ನಾನು ಹೋರಾಟಗಾರ, ವ್ಯವಸ್ಥೆ ಸರಿಯಾಗಿರಬೇಕು ಎಂಬ ಬಗ್ಗೆ ನನ್ನ ಹೋರಾಟ. ನಾನು ಹೇಳಬೇಕಾಗಿದ್ದೆಲ್ಲ ಸುರ್ಜೇವಾಲಾ ಅವರಿಗೆ ಹೇಳಿದ್ದೇನೆ ಎಂದು ಶಾಸಕ ಬಿ.ಆರ್. ಪಾಟೀಲ್ ಹೇಳಿದ್ದಾರೆ.
ಬೆಂಗಳೂರು (ಜು.01): ನಾನು ಹೋರಾಟಗಾರ, ವ್ಯವಸ್ಥೆ ಸರಿಯಾಗಿರಬೇಕು ಎಂಬ ಬಗ್ಗೆ ನನ್ನ ಹೋರಾಟ. ನಾನು ಹೇಳಬೇಕಾಗಿದ್ದೆಲ್ಲ ಸುರ್ಜೇವಾಲಾ ಅವರಿಗೆ ಹೇಳಿದ್ದೇನೆ. ಅವರು ದಾಖಲು ಮಾಡಿಕೊಂಡಿದ್ದು ಏನು ಮಾಡುತ್ತಾರೋ ನೋಡೋಣ ಎಂದು ಶಾಸಕ ಹಾಗೂ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಹೇಳಿದ್ದಾರೆ. ವಸತಿ ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಬಹಿರಂಗವಾಗಿ ಆರೋಪ ಮಾಡಿದ್ದ ಬಿ.ಆರ್. ಪಾಟೀಲ್ ಅವರೊಂದಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸೋಮವಾರ ಸುದೀರ್ಘವಾಗಿ ಚರ್ಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, ಸುರ್ಜೇವಾಲಾ ಅವರೊಂದಿಗೆ ಸುದೀರ್ಘ ಸಭೆ ನಡೆಯಿತು. ನಾನು ಹೇಳಬೇಕಾಗಿರುವುದನ್ನು ಹೇಳಿದ್ದೇನೆ. ಅವರು ನೋಟ್ ಮಾಡಿಕೊಂಡಿದ್ದು, ಮುಂದಿನ ತೀರ್ಮಾನ ಅವರಿಗೆ ಬಿಟ್ಟಿದ್ದು, ಏನು ಮಾಡುತ್ತಾರೋ ನೋಡೋಣ ಎಂದರು. ಅವರು ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ನಾನು ಹೋರಾಟಗಾರ, ವ್ಯವಸ್ಥೆ ಸರಿಯಾಗಬೇಕು ಎಂಬುದಷ್ಟೇ ನನ್ನ ಉದ್ದೇಶ. ಈ ಸಭೆಯಿಂದ ನನಗೆ ದುಃಖ, ಖುಷಿ ಎಂಬ ಪ್ರಶ್ನೆಯಿಲ್ಲ. ನಾನು ರಾಜಕೀಯ ಕಾರ್ಯಕರ್ತ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಕೆಲಸ ಮಾಡುತ್ತೇನೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ನನ್ನ ಆರೋಪಕ್ಕೆ ನಾ ಬದ್ಧ: ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಕುರಿತು ಸಚಿವ ಜಮೀರ್ ಅಹಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಜೊತೆಗೆ ದೂರವಾಣಿ ಮೂಲಕ ನಾನು ಹೇಳಿದ್ದೆಲ್ಲವೂ ಸತ್ಯ. ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಮನೆಗಳ ಹಂಚಿಕೆ ವಿಚಾರವಾಗಿ ಒಂದು ಮನವಿಗಾಗಿ ನಾನು ಅವರಿಗೆ ಕರೆ ಮಾಡಿದ್ದೆ. ಆಡಿಯೋದಲ್ಲಿರುವ ಧ್ವನಿ ನನ್ನದೆ, ನನ್ನ ಆರೋಪಕ್ಕೆ ನಾನು ಈಗಲೂ ಬದ್ಧ. ಆದರೆ, ಈ ಆಡಿಯೋ ಲೀಕ್ ಆಗಿದ್ದು ಹೇಗೆ ಎಂಬುದು ಗೊತ್ತಿಲ್ಲ ಎಂದು ಆಳಂದ ಶಾಸಕ ಬಿ.ಆರ್.ಪಾಟೀಲ್ ಪುನರುಚ್ಚರಿಸಿದ್ದಾರೆ. ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಆಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿ, ನನ್ನ ಫೋನ್‌ನಿಂದಲೇ ಸರ್ಫರಾಜ್ ಜೊತೆಗೆ ಮಾತನಾಡಿದ್ದೇನೆ. ಈ ಹಿಂದೆ ಹಲವು ಬಾರಿ ಹೇಳಿದರೂ ಮನೆಗಳು ಮಂಜೂರು ಆಗಿರಲಿಲ್ಲ, ಅದಕ್ಕೆ ಫೋನ್ ಮಾಡಿ ಮಾತಾಡಿದ್ದೆ. ನನ್ನ ಆಡಿಯೋ ವಿಚಾರ ಯಾಕೆ ಇಷ್ಟು ಸಿರಿಯಸ್ ಆಗುತ್ತಿದೆ ಎನ್ನುವುದು ನನಗೆ ಗೊತ್ತಾಗುತ್ತಿಲ್ಲ. ನಾನು ಬ್ಲ್ಯಾಕ್ ಮೇಲ್ ಮಾಡಿ ಮಂತ್ರಿ ಆಗುವವನಲ್ಲ ಎಂದರು. ಯಾರೋಬ್ಬ ವ್ಯಕ್ತಿಯ ಹೆಸರನ್ನೂ ತೆಗೆದುಕೊಂಡು ನಾನು ಮಾತನಾಡಿಲ್ಲ. ನಾನು ಬಡವರ ಬಗ್ಗೆ ಕಾಳಜಿ ಇಟ್ಟುಕೊಂಡು ಮಾತಾಡಿದ್ದೇನೆ. ನಾನು ನಿಗಮಕ್ಕೆ ನಾಲ್ಕು ಪತ್ರಗಳನ್ನು ನೀಡಿದ್ದೆ. ಆದರೆ, ಯಾವುದೇ ಮನೆಗಳು ಮಂಜೂರು ಆಗಲಿಲ್ಲ. ಇದೇ ವಿಚಾರಕ್ಕಾಗಿ ನಾನು ಸರ್ಫರಾಜ್ ಅವರಿಗೆ ಫೋನ್ ಮಾಡಿ ಮಾತಾಡಿದ್ದೇನೆ, ಗ್ರಾಮಸಭೆಯಲ್ಲಿ ಫಲಾನುಭವಿಗಳ ಆಯ್ಕೆ ಆಗಬೇಕು, ಅದೂ ಆಗಿಲ್ಲ. ಈ ಬಗ್ಗೆ ತನಿಖೆ ಮಾಡುವುದಾದರೆ ಮಾಡಲಿ ಎಂದು ಆಗ್ರಹಿಸಿದರು.
