ಪುತ್ರಿನಿಗೆ ಬಿಎಸ್‌ವೈ ಕ್ಷೇತ್ರ ತ್ಯಾಗ: ಯತೀಂದ್ರ ಸಿದ್ದರಾಮಯ್ಯ ಹಾದಿ ಸುಗಮ, ಕಾಂಗ್ರೆಸ್‌ಗೆ ಪ್ಲಸ್
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಪುತ್ರ ವಿಜಯೇಂದ್ರಗೆ (BY Vijayendra) ತಾವು ಪ್ರತಿನಿಧಿಸುತ್ತಿದ್ದ ಕ್ಷೇತ್ರವನ್ನು ಧಾರೆಯೆರೆದಿದ್ದಾರೆ. ಇದರಿಂದ ಬಿಎಸ್ ಯಡಿಯೂರಪ್ಪ ಅವರ ಈ ಧಿಡೀರ್ ನಿರ್ಧಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ. ಅಲ್ಲದೇ ಬಿಎಸ್‌ವೈ ಅವರ ಈ ನಿರ್ಧಾರದಿಂದ ಯತೀಂದ್ರ ಸಿದ್ದರಾಮಯ್ಯನವರ ಹಾದಿ ಸುಗಮದ ಜೊತೆಗೆ ಕಾಂಗ್ರೆಸ್‌ಗೆ ಪ್ಲಸ್ ಆಗಿದೆ.
ಬೆಂಗಳೂರು, (ಜುಲೈ.22): ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಕ್ಷೇತ್ರವಾದ ಶಿಕಾರಿಪುರವನ್ನು ಪುತ್ರ ವಿಜಯೇಂದ್ರಗೆ ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಚುನಾವಣೆಯಿಂದ ರಾಜಾಹುಲಿ ಹಿಂದೆ ಸರಿದಿದ್ದಾರೆ. ಅಲ್ಲದೇ ರಾಜಕೀಯದಿಂದ ನಿವೃತ್ತಿಯಾಗಲಿದ್ದಾರಾ ಎನ್ನುವ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿವೆ.
ಬಿಎಸ್‌ವೈ ಅವರ ಕ್ಷೇತ್ರ ತ್ಯಾಗ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಗೆ ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಥಿಸುವ ಬಗ್ಗೆ ಬಹುತೇಕ ಖಚಿತವಾಗಿದೆ. ಇದರಿಂದಾಗಿ ಹಳೇ ಮೈಸೂರು ಭಾಗದಲ್ಲಿ ಸ್ಪರ್ಧೆ ಮಾಡಬೇಕೆಂದಿದ್ದ ವಿಜಯೇಂದ್ರ ನಡೆಗೆ ಫುಲ್ ಸ್ಟಾಪ್ ಬಿದ್ದಂತಾಗಿದೆ.
ಸಕ್ರಿಯ ರಾಜಕಾರಣಕ್ಕೆ ಪರೋಕ್ಷ ನಿವೃತ್ತಿ ಘೋಷಿಸಿದ ಯಡಿಯೂರಪ್ಪ? ಮಗನಿಗೆ ಕ್ಷೇತ್ರ ಬಿಟ್ಟುಕೊಟ್ಟ ಮಾಜಿ ಸಿಎಂ
ಯತಿಂದ್ರ ಸಿದ್ದರಾಮಯ್ಯ ಹಾದಿ ಸುಗಮ
ಮುಂದಿನ ಚುನಾವಣೆಗೆ ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಯಡಿಯೂರಪ್ಪ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಹೀಗಾಗಿ ಮೈಸೂರಿನ ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರಕ್ಕೆ ಫುಲ್ ಸ್ಟಾಪ್ ಬಿದ್ದಿದೆ. ಇದರಿಂದ ಈ ಬಾರಿ ವಿಜಯೇಂದ್ರ ಆಗಮಿಸುತ್ತಾರೆಂದು ಉತ್ಸುಕರಾಗಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಬಿ.ವೈ.ವಿಜಯೇಂದ್ರ ಅವರಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೊನೆಯ ಕ್ಷಣದಲ್ಲಿ ಟಿಕೆಟ್ ತಪ್ಪಿತ್ತು. ಒಂದು ವೇಳೆ, ವಿಜಯೇಂದ್ರ ಅವರು ಬಿಜೆಪಿಯಿಂದ ಕಣಕ್ಕಿಳಿದಿದ್ದರೆ ಚಾಮುಂಡೇಶ್ವರಿ, ಬಾದಾಮಿ ಜತೆಗೆ ವರುಣಾ ಕೂಡ ಈ ಚುನಾವಣೆಯ ಕುತೂಹಲದ ಕದನ ನಿರೀಕ್ಷಿಸುವ ಕ್ಷೇತ್ರಗಳಲ್ಲಿ ಒಂದಾಗುತ್ತಿತ್ತು. ಆದರೆ, ಕ್ಲೈಮ್ಯಾಕ್ಸ್‌ನಲ್ಲಿ ವರುಣಾ ಕ್ಷೇತ್ರದ ಚಿತ್ರಣವೇ ಬದಲಾಗಿ ಹೋಯಿತು.ಈಗ ವಿಜಯೇಂದ್ರರವರೇ ಮುದಿನ ಅಂದ್ರೆ 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಮೈಸೂರು ಭಾಗದಲ್ಲಿ ಸ್ಪರ್ಧೆಗೆ ಇಳಿಯುತ್ತಿಲ್ಲ ಎಂಬುವುದು ಸ್ಪಷ್ಟವಾಗಿದೆ. ಇದರಿಂದ ಮುಂಬರುವ ಚುನಾವಣೆಗೆ ಹಾಲಿ ಶಾಸಕ ಯತೀಂದ್ರಗೆ ಯಾವುದೇ ಅಡ್ಡಿ ಆತಂಕವಿಲ್ಲದೇ ಅವರ ಹಾದಿ ಸುಗಮವಾದಂತಾಗಿದೆ. ಅಲ್ಲದೇ ಕಾಂಗ್ರೆಸ್‌ಗೂ ಸಹ ಇದು ಪ್ಲಸ್ ಆಗಲಿದೆ.
‘ವರುಣ ರಹಸ್ಯ’ ಬಿಚ್ಚಿಟ್ಟಬಿಎಸ್‌ವೈ ಪುತ್ರ ಬಿ.ವೈ.ವಿಜಯೇಂದ್ರ
ಮೈಸೂರು ಭಾಗದಲ್ಲಿ ಪಕ್ಷ ಬಲಪಡಿಸುವ ಪ್ಲಾನ್
ಯೆಸ್..ಓರ್ವ ಮಾಜಿ ಮುಖ್ಯಮಂತ್ರಿ ಪುತ್ರ ಸ್ಪರ್ಧೆ ಮಾಡುವುದರಿಂದ ಅಕ್ಕ-ಪಕ್ಕದ ಕ್ಷೇತ್ರಗಳಿಗೂ ಬಲ ಬರುತ್ತೆ. ಇದೇ ಲೆಕ್ಕಾಚಾರ ಇಟ್ಟುಕೊಂಡು ಬಿಜೆಪಿ ಮುಂದಿನ ಬಾರಿ ವಿಜಯೇಂದ್ರ ಅವರನ್ನ ಮೈಸೂರು ಭಾಗದಲ್ಲಿ ಕಣಕ್ಕಿಳಿಸಿ ಪಕ್ಷವನ್ನು ಬಲಪಡಿಸುವ ಚಿಂತನೆಯಲ್ಲಿತ್ತು. ಅದರಲ್ಲೂ ಮುಖ್ಯವಾಗಿ ಮಂಡ್ಯದ ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಉಸ್ತುವಾರಿ ತೆಗೆದುಕೊಂಡು ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ವಿಜಯೇಂದ್ರ ಯಶಸ್ವಿಯಾಗಿದ್ದರು. ಇದೇ ಮಾರ್ಗದಲ್ಲಿ ವಿಜಯೇಂದ್ರ ಮೂಲಕ ಸಕ್ಕರೆ ನಾಡು ಮಂಡ್ಯದಲ್ಲಿ ಪಕ್ಷ ಬಲಪಡಿಸಲು ರಾಜ್ಯ ಬಿಜೆಪಿಯ ಚಿಂತನೆಯಾಗಿತ್ತು ಎನ್ನಲಾಗಿತ್ತು. ಆದರೆ, ಇದೀಗ ಎಲ್ಲವೂ ಉಲ್ಟಾ ಆಗಿದ್ದು, ವಿಜಯೇಂದ್ರ ಮೈಸೂರು ಭಾಗಕ್ಕೆ ಗುಡ್ ಬೈ ಹೇಳಿದಂತಿದೆ.
ಮೈಸೂರಿನಲ್ಲಿ ಬಾಡಿಗೆ ಮನೆ ಮಾಡಿದ್ದ ವಿಜಯೇಂದ್ರ
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ, ಮತ್ತೆ ಕ್ಷೇತ್ರಕ್ಕೆ ಕಾಲಿರಿಸಿದ್ದರು. ಈ ಮೂಲಕ ಹೊಸ ರಾಜಕೀಯ ಚರ್ಚೆಗೆ ಕಾರಣರಾಗಿದ್ದರು. ವಿಜಯೇಂದ್ರ ನಡೆ ಒಂದೆಡೆ ಕಾಂಗ್ರೆಸ್‌ನಲ್ಲಿ ಆತಂಕ ಮೂಡಿಸಿದರೆ, ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರಲ್ಲಿ ಹುರುಪು ತಂದಿತ್ತು. ದಿಢೀರಾಗಿ ವರುಣಾ ಕ್ಷೇತ್ರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಪ್ರತ್ಯಕ್ಷರಾದಾಗ ಪರಿಸ್ಥಿತಿ ಬದಲಾಯಿತು. ಕಾಂಗ್ರೆಸ್‌ನಿಂದ ಡಾ.ಯತೀಂದ್ರ ಹಾಗೂ ಬಿಜೆಪಿಯಿಂದ ವಿಜಯೇಂದ್ರ ಸ್ಪರ್ಧಿಸುವುದು ಬಹುತೇಕ ಖಚಿತವಾಗಿತ್ತು. ಇಬ್ಬರು ಯುವಕರ ಸ್ಪರ್ಧೆ ಹಾಗೂ ರಾಜ್ಯದ ಇಬ್ಬರು ರಾಜಕೀಯ ಬಲಾಢ್ಯರ ಪುತ್ರರ ಹೋರಾಟ ಎಲ್ಲೆಡೆ ಗಮನ ಸೆಳೆದಿತ್ತು.
ವಿಜಯೇಂದ್ರ ಮೈಸೂರಿನಲ್ಲಿ ಬಾಡಿಗೆ ಮನೆ ಮಾಡಿ ಪತ್ನಿ ಜೊತೆ ಪೂಜೆ-ಹೋಮ ನಡೆಸಿ ಗೃಹ ಪ್ರವೇಶ ಮಾಡಿದ್ದರು. ಎಲ್ಲೆಡೆ ಪ್ರಚಾರ ಕಾರ್ಯವೂ ನಡೆಯಿತು. ಅಂದು ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ವಿಜಯೇಂದ್ರ ಅವರ ಕಡೆ ಹರಿದು ಬಂದಾಗ ರಾಜಕೀಯ ವಲಯದಲ್ಲಿ ಅಚ್ಚರಿ ಕಂಡು ಬಂತು. ವರುಣಾ ಕ್ಷೇತ್ರ ಅತೀ ಹೆಚ್ಚಿನ ಪ್ರಚಾರ ಪಡೆಯಿತು. ಇದರಿಂದ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಪುತ್ರರ ನಡುವಿನ ಸೋಲು-ಗೆಲುವಿನ ಲೆಕ್ಕಾಚಾರಗಳು ಆರಂಭವಾಗಿದ್ದವು.