ಎಷ್ಟೇ ಅಡೆತಡೆಗಳಿದ್ದರೂ ರಾಜ್ಯದಲ್ಲಿ ಜಾತಿ ಗಣತಿ ಆಗಿಯೇ ಆಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಬೆಂಗಳೂರು (ಜು.16): ಎಷ್ಟೇ ಅಡೆತಡೆಗಳಿದ್ದರೂ ರಾಜ್ಯದಲ್ಲಿ ಜಾತಿ ಗಣತಿ ಆಗಿಯೇ ಆಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಇಂದಿನಿಂದ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಎಐಸಿಸಿ ಒಬಿಸಿ ಸಲಹಾ ಸಮಿತಿ ಸಭೆ ನಡೆಯುತ್ತಿದೆ. ದೇವರಾಜ ಅರಸು ಅವರಿಂದ ಸಿದ್ದರಾಮಯ್ಯವರೆಗೆ ಹಿಂದುಳಿದ ವರ್ಗಗಳ ಅಭಿವೃದ್ಧಿ ಕೆಲಸಗಳು ಆಗಿವೆ ಎಂದರು.
ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಹೆಚ್ಚು ಪ್ರಯತ್ನಗಳು ನಡೆದಿವೆ. ಬಡವರಿಗೆ ಹೆಚ್ಚು ಕಾರ್ಯಕ್ರಮ ಕೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಎಐಸಿಸಿ ಒಬಿಸಿ ಸಲಹಾ ಸಮಿತಿ ಸಭೆಯಲ್ಲಿ ಇಡೀ ದೇಶದಲ್ಲಿ ಹಿಂದುಳಿದ ವರ್ಗಗಳಿಗೆ ಯಾವ ರೀತಿ ನ್ಯಾಯ ಒದಗಿಸಬೇಕು ಎನ್ನುವ ಬಗ್ಗೆ ಚರ್ಚೆಯಾಗಲಿದೆ. ಈ ಸಭೆಯಲ್ಲಿ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಬಲ ಸಮುದಾಯಗಳ ವಿರೋಧಕ್ಕೆ ಮಣಿದ ಕೈ ಹೈಕಮಾಂಡ್: ರಾಜ್ಯ ಸರ್ಕಾರ ಹತ್ತು ವರ್ಷಗಳ ಹಿಂದೆ ನಡೆಸಿದ್ದ ಜಾತಿ ಗಣತಿ ವರದಿಗೆ ಪ್ರಬಲ ಲಿಂಗಾಯತ, ಒಕ್ಕಲಿಗ ಸಮುದಾಯದ ಸಂಘ, ಸಂಸ್ಥೆಗಳ ಜತೆಗೆ ಆ ಸಮುದಾಯಗಳ ಸಚಿವ ಸಂಪುಟದ ಸಚಿವರೂ ಒಟ್ಟಾಗಿ ತೀವ್ರ ವಿರೋಧ ವ್ಯಕ್ತಪಡಿಸಿದ ಪರಿಣಾಮ ಈ ಸಮೀಕ್ಷೆ ಜಾರಿಗೆ ಒಪ್ಪದ ಕಾಂಗ್ರೆಸ್ ಹೈಕಮಾಂಡ್ ಮರುಗಣತಿ ನಡೆಸಲು ಸೂಚಿಸಿದೆ. ಸರ್ಕಾರ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ(ಜಾತಿ ಗಣತಿ) ವರದಿಯನ್ನು ಸಚಿವ ಸಂಪುಟದ ಮುಂದೆ ತಂದು ಬಹಿರಂಗಪಡಿಸುತ್ತಿದ್ದಂತೆ ರಾಜ್ಯದಲ್ಲಿ ಪ್ರಬಲ ಸಮುದಾಯಗಳಿಂದ ಅಸಮಾಧಾನ, ಆಕ್ರೋಶ ಬುಗಿಲೆದ್ದಿತ್ತು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಈಶ್ವರ್ ಖಂಡ್ರೆ ಸೇರಿ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ಸಚಿವರೆಲ್ಲರೂ ಒಟ್ಟಾಗಿಯೇ ಸಚಿವ ಸಂಪುಟದ ಮುಂದೆ ಈ ವರದಿಗೆ ವಿರೋಧ ವ್ಯಕ್ತಪಡಿಸಿದ್ದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೇರವಾಗಿಯೇ ಈ ವರದಿಗೆ ಅಪಸ್ವರವೆತ್ತಿದ್ದರು. ಜಾತಿ ಗಣತಿ ವರದಿ ಬಗ್ಗೆ ತಮ್ಮ ಅಭಿಪ್ರಾಯ ಸಲ್ಲಿಸುವಂತೆ ಮುಖ್ಯಮಂತ್ರಿಯವರು ತಮ್ಮ ಸಂಪುಟದ ಸಹದ್ಯೋಗಿಗಳಿಗೆ ಸೂಚಿಸಿದ್ದರು. ಉಳಿದ ಎಲ್ಲ ಸಮುದಾಯದ ಸಚಿವರು ವೈಯಕ್ತಿಕವಾಗಿ ಅಭಿಪ್ರಾಯ ನೀಡಿದ್ದರೆ, ಲಿಂಗಾಯತ ಸಚಿವರು ಮಾತ್ರ ಸಂಘಟಿತವಾಗಿ ಪತ್ರ ಬರೆಯುವ ಮೂಲಕ ವಿರೋಧ ವ್ಯಕ್ತಪಡಿಸಿದ್ದರು. ಸಚಿವ ಸಂಪುಟ ಸಭೆಗಳಲ್ಲಿ ಒಕ್ಕಲಿಗ ಸಚಿವರು ನೇರವಾಗಿಯೇ ವಿರೋಧ ವ್ಯಕ್ತಪಡಿಸಿದ್ದರು.
