ಬೋಸರಾಜು, ಶೆಟ್ಟರ್, ಚಿಂಚನಸೂರು ಸೇರಿ 6 ಜನ ಮೇಲ್ಮನೆಗೆ?
ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದ ಮೂವರು ಸದಸ್ಯರು ಅವಧಿಗೆ ಮುನ್ನ ರಾಜೀನಾಮೆ ನೀಡಿದ ಪರಿಣಾಮ ತೆರವಾಗಿರುವ ಮೂರು ಸ್ಥಾನ ಹಾಗೂ ಖಾಲಿ ಇರುವ ಮೂರು ನಾಮ ನಿರ್ದೇಶಿತ ಸ್ಥಾನಗಳಿಗೆ ಆಯ್ಕೆಯಾಗಲು ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಪೈಪೋಟಿ ಕಂಡು ಬಂದಿದೆ. 25ಕ್ಕೂ ಹೆಚ್ಚು ನಾಯಕರು ಪ್ರಬಲ ಲಾಬಿ ನಡೆಸಿದ್ದಾರೆ.
ಬೆಂಗಳೂರು (ಜೂ.13) ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದ ಮೂವರು ಸದಸ್ಯರು ಅವಧಿಗೆ ಮುನ್ನ ರಾಜೀನಾಮೆ ನೀಡಿದ ಪರಿಣಾಮ ತೆರವಾಗಿರುವ ಮೂರು ಸ್ಥಾನ ಹಾಗೂ ಖಾಲಿ ಇರುವ ಮೂರು ನಾಮ ನಿರ್ದೇಶಿತ ಸ್ಥಾನಗಳಿಗೆ ಆಯ್ಕೆಯಾಗಲು ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಪೈಪೋಟಿ ಕಂಡು ಬಂದಿದೆ. 25ಕ್ಕೂ ಹೆಚ್ಚು ನಾಯಕರು ಪ್ರಬಲ ಲಾಬಿ ನಡೆಸಿದ್ದಾರೆ.
ವಿಧಾನಸಭೆಯಿಂದ ಪರಿಷತ್‌ಗೆ ನಡೆಯುವ ಉಪ ಚುನಾವಣೆ ಸಂಬಂಧ ಮಂಗಳವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಸದ್ಯಕ್ಕೆ ಈ ಮೂರು ಸ್ಥಾನಗಳಿಗೆ ಯಾರನ್ನು ನೇಮಕ ಮಾಡಬೇಕು ಎಂಬ ನಿರ್ಧಾರ ಮಾಡಿದರೆ ಸಾಕಿತ್ತು. ಆದರೆ, ಹಲವಾರು ಪ್ರಭಾವಿ ನಾಯಕರೇ ಆಕಾಂಕ್ಷಿಗಳಾಗಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಸರ್ಕಾರದಿಂದ ನಾಮನಿರ್ದೇಶನ ಮಾಡಲು ಅವಕಾಶವಿರುವ ಮೂರು ಸ್ಥಾನಗಳಿಗೂ ಹೆಸರು ಅಂತಿಮಗೊಳಿಸಲು ಕಾಂಗ್ರಸ್ ನಾಯಕರು ತೀರ್ಮಾನಿಸಿದ್ದಾರೆ.
'ರಾಜ್ಯದಲ್ಲಿ ಎಮೆರ್ಜೆನ್ಸಿ ಶೀಘ್ರ' ಬೊಮ್ಮಾಯಿ ಹೇಳಿಕೆಗೆ ಸಚಿವ ಎನ್.ಎಸ್ ಬೋಸರಾಜು ತಿರುಗೇಟು
ಈ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚರ್ಚೆ ನಡೆಸಲಿದ್ದಾರೆ. ಈ ನಾಯಕರು ಈಗ ಎಲ್ಲ ಆರು ಸ್ಥಾನಗಳಿಗೆ ಮುಂಬರುವ ಲೋಕಸಭೆ ಚುನಾವಣೆ, ಜಾತಿ ಸೇರಿದಂತೆ ವಿವಿಧ ಮಾನದಂಡಗಳನ್ನು ಆಧರಿಸಿ ಆಯ್ಕೆ ಮಾಡುವ ಸಾಧ್ಯತೆಗಳಿವೆ.
ಪರಿಷತ್‌ಗೆ ನಡೆಯುವ ಮೂರು ಸ್ಥಾನಗಳ ಚುನಾವಣೆಯನ್ನು ಪ್ರತ್ಯೇಕವಾಗಿ ನಡೆಸಲಾಗುತ್ತಿದೆ. ಹೀಗಾಗಿ ವಿಧಾನಸಭೆಯಲ್ಲಿ ಭಾರಿ ಸಂಖ್ಯಾಬಲ ಇರುವುದರಿಂದ ಮೂರೂ ಸ್ಥಾನಗಳನ್ನು ಕಾಂಗ್ರೆಸ್ ಸುಲಭವಾಗಿ ಗೆಲ್ಲಲಿದೆ. ಪರಿಷತ್‌ಗೆ ನಾಮನಿರ್ದೇಶಿತರನ್ನಾಗಿ ಮಾಡುವುದು ಸರ್ಕಾರದ ಕೈಯಲ್ಲೇ ಇದೆ. ಹೀಗಾಗಿ 25-30ಕ್ಕೂ ಹೆಚ್ಚು ಆಕಾಂಕ್ಷಿಗಳು ತಮ್ಮನ್ನು ಆಯ್ಕೆ ಮಾಡುವಂತೆ ಹಿರಿಯ ನಾಯಕರ ದುಂಬಾಲು ಬಿದ್ದಿದ್ದಾರೆ.
ಯಾರಾರಯರಿಗೆ ಚಾನ್ಸ್?:
ಈಗಾಗಲೇ ಸಚಿವರಾಗಿರುವ ಎನ್.ಎಸ್. ಬೋಸರಾಜು ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವುದು ಅನಿವಾರ್ಯ. ಹಾಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನ ಸದಸ್ಯರಲ್ಲದ ಬೋಸರಾಜು ಅವರು ಸಚಿವರಾಗಿರುವ ಹಿನ್ನೆಲೆಯಲ್ಲಿ ಆರು ತಿಂಗಳ ಒಳಗೆ ಅವರು ಉಭಯ ಸದನಗಳ ಪೈಕಿ ಒಂದಕ್ಕೆ ಸದಸ್ಯರಾಗಬೇಕು. ಹೀಗಾಗಿ ಮೊದಲ ಅವಕಾಶದಲ್ಲೇ ಅವರು ವಿಧಾನಪರಿಷತ್ ಪ್ರವೇಶ ಮಾಡುವ ಸಾಧ್ಯತೆಯೇ ಹೆಚ್ಚು.
ಇನ್ನು ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಆಯ್ಕೆ ಮಾಡಬೇಕಿರುವ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯದ ಜಗದೀಶ್ ಶೆಟ್ಟರ್ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡರೂ ಅವರ ಪಕ್ಷ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಲಾಭವಾಗಿದೆ. ಹೀಗಾಗಿ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕಿದೆ. ಈ ದೃಷ್ಟಿಯಿಂದ ಶೆಟ್ಟರ್ ಅವರಿಗೆ ಪರಿಷತ್‌ಗೆ ಅವಕಾಶ ಸಿಗಬಹುದು ಎನ್ನಲಾಗಿದೆ.
ಇನ್ನು ಲೋಕಸಭಾ ಚುನಾವಣೆಯಲ್ಲಿ ಒಂದು ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾದರೆ ಆಗ ಆ ಕ್ಷೇತ್ರದಲ್ಲಿ ಉತ್ತಮ ಸಂಖ್ಯೆಯಲ್ಲಿರುವ ಕೋಳಿ ಸಮುದಾಯದ ಬೆಂಬಲ ಪಕ್ಷಕ್ಕೆ ಅಗತ್ಯ. ಈ ದೃಷ್ಟಿಯಿಂದ ಬಾಬುರಾವ್ ಚಿಂಚನಸೂರ್ ಅವರನ್ನು (ಚಿಂಚನಸೂರ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ) ಮುಂದುವರೆಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ರಾಯಚೂರು: ವಿರೋಧದ ನಡುವೆಯೂ ಇಂದು ನಗರಕ್ಕೆ ಉಸ್ತುವಾರಿ ಸಚಿವ ಪಾಟೀಲರು!
ವಿಧಾನಸಭೆಯಿಂದ ಪರಿಷತ್‌ಗೆ ನಡೆಯುವ ಮೂರು ಸ್ಥಾನಗಳ ಸದಸ್ಯತ್ವ ಅವಧಿ ಕ್ರಮವಾಗಿ ಒಂದು ವರ್ಷ, ಮೂರು ವರ್ಷ ಹಾಗೂ ಐದು ವರ್ಷವಿದೆ. ಈ ಪೈಕಿ ಉಭಯ ಸದನಗಳ ಸದಸ್ಯರಲ್ಲದ ಸಚಿವ ಎನ್.ಎಸ್. ಬೋಸರಾಜು ಅವರನ್ನು ಐದು ವರ್ಷ, ಮೂರು ವರ್ಷದ ಅವಧಿಯ ಸ್ಥಾನಕ್ಕೆ ಶೆಟ್ಟರ್ ಹಾಗೂ ಒಂದು ವರ್ಷದ ಸ್ಥಾನವನ್ನು ಚಿಂಚನಸೂರ್‌ಗೆ ನೀಡುವ ಬಗ್ಗೆ ಪಕ್ಷದಲ್ಲಿ ಚಿಂತನೆ ನಡೆದಿದೆ ಎನ್ನಲಾಗಿದೆ.
ನಾಮನಿರ್ದೇಶಿತ ಸ್ಥಾನಕ್ಕೂ ಪೈಪೋಟಿ:
ಆಕಾಂಕ್ಷಿಗಳ ಸಂಖ್ಯೆ ವಿಪರೀತ ಎನಿಸುವಷ್ಟಿರುವ ಕಾರಣ ಈ ಚರ್ಚೆಯ ಸಂದರ್ಭದಲ್ಲೇ ಸಾಹಿತ್ಯ, ಕಲೆ, ಸಮಾಜ ಸೇವೆ, ಶಿಕ್ಷಣ ಮೊದಲಾದ ಕ್ಷೇತ್ರಗಳಿಂದ ವಿಧಾನಪರಿಷತ್‌ಗೆ ಸರ್ಕಾರ ನಾಮ ನಿರ್ದೇಶನ ಮಾಡಲು ಅವಕಾಶವಿರುವ ಮೂರು ಸ್ಥಾನಗಳಿಗೂ ಹೆಸರು ಅಖೈರುಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಸಿನಿಮಾ ಕ್ಷೇತ್ರದಿಂದ ಈ ಬಾರಿ ಭರ್ಜರಿ ಪೈಪೋಟಿಯಿದೆ. ಮಾಜಿ ಸಚಿವೆ ಹಾಗೂ ಪೋಷಕ ನಟಿ ಉಮಾಶ್ರೀ ಅವರಿಗೆ ಸಂಗೀತ ನಿರ್ದೇಶಕ ಹಾಗೂ ಖ್ಯಾತ ಹಾಸ್ಯ ನಟ ಸಾಧು ಕೋಕಿಲ ಅವರು ಟಕ್ಕರ್ ನೀಡುವ ಸಾಧ್ಯತೆಯಿದೆ.
ಉಮಾಶ್ರೀ ಅವರು ದೇವಾಂಗ ಸಮುದಾಯದವರೂ ಆದ ಕಾರಣ ಅವರ ಹೆಸರು ಕೇಳಿ ಬಂದರೆ ಕ್ರೈಸ್ತರಾದ ಸಾಧು ಕೋಕಿಲ ಅವರನ್ನು ಪರಿಗಣಿಸುವುದು ಹೆಚ್ಚು ಸೂಕ್ತ. ಏಕೆಂದರೆ, ಹಿಂದುಳಿದ ಸಮುದಾಯಕ್ಕೆ ಪರಿಷತ್‌ನಲ್ಲಿ ಹೆಚ್ಚು ಅವಕಾಶ ದೊರಕಿದೆ. ಹೀಗಾಗಿ ಕ್ರೈಸ್ತರನ್ನು ಪರಿಗಣಿಸಬೇಕು ಎಂಬ ವಾದ ಕೇಳಿ ಬರುವ ಸಾಧ್ಯತೆಯಿದೆ.
ಇನ್ನು ಶಿಕ್ಷಣ ಕ್ಷೇತ್ರದಿಂದ ಮನ್ಸೂರ್ ಅಲಿಖಾನ್ (ಹಿರಿಯ ನಾಯಕ ರೆಹಮಾನ್ ಖಾನ್ ಅವರ ಪುತ್ರ) ಅವರ ಹೆಸರು ಕೇಳಿ ಬಂದಿದೆ. ಅವರಲ್ಲದೆ, ಹಿರಿಯರಾದ ಬಿ.ಎಲ್. ಶಂಕರ್, ಮಾಜಿ ಮೇಯರ್ ರಾಮಚಂದ್ರಪ್ಪ, ಎಂ.ಆರ್. ಸೀತಾರಾಂ, ಎಸ್.ಆರ್. ಪಾಟೀಲ್, ಬಿ.ಆರ್. ನಾಯ್ಡು, ಮಂಜುನಾಥ ಗೌಡ ಸೇರಿದಂತೆ ಹಲವಾರು ನಾಯಕರು ಪೈಪೋಟಿ ನಡೆಸಿದ್ದಾರೆ.
ಪ್ರಬಲ ಆಕಾಂಕ್ಷಿಗಳು
- ಎನ್.ಎಸ್.ಬೋಸರಾಜು
- ಜಗದೀಶ್ ಶೆಟ್ಟರ್
- ಬಾಬುರಾವ್ ಚಿಂಚನಸೂರ್
- ಉಮಾಶ್ರೀ
- ಸಾಧು ಕೋಕಿಲ
- ಮನ್ಸೂರ್ ಅಲಿ ಖಾನ್
- ಬಿ.ಎಲ್.ಶಂಕರ್
- ಎಂ.ಆರ್.ಸೀತಾರಾಂ
- ಎಸ್.ಆರ್.ಪಾಟೀಲ್
- ರಾಮಚಂದ್ರಪ್ಪ
ಇಂದು ಅಧಿಸೂಚನೆ:
ಜೂ.30ಕ್ಕೆ ಮತದಾನ
ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ತಿನ ಮೂರು ಸ್ಥಾನಗಳಿಗೆ ನಡೆಯುವ ಉಪಚುನಾವಣೆಗೆ ಮಂಗಳವಾರ ಅಧಿಸೂಚನೆ ಪ್ರಕಟವಾಗಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಈ ತಿಂಗಳ 20ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ. 21ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜೂ.30ರಂದು ಮತದಾನ ನಡೆದು, ಅಂದೇ ಮತ ಎಣಿಕೆ ನಡೆಯಲಿದೆ.