Asianet Suvarna News Asianet Suvarna News

ಬರ ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಸಜ್ಜು: ಸಚಿವ ಪರಮೇಶ್ವರ್‌

ರಾಜ್ಯದಲ್ಲಿ ಈ ಸಲ ಮಳೆ ಸಂಪೂರ್ಣ ಕೈ ಕೊಟ್ಟ ಹಿನ್ನೆಲೆ ಶೇ.75ರಷ್ಟು ಬೆಳೆ ನೆಲ ಕಚ್ಚಿದ ಪರಿಣಾಮ 223 ತಾಲೂಕು ಬರ ಪೀಡಿತ ಪ್ರದೇಶಗಳೆಂದು ಘೋಷಿಸಿದ್ದು, ಬರ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದರು. 

State govt gearing up to face drought situation Says Minister Dr G Parameshwar gvd
Author
First Published Nov 10, 2023, 12:30 AM IST

ಮಧುಗಿರಿ (ನ.10): ರಾಜ್ಯದಲ್ಲಿ ಈ ಸಲ ಮಳೆ ಸಂಪೂರ್ಣ ಕೈ ಕೊಟ್ಟ ಹಿನ್ನೆಲೆ ಶೇ.75ರಷ್ಟು ಬೆಳೆ ನೆಲ ಕಚ್ಚಿದ ಪರಿಣಾಮ 223 ತಾಲೂಕು ಬರ ಪೀಡಿತ ಪ್ರದೇಶಗಳೆಂದು ಘೋಷಿಸಿದ್ದು, ಬರ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದರು. ಬರ ಪರಿಸ್ಥಿತಿ ಹಾಗೂ ಕಂದಾಯ ವಿಷೆಯಗಳ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಮಳೆ ಬಾರದ ಕಾರಣ ರಾಜ್ಯದಲ್ಲಿ ಬರಗಾಲ ಎದುರಾಗಿದೆ. ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಎದುರಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ. ಜಿಲ್ಲೆಯಲ್ಲಿ ಸಮರ್ಪಕ ಕುಡಿವ ನೀರು ಸರಬರಾಜಿಗೆ ಯಾವುದೇ ಸಮಸ್ಯೆಯಿಲ್ಲ, ರಾಜ್ಯದ 223 ತಾಲೂಕು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಇಡೀ ರಾಜ್ಯ ಬರ ಪೀಡಿತಕ್ಕೆ ಸಿಲುಕಿದೆ. ಇದರಿಂದ, ಒಟ್ಟು 37 ಸಾವಿರ ಕೋಟಿ ರು. ನಷ್ಟವಾಗಿದ್ದು, ಕೇಂದ್ರ ಸರ್ಕಾರದಿಂದ 17ಸಾವಿರ ಕೋಟಿ ರು. ಪರಿಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆದರೆ, ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕೇಂದ್ರದಿಂದ ಒಂದು ನೈಯಾಪೈಸೆ ಬಂದಿಲ್ಲ ಎಂದು ಪರಮೇಶ್ವರ್‌ ದೂರಿದರು.

ಎಚ್‌ಡಿಕೆ ಯಾವತ್ತು ಸತ್ಯ ಹೇಳಿದ್ದಾರೆ, ಬರಿ ಸುಳ್ಳೆ: ಸಿಎಂ ಸಿದ್ದರಾಮಯ್ಯ ಲೇವಡಿ

ಬರ ನಿರ್ವಹಣೆಗೆ ಸರ್ಕಾರ ಅಗತ್ಯ ಮುನ್ನಚ್ಚರಿಕೆ ಕ್ರಮ ಕೈಗೊಂಡಿದ್ದು, ಬರ ಸ್ಥಿತಿಯ ನಿರ್ವಹಣೆಗೆ ಎಲ್ಲ ಜಿಲ್ಲೆಗಳಿಗೂ ರಾಜ್ಯ ಸರ್ಕಾರ 15 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಜಿಲ್ಲೆಗೆ 15 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಪಿಡಿ ಖಾತೆಯಲ್ಲಿ ಇರುವ 19 ಕೋಟಿ ರು. ಹಣವಿದ್ದು ಇದನ್ನು ಬರ ನಿರ್ವಹಣೆಗಾಗಿ ಬಳಸಿಕೊಳ್ಳಲಾಗುವುದು. ಹಣದ ಕೊರತೆಯಿಲ್ಲ ಎಂದರು. ಬರ ಪರಿಸ್ಥಿತಿ ಹಿನ್ನೆಲೆ ಮುಂದಿನ ಬೇಸಿಗೆಯಲ್ಲಿ ಸಾವರ್ಜನಿಕರಿಗೆ ಹಾಗೂ ದನಕರುಗಳಿಗೆ ತೊಂದರೆ ಆಗದಂತೆ ಕುಡಿವ ನೀರು ಸೇರಿ ಮೂಲ ಸೌಲಭ್ಯಗಳಿಗೆ ಕೊರತೆಯಾಗದಂತೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಜಿಲ್ಲೆಯಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, 2023-24ನೇ ಸಾಲಿಗೆ 500 ಕೋಟಿ ರು. ವೆಚ್ಚದಲ್ಲಿ ನರೇಗಾ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತಿ ಗ್ರಾಪಂ ವ್ಯಾಪ್ತಿಯ 300 ರಿಂದ 500 ಜನ ಹಾಗೂ ಪ್ರತಿ ರೈತರಿಗೆ 30 ರಿಂದ 50 ಸಾವಿರ ವರೆಗೆ ಕಾಮಗಾರಿಯಿಂತೆ ಜಿಲ್ಲೆಯ 1ಲಕ್ಷ ರೈತರನ್ನು ಈ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಅಂಗನವಾಡಿ ಕಟ್ಟಡ, ಅಡುಗೆಕೋಣೆ, ಶಾಲೆ, ಆಸ್ಪತ್ರೆ ಇತರೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ವಿವಿಧ ಹಂತಗಳಲ್ಲಿ ಮೇವು ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ರಾಜ್ಯದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಅಧ್ಯಯನ ತಂಡ ಕೊಟ್ಟಿರುವ ವರದಿ ಆಧಾರದ ಮೇಲೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಲಿ. ಟೀಕೆ ಟಿಪ್ಪಣಿ ಸರಿಯಲ್ಲ, ವಿರೋಧ ಪಕ್ಷಗಳು ಅರ್ಥಮಾಡಿಕೊಳ್ಳಲಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು. ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಮಾತನಾಡಿ, ಸಚಿವ ಡಾ.ಜಿ.ಪರಮೇಶ್ವರ್‌ ಬರದ ಹಿನ್ನೆಲೆಯ ಜನರ ಸಮಸ್ಯೆ ನಿವಾರಣೆಗೆ ಮಾರ್ಗೋಪಾಯ ಕಂಡು ಕೊಳ್ಳಲು ಎಲ್ಲ ತಾಲೂಕುಗಳಿಗೂ ಬೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮವಹಿಸುತ್ತಿದ್ದಾರೆ ಎಂದರು.

ಬರದಿಂದ ರೈತರಿಗೆ ಸಂಕಷ್ಟ, ರಾಜ್ಯ ಸರ್ಕಾರ ಕಚ್ಚಾಟ: ಮಾಜಿ ಸಿಎಂ ಸದಾನಂದಗೌಡ ತರಾಟೆ!

ಜನ, ಜಾನುವಾರುಗಳಿಗೆ ಕುಡಿವ ನೀರಿಗೆ ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ. ರೈತರು ಮೇವು ಬೆಳೆಯಲು ಬೀಜ ವಿತರಣೆ ಕಾರ್ಯಕ್ಕೆ ಮುಂದಾಗಿದ್ದು, ಒಂದು ವಾರದಲ್ಲಿ ಮೇವಿನ ಬೀಜ ವಿತರಿಸಲಾಗುವುದು. 12ವಾರಗಳಲ್ಲಿ ಮೇವು ಬರುತ್ತದೆ. ಯಾರೂ ಆತಂಕಪಡುವ ಅಗತ್ಯವಿಲ್ಲ, ಜರು ಗುಳೇ ಹೋಗುವುದು ಬೇಡ, ಇಲ್ಲೇ ದುಡಿವ ಕೈಗಳಿಗೆ ಕೆಲಸ ಕೊಡುಲು ಸರ್ಕಾರ ಸಿದ್ದವಿದೆ ಎಂದರು.

Follow Us:
Download App:
  • android
  • ios