ಬೆಂಗಳೂರು :  ಆ್ಯಂಬಿಡೆಂಟ್‌ ಕಂಪನಿ ವಿರುದ್ಧದ ಬಹುಕೋಟಿ ವಂಚನೆ ಪ್ರಕರಣದ ಸಂಬಂಧ ಆ ಕಂಪನಿಯ ಮುಖ್ಯಸ್ಥ ಸೈಯದ್‌ ಅಹಮದ್‌ ಫರೀದ್‌ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಸೇರಿದಂತೆ ಇತರೆ ಆರೋಪಿಗಳ ಆಸ್ತಿ ಜಪ್ತಿಗೆ ಬೆಂಗಳೂರು ನಗರದ ಉಪ ವಿಭಾಗಾಧಿಕಾರಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಬೆಂಗಳೂರಿನ ಚಾಲುಕ್ಯ ವೃತ್ತದ ಸಮೀಪದ ಪಾರಿಜಾತ ಅಪಾರ್ಟ್‌ಮೆಂಟ್‌ನಲ್ಲಿರುವ ಜನಾರ್ದನರೆಡ್ಡಿ ಅವರ ಫ್ಲಾಟ್‌, ಡಿ.ಜೆ.ಹಳ್ಳಿಯಲ್ಲಿರುವ ಫರೀದ್‌ ಮನೆ, ರೆಡ್ಡಿ ಆಪ್ತ ಸಹಾಯಕ ಅಲಿಖಾನ್‌ ಮನೆ, ರಿಯಲ್‌ ಎಸ್ಟೇಟ್‌ ಉದ್ಯಮಿ ವಿಜಯ್‌ ತಾತಾ ಸೇರಿದಂತೆ ಇನ್ನಿತರ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಉಪವಿಭಾಗಾಧಿಕಾರಿಗಳು ಮುಂದಾಗಿದ್ದಾರೆ.

ಜಪ್ತಿಯಾದ ಆಸ್ತಿಯನ್ನು ಸಾರ್ವಜನಿಕವಾಗಿ ಹರಾಜು ನಡೆಸಿ, ಅದರಿಂದ ಬಂದ ಹಣವನ್ನು ಆ್ಯಂಬಿಡೆಂಟ್‌ ಕಂಪನಿಯ ಗ್ರಾಹಕರಿಗೆ ಮರಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಕಾನೂನು ಪ್ರಕ್ರಿಯೆಗೆ ನ್ಯಾಯಾಲಯದ ಅನುಮತಿ ಪಡೆದಿದ್ದು, ಇನ್ನೊಂದು ವಾರದಲ್ಲಿ ಆರೋಪಿಗಳ ಆಸ್ತಿ ಹರಾಜು ನಡೆಯಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಅಧಿಕ ಬಡ್ಡಿ ಆಸೆ ತೋರಿಸಿ ಸಾರ್ವಜನಿಕರಿಂದ 600 ಕೋಟಿಗೂ ಅಧಿಕ ಹಣವನ್ನು ಸಂಗ್ರಹಿಸಿ ವಂಚಿಸಿದ ಆರೋಪಕ್ಕೆ ಆ್ಯಂಬಿಡೆಂಟ್‌ ಕಂಪನಿ ತುತ್ತಾಗಿದೆ. ಈ ಕಂಪನಿಯ ವಿರುದ್ಧ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ವಂಚನೆ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಸಿಸಿಬಿ ತನಿಖೆ ನಡೆಸುತ್ತಿದೆ. ಅಲ್ಲದೆ, ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯ ಸಹ ತನಿಖೆ ನಡೆಸಿದ್ದವು. ಈ ವಂಚನೆ ಪ್ರಕರಣದ ಸುಳಿಯಲ್ಲಿ ಸಿಲುಕಿದ್ದ ಆ್ಯಂಬಿಡೆಂಟ್‌ ಕಂಪನಿಯ ಮಾಲಿಕ ಸೈಯದ್‌ ಅಹಮದ್‌ ಫರೀದ್‌ ಹಾಗೂ ಆತನ ಪುತ್ರ ಅಫಕ್‌ ಫರೀದ್‌ ಅವರಿಗೆ ಸಹಕಾರ ನೀಡುವುದಾಗಿ ನಂಬಿಸಿ ಹಣ ಪಡೆದ ಆರೋಪದಡಿ ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಅವರ ಆಪ್ತ ಸಹಾಯಕ ಅಲಿಖಾನ್‌ ಅವರನ್ನು ಸಿಸಿಬಿ ಬಂಧಿಸಿತ್ತು.

ಬಳಿಕ ಜಾಮೀನು ಪಡೆದು ಅವರು ಹೊರಬಂದಿದ್ದರು. ಈ ನಡುವೆ ಸರ್ಕಾರವು ಆ್ಯಂಬಿಡೆಂಟ್‌ ವಂಚನೆ ಪ್ರಕರಣದ ಆರೋಪಿಗಳ ಆಸ್ತಿ ಜಪ್ತಿ ಮಾಡಿ ಗ್ರಾಹಕರಿಗೆ ಹಣ ಮರಳಿಸಲು ಉಪ ವಿಭಾಗಾಧಿಕಾರಿಗಳನ್ನು ನೇಮಿಸಿತು. ಅದರಂತೆ ನ್ಯಾಯಾಲಯದ ಅನುಮತಿ ಪಡೆದು ಉಪವಿಭಾಗಾಧಿಕಾರಿ ನಾಗರಾಜ್‌ ಅವರು ಆ್ಯಂಬಿಡೆಂಟ್‌ ಪ್ರಕರಣದ ಆರೋಪಿಗಳ ಆಸ್ತಿ ಜಪ್ತಿಗೆ ತಯಾರಿ ನಡೆಸಿದ್ದಾರೆ.