ಜನರ ಬಳಿ ತನ್ನ ಕಷ್ಟ ಹೇಳಿಕೊಳ್ತಿರೋ ಏಕೈಕ ಪ್ರಧಾನಿ ಮೋದಿ: ಪ್ರಿಯಾಂಕ ಗಾಂಧಿ
ದೇಶದಲ್ಲಿ ಜನರ ಬಳಿ ಕಷ್ಟವನ್ನು ಕೇಳದೇ ತನ್ನ ಕಷ್ಟವನ್ನು ಜನರ ಮುಂದೆ ಹೇಳಿಕೊಳ್ಳುವ ಏಕೈಕ ಪ್ರಧಾನಮಂತ್ರಿ ನರೇಂದ್ರ ಮೋದಿ ಎಂದು ಪ್ರಿಯಾಂಕ ಗಾಂಧಿ ಟೀಕೆ ಮಾಡಿದ್ದಾರೆ.
ಬಾಗಲಕೋಟೆ (ಏ.30): ದೇಶದಲ್ಲಿ ಎಲ್ಲ ಪ್ರಧಾನಮಂತ್ರಿಗಳು ಜನರ ಕಷ್ಟವನ್ನು ಕೇಳುವುದನ್ನು ಮಾತ್ರ ನಾನು ನೋಡಿದ್ದೇನೆ. ಆದರೆ, ತಮಗೆ ಯಾರಾರು ಬೈಯುತ್ತಾರೆ ಎಂಬುದನ್ನು ಪಟ್ಟಿ ಮಾಡಿಕೊಂಡು ಜನರ ಮುಂದೆ ಕಷ್ಟವನ್ನು ಹೇಳಿಕೊಳ್ಳುವ ಪ್ರಧಾನಿಯನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ ಎಂದು ನರೇಂದ್ರ ಮೋದಿ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಟಾಂಗ್ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಜನರ ಕಷ್ಟ ಕೇಳೋದು ಬಿಟ್ಟು, ತಮ್ಮ ಕಷ್ಟ ಹೇಳಿಕೊಳ್ಳುವ ಪ್ರಧಾನಮಂತ್ರಿಯನ್ನು ಇದೇ ಮೊದಲ ಬಾರಿಗೆ ನಾನು ನೋಡುತ್ತಿದ್ದೇನೆ. ನರೇಂದ್ರ ಮೋದಿ ತಮ್ಮನ್ನು ಯಾರು ಬೈಯುತ್ತಾರೆ, ಎಂಬುದನ್ನು ಅಂತ ಲಿಸ್ಟ್ ಮಾಡ್ತಾರೆ. ಇವರಿಗೆ ಬೈದದ್ದು ನೋಡಿದ್ರೆ ಏನು ಅಲ್ಲ. ಆದರೆ, ಗಾಂಧಿ ಕುಟುಂಬಕ್ಕೆ ಇವರೆಲ್ಲಾ ಬೈದದ್ದು ನೋಡಿದರೆ ಅದೊಂದು ಪುಸ್ತಕವಾಗುತ್ತದೆ. ಧೈರ್ಯ ಮಾಡಿ ಮೋದಿಯವರೇ... ಗಾಲಿ ಅಷ್ಟೇ ಅಲ್ಲ ಗೋಲಿ ಸಹ ಪಡೆಯಲು ಸಹ ನಾವು ಸಿದ್ಧವಾಗಿದ್ದೇವೆ ಎಂದು ಹೇಳಿದರು.
ಮೋದಿಯವರ ಜತೆಗೆ ಈಗ ಬರೀ ಲಂಚಕ್ಕೊಬ್ಬ ಮಂಚಕ್ಕೊಬ್ಬ ಇರೋರು ಮಾತ್ರ ಇರೋದು
ಈ ದೇಶದ ಜನರ ಸತ್ಯದ ಪರವಾಗಿ ಇರುತ್ತೇನೆ. ಮೋದಿಯವರೇ ಅಂಜಬೇಡಿ, ಇದು ಸಾರ್ವಜನಿಕ ಜೀವನವಾಗಿದೆ. ನೀವು ಕಲಿಯಬೇಕಾದರೆ ಜನರಿಂದ ಕಲಿಯಿರಿ. ಬಿಜೆಪಿ ಸರ್ಕಾರ ರಾಜ್ಯವನ್ನ ಲೂಟಿ ಮಾಡಿದ ಸರ್ಕಾರವಾಗಿದೆ. ಪ್ರಧಾನಮಂತ್ರಿ, ಗೃಹ ಮಂತ್ರಿ, ರಕ್ಷಣಾ ಮಂತ್ರಿ, ಬೇರೆ ರಾಜ್ಯದ ಸಿಎಂಗಳು ಬಂದಿದ್ದಾರೆ. ಅವರಿಗೆ ನಿಮ್ಮ ಸಮಸ್ಯೆ ಬಗ್ಗೆ ಮಾತನಾಡೋ ನೈತಿಕತೆ ಇಲ್ಲ. ಪ್ರಚಾರಕ್ಕೆ ಬಂದರೆ ಅವರಿಗೆ ಹೇಳಲು ವಿಷಯ ಇಲ್ಲದಂತಾಗಿದೆ. ಈ ಚುನಾವಣೆಯಲ್ಲಿ ನಿಮ್ಮ ಸಮಸ್ಯೆ ಬಗೆಹರಿಸುವ ಬಗ್ಗೆ ಮಾತನಾಡೋದಿಲ್ಲ ಎನ್ನುವುದೇ ಆಶ್ಚರ್ಯವಾಗುತ್ತದೆ ಎಂದು ಟಾಂಗ್ ನೀಡಿದರು.
ನಮ್ಮ ಅಜ್ಜಿ, ಅಪ್ಪ ಪ್ರಾಣ ತ್ಯಾಗ ಮಾಡಿದ್ರು: ನಮ್ಮ ಅಜ್ಜಿ ಇಂದಿರಾಗಾಂಧಿ ದೇಶಕ್ಕಾಗಿ ಗುಂಡು ಹೊಡೆಸಿಕೊಂಡರು. ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ಇಲ್ಲಿರೋ ಮಹಿಳೆಯರು ಕಷ್ಟಪಟ್ಟ ದುಡಿದರೂ ಅವರಿಗೆ ಏನು ಆದಾಯ ಕೂಡ ಸಿಗುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಇದ್ದಾಗ ರೈತರ ಸಾಲಮನ್ನಾ ಮಾಡಲಾಗಿತ್ತು. ಸಾಕಷ್ಟು ಯೋಜನೆಗಳನ್ನ ಕಾಂಗ್ರೆಸ್ ನೀಡಿತ್ತು. ಮೂರುವರೆ ವರ್ಷದಲ್ಲಿ ಯುವಕರಿಗೆ ಉದ್ಯೋಗ ಸಿಗಬೇಕಾಗಿತ್ತು. 90 ಲಕ್ಷ ಸಣ್ಣ ಸಣ್ಣ ಉದ್ಯೋಗ ನಷ್ಟವಾಗಿದೆ. ಜನ ಶೇ.40 ಪರ್ಸೆಂಟ್ ಸರ್ಕಾರ ಅಂತ ಕರೆಯುತ್ತಿದ್ದಾರೆ. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಯಾರೊಬ್ಬರೂ ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೀಸಲಾತಿ ಹೆಸರಲ್ಲಿ ಬಿಜೆಪಿ ಮೋಸ: ಶಾಸಕನ ಮಗನ ಬಳಿ (ಮಾಡಾಳ್ ವಿರುಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್) ಕೋಟ್ಯಂತರ ರೂಪಾಯಿ ಹಣ ಸಿಕ್ಕರೂ ಏನು ಮಾಡಲಾಗಲಿಲ್ಲ. ಆತನ ತಂದೆ ಜೈಲಿನಿಂದ ಹೊರಬಂದು ಮೆರವಣಿಗೆ ಮಾಡಿದರು. ಯಾರೂ ಏನು ಮಾಡಲಿಲ್ಲ. ಈ ಬಿಜೆಪಿ ಸರ್ಕಾರ ಜನರಿಗೆ ಮೋಸ ಮಾಡಿ ಬಂದಿದೆ. ಸರ್ಕಾರದಿಂದ ಎಸ್.ಸಿ, ಎಸ್.ಟಿ. ಓಬಿಸಿ ಅವರಿಗೂ ಅನ್ಯಾಯ ಆಗಿದೆ. ಸರ್ಕಾರ ಮೀಸಲಾತಿ ಹೆಚ್ಚಳ ಬಗ್ಗೆ ಮೋಸ ಮಾಡಿದ್ದಾರೆ. ಮೋಸ ಆಗಿರುವ ಬಗ್ಗೆ ಸುಪ್ರಿಂಕೋರ್ಟ್ ಸಹ ಹೇಳಿದೆ. ನಾವು ಜನರ ಮದ್ಯದಲ್ಲಿದ್ದು ಅವರ ಸಮಸ್ಯೆ ಕೇಳಿದ್ದೇವೆ. ಪರಿಹಾರ ಮಾಡಿದ್ದೇವೆ ಎಂದು ಹೇಳಿದರು.
ಹಿಂದೂ ಹುಲಿ ಯತ್ನಾಳ್, ಸೋಲಿಸಲು ಒಂದಾದ ಕೈ-ದಳದ ಮುಸ್ಲಿಂ ಅಭ್ಯರ್ಥಿಗಳು
ಕರ್ನಾಟಕ ವಿಶ್ವವೇ ಮೆಚ್ಚುವ ನಾಡಾಗಿದೆ: ಈ ಮೊದಲು ಶೃಂಗೇರಿಗೆ ಹೋಗಿದ್ದೆ. ಇಂದು ಇಲ್ಲಿಗೆ ಬಂದು ಬಹಳ ಜನರನ್ನ ನೋಡಿದ್ದೇನೆ. ಕರ್ನಾಟಕದ ಜನ ಶ್ರಮಜೀವಿಗಳು. ಈ ಕರ್ನಾಟಕ ಇಡೀ ವಿಶ್ವದಲ್ಲೇ ಮೆಚ್ಚುವ ನಾಡು. ಬಸವಣ್ಣನವರು, ನಾರಾಯಣ ಗುರೂಜಿ ಅಂತವರು ಒಳ್ಳೆಯ ಸಂಸ್ಕೃತಿ ಬೆಳೆಸಿದ್ದಾರೆ. ಮಹಿಳೆಯರು ಸಹ ಪುರುಷರಂತೆ ಮುಂದೆ ಬರಬೇಕೆಂದು ಬಸವಣ್ಣ ಹಿಂದೆಯೇ ಹೇಳಿದ್ದಾರೆ. ಈ ರಾಜ್ಯ ಸರ್ಕಾರ ಕೃಷಿಗರಿಗೆ ಏನಾದ್ರೂ ಮಾಡಿದೆಯಾ. ಸರ್ಕಾರ ಏನು ಮಾಡಿಲ್ಲ, ದೇವರು ನೀಡಿದ್ದಾನೆ, ನೀವು ದುಡಿದಿದ್ದೀರಿ. ಬಿಜೆಪಿ ಸರ್ಕಾರ ಜನರ ಜೊತೆ ನಿಲ್ಲಲಿಲ್ಲ. ಸಿಲಿಂಡರ್ ಬೆಲೆ ಸೇರಿದಂತೆ ಎಲ್ಲ ಬೆಲೆಯೂ ಸಹ ಹೆಚ್ಚಾಗಿದೆ. ಆದ್ರೂ ಮಹಿಳೆಯರು ಧೈರ್ಯದಿಂದ ಜೀವನ ಸಾಗಿಸುತ್ತಿದ್ದೀರಿ. ಯುವಕರೆ ನಿಮಗೆ ಸರ್ಕಾರದಿಂದ ಕೆಲಸ ಸಿಕ್ಕಿದಿಯಾ? ಸರ್ಕಾರದಲ್ಲಿ ಎರಡೂವರೆ ಲಕ್ಷ ಉದ್ಯೋಗ ಖಾಲಿ ಇವೆ...ಸರ್ಕಾರ ಕೆಲಸ ನೀಡಲಿಲ್ಲ, ಎಲ್ಲೆಡೆ ನಿರುದ್ಯೋಗ ಇದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.