ಬಾದಾಮಿ ಜೆಡಿಎಸ್‌ ಅಭ್ಯರ್ಥಿ ಹನುಮಂತ ಮಾವಿನಮರದ ಕಳೆದ 10 ವರ್ಷಗಳಿಂದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾನೆ. ಈ ಬಾರಿ ಅವನಿಗೆ ಅವಕಾಶ ನೀಡಿ. ಬರುವ ದಿನಗಳಲ್ಲಿ ಬಾದಾಮಿ ಮತ್ತು ಇಲ್ಲಿರುವ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿ, ಈ ಭಾಗದ ಯುವಕರಿಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಕ್ಷೇತ್ರವನ್ನು ಬದಲಾಯಿಸೋಣ ಅಂತ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. 

ಬಾದಾಮಿ(ಮೇ.02): ರಾಜ್ಯದಲ್ಲಿ ಬಿಜೆಪಿ ಯಾವುದೇ ಕಾರಣಕ್ಕೂ ಲಿಂಗಾಯತ ಸಮುದಾಯಕ್ಕೆ ಮುಖ್ಯಮಂತ್ರಿ ಪಟ್ಟಕಟ್ಟುವುದಿಲ್ಲ ಎಂದು ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚಿಕ್ಕಮುಚ್ಚಳಗುಡ್ಡ ಹೆಲಿಪ್ಯಾಡ್‌ನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿಯೇ ಮುಂದಿನ ಸಿಎಂ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಂದೇಶ ರವಾನಿಸಿರುವ ಬೆನ್ನಲ್ಲೇ, ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಇದು ಶುದ್ಧ ಸುಳ್ಳು. ಯಾವುದೇ ಕಾರಣಕ್ಕೂ ಬಿಜೆಪಿ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡೋದಿಲ್ಲ ಎಂದು ಹೇಳಿದರು.

ರಾಜ್ಯ ಬಿಜೆಪಿಯಲ್ಲಿ ಬ್ರಾಹ್ಮಣ ಸಿಎಂ ವಿಚಾರದ ಬಗ್ಗೆ ಪ್ರತಿಕ್ರಿಯಿಸುತ್ತ ರಾಜ್ಯದಲ್ಲಿ ಸದ್ಯ ನಡೆಯುತ್ತಿರುವುದೂ ಬ್ರಾಹ್ಮಣ ಸಿಎಂ ಆಳ್ವಿಕೆಯೇ ಎಂದು ಪರೋಕ್ಷವಾಗಿ ಟಾಂಗ್‌ ಕೊಟ್ಟರು. ಬಿಜೆಪಿ, ಕರ್ನಾಟಕದಲ್ಲಿ ಬ್ರಾಹ್ಮಣ ಸಮುದಾಯದವರಿಗೆ ಸಿಎಂ ಪಟ್ಟಕಟ್ಟುತ್ತದೆ ಎಂಬುದನ್ನು ನಾನು ಈ ಮೊದಲೇ ಊಹೆ ಮಾಡಿದ್ದೆ. ಆ ಪಕ್ಷದ ಆಂತರ್ಯದಲ್ಲಿ ಅಂತೆಯೇ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಇಲ್ಲಿ ಬಿಜೆಪಿ ಲಿಂಗಾಯತ ಸಮುದಾಯಕ್ಕೆ ಸೇರಿದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಪುನರುಚ್ಚರಿಸಿದರು.

ವರುಣದಲ್ಲಿ ಸಿದ್ದರಾಮಯ್ಯ ಸೋಲಿಸುವ ಜವಾಬ್ದಾರಿ ನನ್ನದು: ಬಿ.ಎಸ್‌.ಯಡಿಯೂರಪ್ಪ

ಜೆಡಿಎಸ್‌ ಕನ್ನಡಿಗರ ಟೀಂ:

ಪ್ರಧಾನಿ ಮೋದಿ ಅವರು ಜೆಡಿಎಸ್‌ ಬಿ ಟೀಂ ಎನ್ನುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೋದಿ ಅವರು ಬಿ ಟೀಂ ಅಂತಾರೆ. ಸಿದ್ದರಾಮಯ್ಯ ಅವರು ಬಿ ಟೀಂ ಅಂತಾರೆ. ನಾನು ಯಾವ ಟೀಂ ಅಂತಾ ಹೇಳಲಿ? ಪ್ರತಿನಿತ್ಯವೂ ಹೇಳುತ್ತಲೇ ಇದ್ದೇನೆ. ಜೆಡಿಎಸ್‌ ನಾಡಿನ ಜನತೆಯ ಟೀಂ ಅಂತಾ. ನಾವು ಕನ್ನಡಿಗರ ಟೀಂ ಎಂದು ಹೇಳಿದರು.

ವರುಣಾದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲೆಂದು ನಾವು ಲು ಪ್ಲ್ಯಾನ್‌ ಹಾಕಿಕೊಂಡಿಲ್ಲ. ಆದರೆ, ನಮ್ಮ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸುತ್ತಿದ್ದೇವೆ. ಇನ್ನೊಬ್ಬರನ್ನು ಸೋಲಿಸಬೇಕು ಎನ್ನುವುದಕ್ಕಿಂತ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲೆಂದು ಚುನಾವಣೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಒಂದು ವಾರ ಮಾತ್ರ ಮೋದಿ ಹವಾ:

ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವಾರ ಮಾತ್ರ ಚುನಾವಣಾ ಪ್ರವಾಸ, ಪ್ರಚಾರದಲ್ಲಿ ಇರುತ್ತಾರೆ. ಮೇ 9ಕ್ಕೆ ಟಾಟಾ ಹೇಳಿ ಹೋಗುತ್ತಾರೆ. ಆಮೇಲೆ ಕರ್ನಾಟಕದಲ್ಲಿ ಏನು ಆಯ್ತು? ಅಂತಾ ಕೇಳಲಿಕ್ಕೆ ಬರ್ತಾರಾ? ಮತ್ತೆ ಈ ಕಡೆಗೆ ಬರೋದು ಪಾರ್ಲಿಮೆಂಟ್‌ ಚುನಾವಣೆಗೆ. ಅಲ್ಲಿಯವರೆಗೂ ಕರ್ನಾಟಕಕ್ಕೆ ಮೋದಿ ಬರಲ್ಲ ಎಂದು ಎಚ್‌ಡಿಕೆ ಹೇಳಿದರು.

ಲೂಟಿ ಹೊಡೆಯೋಕೆ ಡಬಲ್‌ ಇಂಜಿನ್‌ ಸರ್ಕಾರ ಇರೋದು. ಡಬಲ್‌ ಇಂಜಿನ್‌ ಸರ್ಕಾರ ಇದ್ದರೆ ಮಾತ್ರ ಬಿಜೆಪಿಗೆ ಲೂಟಿ ಹೊಡೆಯೋಕೆ ಸಾಧ್ಯ. ಹಾಗಾಗಿಯೇ ಬಿಜೆಪಿಯವರು ಅಭಿವೃದ್ಧಿ ಅಂದ್ರೆ ಡಬಲ್‌ ಇಂಜಿನ್‌ ಸರ್ಕಾರದಿಂದ ಎಂಬ ವರಸೆ ತೆಗೆಯುತ್ತಾರೆ ಅಷ್ಟೇ. ರಾಜ್ಯವನ್ನು ಲೂಟಿ ಹೊಡೆದಿರುವುದೇ ಬಿಜೆಪಿಯ ಸಾಧನೆ ಎಂದು ಹರಿಹಾಯ್ದರು. ಬಾದಾಮಿ ಅಂಬೇಡ್ಕರ್‌ ವೃತ್ತದಿಂದ ರೋಡ್‌ ಶೋ ನಡೆಸಿ ಜೆಡಿಎಸ್‌ ಅಭ್ಯರ್ಥಿ ಹನುಮಂತ ಮಾವಿನಮರದ ಪರ ಮತಯಾಚಿಸಿದರು.

ಜನರ ಬಳಿ ತನ್ನ ಕಷ್ಟ ಹೇಳಿಕೊಳ್ತಿರೋ ಏಕೈಕ ಪ್ರಧಾನಿ ಮೋದಿ: ಪ್ರಿಯಾಂಕ ಗಾಂಧಿ

ಸರ್ಪ ಡೇಂಜರ್ರೇ!

ಜನರ ರಕ್ಷಣೆಗಾಗಿ ನಾನು ಸರ್ಪವಾಗಲು ಸಿದ್ಧ ಎಂಬ ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ, ಮೋದಿ ಸರ್ಪ ಆಗುವುದಾದರೆ ಸರ್ಪ ಡೇಂಜರ್ರೇ! ಜನರಿಗಾದರೂ ಅಷ್ಟೇ, ಇನ್ನೊಬ್ಬರಿಗಾದರೂ ಅಷ್ಟೇ ಸರ್ಪ ಸರ್ಪಾನೇ. ಅದು ಯಾವತ್ತಿದ್ದರೂ ಡೇಂಜರ್ರೇ ಎಂದು ಮಾಜಿ ಸಿಎಂ ಎಚ್‌ಡಿಕೆ ವ್ಯಾಖ್ಯಾನಿಸಿದರು. ಅದರ ಬಗ್ಗೆ ಹೆಚ್ಚು ಚರ್ಚೆ ಮಾಡಲು ಹೋಗೋದಿಲ್ಲ. ಆದರೆ, ಇವತ್ತಿನ ರಾಜಕಾರಣದಲ್ಲಿ ಸರ್ಪ, ವಿಷ ಕನ್ಯೆ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ವಿಷ ಕನ್ಯೆ, ಸರ್ಪದ ಮಾತಿನಿಂದ ಇವರು ಜನರ ಬದುಕನ್ನು ಸರಿ ಮಾಡಿ ಕೊಡ್ತಾರಾ ಎಂದ ಪ್ರಶ್ನಿಸಿದರು.

ಆಡಳಿತಾರೂಢ ಮತ್ತು ವಿರೋಧ ಪಕ್ಷದವರು ಅದೆಂಥದ್ದೋ ಪರಿವಾರ ಅಂತೆ, ಎಟಿಎಂ ಅಂತೆ, ಯಾವ ಎಟಿಎಮೋ, ಯಾವ ಡಬಲ್‌ ಇಂಜಿನ್ನೋ? ಬಿಜೆಪಿಯವರು ಎಲ್ಲವನ್ನೂ ಲೂಟಿ ಹೊಡೆದುಕೊಂಡು ಕೂತಿದ್ದಾರೆ. ಮೋದಿಯವಂಥವರು ಬಂದು ಕರಪ್ಷನ್‌ ಬಗ್ಗೆ ಚರ್ಚೆ ಮಾಡ್ತಾರೆ. ಮೋದಿ ಭಾಷಣ ಎಲ್ಲ ಸಂತೆ ಭಾಷಣ. ಯಾವುದೂ ಇಂಪ್ಲಿಮೆಂಟ್‌ ಆಗೋದಿಲ್ಲ. ಬರೀ ಬುರುಡೆ ಭಾಷಣ ಮಾಡಿ ಹೋಗ್ತಾರೆ ಎಂದು ಎಚ್‌ಡಿಕೆ ಟೀಕಿಸಿದರು.