ನಿನ್ನೆ ವಿಜಯೇಂದ್ರಗೆ ಟಿಕೆಟ್ ಅಂತ ಹೇಳಿದ್ರು, ಈಗ ಹೈಕಮಾಂಡ್ ತೀರ್ಮಾನ ಅಂದ್ರು, ಏನಿದು BSY ಲೆಕ್ಕಾಚಾರ?
ನಿನ್ನೆ ವಿಜಯೇಂದ್ರಗೆ ಟಿಕೆಟ್ ಘೋಷಣೆ ಮಾಡಿದ್ರು, ಇಂದು ಯಡಿಯೂರಪ್ಪ ಹೈಕಮಾಂಡ್ ತೀರ್ಮಾನವೇ ಅಂದ್ರು. ಏನಿದು ಯಡಿಯೂರಪ್ಪನವರ ಮಾತಿನ ಲೆಕ್ಕಾಚಾರ?
ವರದಿ: ರವಿ ಶಿವರಾಮ್
ಬೆಂಗಳೂರು, (ಜುಲೈ.23): ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿನ್ನೆ(ಜುಲೈ 22) ಶಿಖಾರಿಪುರದಲ್ಲಿ ರಾಜಕೀಯ ಬಾಂಬ್ ಸಿಡಿಸಿದ್ರು. ನಾನು ಶಿಖಾರಿಪುರದಿಂದ ಮತ್ತೆ ಸ್ಪರ್ಧೆ ಮಾಡೋದಿಲ್ಲ. ನನ್ನ ಬದಲಿಗೆ ತನ್ನ ಪುತ್ರ ವಿಜಯೇಂದ್ರಗೆ ಟಿಕೆಟ್ ಬಿಟ್ಟು ಕೊಟ್ಟಿದ್ದೇನೆ ಎನ್ನುವ ಮೂಲಕ ಅಚ್ಚರಿಯ ಹೇಳಿಕೆ ನೀಡಿದ್ರು. ಆದ್ರೆ ಇಂದು (ಶನಿವಾರ) ಬೆಂಗಳೂರಿನಲ್ಲಿ ಮಾತನಾಡಿದ ಯಡಿಯೂರಪ್ಪ ನಿನ್ನೆ(ಶುಕ್ರವಾರ) ನಾನು ನೀಡಿದ್ದು ಸಲಹೆ ಅಷ್ಟೇ. ವಿಜಯೇಂದ್ರಗೆ ಎಲ್ಲಿಂದ ಟಿಕೆಟ್ ನೀಡಬೇಕು ಎನ್ನೋದನ್ನ ಪ್ರಧಾನಿ ಮೋದಿ ಅಮಿತ್ ಶಾ ತೀರ್ಮಾನ ಮಾಡ್ತಾರೆ ಎನ್ನುವ ಮೂಲಕ ಪಕ್ಷಕ್ಕೆ ಆಗಬಹುದಾದ ಮುಜುಗರವನ್ನು ತಪ್ಪಿಸುವ ಪ್ರಯತ್ನ ಮಾಡಿದಂತಿತ್ತು.
ನಿನ್ನೆ ನಾನು ನೀಡಿದ ಹೇಳಿಕೆಯಿಂದ ಗೊಂದಲ ಆಗಿದೆ
ನಿನ್ನೆ(ಶುಕ್ರವಾರ) ನಾನು ನೀಡಿದ ಹೇಳೀಕೆಯಿಂದ ಗೊಂದಲ ಆಗಿದೆ ಎಂದು ಮಾತು ಆರಂಭಿಸಿದ ಯಡಿಯೂರಪ್ಪ, ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಿಲ್ಲ. ಆದ್ರೆ ಸಕ್ರಿಯ ರಾಜಕೀಯದಿಂದ ನಿವೃತ್ತಿ ಪಡೆಯೋದಿಲ್ಲ ಎನ್ನುವ ಸ್ಪಷ್ಟೋಕ್ತಿ ನೀಡಿದ್ರು. ಪಕ್ಷಕ್ಕೆ 140 ಸ್ಥಾನ ಗೆಲ್ಲಿಸುವ ಗುರಿ ಹೊಂದಿದ್ದೇನೆ. ನಾಳೆ ನಾಡಿದ್ರಿಂದ ಪ್ರವಾಸ ಶುರು ಮಾಡ್ತೇನೆ ಎಂದ ಯಡಿಯೂರಪ್ಪ, ಶಿಖಾರಿಪುರ ಕ್ಷೇತ್ರದ ಜನರು ನನಗೆ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡ್ತಾ ಇದ್ರು. ಆದ್ರೆ ಅವರ ಒತ್ತಾಯಕ್ಕೆ ಮಣಿದು ನಾನು ಮತ್ತೆ ಸ್ಪರ್ಧೆ ಮಾಡೋದಿಲ್ಲ. ನನ್ನ ಬದಲಿಗೆ ವಿಜಯೇಂದ್ರ ಸ್ಪರ್ಧೆ ಮಾಡ್ತಾರೆ ಎಂದು ಸಲಹೆ ನೀಡಿದೆ ಅಷ್ಟೇ. ಅಂತಿಮವಾಗಿ ತೀರ್ಮಾನ ಹೈಕಮಾಂಡ್ ಮಾಡತ್ತೆ ಎಂದು ಸಮಜಾಯಿಷಿ ನೀಡಿದ್ರು.
ವಿಜಯೇಂದ್ರ ಸ್ಪರ್ಧೆ ಬಗ್ಗೆ ಮತ್ತೊಂದು ಸ್ಪಷ್ಟನೆ ಕೊಟ್ಟ ಯಡಿಯೂರಪ್ಪ
ವಿಜಯೇಂದ್ರ ಎಲ್ಲೇ ಸ್ಪರ್ಧೆ ಮಾಡಿದ್ರು ಗೆಲ್ತಾರೆ
ಹಳೆ ಮೈಸೂರು ಭಾಗದ ಚಾಮರಾಜನಗರ, ಶಿಖಾರಿಪುರ ಸೇರಿದಂತೆ ವಿಜಯೇಂದ್ರ ಎಲ್ಲೇ ಸ್ಪರ್ಧೆ ಮಾಡಿದ್ರು ಗೆಲ್ಲುತ್ತಾರೆ. ಅವರು ಆ ಶಕ್ತಿ ಹೊಂದಿದ್ದಾರೆಂದು ಪುತ್ರನ ಸಾಮರ್ಥ್ಯ ಗುಣಗಾನ ಮಾಡಿದ ಯಡಿಯೂರಪ್ಪ, ವಿಜಯೇಂದ್ರಗೆ ಟಿಕೆಟ್ ನೀಡುವ ವಿಚಾರದಲ್ಲಿ ಪ್ರಧಾನಿ ಮೋದಿ ಅಮಿತ್ ಶಾ ಅಂತಿಮ ತೀರ್ಮಾನ ಮಾಡ್ತಾರೆ ಎಂದರು. ಜೊತೆಗೆ ಪಕ್ಷದ ತೀರ್ಮಾನಕ್ಕೆ ನಾನು ಬದ್ದ ಎನ್ನುವ ಉತ್ತರ ನೀಡಿದ್ರು...
ಕುಟುಂಬ ರಾಜಕೀಯ ಕಾರಣಕ್ಕೆ ನಾನು ಸ್ಪರ್ಧೆ ಮಾಡಲ್ಲ
ಪ್ರಧಾನಿ ನರೇಂದ್ರ ಕುಟುಂಬ ರಾಜಕೀಯದ ವಿರುದ್ಧ ಪ್ರತಿಪಕ್ಷಗಳ ಮೇಲೆ ದಾಳಿ ಮಾಡ್ತಾರೆ. ಆ ಕಾರಣಕ್ಕೆ ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ವಿಜಯೇಂದ್ರಗೆ ಟಿಕೆಟ್ ನೀಡದಿರುವ ತೀರ್ಮಾನ ಮಾಡಿದ್ರು ಮೋದಿ. ಈ ಬಗ್ಗೆ ಯಡಿಯೂರಪ್ಪರನ್ನು ಕೇಳಿದ್ರೆ ಅದೇ ಕಾರಣಕ್ಕೆ ನಾನು ಚುನಾವಣೆ ಸ್ಪರ್ಧೆ ಮಾಡುತ್ತಿಲ್ಲ. ನನ್ನ ಬದಲಿಗೆ ವಿಜಯೇಂದ್ರ ಸ್ಪರ್ಧೆ ಮಾಡ್ತಾರೆ ಎನ್ನುವ ಮೂಲಕ ಪುತ್ರನ ರಾಜಕೀಯ ಭವಿಷ್ಯ ರೂಪಿಸಲು ನಿರ್ಧಾರ ಮಾಡಿದ್ದಾರೆ.
ಬಿಎಸ್‌ವೈ ಭೇಟಿಗೆ ದೌಡಾಯಿಸಿದ ಬೊಮ್ಮಾಯಿ, ಅಶೋಕ್
ಯಡಿಯೂರಪ್ಪರ ನೆನ್ನೆಯ ಸ್ಟೇಟ್ಮೆಂಟ್ ಮತ್ತು ಇಂದು ನೀಡಿದ ಹೇಳಿಕೆ ಬೆನ್ನಲ್ಲೇ ಯಡಿಯೂರಪ್ಪ ನಿವಾಸ ಕಾವೇರಿಗೆ ಸಿಎಂ ಬೊಮ್ಮಾಯಿ ಮತ್ತು ಸಚಿವ ಆರ್ ಅಶೋಕ್ ದೌಡಾಯಿಸಿದ್ರು. ಯಡಿಯೂರಪ್ಪ ಭೇಟಿ ಬಳಿಕ ಹೇಳಿಕೆ ನೀಡಿದ ಸಿಎಂ, ಯಡಿಯೂರಪ್ಪ ಹೇಳಿದ ಮಾತನ್ನೇ ಪುನರುಚ್ಛಾರ ಮಾಡಿದ್ರು. ಯಡಿಯೂರಪ್ಪರು ವಿಜಯೇಂದ್ರಗೆ ಟಿಕೆಟ್ ನೀಡುವ ಹೇಳಿಕೆ, ಮತ್ತು ನಾನು ಚುನಾವಣೆ ಸ್ಪರ್ಧೆ ಮಾಡಲ್ಲ ಎನ್ನುವ ಹೇಳಿಕೆ ಅದು ಸಲಹೆ ಮಾತ್ರ.
ಪುತ್ರಿನಿಗೆ ಬಿಎಸ್‌ವೈ ಕ್ಷೇತ್ರ ತ್ಯಾಗ: ಯತೀಂದ್ರ ಸಿದ್ದರಾಮಯ್ಯ ಹಾದಿ ಸುಗಮ, ಕಾಂಗ್ರೆಸ್‌ಗೆ ಪ್ಲಸ್
ಅದೇ ಅಂತಿಮ ತೀರ್ಮಾನ ಅಲ್ಲ. ತೀರ್ಮಾನವನ್ನು ಹೈಕಮಾಂಡ್ ಮಾಡಲಿದೆ ಎಂದು ಸ್ಪಷ್ಟಪಡಿಸಿದ್ರು. ವಿಜಯೇಂದ್ರಗೆ ಟಿಕೆಟ್ ನೀಡುವಿ ವಿಚಾರ ಸೇರಿದಂತೆ ರಾಜ್ಯದ ತೀರ್ಮಾನವನ್ನು ಹೈಕಮಾಂಡ್ ಮಾಡಲಿದೆ. ಯಡಿಯೂರಪ್ಪನವರು ಕೆಲವೊಮ್ಮೆ ತಮಗೆ ಸರಿ ಅನಿಸಿದ್ದನ್ನು ನೇರವಾಗಿ ಹೇಳಿ ಬಿಡ್ತಾರೆ. ಅದು ಸಲಹೆ ಮಾತ್ರ. ಅದೇ ಅಂತಿಮ ತೀರ್ಮಾನ ಅಲ್ಲ ಎಂದು ಯಡಿಯೂರಪ್ಪ ನೀಡಿದ್ದ ಹೇಳಿಕೆಗೆ ತೇಪೆ ಹಚ್ಚುವ ಪ್ರಯತ್ನ ಮಾಡಿದ್ರು. ಸಚಿವ ಆರ್ ಅಶೋಕ್ ಕೂಡ ಅದೇ ಮಾತನ್ನು ಹೇಳಿದ್ದು ಯಾರಿಗೆ ಟಿಕೆಟ್ ಕೊಡಬೇಕು ಕೊಡಬಾರದು ಎನ್ನುವ ತೀರ್ಮಾನವನ್ನು ಪಕ್ಷದ ಹೈಕಮಾಂಡ್ ಮಾಡಲಿದೆ ಎಂದರು..
ಯಡಿಯೂರಪ್ಪ ಪ್ಲಾನ್ ಏನು?
ಯಡಿಯೂರಪ್ಪರು ನಿನ್ನೆ ಏಕಾಏಕಿ ತನ್ನ ಪುತ್ರನಿಗೆ ಟಿಕೆಟ್ ಘೋಷಣೆ ಮಾಡಿ, ಇಂದು ಹೈಕಮಾಂಡ್ ತೀರ್ಮಾನ ಎನ್ನುವ ಮೂಲಕ ಎರಡು ಸಂದೇಶ ನೀಡಿದಂತಿತ್ತು. ಶಿಖಾರಿಪುರದಿಂದ ವಿಜಯೇಂದ್ರಗೆ ಟಿಕೆಟ್ ನೀಡಬೇಕು ಎನ್ನುವ ಒತ್ತಾಯ ಒಂದು ಕಡೆ ಆದ್ರೆ, ಅಂತಿಮ ತೀರ್ಮಾನ ಹೈಕಮಾಂಡ್'ದು ಎನ್ನುವ ಮೂಲಕ ನಾನು ಪಕ್ಷದ ತೀರ್ಮಾನದ ವಿರುದ್ಧ ಇಲ್ಲ ಎನ್ನುವ ಸಂದೇಶವನ್ನು ಏಕಕಾಲಕ್ಕೆ ನೀಡುವ ಪ್ರಯತ್ನ ಮಾಡಿದ್ರು.
ಅದೇ ರೀತಿ ಕುಟುಂಬ ರಾಜಕೀಯದ ವಿರುದ್ಧ ಇರುವ ಪ್ರಧಾನಿ ಮೋದಿ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಅದೇ ಕಾರಣಕ್ಕೆ ನಾನು ಚುನಾವಣೆ ರಾಜಕೀಯದಿಂದ ಹಿಂದೆ ಸರಿಯುತ್ತಿರುವೆ ಎನ್ನುವ ಮೂಲಕ ತನ್ನ ಪುತ್ರನಿಗೆ ಟಿಕೆಟ್ ನೀಡಬೇಕು ಎನ್ನೋ ಸಂದೇಶವನ್ನು ಕಳುಹಿದ್ರು...
ಚುನಾವಣೆ ಸನಿಹದಲ್ಲಿ ಯಡಿಯೂರಪ್ಪ ಸಿಡಿಸಿರುವ ಬಾಂಬ್ ಪಕ್ಷಕ್ಕೆ ಒಂದು ರೀತಿ ಇಕ್ಕಟ್ಟು ಕೂಡ ಹೌದು. ಯಡಿಯೂರಪ್ಪ ನೇತೃತ್ವ ಇಲ್ಲದೇ ಚುನಾವಣೆ ಎದುರಿಸುತ್ತಿರುವ ಪಕ್ಷದಲ್ಲಿ ಈಗ ಯಡಿಯೂರಪ್ಪ ನಾನು ಸ್ಪರ್ಧೆ ಮಾಡೋದಿಲ್ಲ ಎನ್ನುವ ಬಹಿರಂಗ ಹೇಳಿಕೆಯಿಂದ ಸಮುದಾಯದ ಮತಗಳ ಮೇಲೆ ಪ್ರಭಾವ ಬೀರಬಹುದು ಎನ್ನುವ ಸಹಜ ಆತಂಕ ಪಕ್ಷಕ್ಕೆ ಇದೆ. ಆದರೆ ಯಡಿಯೂರಪ್ಪರು ಮಾತ್ರ ತಮ್ಮ ಸುದೀರ್ಘ ರಾಜಕೀಯ ಅನುಭವದ ಆಧಾರದ ಮೇಲೆ ಪ್ಲಾನ್ ಮಾಡಿ ತಂತ್ರ ಹೆಣೆದಂತೆ ಕಾಣುತ್ತಿದೆ.
ಅತ್ತ ಪಕ್ಷದ ವಿರುದ್ಧ ದನಿ ತೋರದೆ, ಪಕ್ಷ ತನಗೆ ಎಲ್ಲವನ್ನೂ ನೀಡಿದೆ ಎನ್ನುವ ಸಾಪ್ಟ್ ಹೇಳಿಕೆ ಮೂಲಕವೇ ತನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ ರಾಜಕೀಯ ದಾಳ ಉರುಳಿಸಿದ್ದಾರೆ. ಇದಕ್ಕೆ ಹೈಕಮಾಂಡ್ ಉತ್ತರ ಏನಾಗಿರಲಿದೆ ಎನ್ನುವ ಕುತೂಹಲ ಹಾಗೆ ಇದೆ.