Breaking: ಬಿಎಸ್‌ವೈ ಪುತ್ರನಿಗೆ ದೀಪಾವಳಿ ಗಿಫ್ಟ್, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕ!
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರನಿಗೆ ದೀಪಾವಳಿ ಗಿಫ್ಟ್ ಸಿಕ್ಕಿದೆ. ಬಿವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿ ಜೆಪಿ ನಡ್ಡಾ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು (ನ.10): ರಾಜ್ಯ ರಾಜಕೀಯದ ನಿರೀಕ್ಷಿತ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಹಾಗೂ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕ ಬಿವೈ ವಿಜಯೇಂದ್ರ ಅವರಿಗೆ ದೀಪಾವಳಿ ಗಿಫ್ಟ್ ಸಿಕ್ಕಿದೆ. ಶುಕ್ರವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, 47 ವರ್ಷದ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ. ಇದಕ್ಕೂ ಮುನ್ನ ಅವರು ಬಿಜೆಪಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಬಳಿಕ,ನಳೀನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಯಾರಾಗಲಿದ್ದಾರೆ ಎನ್ನುವ ಬಗ್ಗೆ ಭಾರೀ ಕುತೂಹಲಗಳಿದ್ದವು. ಲಿಂಗಾಯತ ಸಮುದಾಯ ಪಕ್ಷಕ್ಕೆ ನೀಡಿದ ಬೆಂಬಲವನ್ನು ಮುಂದುವರಿಸಿಕೊಂಡು ಹೋಗುವ ಸಲುವಾಗಿ, ಯುವ ಮೋರ್ಚಾದಲ್ಲಿಯೂ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿದ್ದ ವಿಜಯೇಂದ್ರ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ. ಈ ನಿರ್ಧಾರದೊಂದಿಗೆ ಚುನಾವಣೆ ಬಳಿಕ ಬಿಜೆಪಿಯ ಎದುರಿಗಿದ್ದ ಎರಡು ಪ್ರಶ್ನೆಗಳ ಪೈಕಿ ಒಂದು ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ. ಇನ್ನು ವಿಪಕ್ಷ ನಾಯಕ ಯಾರಾಗಲಿದ್ದಾರೆ ಎನ್ನುವ ಕುತೂಹಲ ಉಳಿದುಕೊಂಡಿದೆ.
ಕರ್ನಾಟಕದಲ್ಲಿ ಮುಂದಿನ ಲೋಕಸಭಾ ಚುನಾವಣೆಯ ವೇಳೆ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಬೇಕಾದಲ್ಲಿ ದೊಡ್ಡ ಸಮುದಾಯದ ನಾಯಕರೊಬ್ಬರ ನೇತೃತ್ವದ ಬಿಜೆಪಿಗೆ ಅನಿವಾರ್ಯವಾಗಿತ್ತು. ಚುನಾವಣೆ ಬಳಿಕ ಬಿಜೆಪಿ ಬಹುತೇಕ ಶೂನ್ಯ ನಾಯಕತ್ವದಲ್ಲಿತ್ತು. ಸಾಕಷ್ಟು ಚರ್ಚೆಗಳ ಬಳಿಕ ಅಳೆದು ತೂಗಿ ರಾಷ್ಟ್ರೀಯ ಬಿಜೆಪಿ ಯುವ ನಾಯಕ ಬಿವೈ ವಿಜಯೇಂದ್ರ ಅವರಿಗೆ ರಾಜ್ಯದ ಬಿಜೆಪಿಯ ನಾಯಕತ್ವದ ಹೊರೆ ನೀಡಿದೆ. 2020 ರಿಂದ ಕರ್ನಾಟಕದ ಭಾರತೀಯ ಜನತಾ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ಇದಕ್ಕೂ ಮುನ್ನ ಭಾರತೀಯ ಜನತಾ ಯುವ ಮೋರ್ಚಾದ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ವೃತ್ತಿಯಿಂದ ವಕೀಲರಾಗಿರುವ ಬಿವೈ ವಿಜಯೇಂದ್ರ, ಅವರ ಸಹೋದರ ಬಿ.ವೈ.ರಾಘವೇಂದ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ.
ಬಿಎಸ್‌ವೈ ರಾಜ್ಯ ಪ್ರವಾಸಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದೆಯಾ? ಬಿವೈ ವಿಜಯೇಂದ್ರ ಏನು ಹೇಳಿದ್ರು?
ರಾಜ್ಯಾಧ್ಯಕ್ಷ ಪಟ್ಟ ಸಿಕ್ಕಿದ ಬೆನ್ನಲ್ಲಿಯೇ ಸುವರ್ಣನ್ಯೂಸ್‌ಗೆ ಮೊದಲ ಪ್ರತಿಕ್ರಿಯೆ ನೀಡಿರುವ ಬಿವೈ ವಿಜಯೇಂದ್ರ, 'ರಾಜ್ಯಾಧ್ಯಕ್ಷ ಸ್ಥಾನದಂಥ ದೊಡ್ಡ ಹುದ್ದೆ ಸಿಕ್ಕಿದೆ. ನನಗೆ ಬಿಜೆಪಿ ದೊಡ್ಡ ಜವಾಬ್ದಾರಿ ಕೊಟ್ಟಿದೆ. ಈ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಲಿದ್ದೇನೆ' ಎಂದು ಹೇಳಿದ್ದಾರೆ. 'ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಯುವ ನಾಯಕ ಬಿ. ವೈ. ವಿಜಯೇಂದ್ರ ರವರಿಗೆ ಹಾರ್ದಿಕ ಅಭಿನಂದನೆಗಳು. ನಿಮ್ಮ ಅಧ್ಯಕ್ಷ ಅವಧಿಯಲ್ಲಿ ಪಕ್ಷ ಮತ್ತಷ್ಟು ಸಂಘಟನಾತ್ಮಕವಾಗಿ ಬಲಗೊಂಡು ಇನ್ನಷ್ಟು ಶಕ್ತಿಯುತವಾಗಿ ಹೊರಹೊಮ್ಮಲಿ ಎಂದು ಆಶಿಸುತ್ತೇನೆ' ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ರಾಜ್ಯಕ್ಕೆ ಬರ ಪರಿಹಾರ ನೀಡಲು ಕೇಂದ್ರ ಸರ್ಕಾರ ಸ್ಪಂದಿಸಲಿದೆ: ಶಾಸಕ ವಿಜಯೇಂದ್ರ
ಈವರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನಿರ್ವಹಿಸಿದವರು(ಕ್ರಮವಾಗಿ):
ಎ.ಕೆ.ಸುಬ್ಬಯ್ಯ (1980, 3 ವರ್ಷ)
ಬಿ.ಬಿ.ಶಿವಪ್ಪ (1983, 5 ವರ್ಷ)
ಬಿ.ಎಸ್.ಯಡಿಯೂರಪ್ಪ (1988, 3 ವರ್ಷ)
ಕೆ.ಎಸ್. ಈಶ್ವರಪ್ಪ (1993, 5 ವರ್ಷ)
ಬಿ. ಎಸ್. ಯಡಿಯೂರಪ್ಪ (1998, 1 ವರ್ಷ)
ಬಸವರಾಜ ಪಾಟೀಲ್ ಸೇಡಂ (2000, 3 ವರ್ಷ)
ಅನಂತ್ ಕುಮಾರ್ (2003, 1 ವರ್ಷ)
ಜಗದೀಶ್ ಶೆಟ್ಟರ್ (2004, 2 ವರ್ಷ)
ಡಿ.ವಿ.ಸದಾನಂದಗೌಡ (2006, 4 ವರ್ಷ)
ಕೆ. ಎಸ್. ಈಶ್ವರಪ್ಪ (3 ವರ್ಷ, 52 ದಿನಗಳು)
ಪ್ರಲ್ಹಾದ್ ಜೋಶಿ (3 ವರ್ಷ, 18 ದಿನಗಳು)
ಬಿ. ಎಸ್. ಯಡಿಯೂರಪ್ಪ (3 ವರ್ಷಗಳು, 134 ದಿನಗಳು)
ನಳಿನ್ ಕುಮಾರ್ ಕಟೀಲ್ (4 ವರ್ಷ, 79 ದಿನಗಳು)