ನೀವು ಪಕ್ಷದಲ್ಲಿ ಸಕ್ರಿಯರಾಗಿದ್ದುಕೊಂಡು ರಾಜ್ಯ ನಾಯಕರಿಗೆ ಮಾರ್ಗದರ್ಶನ ಮಾಡಬೇಕೆಂದು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಪ್ರಭಾವಿ ರಾಷ್ಟ್ರೀಯ ನಾಯಕ ಅಮಿತ್ ಶಾ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ.
ಬೆಂಗಳೂರು : ನೀವು ಪಕ್ಷದಲ್ಲಿ ಸಕ್ರಿಯರಾಗಿದ್ದುಕೊಂಡು ರಾಜ್ಯ ನಾಯಕರಿಗೆ ಮಾರ್ಗದರ್ಶನ ಮಾಡಬೇಕೆಂದು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಪ್ರಭಾವಿ ರಾಷ್ಟ್ರೀಯ ನಾಯಕ ಅಮಿತ್ ಶಾ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ.
ಖಾಸಗಿ ಕಾರ್ಯಕ್ರಮದ ನಿಮಿತ್ತ ಗುರುವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ ಅಮಿತ್ ಶಾ ಅವರೊಂದಿಗೆ ಯಡಿಯೂರಪ್ಪ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಈ ವೇಳೆ ಪಕ್ಷದಲ್ಲಿನ ಬೆಳವಣಿಗೆಗಳು ಸೇರಿ ರಾಜ್ಯ ರಾಜಕಾರಣದ ಬಗ್ಗೆ ಪ್ರಸ್ತಾಪವಾಗಿದೆ. ಆಗ ಅಮಿತ್ ಶಾ ಅವರು ನೀವು ಪಕ್ಷದ ಚಟುವಟಿಕೆಗಳಿಂದ ದೂರ ಇರಬೇಡಿ. ಸಕ್ರಿಯರಾಗಿರಿ ಎಂಬ ಮಾತನ್ನು ಹೇಳಿದರು ಎನ್ನಲಾಗಿದೆ.
ಇದರ ಬೆನ್ನಲ್ಲೇ ಶುಕ್ರವಾರ ಯಡಿಯೂರಪ್ಪ ಅವರು ದಿಢೀರ್ ರಾಜ್ಯ ಬಿಜೆಪಿ ಕಚೇರಿಗೆ ಆಗಮಿಸಿ ಯಾವುದೇ ಸಭೆ ಸಮಾರಂಭ ಇಲ್ಲದಿದ್ದರೂ ಕೆಲಕಾಲ ಕಳೆದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಲೋಕಾಭಿರಾಮವಾಗಿ ಮಾತನಾಡಿ ನಿರ್ಗಮಿಸಿದರು.ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿನಿತ್ಯ ಪಕ್ಷದ ಕಚೇರಿಗೆ ಬಂದು ಮಧ್ಯಾಹ್ನದವರೆಗೆ ಇರಲು ನಿರ್ಧರಿಸಿದ್ದೇನೆ. ಪ್ರತಿ ವಾರ ಒಂದೆರಡು ಜಿಲ್ಲೆಗೆ ಭೇಟಿ ನೀಡುವೆ ಎಂದು ತಿಳಿಸಿದರು.
ಸರ್ಕಾರದಲ್ಲಿ ಭ್ರಷ್ಟಾಚಾರ-ಬಿಎಸ್‌ವೈ:
ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಹುತೇಕ ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿವೆ ಎಂದು ಇದೇ ವೇಳೆ ಯಡಿಯೂರಪ್ಪ ಹರಿಹಾಯ್ದರು.ಜನರ ಸಂಕಷ್ಟಗಳನ್ನು ಯಾರೂ ಕೇಳುವವರಿಲ್ಲ ಎಂಬಂಥ ದುಸ್ಥಿತಿ ಬಂದಿದೆ. ಸರ್ಕಾರ ಕೇವಲ ಪ್ರಚಾರದಲ್ಲಿ ತೊಡಗಿದ್ದು, ಅಭಿವೃದ್ಧಿ ಕಡೆ ಗಮನ ಕೊಡುತ್ತಿಲ್ಲ. ನೀರಾವರಿ ಯೋಜನೆಗಳು ಸಂಪೂರ್ಣ ಸ್ಥಗಿತವಾಗಿವೆ. ಕರ್ನಾಟಕದ ಯಾವುದೇ ಮೂಲೆಯಲ್ಲಾದರೂ ಒಂದು ಕಿಮೀ ರಸ್ತೆ ಆಗುತ್ತಿರುವುದನ್ನು ಈ ಸರ್ಕಾರ ತೋರಿಸಲಿ. ಈ ಸರ್ಕಾರ ತುಘಲಕ್ ದರ್ಬಾರ್ ನಡೆಸುತ್ತಿದೆ ಎಂದು ಆರೋಪಿಸಿದರು.
ಬಿ.ಆರ್.ಪಾಟೀಲ್ ಹೇಳಿದ್ದು ಸತ್ಯ:
ಹಣ ಕೊಟ್ಟು ಆಶ್ರಯ ಮನೆ ಪಡೆಯಬೇಕಿದೆ ಎಂಬ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲರ ಆಡಿಯೋ ವೈರಲ್ ಆದ ಕುರಿತ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಬಿ.ಆರ್.ಪಾಟೀಲ್ ಹೇಳಿದ್ದು ನೂರಕ್ಕೆ ನೂರು ಸತ್ಯ. ಹಣ ಕೊಡದೆ ಯಾವುದೇ ಕೆಲಸ ಆಗುವುದಿಲ್ಲ ಎಂಬುದು ಸಾಬೀತಾಗಿದೆ. ಬಡವರು ಮನೆ ಬೇಕೆಂದರೂ ದುಡ್ಡು ಕೊಟ್ಟು ತೆಗೆದುಕೊಳ್ಳಬೇಕಾಗಿದೆ. ಸರ್ಕಾರ ತಪ್ಪನ್ನು ಒಪ್ಪಿಕೊಂಡು ಅದನ್ನು ಸರಿಪಡಿಸಿ ಬಡವರಿಗೆ ನ್ಯಾಯ ಒದಗಿಸಿಕೊಡಲಿ ಎಂದು ಆಗ್ರಹಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅಸಮಾಧಾನಿತರನ್ನು ಕರೆದು ಮಾತನಾಡಿ ಸಮಸ್ಯೆ ಬಗೆಹರಿಸುವ ಕೆಲ ನಾಯಕರ ಪ್ರಯತ್ನ ಸ್ವಾಗತಿಸುವೆ. ಅಸಮಾಧಾನದಿಂದ ಯಾರೇ ಇದ್ದರೂ ಅವರ ಜೊತೆ ಮಾತನಾಡಲು ನಾನು ಸಿದ್ಧ ಎಂದರು.
