿತ್ತು:
‘ವಿಜಯೇಂದ್ರಗೆ ವರುಣಾ ವಿಧಾನ ಸಭಾ ಕ್ಷೇತ್ರದಿಂದ ಟಿಕೆಟ್ ನೀಡಿದ್ದರೆ ಅವರ ಪ್ರಭಾವದಿಂದ ಸುತ್ತಮುತ್ತಲಿನ ಮತ್ತಷ್ಟುಸ್ಥಾನಗಳು ಬಿಜೆಪಿ ಪಾಲಾಗುತ್ತಿದ್ದವು. ಮತ್ತೊಂದೆಡೆ ನನ್ನನ್ನು ಕೇವಲ ಮೊಳಕಾಲ್ಮುರಿನಲ್ಲಿ ಶ್ರೀರಾಮುಲು ಗೆಲುವಿಗೆ ಮಾತ್ರ ಸೀಮಿತ ಮಾಡಲಾಯಿತು. ಇಲ್ಲದಿದ್ದರೆ ಬಿಜೆಪಿ 130 ಸ್ಥಾನಗಳನ್ನು ಸುಲಭವಾಗಿ ಗಳಿಸಿ ಆಡಳಿತದ ಚುಕ್ಕಾಣಿ ಹಿಡಿಯುತ್ತಿತ್ತು. ಬೇರೆ ಪಕ್ಷದವರನ್ನು ಸೆಳೆದು ಅಧಿಕಾರ ಹಿಡಿಯುವ ಪರಿಸ್ಥಿತಿಯೇ ಬರುತ್ತಿರಲಿಲ್ಲ’ ಎಂದು ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದರು.
ಜನಾರ್ದನ ರೆಡ್ಡಿ ಬಹುಕೋಟಿ ಆಸ್ತಿ ಸೀಜ್ ಮಾಡಿದ್ದು ಏಕೆ?
ಹೆಲಿಕಾಪ್ಟರ್ ಅನಾಥವಾಗಿಲ್ಲ: ರೆಡ್ಡಿ
‘ಜನಾರ್ದನ ರೆಡ್ಡಿ ಜೈಲು ಸೇರಿದ್ದರಿಂದ ಹೆಲಿಕಾಪ್ಟರ್ ಅನಾಥವಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದವು. ಆದರೆ ನನ್ನ ಹೆಲಿಕಾಪ್ಟರ್ ಯಾವತ್ತೂ ಅನಾಥವಾಗಿರಲಿಲ್ಲ. ನ್ಯಾಯಾಲಯ ಸಹ ಹೆಲಿಕಾಪ್ಟರ್ ಬಳಕೆಗೆ ಅನುಮತಿ ನೀಡಿತ್ತು. ಆದರೆ ನನ್ನ ಮಕ್ಕಳಿಗೆ ಕಷ್ಟಎಂದರೆ ಏನು? ಎಂದು ಗೊತ್ತಾಗಲು ಕುಟುಂಬವು ಹೆಲಿಕಾಪ್ಟರ್ ಬಳಸದಂತೆ ನೋಡಿಕೊಂಡೆ’ ಎಂದು ಜನಾರ್ದನ ರೆಡ್ಡಿ ವಿವರಿಸಿದರು.
ಗಣಿಧಣಿ ಹೊಸ ರಾಜಕೀಯ ಆಟ: ರೆಬೆಲ್ ರೆಡ್ಡಿಯ ಪಕ್ಷದಿಂದ ಯಾರಿಗೆ ಕಷ್ಟ?