ಚನ್ನಗಿರಿ ಠಾಣೆ, ಸಿಬ್ಬಂದಿ ಮೇಲೆ ದಾಳಿ ಕಾಂಗ್ರೆಸ್ ಆಡಳಿತ ಫಲ: ವಿಜಯೇಂದ್ರ ಆರೋಪ
ಕ್ರಿಮಿನಲ್‌ಗಳನ್ನು ಬಂಧಿಸಲು ಹೋದರೆ ಮತೀಯ ಅಲ್ಪಸಂಖ್ಯಾತರ ಹೆಸರಲ್ಲಿ ವಿಧ್ವಂಸಕ ಶಕ್ತಿಗಳು ಗುಂಪು ಕಟ್ಟಿಕೊಂಡು, ಈ ನೆಲದ ಕಾನೂನಿನ ಬಗ್ಗೆ ಕಿಂಚಿತ್ತೂ ಭಯವಿಲ್ಲದೇ ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡಿ, ಬೆಂಕಿ ಹಚ್ಚಲು ಮುಂದಾಗುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆ (ಮೇ.26): ಕ್ರಿಮಿನಲ್‌ಗಳನ್ನು ಬಂಧಿಸಲು ಹೋದರೆ ಮತೀಯ ಅಲ್ಪಸಂಖ್ಯಾತರ ಹೆಸರಲ್ಲಿ ವಿಧ್ವಂಸಕ ಶಕ್ತಿಗಳು ಗುಂಪು ಕಟ್ಟಿಕೊಂಡು, ಈ ನೆಲದ ಕಾನೂನಿನ ಬಗ್ಗೆ ಕಿಂಚಿತ್ತೂ ಭಯವಿಲ್ಲದೇ ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡಿ, ಬೆಂಕಿ ಹಚ್ಚಲು ಮುಂದಾಗುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು. ನಗರದ ವಿಶ್ವಚೇತನ ಶಿಕ್ಷಣ ಸಂಸ್ಥೆ ಮತ್ತು ಶ್ರೀ ಸಿದ್ಧಗಂಗಾ ಕಾಲೇಜಿನಲ್ಲಿ ಶಿಕ್ಷಕರನ್ನು ಭೇಟಿ ಮಾಡಿ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಪರ ಮತಯಾಚಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಆಳ್ವಿಕೆಯಲ್ಲಿ ರಾಜ್ಯದಲ್ಲಿ ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಪೊಲೀಸ್ ಇಲಾಖೆ, ಪೊಲೀಸರ ಭಯವಿಲ್ಲದ ಕಾರಣಕ್ಕೆ ಉಗ್ರರು ರಾಜ್ಯವನ್ನು ಅಡಗುತಾಣವಾಗಿ ಮಾಡಿಕೊಂಡಿದ್ದಾರೆ. ರೌಡಿಗಳು, ಮಾಫಿಯಾಗಳ ಅಟ್ಟಹಾಸ ಮೇರೆ ಮೀರುತ್ತಿದೆ. ಅಕ್ರಮ ರೇವ್ ಪಾರ್ಟಿಗಳು ಎಗ್ಗಿಲ್ಲದೇ ನಡೆಯುತ್ತಿವೆ. ಇದಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣವಾಗಿದೆ. ಮುಸ್ಲಿಂ ಮತಗಳ ಓಲೈಕೆಗಾಗಿ ರಾಜ್ಯದಲ್ಲಿ ಅರಾಜಕತೆಯತ್ತ ಕಾಂಗ್ರೆಸ್ ಸರ್ಕಾರವು ಕೊಂಡೊಯ್ಯುತ್ತಿದೆ ಎಂದು ಆರೋಪಿಸಿದರು. ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಪ್ರಕರಣದ ಬಂಧಿತ ಭಯೋತ್ಪಾದಕ ಶಕ್ತಿಗಳು ಘಟನೆ ಹಿಂದಿರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಕಾಂಗ್ರೆಸ್ ಸರ್ಕಾರದಲ್ಲಿ ಪೊಲೀಸರಿಗೇ ರಕ್ಷಣೆ ಇಲ್ಲ: ಆರಗ ಜ್ಞಾನೇಂದ್ರ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್ ಅಧಿಕಾರಿ, ಸಿಬ್ಬಂದಿ, ಪೊಲೀಸ್ ಠಾಣೆಗಳಿಗೆ ಕಾಂಗ್ರೆಸ್ ಆಳ್ವಿಕೆಯಲ್ಲಿ ರಕ್ಷಣೆ ಇಲ್ಲದಂತಹ ಪರಿಸ್ಥಿತಿ ಉದ್ಭವಿಸಿದೆಯೆಂದರೆ ಪರಿಸ್ಥಿತಿ ಯಾವ ಹಂತ ತಲುಪುತ್ತಿದೆಯೆಂದು ಯಾರಾದರೂ ಅಂದಾಜಿಸಬಹುದು ಎಂದು ಹೇಳಿದರು. ಅಂದು ಡಿಜೆ ಹಳ್ಳಿ, ಮೊನ್ನೆ ಉಡುಪಿ, ಇಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್ ಠಾಣೆಗಳಿಗೆ ನುಗ್ಗಿ ಧ್ವಂಸಗೊಳಿಸಿರುವುದು, ಕಲ್ಲು ತೂರಾಟ ನಡೆಸಿರುವುದೇ ಕಾಂಗ್ರೆಸ್ ಆಡಳಿತಕ್ಕೆ ಸಾಕ್ಷಿ. ಈ ಮಟ್ಟಿಗೆ ದಾಳಿ ನಡೆಸುವಷ್ಟು ಮೂಲಭೂತವಾದಿ ಶಕ್ತಿಗಳು ಸಂಘಟಿತವಾಗಿವೆಯೆಂದರೆ ನಾವು ಯಾವ ರಾಜ್ಯದಲ್ಲಿದ್ದೇವೆ? ಯಾವ ಸಮಾಜದಲ್ಲಿ ನಾವು ಇಂದು ಇದ್ದೇವೆ ಎಂಬ ಆತಂಕ, ಕಳವಳ ಕಾಡುತ್ತದೆ ಎಂದರು.
ಲಾಲೂ ಪ್ರಸಾದ್ ಯಾದವ್ ಬಿಹಾರದಲ್ಲಿ ಆಡಳಿತ ನಡೆಸಿದ್ದಂತಹ ದಿನಗಳು ಕರ್ನಾಟಕದಲ್ಲೂ ತಲೆಯೆತ್ತುವ ಪರಿಸ್ಥಿತಿ ಬಂದೊದಗಿದೆ. ಸರ್ವಜನಾಂಗದ ಶಾಂತಿಯ ತೋಟವೆಂದು ರಾಷ್ಟ್ರಕವಿ ಕುವೆಂದು ಹೇಳಿದ್ದರು. ಕುವೆಂಪು ಕಲ್ಪನೆಯನ್ನೇ ಕೊಲ್ಲಲು ಹೊರಟ ಕಾಂಗ್ರೆಸ್ ಸರ್ಕಾರವು ಕರುನಾಡನ್ನು ಅಭದ್ರತೆಯ, ಅಶಾಂತಿಯ ಕೊಂಪೆಯನ್ನಾಗಿಸಲು ಮುಂದಾಗಿದೆ. ಪೊಲೀಸ್ ಅಧಿಕಾರಿ, ಸಿಬ್ಬಂದಿಯ ನೈತಿಕ ಶಕ್ತಿಯನ್ನೇ ಸಂಪೂರ್ಣವಾಗಿ ಕುಗ್ಗಿಸುವಂತಹ ವ್ಯವಸ್ಥೆಯ ಜಾಲವು ರಾಜ್ಯದಲ್ಲಿ ಈಗ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಪೊಲೀಸ್ ಸಿಬ್ಬಂದಿ, ಪೊಲೀಸ್ ಠಾಣೆಗಳೇ ಕಾಂಗ್ರೆಸ್ ಆಳ್ವಿಕೆಯಲ್ಲಿ ರಕ್ಷಣೆಗೆ ಮೊರೆ ಇಡುವಂತಹ ಸ್ಥಿತಿ ಇದ್ದು, ರಕ್ಷಣೆಗಾಗಿ ಜನರು ಯಾರ ಮೊರೆ ಹೋಗಬೇಕೆಂಬುದೇ ತಿಳಿಯದಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಪೊಲೀಸ್ ಬೇಲಿಯನ್ನೇ ಅಸ್ಥಿರಗೊಳಿಸಲು ಹೊರಟ ಕಾಂಗ್ರೆಸ್ ಸರ್ಕಾರವು ಮೂಲಭೂತವಾದಿ ಅಲ್ಪಸಂಖ್ಯಾತರಿಗಾಗಿಯೇ ತಾವು ಆಡಳಿತ ನಡೆಸುವುದು, ಅಂತಹವರ ಪರ ನಿಲ್ಲುವುದು, ಅಂತಹವರ ಚಟುವಟಿಕೆಗಳಿಗೆ ಮುಕ್ತ ಸ್ವಾತಂತ್ರ್ಯ ಕಲ್ಪಿಸುವುದೇ ತನ್ನ ಧ್ಯೇಯವೆಂದು ಕಾಂಗ್ರೆಸ್ ಘೋಷಿಸಲಿ. ಆಗ ಜನರು ಕಾಂಗ್ರೆಸ್ ಸರ್ಕಾರವನ್ನು ನೆಚ್ಚಿಕೊಳ್ಳದೇ, ಸ್ವಯಂರಕ್ಷಣೆ ಮಾಡಿಕೊಳ್ಳುತ್ತಾರೆ. ಆದರೆ, ರಾಜ್ಯದ ಸದ್ಯದ ಘಟನೆ, ಬೆಳವಣಿಗೆಗಳು ಜನರನ್ನು ದಿನದಿಂದ ದಿನಕ್ಕೆ ಆತಂಕಕ್ಕೆ ನೂಕುತ್ತಿವೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಮೂರು ದಿನಗಳ ಗಜ ಗಣತಿ ಮುಕ್ತಾಯ: ಆನೆಗಳ ಕೌಂಟ್ ಬದಲು ವಾಟರ್ ವಾಲ್ ಕೌಂಟ್!
ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆ, ಘಟನೆಗಳ ಹಿನ್ನೆಲೆ ರಾಜ್ಯಪಾಲರು ತಕ್ಷಣ ಮಧ್ಯ ಪ್ರವೇಶಿಸಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ಸರ್ಕಾರದಿಂದ ವರದಿ ಪಡೆಯಲಿ. ಅಲ್ಲದೇ, ಪೊಲೀಸ್ ಠಾಣೆಗಳಿಗೆ ದಾಳಿ ಮಾಡುತ್ತಿರುವ ಪರಿಸ್ಥಿತಿ ಹಿನ್ನೆಲೆ ರಾಜ್ಯದ ಕಾನೂನು ಸುವ್ಯವಸ್ಥೆ ಸರಿದಾರಿಗೆ ತರಲು ರಾಜ್ಯಪಾಲರು ಮಧ್ಯ ಪ್ರವೇಶಿಸುವಂತೆ ಈ ಮೂಲಕ ಮನವಿ ಮಾಡುತ್ತೇನೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು. ಸಂಸದ, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ, ಮಾಜಿ ಸಚಿವ ಬಿ.ಎ. ಬಸವರಾಜ ಭೈರತಿ, ವಿಪ ಸದಸ್ಯ ನವೀನ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ, ಯಶವಂತ ರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ, ಕೆ.ಪ್ರಸನ್ನಕುಮಾರ, ಪಿ.ಸಿ. ಶ್ರೀನಿವಾಸ ಭಟ್, ಬಿಜೆಪಿ- ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಶಿಕ್ಷಕ ಮತದಾರರು ಇದ್ದರು.