ಪ್ಲಾಸ್ಟಿಕ್ ಮುಕ್ತ ಚಿಕ್ಕಬಳ್ಳಾಪುರ ಮಾಡುವುದೇ ನನ್ನ ಗುರಿ: ಶಾಸಕ ಪ್ರದೀಪ್ ಈಶ್ವರ್
ಪ್ಲಾಸ್ಟಿಕ್ ಒಂದು ನಿಧಾನಗತಿಯ ವಿಷ(ಸ್ಲೋ ಪಾಯಿಸನ್)ವಾಗಿದ್ದು ಇದರ ಬಳಕೆಯಿಂದ ನಮಗೆ ತಿಳಿಯದ ಅನೇಕ ವಾಸಿಯಾಗದ ಕಾಯಿಲೆಗಳಿಗೆ ತುತ್ತಾಗುವುದಲ್ಲದೇ ಏಕಾ ಏಕಿ ಸಾವಿಗೆ ಕಾರಣವಾಗುತ್ತದೆ.
ಚಿಕ್ಕಬಳ್ಳಾಪುರ (ಜೂ.02): ಪ್ಲಾಸ್ಟಿಕ್ ಒಂದು ನಿಧಾನಗತಿಯ ವಿಷ(ಸ್ಲೋ ಪಾಯಿಸನ್)ವಾಗಿದ್ದು ಇದರ ಬಳಕೆಯಿಂದ ನಮಗೆ ತಿಳಿಯದ ಅನೇಕ ವಾಸಿಯಾಗದ ಕಾಯಿಲೆಗಳಿಗೆ ತುತ್ತಾಗುವುದಲ್ಲದೇ ಏಕಾ ಏಕಿ ಸಾವಿಗೆ ಕಾರಣವಾಗುತ್ತದೆ. ಪ್ಲಾಸ್ಟಿಕ್ ಕವರ್‌ಗಳಲ್ಲಿ ಅನ್ನ, ಸಾಂಬಾರ್, ಕಾಫಿ, ಟೀ, ಸೇರಿದಂತೆ ಆಹಾರ ಪದಾರ್ಥಗಳನ್ನು ತಂದು ತಿನ್ನುವುದರಿಂದ ಅನೇಕರು ಹೃದಯಾಘಾತಗಳಿಗೆ ಒಳಗಾಗಿದ್ದಾರೆ. ವೈದ್ಯರಿಗೂ ಕಾಯಿಲೆಯ ಮೂಲ ತಿಳಿಯದಾಗುತ್ತಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು. ನಗರದ ಮಿನಿ ವಿಧಾನಸೌಧದ ಶಾಸಕರ ಕೊಠಡಿಯಲ್ಲಿ ಪೂಜೆ ನೆರವೇರಿಸಿ ಸುದ್ದಿಗಾರರೊಡನೆ ಮಾತನಾಡಿದ ಅವರು, ಮೊದಲು ಫ್ಲೆಕ್ಸ್ ಮುಕ್ತ ಚಿಕ್ಕಬಳ್ಳಾಪುರಕ್ಕೆ ನಾಂದಿ ಹಾಡಿದೆ.
ನಂತರ ಸರ್ಕಾರಿ ಶಾಲಾ ಕಾಲೇಜುಗಳ ಬಳಿ ಪುಂಡ ಪೋಕರಿಗಳ ಮುಕ್ತ ಚಿಕ್ಕಬಳ್ಳಾಪುರ ಮಾಡಲು ಪೋಲಿಸ್ ಭದ್ರತೆ ಒದಗಿಸಿದ್ದೇನೆ. ಈಗ ಜನರಿಗೆ, ಜಾನುವಾರುಗಳಿಗೆ ಮತ್ತು ಪ್ರಾಣಿ ಪಕ್ಷಿಗಳಿಗೆ ಹಾಗೂ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಮುಕ್ತ ಚಿಕ್ಕಬಳ್ಳಾಪುರ ಮಾಡಲು ಹೊರಟಿದ್ದೇನೆ ಎಂದರು. ವರ್ತಕರಲ್ಲಿ ಶೇ.90ರಷ್ಟುಜನ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿದ್ದು, ಉಳಿದ ಶೇ.10ರಷ್ಟುಜನರು ಮಾತ್ರ ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ಮಾಡುತ್ತಿದ್ದಾರೆ. ನಾಳೆಯಿಂದ ಎಲ್ಲರೂ ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ನಿಲ್ಲಿಸಬೇಕು ಇಲ್ಲದಿದ್ದರೆ ಕಠಿಣ ಕ್ರಮಕ್ಕೆ ಅಧಿಕಾರಿಗಳು ಮುಂದಾಗುತ್ತಾರೆ. ಯಾವುದೇ ಪ್ರಭಾವ ಅಥವಾ ನನ್ನ ಹೆಸರು ಬಳಸಿದರೆ ಇನ್ನು ಹೆಚ್ಚಿನ ದಂಡ ಮತ್ತು ಶಿಕ್ಷೆ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.
ಮಕ್ಕಳ ದಾಖಲಾತಿಗೆ ವಾಮಮಾರ್ಗ ಹಿಡಿದ ಪೋಷಕರು: ಎಲ್‌ಕೆಜಿಗೆ 4 ವರ್ಷ, ಯುಕೆಜಿಗೆ 5 ವರ್ಷ
ಈಗಾಗಲೇ ನೀಡಿದ್ದ ವಚನದಂತೆ ಪ್ಲೆಕ್ಸ್ ಮುಕ್ತ ಚಿಕ್ಕಬಳ್ಳಾಪುರಕ್ಕೆ ನನ್ನ ಪ್ಲೆಕ್ಸ್ ಗಳನ್ನು ಹರಿಸಿ ತೆಗೆಸಿದ್ದೇನೆ. ಪೋಷಕರು ಹೆಣ್ಣು ಮಕ್ಕಳ ಸರ್ಕಾರಿ ಶಾಲಾ ಕಾಲೇಜಿಗೆ ಕಳುಹಿಸಲು ಮತ್ತು ಬರಲು ಮುಜಗರ ಉಂಟು ಮಾಡುತ್ತಿದ್ದ ಪುಂಡ ಪೋಕರಿಗಳ ಹುಟ್ಟಡಗಿಸಲು ಪೋಲಿಸರ ಹೈ ಸೆಕ್ಯೂರಿಟಿಯನ್ನು ಇಂದಿನಿಂದ ನೀಡಿದ್ದು, ಯಾರಾದರೂ ಅನಾವಶ್ಯಕವಾಗಿ ಬೈಕ್‌ನಲ್ಲಿ ಕಾಲೇಜಿನ ಕಾಂಪೌಂಡ್‌ನೊಳಗೆ ಬಂದರೆ 14 ದಿನಗಳ ಕಾಲ ಕಸ್ಟಡಿ ಹಾಗೂ ವಾಹನ ಸೀಜ್ ಮಾಡಲು ಪೊಲೀಸರಿಗೆ ಕಟ್ಟು ನಿಟ್ಟಿನ ಕ್ರಮಕ್ಕೆ ಆದೇಶಿಸಿರುವುದಾಗಿ ಹೇಳಿದರು. ಚುನಾವಣೆಯಲ್ಲಿ ಮಾತ್ರ ರಾಜಕಾರಣ ಮಾಡುತ್ತೇನೆ ಹೊರತು ನಂತರ ಕ್ಷೇತ್ರದ ಎಲ್ಲಾ ಜನರಿಗೂ ನಾನು ಶಾಸಕನೆ.
ರಾಜಕೀಯ ದ್ವೇಷ ಮಾಡುವುದಿಲ್ಲಾ. ಎಲ್ಲಾ ಜನತೆಗೂ ನಾನು ಮುಕ್ತವಾಗಿ ಸಿಗುತ್ತೇನೆ ಮತ್ತು ಜನತೆಯ ಸೇವೆಗೆ ಶಾಸಕನಾಗಿ ಬದ್ದ. ಪಿಎಲ್‌ಡಿ ಬ್ಯಾಂಕ್‌ನ ಆವರಣದಲ್ಲಿದ್ದ ಸಹಕಾರಿ ಧುರೀಣ ಮಾಜಿ ಎಂಎಲ್‌ಸಿ ಕೆ.ಬಿ.ಪಿಳ್ಳಪ್ಪನವರ ಪುತ್ಥಳಿಯನ್ನು ನೂತನ ಕಟ್ಟಡ ಕಟ್ಟುವಾಗ ತೆರವುಗೊಳಿಸಿದ್ದರು. ಈಗ ಮತ್ತೆ ಅಲ್ಲಿಯೇ ಮರು ಪ್ರತಿಷ್ಟಾಪನೆ ಮಾಡಲಾಗುವುದು. ಹಿಂದಿನ ಶಾಸಕರುಗಳಾದ ಸಿ.ವಿ.ವೆಂಕಟರಾಯಪ್ಪ, ರೇಣುಕಾ ರಾಜೇಂದ್ರನ್, ಎ.ಮುನಿಯಪ್ಪ, ಕೆ.ಎಂ.ಮುನಿಯಪ್ಪ, ಎಂ.ಶಿವಾನಂದ್, ಎಸ್.ಎಮ್.ಮುನಿಯಪ್ಪ ಸೇರಿದಂತೆ ಎಲ್ಲರೂ ಅವರ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಅವರದೇ ಆದ ಕಾಣಿಕೆ ನೀಡಿದ್ದಾರೆ. ಅದನ್ನು ಮರೆತರೆ ನಾವು ಇತಿಹಾಸ ಮರೆತಂತೆ. ಆದುದರಿಂದ ಅವರನ್ನು ನಾವು ಮರೆಯ ಬಾರದು. ಅವರು ಹಾಕಿ ಕೊಟ್ಟಿರುವ ಮಾರ್ಗದಲ್ಲಿ ನಾವು ನಡೆಯಬೇಕು ಎಂದರು.
ಸ್ವಾತಂತ್ರ್ಯ ಬಂದಾಗಿನಿಂದ ಬಸ್‌ಗಳನ್ನೇ ನೋಡದ ತಾಲೂಕಿನ ಗ್ರಾಮಗಳಾದ ಕಾಡದಿಬ್ಬೂರು, ಹಿರಣ್ಣಯ್ಯನಹಳ್ಳಿ, ಬುಡಗನೂರು, ಪಿಚ್ಚಲಹಳ್ಳಿ ಮತ್ತು ಮಂಚೇನ ಹಳ್ಳಿ ತಾಲೂಕಿನ ದಂಡಿಗಾನಹಳ್ಳಿ, ದೇವರಕೊಂಡ್ರಹಳ್ಳಿ ಮತ್ತು ಮಮಾಕಲ ಹಳ್ಳಿಗಳಿಗೆ ಇಂದಿನಿಂದ ಕೆಎಸ್‌ಆರ್‌ಟಿಸಿ ಬಸ್‌ಗಳ ಪ್ರಾರಂಭ ಮಾಡಿದ್ದೇನೆ. ಇದರಿಂದ ಆ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬ್ರೋಕರ್‌ಗಳ ಮತ್ತು ಮದ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು ಶೀಘ್ರದಲ್ಲೇ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಧಿಕಾರಿಗಳು ಮತ್ತು ಸಾರ್ವಜನಿಕರು ಶಿಸ್ತು ಬಹಳ ಮುಖ್ಯವಾಗಿ ಕಲಿಯಬೇಕಿದೆ. ಕಚೇರಿಗಳಿಗೆ ಮತ್ತು ಶಾಸಕರ ಬಳಿ ತಮ್ಮ ಕೆಲಸವಾದ ಮೇಲೆ ಸಾರ್ವಜನಿಕರು ಮತ್ತೆ ಅನಾವಶ್ಯಕವಾಗಿ ಬರಬಾರದು. ಇದನ್ನು ಅರಿತು ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂದರು.
ಲಂಚ ಪತ್ತೆಗೆ ಸ್ಟ್ರಿಂಗ್‌ಆಪರೇಷನ್: ನಗರ ಸಭೆಯಲ್ಲಿ ಇ-ಖಾತಾಗಳಿಗೆ 40ರಿಂದ 50 ಸಾವಿರ ಲಂಚ ನೀಡ ಬೇಕಾಗಿದೆ ಎಂಬ ಸಾರ್ವಜನಿಕರ ಆರೋಪಕ್ಕೆ ಉತ್ತರಿಸಿದ ಶಾಸಕ ಪ್ರದೀಪ್ ಈಶ್ವರ್, ಈ ವಿಷಯದಲ್ಲಿ ಪುರಾವೆಗಳಿಲ್ಲ, ಸಾಕ್ಷಿ ಸಂಗ್ರಹಕ್ಕಾಗಿ ನನ್ನ ಕಡೆಯವರಿಂದ ಸ್ಟ್ರಿಂಗ್ ಆಪರೇಷನ್ ಮಾಡಿಸಿದ್ದೇನೆ ಅದನ್ನು ಪರಿಶೀಲನೆ ಮಾಡಿದ ನಂತರ ಕ್ರಮ ಕೈಗೊಳ್ಳುತ್ತೇನೆ. ಇ-ಖಾತೆ ಸಕ್ರಮ ವಾಗಿದ್ದರೆ ಏಕೆ ಲಂಚ ನೀಡಬೇಕು? ಈಗ ಆಗಿರುವ ಇ ಖಾತೆಗಳನ್ನು ತಾವೇ ಖುದ್ದು ಖಾತೆದಾರರ ಮನೆ ಬಾಗಿಲಿಗೆ ತೆರಳಿ ನೀಡುತ್ತೇನೆ. ಆಗ ಯಾರು ಯಾರಿಗೂ ಲಂಚ ನೀಡ ಬೇಕಾಗುವುದಿಲ್ಲ ಎಂದರು.
ಎಸ್ಸೆಸ್ಸೆಲ್ಸಿ ಮಕ್ಕಳಿಗೆ ತಲಾ 1 ಸಾವಿರ ರು. ಸಹಾಯಧನ: ಶಾಸಕ ಪ್ರದೀಪ್ ಈಶ್ವರ್ ಭರವಸೆ
ಮತ್ತೇ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮ: ಇನ್ನು ಮುಂದೆ ತಾವು ಮತ್ತೆ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮ ಪ್ರಾರಂಭಿಸುತ್ತಿದ್ದು, ಪ್ರತಿನಿತ್ಯ ಬೆಳಗ್ಗೆ 6 ರಿಂದ 9 ಗಂಟೆಯವರೆಗೆ ವಾರ್ಡ್ ಅಥವಾ ಹಳ್ಳಿಗಳಲ್ಲಿ ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆಗಳಿಗೆ ಸ್ಥಳದಲ್ಲೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. 9 ರಿಂದ 10 ಗಂಟೆಯವರೆಗೂ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರಿಗೆ ಲಭ್ಯನಾಗಿರುತ್ತೇನೆ. ನಂತರ ಕ್ಷೇತ್ರದ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೇನೆ. ಸಂಜೆ 5 ಗಂಟೆಯ ನಂತರ ಮತ್ತೆ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮ ನಿಮಿತ್ತ ಹಳ್ಳಿಗಳಿಗೆ ತೆರಳಿ ಸಾರ್ವಜನಿಕರ ಅಹವಾಲು ಸ್ವೀಕರಿಸುವುದಾಗಿ ತಿಳಿಸಿದರು. ವಿಧಾನಸಭೆ ಕಲಾಪ ಮತ್ತು ಕ್ಷೇತ್ರದ ಕೆಲಸಗಳ ನಿಮಿತ್ತ ಬೆಂಗಳೂರು ತೆರಳಿದರೆ ಈ ಕಾರ್ಯಕ್ರಮಗಳಲ್ಲಿ ಬದಲಾವಣೆ ಯಾಗುತ್ತದೆ ಅದಕ್ಕಾಗಿ ಕ್ಷೇತ್ರದ ಜನತೆಯಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದರು.