ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ನಿಗಮ-ಮಂಡಳಿಗಳ ಖಾಲಿ ಹುದ್ದೆಗಳ ನೇಮಕದ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು (ಜು.01): ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ನಿಗಮ-ಮಂಡಳಿಗಳ ಖಾಲಿ ಹುದ್ದೆಗಳ ನೇಮಕದ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಕೆಪಿಸಿಸಿ ಕಚೇರಿಯಲ್ಲಿ ಶಾಸಕರೊಂದಿಗೆ ಮುಖಾಮುಖಿ ಸಭೆ ನಡೆಸಿದ ಸುರ್ಜೇವಾಲ ಅವರು ಸೋಮವಾರ ಸಂಜೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ವೇಳೆ ಅಧ್ಯಕ್ಷರು ಹಾಗೂ ಸದಸ್ಯರು ನೇಮಕವಾಗದೆ ಉಳಿದಿರುವ ನಿಗಮ-ಮಂಡಳಿಗಳ ನೇಮಕದ ಬಗ್ಗೆ ಪ್ರಾಥಮಿಕ ಚರ್ಚೆ ನಡೆಸಿದ್ದಾರೆ. ಚರ್ಚೆ ಅಪೂರ್ಣಗೊಂಡಿದ್ದು, ಮತ್ತೊಮ್ಮೆ ಸಭೆ ಸೇರಿ ಅಂತಿಮಗೊಳಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ನೀವೇನು ಸಾಧನೆ ಮಾಡಿದ್ದೀರಿ?: ಸಿದ್ಧ ಪ್ರಶ್ನಾವಳಿ ಜತೆ ಬಂದಿದ್ದ ಸುರ್ಜೇವಾಲಾ ಅವರು ಶಾಸಕರಿಗೂ ತಮ್ಮ ಕ್ಷೇತ್ರದಲ್ಲಿನ ಸಾಧನೆಗಳ ಬಗ್ಗೆಯೂ ಸರಣಿ ಪ್ರಶ್ನೆ ಕೇಳಿದರು. ಕೇವಲ ತಮ್ಮ ಅಹವಾಲು ಆಲಿಸಲು ಸಭೆ ಕರೆದಿದ್ದಾರೆ ಎಂಬ ಉದ್ದೇಶದಲ್ಲಿ ತೆರಳಿದ್ದ ಶಾಸಕರಿಗೂ ಚುರುಕು ಮುಟ್ಟಿಸಿದರು. ಪ್ರಶ್ನಾವಳಿಯಲ್ಲಿ ಎರಡೂವರೆ ವರ್ಷದಲ್ಲಿ ನಿಮ್ಮ ಸಾಧನೆ ಏನು? ಕ್ಷೇತ್ರದಲ್ಲಿ ಏನೆಲ್ಲಾ ಕೆಲಸಗಳನ್ನು ಮಾಡಿದ್ದೀರಿ? ಇನ್ನೂ ಏನೆಲ್ಲಾ ಕೆಲಸಗಳು ಆಗಬೇಕಿದೆ? ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಬಾಕಿ ಇದ್ದರೆ ಅದಕ್ಕೆ ಕಾರಣಗಳೇನು? ಎಂದು ಪ್ರಶ್ನಿಸಿದ್ದಾರೆ.
ಜತೆಗೆ ಜಿಲ್ಲಾ ಉಸ್ತುವಾರಿಗಳು ನಿಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿದ್ದಾರೆಯೇ? ಇಲಾಖಾವಾರು ಅನುದಾನ ತಾರತಮ್ಯ ಆಗಿದೆಯೇ? ಗ್ಯಾರಂಟಿ ಅನುಷ್ಠಾನದಲ್ಲಿ ಸರ್ಕಾರದಿಂದ ಏನಾದರೂ ಸಮಸ್ಯೆ ಆಗಿದೆಯೇ? ಸಚಿವರ ನಡವಳಿಕೆ ಹೇಗಿದೆ? ನಡವಳಿಕೆಗಳಲ್ಲಿ ಏನಾದರೂ ಬದಲಾವಣೆ ಆಗಬೇಕಾ? ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಕಾರ್ಯವೈಖರಿ ಹೇಗಿದೆ? ಎಂದೆಲ್ಲಾ ಪ್ರಶ್ನೆಗಳನ್ನು ಕೇಳಿದ್ದಾರೆ. ಎಲ್ಲ ಪ್ರಶ್ನೆಗಳಿಗೂ ಸಾವಧಾನವಾಗಿ ಉತ್ತರ ಪಡೆದು ದಾಖಲಿಸಿಕೊಂಡಿದ್ದಾರೆ. ಮಂಗಳವಾರ ಹಾಗೂ ಬುಧವಾರವೂ ಶಾಸಕರೊಂದಿಗಿನ ಸಭೆ ಮುಂದುವರೆಯಲಿದೆ.
ಸುರ್ಜೇವಾಲಾ ಪ್ರಶ್ನೆ ಕೇಳಿ ಮೀಟರ್ ಆಫ್ ಆಯ್ತು: ಕೊತ್ತೂರು ಮಂಜುನಾಥ್‌ನಾವು ಅಂದುಕೊಂಡಿದ್ದೇ ಒಂದು. ಸುರ್ಜೇವಾಲಾ ಅವರು ಕೇಳಿದ್ದೇ ಒಂದು. ಸರ್ಕಾರದ ಅನುದಾನ, ಸಚಿವರ ಮೇಲೆ ದೂರುಗಳು ಏನಾದರೂ ಇದೆಯೇ ಎಂದು ಕೇಳುತ್ತಾರೆ ಎಂದು ನಿರೀಕ್ಷಿಸಿ ಹೋಗಿದ್ದೆವು. ಆದರೆ ಮೊದಲು ಕೇಳಿದ ಪ್ರಶ್ನೆಯೇ ನೀವು ನಿಮ್ಮ ಕ್ಷೇತ್ರದಲ್ಲಿ ಏನೆಲ್ಲಾ ಸಾಧನೆ ಮಾಡಿದ್ದೀರಿ ಎಂಬುದು. ಜನರು ಓಟು ಹಾಕಿದ್ದಾರೆ, ನೀವು ಏನು ಮಾಡಿದ್ದೀರಾ? ಇನ್ನೂ ಏನು ಮಾಡಬೇಕಿದೆ? ಎಂದು ಕೇಳಿದರು. ಅವರ ಮೊದಲ ಪ್ರಶ್ನೆ ಕೇಳಿ ಮೀಟರ್ ಆಫ್ ಆಯಿತು. ಬಳಿಕ ನನ್ನ ಸಾಧನೆ ತಿಳಿಸಿ ಬಂದಿದ್ದೇನೆ.
