Asianet Suvarna News Asianet Suvarna News

ಪುತ್ರ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ: ಬಿಜೆಪಿಯಲ್ಲಿ ಕೊನೆಗೂ ಮೇಲುಗೈ ಸಾಧಿಸಿದ ಯಡಿಯೂರಪ್ಪ..!

ಯಡಿಯೂರಪ್ಪ ಅವರಿಗೆ ಇಷ್ಟವಾಗುವಂತೆ ಪುತ್ರ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವುದೇ ಸೂಕ್ತ ಎಂಬ ನಿಲವಿಗೆ ವರಿಷ್ಠರು ಬಂದರು ಎನ್ನಲಾಗಿದೆ.
 

BS Yediyurappa Finally Prevailed in BJP grg
Author
First Published Nov 11, 2023, 11:12 AM IST

ಬೆಂಗಳೂರು(ನ.11):  ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ಅವರ ನೇಮಕವಾಗುವುದರೊಂದಿಗೆ ಪಕ್ಷದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮೇಲುಗೈ ಸಾಧಿಸಿದಂತಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದರಿಂದಲೇ ಪಕ್ಷ ಹೀನಾಯ ಸೋಲು ಕಂಡಿತು ಎಂಬ ಅಭಿಪ್ರಾಯ ಸಾರ್ವತ್ರೀಕರಣಗೊಂಡು ಅದು ವರಿಷ್ಠರ ಕಿವಿಯನ್ನೂ ತಲುಪಿತ್ತು. ಅಲ್ಲದೆ, ಕಳೆದ ಹಲವು ದಶಕಗಳಿಂದ ಪಕ್ಷದ ಬೆನ್ನಿಗೆ ನಿಂತಿದ್ದ ಪ್ರಬಲ ಲಿಂಗಾಯತ ಸಮುದಾಯ ಯಡಿಯೂರಪ್ಪ ಅವರನ್ನು ಕಡೆಗಣಿಸಿರುವುದಕ್ಕೆ ಚುನಾವಣೆಯಲ್ಲಿ ಸೋಲಿನ ಬಿಸಿ ಮುಟ್ಚಿಸಿತು ಎಂಬ ಸಂದೇಶವೂ ರವಾನೆಯಾಗಿತ್ತು.

ಮೇಲಾಗಿ ಇತ್ತೀಚೆಗೆ ಪಕ್ಷದ ಹಲವು ಮುಖಂಡರು ಬಹಿರಂಗವಾಗಿಯೇ ಯಡಿಯೂರಪ್ಪ ಅವರನ್ನು ಅಕಾಲಿಕವಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು, ಚುನಾವಣೆಯಲ್ಲಿ ಅವರ ಪ್ರಭಾವವನ್ನು ಬಳಸಿಕೊಳ್ಳದೇ ದೂರ ಇಟ್ಟಿದ್ದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಹೇಳಿಕೆಗಳನ್ನು ನೀಡತೊಡಗಿದ್ದರು. ಅಲ್ಲದೆ, ಯಡಿಯೂರಪ್ಪ ಅವರು ಮನಸ್ಸು ಮಾಡಿದರೆ ಪಕ್ಷದಿಂದ ಹೊರಗೆ ಹೋಗಲು ಸಜ್ಜಾಗಿರುವ ಮುಖಂಡರನ್ನು ಉಳಿಸಿಕೊಳ್ಳಬಹುದು ಎಂಬ ಅಭಿಪ್ರಾಯವನ್ನೂ ಹೊರಹಾಕಲಾರಂಭಿಸಿದ್ದರು.

Breaking: ಬಿಎಸ್‌ವೈ ಪುತ್ರನಿಗೆ ದೀಪಾವಳಿ ಗಿಫ್ಟ್‌, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕ!

ಅಂದು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಾಗ ಯಡಿಯೂರಪ್ಪ ಕಣ್ಣೀರು ಹಾಕಿದ್ದು ಪಕ್ಷಕ್ಕೆ ದೊಡ್ಡ ಶಾಪವಾಗಿ ಪರಿಣಮಿಸಿತು ಎಂಬ ಅಭಿಪ್ರಾಯ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಂದ ಹೊರಹೊಮ್ಮಿತ್ತು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ರಾಜ್ಯದಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸಿತ್ತು. ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ 25ರಲ್ಲಿ ಗೆಲುವು ಪಡೆದಿತ್ತು. ಆಗ ಯಡಿಯೂರಪ್ಪ ಅವರು ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿದ್ದರು. ಆ ಚುನಾವಣೆ ಬಳಿಕ ಕೆಲವು ದಿನಗಳಲ್ಲೇ ಅವರು ಮುಖ್ಯಮಂತ್ರಿಯಾದರು. ಆದರೆ, ಅವಧಿ ಪೂರ್ಣಗೊಳಿಸಲು ಅವಕಾಶ ಸಿಗಲಿಲ್ಲ.

ಹೀಗಾಗಿ, ಈಗ ಯಡಿಯೂರಪ್ಪ ಅವರಿಗೆ ಪ್ರಾತಿನಿಧ್ಯ ನೀಡಿದರೆ ಮಾತ್ರ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೆಚ್ಚು ಸ್ಥಾನಗಳನ್ನು ಗಳಿಸಲು ಸಾಧ್ಯ. ಇಲ್ಲದಿದ್ದರೆ ವಿಧಾನಸಭೆಯ ಚುನಾವಣೆಯ ಸೋಲಿನ ಇತಿಹಾಸ ಲೋಕಸಭೆಯಲ್ಲೂ ಮರುಕಳಿಸಬಹುದು ಎಂಬ ಆತಂಕ ವರಿಷ್ಠರನ್ನೂ ಕಾಡುತ್ತಿತ್ತು. ಹಾಗಂತ ಯಡಿಯೂರಪ್ಪ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಆಗುತ್ತಿರಲಿಲ್ಲ. ಅವರ ಬದಲಿಗೆ, ಅವರಿಗೆ ಇಷ್ಟವಾಗುವಂತೆ ಪುತ್ರ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವುದೇ ಸೂಕ್ತ ಎಂಬ ನಿಲವಿಗೆ ವರಿಷ್ಠರು ಬಂದರು ಎನ್ನಲಾಗಿದೆ.

Follow Us:
Download App:
  • android
  • ios