ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಿಯೋನಿಕ್ಸ್‌ ಸಂಸ್ಥೆಯಲ್ಲಿ ಸುಮಾರು 500 ಕೋಟಿ ರು.ಗಳಷ್ಟು ಅವ್ಯವಹಾರ ನಡೆದಿದೆ. ಆ ಕುರಿತ ದಾಖಲೆಗಳನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ. 

ಬೆಂಗಳೂರು (ನ.10): ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಿಯೋನಿಕ್ಸ್‌ ಸಂಸ್ಥೆಯಲ್ಲಿ ಸುಮಾರು 500 ಕೋಟಿ ರು.ಗಳಷ್ಟು ಅವ್ಯವಹಾರ ನಡೆದಿದೆ. ಆ ಕುರಿತ ದಾಖಲೆಗಳನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ. ಅವರ ವ್ಯಾಪಾರ ಬಂದ್‌ ಆಗಿರುವುದರಿಂದ ಈಗ ನನ್ನ ಮೇಲೆ ಮುಗಿಬೀಳುತ್ತಿದ್ದಾರೆ ಎಂದೂ ಅವರು ಆಪಾದಿಸಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎಜಿ ವರದಿಯಂತೆ ಕೆಲಸ ಮಾಡುತ್ತಿದ್ದೇವೆ. ಅವ್ಯವಹಾರದ ಕುರಿತ ಪರಿಶೀಲನೆ ಮಾಡದೆ ಕೆಲವು ಬಿಲ್‌ಗಳನ್ನು ಕ್ಲಿಯರ್‌ ಮಾಡಬಾರದು ಎಂಬ ಆದೇಶ ಇದೆ. 

ಅದರ ಪ್ರಕಾರ ನಡೆದುಕೊಳ್ಳಲಾಗಿದೆ ಎಂದು ಹೇಳಿದರು ಬಿಜೆಪಿಯವರದ್ದು ಸುಳ್ಳಿ ಕಾರ್ಖಾನೆ ಇದೆ. ಕಿಯೋನಿಕ್ಸ್‌ ಸಂಸ್ಥೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮ ಆಗಿದೆ ಎಂದು ಆರೋಪಿಸುತ್ತಿದ್ದಾರೆ. ಎಷ್ಟು ಬಾಕಿ ಇದೆ ಎಂಬುದು ಅವರಿಗೆ ಗೊತ್ತಿದೆಯೇ? ಕೇವಲ 16 ಕೋಟಿ ರು. ಮಾತ್ರ ಬಾಕಿ ಇದೆ. ಅದನ್ನು ಥರ್ಡ್‌ ಪಾರ್ಟಿ ಪರಿಶೀಲನೆಗಾಗಿ ಬಾಕಿ ಉಳಿಸಲಾಗಿದೆ. ಆರ್ಥಿಕ ಇಲಾಖೆಯ ಸ್ಪಷ್ಟ ಆದೇಶ ಇರುವುದರಿಂದ ಬಿಲ್‌ ಪಾವತಿಸದಂತೆ ಬಾಕಿ ಇರಿಸಲು ಸೂಚಿಸಲಾಗಿದೆ. ಜನರ ತೆರಿಗೆ ದುಡ್ಡಿಗೆ ಬೆಲೆ ಇಲ್ಲವೇ? ಮೂರು ವರ್ಷದಿಂದ ವ್ಯಾಪಾರ ಮಾಡುತ್ತಿದ್ದರು. ಅದು ಬಂದ್‌ ಮಾಡುತ್ತಿರುವ ಕಾರಣ ಅವರಿಗೆ ಕಷ್ಟವಾಗುತ್ತಿದೆ. ಕಟ್ಟುನಿಟ್ಟಾಗಿ ತನಿಖೆ ನಡೆಸಿ, ಕಾನೂನು ಪಾಲನೆ ಮಾಡುತ್ತಿರುವುದು ಬಿಜೆಪಿಗರಿಗೆ ತೊಂದರೆಯಾಗುತ್ತಿದೆ ಎಂದು ಹರಿಹಾಯ್ದರು. 

ತಾಳ ತಪ್ಪಿದ ರಾಜ್ಯ ಸರ್ಕಾರಕ್ಕೆ ಭವಿಷ್ಯ ಇಲ್ಲ: ಸಿ.ಟಿ.ರವಿ

ಬಿಜೆಪಿಯದ್ದು ಕೇವಲ ಶೇ.40 ಕಮೀಷನ್‌ ಸರ್ಕಾರವಾಗಿರಲಿಲ್ಲ. ಅದಕ್ಕಿಂತ ಹೆಚ್ಚು ಇತ್ತು. ಕಿಯೋನಿಕ್ಸ್‌ನಲ್ಲಿ ಶೇ.38ರಿಂದ ಶೇ.1577ರಷ್ಟು ಹೆಚ್ಚುವರಿ ಬಿಲ್‌ ಮಾಡಿ, ಅಕ್ರಮ ಎಸಗಲಾಗಿದೆ. ಎಲ್ಲಾ ಬಿಲ್‌ಗಳನ್ನು ಥರ್ಡ್‌ಪಾರ್ಟಿ ಪರಿಶೀಲನೆ ಇಲ್ಲದೇ ಪಾವತಿ ಮಾಡಲಾಗಿದೆ. ನಮ್ಮದು ಆಳುವ ಸರ್ಕಾರ ಮಾತ್ರವಲ್ಲ, ಆಲಿಸುವ ಸರ್ಕಾರವೂ ಆಗಿದೆ. ಲೆಕ್ಕ ಪರಿಶೋಧನೆಯಲ್ಲಿ 500 ಕೋಟಿ ರು. ಅವ್ಯವಹಾರ ನಡೆದಿರುವುದು ಗೊತ್ತಾಗಿದೆ. ಎಲ್ಲವನ್ನೂ ಪರಿಶೀಲನೆ ನಡೆಸಿದರೆ ಇನ್ನೆಷ್ಟು ಸಿಗಬಹುದು ಎಂಬುದು ಬಿಜೆಪಿಯವರ ಆತಂಕವಾಗಿದೆ ಎಂದು ಕಿಡಿಕಾರಿದರು. ಅಕ್ರಮದ ಬಗ್ಗೆ ಪರಿಶೀಲನೆ ಮಾಡಿಸುತ್ತೇವೆ. ಟೆಂಡರ್‌ ಹೂಡಿಕೆ ಸಮಿತಿ ಮತ್ತು ಪರಿಶೀಲನಾ ಸಮಿತಿ ರಚಿಸಲಾಗಿದೆ. 

ಬರ ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಸಜ್ಜು: ಸಚಿವ ಪರಮೇಶ್ವರ್‌

ಪ್ರತಿಯೊಂದನ್ನು ಕಾನೂನು ಪ್ರಕಾರ ಮಾಡಲಾಗುತ್ತಿದೆ. ಅದೆಲ್ಲವನ್ನು ನ್ಯಾ.ನಾಗಮೋಹನ್‌ದಾಸ್‌ ನೇತೃತ್ವದ ಸಮಿತಿಗೆ ನೀಡುತ್ತೇವೆ. ಅವರ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ತನಿಖೆಯಲ್ಲಿ ಯಾರ ತಪ್ಪಿದ್ದರೂ ಕ್ರಮ ಜರುಗಿಸಲಾಗುವುದು ಎಂದು ಖರ್ಗೆ ಹೇಳಿದರು. ಬಿಜೆಪಿಗರು ಪರಿಕರಗಳ ಖರೀದಿಯಲ್ಲಿ ಅಕ್ರಮ ಎಸಗಿದ್ದಾರೆ. ಮಾರುಕಟ್ಟೆ ದರಕ್ಕಿಂತ ಹೆಚ್ಚು ಕೊಟ್ಟು ಖರೀದಿಸಿದ್ದಾರೆ. ಒಂದು ಲಕ್ಷ ರು. ಇರುವುದಕ್ಕೆ ಐದು ಲಕ್ಷ ನೀಡಿ ಖರೀದಿಸಿದ್ದಾರೆ. 30 ಸಾವಿರ ರು.ನ ಕಂಪ್ಯೂಟರ್‌ ಅನ್ನು 80 ಸಾವಿರ ರು. ನೀಡಿ ಖರೀದಿಸಿದ್ದಾರೆ. ಸಿಸಿಟಿವಿ 12 ಸಾವಿರ ರು. ಇದ್ದರೆ 60 ಸಾವಿರ ರು. ನೀಡಿದ್ದಾರೆ. ಹೀಗೆ ಹಲವು ಖರೀದಿಯಲ್ಲಿ ಹೆಚ್ಚಿನ ದರ ನೀಡಿ ಖರೀದಿಸಲಾಗಿದೆ. ಇನ್ನು, ಮಕ್ಕಳಿಗೆ ಡೆಸ್ಕ್‌ಟಾಪ್‌ ಕೊಡುತ್ತೇವೆ ಎಂದಿದ್ದರು. ಅದು ಶಾಲೆಗೆ ತಲುಪಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಿಲ್ಲ. ಸುಮ್ಮನೇ ಹಣ ಬಿಡುಗಡೆ ಮಾಡಲಾಗಿದೆ. ಎಲ್ಲಿಯೂ ಥರ್ಡ್‌ಪಾರ್ಟಿ ಪರಿಶೀಲನೆ ಇಲ್ಲದೆ ನೀಡಲಾಗಿದೆ ಎಂದು ಆರೋಪಿಸಿದರು.