ಈ ಚುನಾವಣೆಯ ಫಲಿತಾಂಶ ಆಧರಿಸಿ ಆಡಳಿತಾರೂಢ ಕಾಂಗ್ರೆಸ್‌ ಕಡೆಗೆ ಹಾರಲು ಅನೇಕ ಬಿಜೆಪಿ ಮುಖಂಡರು ಚಿಂತನೆ ನಡೆಸಿರುವುದು ಗುಟ್ಟಿನ ವಿಷಯವೇನಲ್ಲ. ತೆರೆಮರೆಯಲ್ಲಿ ಚಟುವಟಿಕೆಗಳೂ ನಡೆದಿದ್ದವು. ಇದು ರಾಜ್ಯ ಬಿಜೆಪಿ ನಾಯಕರಿಗೆ ತಲೆಬಿಸಿ ಉಂಟು ಮಾಡಿತ್ತು. ಇದೀಗ ಫಲಿತಾಂಶ ಹೊರಬಿದ್ದ ಬಳಿಕ ಬೇಲಿ ಮೇಲೆ ಕುಳಿತ ಈ ಮುಖಂಡರಿಗೆ ಆಘಾತ ಉಂಟಾಗಿದ್ದು, ವಲಸೆ ಹೋಗುವ ಬಗ್ಗೆ ಹಿಂದೇಟು ಹಾಕುವ ಸಾಧ್ಯತೆ ಹೆಚ್ಚಿದೆ.

ಬೆಂಗಳೂರು(ಡಿ.04): ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಪೈಕಿ ಮೂರು ರಾಜ್ಯಗಳಲ್ಲಿ ಭರ್ಜರಿ ಜಯಭೇರಿ ಸಾಧಿಸಿದ ಬೆನ್ನಲ್ಲೇ ಕರ್ನಾಟಕದ ಬಿಜೆಪಿ ನಾಯಕರು ನಿಟ್ಟುಸಿರು ಬಿಟ್ಟಿದ್ದಾರೆ.
ಈ ಚುನಾವಣೆಯ ಫಲಿತಾಂಶ ಆಧರಿಸಿ ಆಡಳಿತಾರೂಢ ಕಾಂಗ್ರೆಸ್‌ ಕಡೆಗೆ ಹಾರಲು ಅನೇಕ ಬಿಜೆಪಿ ಮುಖಂಡರು ಚಿಂತನೆ ನಡೆಸಿರುವುದು ಗುಟ್ಟಿನ ವಿಷಯವೇನಲ್ಲ. ತೆರೆಮರೆಯಲ್ಲಿ ಚಟುವಟಿಕೆಗಳೂ ನಡೆದಿದ್ದವು. ಇದು ರಾಜ್ಯ ಬಿಜೆಪಿ ನಾಯಕರಿಗೆ ತಲೆಬಿಸಿ ಉಂಟು ಮಾಡಿತ್ತು. ಇದೀಗ ಫಲಿತಾಂಶ ಹೊರಬಿದ್ದ ಬಳಿಕ ಬೇಲಿ ಮೇಲೆ ಕುಳಿತ ಈ ಮುಖಂಡರಿಗೆ ಆಘಾತ ಉಂಟಾಗಿದ್ದು, ವಲಸೆ ಹೋಗುವ ಬಗ್ಗೆ ಹಿಂದೇಟು ಹಾಕುವ ಸಾಧ್ಯತೆ ಹೆಚ್ಚಿದೆ.

ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ಕೆಲವು ಸ್ಥಳೀಯ ಮಟ್ಟದ ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. ಮುಂದಿನ ಹಂತದಲ್ಲಿ ಹಾಲಿ ಶಾಸಕರು, ಮಾಜಿ ಸಚಿವರು ತೊರೆಯುವ ಬಗ್ಗೆ ದಟ್ಟವಾದ ವದಂತಿ ಹಬ್ಬಿತ್ತು. ಅಲ್ಲದೆ, ಇದಕ್ಕೆ ಸಂಬಂಧಿಸಿದಂತೆ ಬೆಳವಣಿಗೆಗಳೂ ನಡೆದಿದ್ದವು. ಅಂಥ ಅತೃಪ್ತ ಮುಖಂಡರ ಜತೆ ಬಿಜೆಪಿ ನಾಯಕರ ಮಾತುಕತೆ ನಡೆದರೂ ಅದು ಅಷ್ಟರಮಟ್ಟಿಗೆ ಫಲ ನೀಡುವ ವಿಶ್ವಾಸ ಇರಲಿಲ್ಲ.

ಬಿಜೆಪಿಗೆ ಮತದಾರರ ಒಲವು ಸ್ಪಷ್ಟ: ನಳಿನ್ ಕುಮಾರ್ ಕಟೀಲ್

ಭಾನುವಾರ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ವಲಸೆ ಹೋಗಲು ಸಜ್ಜಾಗಿರುವ ಮುಖಂಡರಲ್ಲಿ ಆತಂಕ ಕಂಡು ಬಂದಿರುವುದಂತೂ ನಿಶ್ಚಿತವಾಗಿದೆ. ಹಾಗಂತ ಸಿದ್ಧತೆ ನಡೆಸಿದ್ದ ಮುಖಂಡರೆಲ್ಲರೂ ಸುಮ್ಮನಾಗುತ್ತಾರೆ ಎಂದರ್ಥವಲ್ಲ. ಅಂಥವರನ್ನು ಮನವೊಲಿಸುವ ಪ್ರಯತ್ನ ಸುಲಭವಾಗಲಿದೆ.

ಸುಮಾರು ಆರು ತಿಂಗಳಿಂದ ನೆನೆಗುದಿಗೆ ಬಿದ್ದಿದ್ದ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷದ ನಾಯಕ ಸ್ಥಾನಗಳನ್ನು ಇತ್ತೀಚೆಗಷ್ಟೇ ನೇಮಿಸಲಾಗಿತ್ತು. ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಮತ್ತು ಪ್ರತಿಪಕ್ಷದ ನಾಯಕರಾಗಿ ಆರ್‌.ಅಶೋಕ್ ಅವರು ತಮ್ಮ ಜವಾಬ್ದಾರಿ ವಹಿಸಿಕೊಂಡು ಕೆಲಸವನ್ನೂ ಆರಂಭಿಸಿದ್ದಾರೆ. ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸೂ ಕಂಡು ಬರುತ್ತಿದೆ. ಇಂಥ ವೇಳೆ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಿದ್ದರೆ ಆ ಉತ್ಸಾಹಕ್ಕೆ ಧಕ್ಕೆ ಉಂಟಾಗುತ್ತಿತ್ತು.

ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಭರ್ಜರಿ ಗೆಲುವು, ಕಾಂಗ್ರೆಸ್‌ ಮೂಲೆಗುಂಪು: ಸಿವಿಸಿ

ಈಗ ಚುನಾವಣಾ ಫಲಿತಾಂಶ ಬಿಜೆಪಿ ಪರ ಬಂದಿದ್ದರಿಂದ ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿಯ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರನ್ನು ಅಣಿಗೊಳಿಸಲು ಶಕ್ತಿ ಲಭಿಸಿದಂತಾಗಿದೆ. ಗೆಲುವಿನ ಅಲೆಯಲ್ಲಿ ಇರುವ ಪಕ್ಷವನ್ನು ಲೋಕಸಭಾ ಚುನಾವಣೆಗೆ ತಯಾರಿಗೊಳಿಸಿ ಸಂಘಟನೆ ಬಲಪಡಿಸಲು ರಾಜ್ಯ ನಾಯಕರಲ್ಲೂ ವಿಶ್ವಾಸ ಇಮ್ಮಡಿಸಿದಂತಾಗಿದೆ.

ಹುರುಪು

- ಲೋಕಸಭೆಗೆ ಸಜ್ಜಾಗಲು ಬಿಜೆಪಿಯಲ್ಲಿ ಹೊಸ ಹುಮ್ಮಸ್ಸು

ಹುಮ್ಮಸ್ಸು ಏಕೆ?

- 4 ರಾಜ್ಯಗಳ ಫಲಿತಾಂಶ ಆಧರಿಸಿ ಕಾಂಗ್ರೆಸ್ಸಿಗೆ ಹಾರಲು ಅನೇಕ ಬಿಜೆಪಿಗರ ಚಿಂತನೆ
- ಈಗಾಗಲೇ ತೆರೆಮರೆಯಲ್ಲಿ ಚಟುವಟಿಕೆ. ಸ್ಥಳೀಯ ಮಟ್ಟದಲ್ಲಿ ಸೇರ್ಪಡೆ ಪ್ರಕ್ರಿಯೆ ಪೂರ್ಣ
- ಶಾಸಕರು, ಮಾಜಿ ಶಾಸಕರ ಸೇರ್ಪಡೆ ಬಗ್ಗೆ ದಟ್ಟ ವದಂತಿ. ಮಾತುಕತೆಗೂ ಸಿಗದ ಫಲ
- ಇದೀಗ ಬಿಜೆಪಿ ಗೆಲುವಿನ ಹಿನ್ನೆಲೆಯಲ್ಲಿ ವಲಸೆಗೆ ಸಜ್ಜಾಗಿದ್ದ ರಾಜ್ಯ ಮುಖಂಡರಲ್ಲಿ ಆತಂಕ
- ಈ ಪೈಕಿ ಎಲ್ಲರೂ ತಮ್ಮ ನಿರ್ಧಾರ ಬದಲಿಸುತ್ತಾರೆ ಅಂದಲ್ಲ. ಪಕ್ಷಕ್ಕೆ ಮನವೊಲಿಕೆ ಸುಲಭ
- ಈ ಫಲಿತಾಂಶದಿಂದ ಲೋಕಸಭೆ ಚುನಾವಣೆಗೆ ಕಾರ್ಯಕರ್ತರನ್ನು ಅಣಿಗೊಳಿಸಲು ಶಕ್ತಿ