ಅನುದಾನ ಮಂಜೂರು ಮಾಡುವುದರಿಂದ ದೇಶದ ಆರ್ಥಿಕತೆ ಹೆಚ್ಚಾಗುವುದಿಲ್ಲ, ದುಡಿಯುವ ವರ್ಗ ಮಾಡುವ ಕೆಲಸ ಹಾಗೂ ಉತ್ಪಾದನೆಯಿಂದ ಸರ್ಕಾರಕ್ಕೆ ಆದಾಯ ಬರುತ್ತದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ (ಮಾ.07): ರೈತ ಮತ್ತು ದುಡಿಯುವ ವರ್ಗ ಆಧುನಿಕ ಯುಗದ ಕುಬೇರರು. ಅನುದಾನ ಮಂಜೂರು ಮಾಡುವುದರಿಂದ ದೇಶದ ಆರ್ಥಿಕತೆ ಹೆಚ್ಚಾಗುವುದಿಲ್ಲ, ದುಡಿಯುವ ವರ್ಗ ಮಾಡುವ ಕೆಲಸ ಹಾಗೂ ಉತ್ಪಾದನೆಯಿಂದ ಸರ್ಕಾರಕ್ಕೆ ಆದಾಯ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಅಗ್ರಣೀಯ ಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಿದ್ದ ಫಲಾನುಭವಿಗಳಿಗೆ ಸಾಲ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Add Asianetnews Kannada as a Preferred SourcegooglePreferred

60 ಕೋಟಿ ಜನಧನ್ ಖಾತೆ: ದುಡಿಯುವ ವರ್ಗಕ್ಕೆ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜಿ ಅವರು ಜನರ ಬಳಿ ಹಣ ಬರಬೇಕು ಎಂಬ ಉದ್ದೇಶದಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ದೇಶದಲ್ಲಿ 60 ಕೋಟಿ ಜನಧನ್ ಖಾತೆಗಳಿದ್ದು, ಈ ಪೈಕಿ ಮಹಿಳೆಯರ ಖಾತೆಗಳು ಹೆಚ್ಚಾಗಿವೆ. ಜನಧನ ಖಾತೆಯಿಂದ ಮಹಿಳೆಯರು 7ಉಳಿತಾಯ ಮಾಡುತ್ತಿದ್ದಾರೆ. ಡಿಜಿಟಲ್ ಹಣಕಾಸು ವ್ಯವಹಾರದಿಂದ ಬೆಳೆವಿಮೆ, ಪಿಂಚಣಿ, ಬೆಳೆ ಪರಿಹಾರದ ಹಣ ನೇರವಾಗಿ ಫಲಾನುಭವಿ ಖಾತೆಗೆ ಜಮೆಯಾಗುತ್ತದೆ. ಇದರಿಂದ ದುಡಿಯುವ ವರ್ಗಕ್ಕೆ ಅನುಕೂಲವಾಗಿದೆ ಎಂದರು.

ದೇಶಕ್ಕೆ ಸ್ವಾತಂತ್ರ್ಯ ದೊರೆತ ಸಮಯದಲ್ಲಿ ದೇಶದ ಜನಸಂಖ್ಯೆ 33 ಕೋಟಿ ಇತ್ತು, ಆದರೂ ಆಹಾರದ ಕೊರತೆ ಇದ್ದು, ಅಮೆರಿಕಾ ಸೇರಿದಂತೆ ವಿವಿಧ ದೇಶಗಳಿಂದ ಭಾರತ ಆಮದು ಮಾಡಿಕೊಳ್ಳಲಾಗುತ್ತಿತ್ತು. ಇಂದು ದೇಶದ ಜನಸಂಖ್ಯೆ 133 ಕೋಟಿಗೂ ಅಧಿಕ ಇದ್ದರೂ ಸಹ ಆಹಾರದ ಕೊರತೆ ಇಲ್ಲ. ಇದಕ್ಕೆ ಕಾರಣ ರೈತರು ಹಾಗೂ ದುಡಿಯುವ ವರ್ಗವಾಗಿದೆ ಎಂದರು. 1.50 ಲಕ್ಷ ಕೋಟಿ ತೆರಿಗೆ ವಿನಾಯಿತಿ: ಕೇಂದ್ರ ಸರ್ಕಾರ 1.50 ಲಕ್ಷ ಕೋಟಿ ರು. ಮೊತ್ತದ ತೆರಿಗೆ ವಿನಾಯಿತಿ ನೀಡಿದೆ. ಇದರಿಂದ ಜನರ ಆರ್ಥಿಕ ವ್ಯವಸ್ಥೆ ಸುಧಾರಿಸಿದೆ ಹಾಗೂ ದುಡಿಯುವ ವರ್ಗಕ್ಕೆ ಅನುಕೂಲವಾಗಿದೆ ಎಂದು ಹೇಳಿದರು.

ಜಿಲ್ಲೆಗೆ ಡಿಸಿಸಿ ಬ್ಯಾಂಕ್

ನಬಾರ್ಡ್ ಯೋಜನೆ ಮೊತ್ತ ಡಿಸಿಸಿ ಬ್ಯಾಂಕ್‌ಗೆ ಬರುತ್ತಿದ್ದು, ಧಾರವಾಡ ಡಿಸಿಸಿ ಬ್ಯಾಂಕ್‌ನಿಂದ ಜಿಲ್ಲೆಗೆ ಮೊತ್ತ ನೀಡಲಾಗುತ್ತಿತ್ತು. ಹಾವೇರಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಕನಸು ಈಗ ನನಸಾಗಿದೆ. ಕೇಂದ್ರ ಸಚಿವ ಅಮಿತ ಶಾ ಅವರ ದೂರದೃಷ್ಟಿಕೋನದಿಂದ ಜಿಲ್ಲೆಗೊಂದು ಡಿಸಿಸಿ ಬ್ಯಾಂಕ್ ಘೋಷಣೆ ಮಾಡಿದ್ದಾರೆ. ಈಗಾಗಲೇ ಆರ್‌ಬಿಐಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ದೇಶದ ಆರ್ಥಿಕ ಸದೃಢತೆಗೆ ಬ್ಯಾಂಕ್‌ಗಳ ಪಾತ್ರ ಪ್ರಮುಖವಾಗಿದೆ. ಜನರಿಗೆ ಸಾಲ ಸಿಕ್ಕರೆ ಅವರ ಆರ್ಥಿಕ ಚಟುವಟಿಕೆ ಸುಧಾರಣೆಗೆ ಸಹಾಯವಾಗುತ್ತದೆ. ಹಾಗಾಗಿ ಗ್ರಾಹಕರು ಬ್ಯಾಂಕಿಗೆ ಸಾಲ ಕೇಳಲು ಬಂದಾಗ ಅವರ ಸಮಸ್ಯೆ ಆಲಿಸಬೇಕು, ಹೆಚ್ಚಿನ ಕಾರ್ಯಕ್ಷಮತೆ ತೋರಿಸಬೇಕು ಹಾಗೂ ಧನಾತ್ಮಕವಾಗಿ ಆಲೋಚನೆ ಮಾಡಬೇಕು. ಕೈಗಾರಿಕೆಗೆ ಸಾಲ ನೀಡುವ ಪ್ರಮಾಣ ದ್ವಿಗುಣವಾಗಿದೆ, ಆದರೆ ಕೃಷಿ ಕ್ಷೇತ್ರಕ್ಕೆ ಕಡಿಮೆ ಪ್ರಮಾಣದಲ್ಲಿದೆ. ಕೃಷಿ ಸೇರಿದಂತೆ ಆದ್ಯತಾ ವಲಯಕ್ಕೆ ಸಾಲ ನೀಡುವ ಪ್ರಮಾಣ ಹೆಚ್ಚಾಗಬೇಕು ಎಂದು ಹೇಳಿದರು.

ಜಿಪಂ ಸಿಇಒ ರುಚಿ ಬಿಂದಲ್, ಬ್ಯಾಂಕ್ ಆಫ್ ಬರೋಡಾ ಶಿವಮೊಗ್ಗ ವಲಯದ ಪ್ರಾದೇಶಿಕ ಉಪ ವ್ಯವಸ್ಥಾಪಕ ದೀಪಕ ಶಹಕರ, ಮಂಗಳೂರು ವಲಯದ ಉಪ ವ್ಯವಸ್ಥಾಪಕ ರಾಜೇಶ ಶರ್ಮಾ, ಶಿವಮೊಗ್ಗ ವಲಯದ ಪ್ರಾದೇಶಿಕ ವ್ಯವಸ್ಥಾಪಕ ಪಂಕಜಕುಮಾರ ಸಮನ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾವೇರಿಯ ಪ್ರಾದೇಶಿಕ ವ್ಯವಸ್ಥಾಪಕ ನವೀನ ಬಿ, ನಬಾರ್ಡನ ಡಿ.ಡಿ.ಎಂ ರಂಗನಾಥ ಎಸ್., ಇತರರು ಇದ್ದರು. ಲೀಡ್ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಪ್ರಭುದೇವ ಸ್ವಾಗತಿಸಿದರು.