ಬಿಜೆಪಿ ಸಾಲು ಸಾಲು ರಾಜೀನಾಮೆ ಬೆನ್ನಲ್ಲೇ ಬಿಎಸ್‌ವೈ ಪತ್ರಿಕಾಗೋಷ್ಠಿ: ಶೆಟ್ಟರ್, ಸವದಿ ವಿರುದ್ಧ ಕೆಂಡಾಮಂಡಲ!
ಬಿಜೆಪಿಯಲ್ಲಿ ಸಾಲು ಸಾಲು ರಾಜೀನಾಮೆ ಬೆನ್ನಲ್ಲೇ ಮಾಜಿ ಸಿಎಂ ಯಡಿಯೂರಪ್ಪ ಪತ್ರಿಕಾಗೋಷ್ಠಿ ಕರೆದಿದ್ದಾರೆ. ಬಿಜೆಪಿ ಹೈಕಮಾಂಡ್ ನಿರ್ದೇಶನದ ಬಳಿಕ ಈ ಸುದ್ದಿಗೋಷ್ಠಿ ನಡೆಸಿ ಪಕ್ಷ ಬಿಟ್ಟವರನ್ನು ತರಾಟೆಗೆತ್ತಿಕೊಂಡಿದ್ದಾರೆ.
ಬೆಂಗಳೂರು (ಏ.16): ಜಗದೀಶ್ ಶೆಟ್ಟರ್ ಬಿಜೆಪಿ ಬಿಟ್ಟ ಬೆನ್ನಲ್ಲೆ ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿದ್ದಾರೆ. ಯಡಿಯೂರಪ್ಪ ಜೊತೆ ಧರ್ಮೇಂದ್ರ ಪ್ರಧಾನ್, ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿದ್ದಾರೆ. ಕಿತ್ತೂರು ಕರ್ನಾಟಕದ ಪ್ರಬಲ ಲಿಂಗಾಯತ ನಾಯಕ ಶೆಟ್ಟರ್ ರಾಜೀನಾಮೆ ನೀಡಿರುವುದರಿಂದ ಪಕ್ಷದ ಮೇಲೆ ಆಗುವ ಪರಿಣಾಮ ಅರಿತ ಬಿಜೆಪಿ ಹೈಕಮಾಂಡ್ ಅದನ್ನು ಪ್ಯಾಚ್ ಅಪ್ ಮಾಡಲು ಯಡಿಯೂರಪ್ಪ ಅವರಿಗೆ ಈ ಜವಾಬ್ದಾರಿ ವಹಿಸಿದೆ. ಹೀಗಾಗಿ ಯಡಿಯೂರಪ್ಪ ಪತ್ರಿಕಾಗೋಷ್ಠಿ ನಡೆಸಿ ಪಕ್ಷ ಬಿಟ್ಟವರನ್ನು ತರಾಟೆಗೆತ್ತಿಕೊಂಡಿದ್ದಾರೆ.
ಧರ್ಮೇಂದ್ರ ಪ್ರಧಾನ್ ಮತ್ತು ಪ್ರಹ್ಲಾದ್ ಜೋಶಿ ಅವರು ನಿನ್ನೆ ಶೆಟ್ಟರ್ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ಕೇಂದ್ರ ಸಚಿವರನ್ನಾಗಿ ಮಾಡ್ತೇವೆ ಎಂದರು. ಆದರೂ ಬೇಡಿಕೆಯನ್ನು ಒಪ್ಪಿಕೊಳ್ಳದೆ ಕಾಂಗ್ರೆಸ್ ಸೇರುತ್ತಿರುವುದು ಅಕ್ಷಮ್ಯ ಅಪರಾಧ. ಇದನ್ನು ರಾಜ್ಯದ ಜನತೆ ಕ್ಷಮಿಸೋದಿಲ್ಲ ಎಂದು ಏರುಧ್ವನಿಯಲ್ಲಿ ಕಿಡಿಕಾರಿದ್ದಾರೆ. ಶೆಟ್ಟರ್ ಜನಸಂಘದ ಕಾಲದಿಂದ ಬಿಜೆಪಿ ಕುಟುಂಬದಲ್ಲಿ ಇದ್ದವರು. ಅವರನ್ನು ರಾಜ್ಯಧ್ಯಕ್ಷರನ್ನಾಗಿ ಮಾಡಿದೆವು. ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದೆವು. ಶಾಸಕನನ್ನಾಗಿ ಮಾಡಿದೆವು, ಮಂತ್ರಿ ಮುಖ್ಯಮಂತ್ರಿ ಮಾಡಿದೆವು. ಬಿಬಿ ಶಿವಪ್ಪನ ಎದುರು ಹಾಕಿಕೊಂಡು ಯುವಕ ಬೆಳೆಯಲಿ ಎಂಬ ಕಾರಣಕ್ಕೆ ವಿಪಕ್ಷ ನಾಯಕನಾಗಿ ಮಾಡಿದೆವು. ನಾನು ದಿವಂಗತ ಅನಂತ್ ಕುಮಾರ್ ಬೆನ್ನುಲುಬಾಗಿ ನಿಂತೆವು. ನರೇಂದ್ರ ಮೋದಿ ದೇಶ ಮುನ್ನಡೆಸುವ ಈ ಹೊತ್ತಿನಲ್ಲಿ ಅವರ ಜೊತೆ ಹೆಜ್ಜೆ ಹಾಕುವುದು ನಮ್ಮ ಜವಾಬ್ದಾರಿ. ಮೋದಿ ಬಗ್ಗೆ ವಿಶ್ವದಲ್ಲಿ ಯಾವ ಸ್ಥಾನ ಇದೆ ಎನ್ನೋದು ಎಲ್ಲರಿಗೂ ಗೊತ್ತಿದೆ. ಇಂತಹ ಸಮಯದಲ್ಲಿ ಶೆಟ್ಟರ್ ಅವರ ಹೇಳಿಕೆ ಮತ್ತು ನಿರ್ಧಾರ ಅವರ ನಂಬಿಕಕೊಂಡ ವಿಚಾರಕ್ಕೆ ತದ್ವಿರುದ್ಧವಾಗಿದೆ. ದೇಶಕ್ಕಾಗಿ ನಾವು ಕೆಲಸ ಮಾಡಬೇಕು.
ಬಿಜೆಪಿಗೆ ಗುಡ್‌ಬೈ ಹೇಳಿದ ಜಗದೀಶ್ ಶೆಟ್ಟರ್, ಕಾಂಗ್ರೆಸ್‌ಗೆ ಕರೆತರಲು ಡಿಕೆಶಿ ಆಪ್ತನಿಂದ ಹೆಲಿಕಾಫ್ಟರ್
ಶೆಟ್ಟರ್ ಅವರನ್ನು ಇವತ್ತು ರಾಜ್ಯದ ಜನತೆ ಗುರುತಿಸುವಂತೆ ಮಾಡಿರುವುದು ಬಿಜೆಪಿ. ವ್ಯಕ್ತಿ ಎಷ್ಟೇ ದೊಡ್ಡವನಾಗಿದ್ದರೂ, ಪಕ್ಷ ಬೆಂಬಲ ಇಲ್ಲದೆ ಎತ್ತರಕ್ಕೆ ಬೆಳೆಯಲು ಸಾಧ್ಯವಿಲ್ಲ. ಮುಖ್ಯಮಂತ್ರಿಯಾಗಿ ಬೆಳೆಯಲು ಕೂಡ ಸಾಧ್ಯವಿಲ್ಲ. ಧರ್ಮೇಂದ್ರ ಪ್ರಧಾನ್ ಮತ್ತು ಪ್ರಹ್ಲಾದ್ ಜೋಶಿ ಅವರು ನಿನ್ನೆ ಶೆಟ್ಟರ್ ಮನೆಗೆ ಹೋಗಿ ರಾಜ್ಯಸಭಾ ಸದಸ್ಯನನ್ನಾಗಿ ಮಾಡಿ ಕೇಂದ್ರದಲ್ಲಿ ಮಂತ್ರಿ ಮಾಡೋಣ ಎಂದು ಮಾತನಾಡಿ ಬಂದರು. ಆದರೆ ಹಠ ಮಾಡಿ ಕಾಂಗ್ರೆಸ್ ಜತೆ ಕೈಜೋಡಿಸಲು ಹೊರಟಿರುವುದು ಅಪರಾಧ. ನಾಡಿನ ಜನ ಇದನ್ನು ಕ್ಷಮಿಸುವುದಿಲ್ಲ ಎಂದು ಏರುಧ್ವನಿಯಲ್ಲಿ ಬಿಎಸ್‌ವೈ ಕಿಡಿಕಾರಿದ್ದಾರೆ.
60 ಹೊಸ ಮುಖಗಳಿಗೆ ಟಿಕೆಟ್ ಕರ್ನಾಟಕದಲ್ಲಿ ದಾಖಲೆ: ಕಟೀಲ್
ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಹಳೆ ಬೇರು ಹೊಸ ಚಿಗುರು ಸೇರಿ ಬೆಳಸಬೇಕಿದೆ. ಭಾರತೀಯ ಜನತಾ ಪಾರ್ಟಿ ನನಗೆ , ಜಗದೀಶ್ ಶೆಟ್ಟರ್ ಗೆ , ಲಕ್ಷ್ಮಣ್ ಸವದಿಗೆ, ಈಶ್ವರಪ್ಪ ಅವರಿಗೆ ಸರಿಯಾದ ಸ್ಥಾನಮಾನ ಕೊಟ್ಟು, ಅನೇಕ ಅವಕಾಶ ಕೊಟ್ಟಿದೆ. ನನ್ನಂತ ಸಾಮಾನ್ಯ ಕಾರ್ಯಕರ್ತ ಜನರ ಪ್ರೀತಿ ಸಿಗೋಕೆ ಕಾರಣ ಬಿಜೆಪಿ ಅನ್ನೋದನ್ನು ಜೀವನದಲ್ಲಿ ನಾನು ಮರೆತಿಲ್ಲ. ಸವದಿಯನ್ನು ಬಿಜೆಪಿಗೆ ಕರೆತಂದು ಶಾಸಕ, ಮಂತ್ರಿ ಮಾಡಿದೆವು. ಸಹಕಾರ ಇಲಾಖೆ ಕೊಟ್ಟೆವು. ಚುನಾವಣಾ ಸೋತ ಮೇಲೆ ಎಂಎಲ್‌ಸಿ ಮಾಡಿದೆವು. ಡಿಸಿಎಂ ಮಾಡಿ ಕೋರ್ ಕಮಿಟಿ ಸದಸ್ಯ ಮಾಡಿದ್ವಿ ನಾವೇನು ಅವರಿಗೆ ಕಡಿಮೆ ಮಾಡಿದೆವು. ಪರಿಷತ್ ಸ್ಥಾನ ಆರು ವರ್ಷವಿದೆ. ಸವದಿ ಈ ಸ್ಥಾನ ಸೇರಿ 10 ತಿಂಗಳು ಅಷ್ಟೇ ಆಗಿತ್ತು. ಇನ್ನು ಐದು ವರ್ಷ ಎರಡು ತಿಂಗಳು ಅವರ ಅವಧಿ ಇತ್ತು. ಮತ್ತೆ ಸಚಿವರನ್ನಾಗಿ ಮಾಡಲು ಅಡ್ಡಿ ಇರಲಿಲ್ಲ. ಸವದಿ ಬೆಂಬಲಿಗರಿಗೆ ಕೇಳ್ತೇನೆ. ಏನು ಅನ್ಯಾಯ ಆಗಿತ್ತು ನಿಮಗೆ?. ಇದು ವಿಶ್ವಾಸ ದ್ರೋಹ, ನಂಬಿಕೆ ದ್ರೋಹ ಜನ ಅವರನ್ನು ಕ್ಷಮಿಸೋದಿಲ್ಲ. ಎಂದು ಸವದಿ ಮೇಲೆ ಯಡಿಯೂರಪ್ಪ ವಾಗ್ದಾಳಿ ನಡೆಸಿದರು.