ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ವಿಜಯೇಂದ್ರ ಗ್ರೀನ್ ಸಿಗ್ನಲ್: ಸ್ಥಾನಮಾನದ್ದೇ ಗೊಂದಲ..!
ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಅರುಣ್ ಕುಮಾರ್ ಪುತ್ತಿಲ ನಡುವಿನ ಮಾತುಕತೆ ಬಹುತೇಕ ಯಶಸ್ವಿಯಾಗಿದೆ. ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಮುಕ್ತ ಸ್ವಾಗತ ಎಂದು ಮೈಸೂರಿನಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿದ ವಿಜಯೇಂದ್ರ
ಮಂಗಳೂರು(ಫೆ.23): ಕೊನೆಗೂ ಕರಾವಳಿಯ ಪ್ರಭಾವಿ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ರಾಜ್ಯ ಬಿಜೆಪಿಯಿಂದಲೇ ಗ್ರೀನ್ ಸಿಗ್ನಲ್ ಲಭಿಸಿದೆ. ಎಲ್ಲವೂ ನಿರೀಕ್ಷೆಯಂತೆ ಸಾಗಿದರೆ, ಒಂದು ವಾರದೊಳಗೆ ಅರುಣ್ ಕುಮಾರ್ ಪುತ್ತಿಲ ಬಿಜೆಪಿಯ ಅಧಿಕೃತ ಸದಸ್ಯತ್ವ ಹೊಂದಲಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಅರುಣ್ ಕುಮಾರ್ ಪುತ್ತಿಲ ನಡುವಿನ ಮಾತುಕತೆ ಬಹುತೇಕ ಯಶಸ್ವಿಯಾಗಿದೆ. ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಮುಕ್ತ ಸ್ವಾಗತ ಎಂದು ಗುರುವಾರ ವಿಜಯೇಂದ್ರ ಮೈಸೂರಿನಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಎರಡು ವಾರದ ಹಿಂದೆ ಪುತ್ತೂರಿನಲ್ಲಿ ನಡೆದ ಪುತ್ತಿಲ ಪರಿವಾರದ ಸಮಾಲೋಚನಾ ಸಭೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ ಬಗ್ಗೆ ಪುತ್ತಿಲ ಪರಿವಾರ ಮೂರು ದಿನಗಳ ಗಡುವು ನೀಡಿತ್ತು. ಆದರೆ ಗುಡುವಿಗೆ ಬಿಜೆಪಿ ನಾಯಕರು ಸೊಪ್ಪು ಹಾಕಿರಲಿಲ್ಲ. ಇದೀಗ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ರಾಜ್ಯ ನಾಯಕರ ಜತೆ ಮಾತುಕತೆ ನಡೆಸಿದ್ದು, ರಾಜ್ಯಾಧ್ಯಕ್ಷರ ಮೊದಲ ಭೇಟಿ ಫಲಪ್ರದವಾಗುವ ಸೂಚನೆ ಲಭಿಸಿದೆ.
ಅರುಣ್ ಪುತ್ತಿಲ ಪಕ್ಷ ಸೇರ್ಪಡಗೆ ಬಿಜೆಪಿಗೇ ಗಡುವು ಕೊಟ್ಟರಾ..? 3 ದಿನಗಳ ಒಳಗೆ ಒಂದು ನಿರ್ಧಾರಕ್ಕೆ ಬರುತ್ತಾ ಬಿಜೆಪಿ?
ನಡೆದ ಮಾತುಕತೆ ಏನು?:
ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿಗೆ ಮುಕ್ತವಾಗಿ ಸೇರ್ಪಡೆಗೊಳ್ಳಲು ಯಾವುದೇ ಅಡ್ಡಿ ಇಲ್ಲ. ಆದರೆ ಪಕ್ಷಕ್ಕೆ ಸೇರ್ಪಡೆಯಾದ ಬಳಿಕವೇ ಸ್ಥಾನಮಾನ ನೀಡುವ ಮಾತು. ಬೇಷರತ್ತಾಗಿ ಪಕ್ಷ ಸೇರುವಂತೆ ಅರುಣ್ ಕುಮಾರ್ ಪುತ್ತಿಲಗೆ ವಿಜಯೇಂದ್ರ ತಿಳಿಸಿದ್ದಾರೆ. ಮಾತ್ರವಲ್ಲ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ಸಂಘಟಿತ ಕೆಲಸದ ಅಗತ್ಯತೆಯನ್ನು ಅರುಣ್ ಕುಮಾರ್ ಪುತ್ತಿಲಗೆ ವಿಜಯೇಂದ್ರ ಮಾತುಕತೆ ವೇಳೆ ಮನದಟ್ಟು ಮಾಡಿದ್ದಾರೆ ಎಂದು ಹೇಳಲಾಗಿದೆ. ವಿಜಯೇಂದ್ರ ಭೇಟಿ ಬಳಿಕ ಅರುಣ್ ಕುಮಾರ್ ಪುತ್ತಿಲ ಉತ್ಸಾಹದಲ್ಲಿದ್ದು, ಕೆಲವೇ ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಂಭವ ಇದೆ.
ಈ ನಡುವೆ ವಿಜಯೇಂದ್ರ ಜತೆಗಿನ ಮಾತುಕತೆಗೆ ಪುತ್ತಿಲ ಪರಿವಾರದ ಪ್ರತಿಕ್ರಿಯೆಯನ್ನು ಆಧರಿಸಿ ಅರುಣ್ ಕುಮಾರ್ ಪುತ್ತಿಲ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಗಡುವಿನೊಳಗೆ ಬಿಜೆಪಿ ಸ್ಪಂದಿಸದಾಗ ಅರುಣ್ ಕುಮಾರ್ ಪುತ್ತಿಲ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಪುತ್ತಿಲ ಪರಿವಾರದ ಜಾಲತಾಣಗಳಲ್ಲಿ ಪೋಸ್ಟ್‌ಗಳು ಕಾಣಿಸತೊಡಗಿತ್ತು.
ಸ್ಥಾನಮಾನದ್ದೇ ಗೊಂದಲ:
ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ತೊಂದರೆ ಇಲ್ಲ. ಆದರೆ ಅವರಿಗೆ ಪುತ್ತೂರು ಮಂಡಲ ಅಧ್ಯಕ್ಷ ಸ್ಥಾನದ ಬೇಡಿಕೆಯನ್ನು ಪುತ್ತಿಲ ಪರಿವಾರ ಇರಿಸಿದೆ. ಅಲ್ಲದೆ ಅರುಣ್ ಕುಮಾರ್ ಪುತ್ತಿಲ ಕೂಡ ಇದೇ ಸ್ಥಾನಮಾನಕ್ಕೆ ಪಟ್ಟು ಹಿಡಿದಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ ಮೊದಲು ಪಕ್ಷ ಸೇರ್ಪಡೆ, ನಂತರ ಸ್ಥಾನಮಾನ. ಬಿಜೆಪಿಯ ತತ್ವಸಿದ್ಧಾಂತ ಒಪ್ಪಿಕೊಂಡು ಪಕ್ಷಕ್ಕೆ ಬಂದರೆ ಸ್ವಾಗತ ಎಂದ ಸಂದೇಶವನ್ನು ನಾಯಕರೂ ನೀಡಿದ್ದಾರೆ. ಮುಖ್ಯವಾಗಿ ಅರುಣ್ ಕುಮಾರ್ ಪುತ್ತಿಲಗೆ ಪುತ್ತೂರು ಮಂಡಲ ಅಧ್ಯಕ್ಷ ಸ್ಥಾನ ನೀಡಲು ಸ್ಥಳೀಯ ಬಿಜೆಪಿ ಹಾಗೂ ಸಂಘಪರಿವಾರದಲ್ಲಿ ವಿರೋಧವಿದೆ. ಅಷ್ಟಕ್ಕೂ ಅರುಣ್ ಕುಮಾರ್ ಪುತ್ತಿಲ ಅವರು ಸ್ಥಾನಮಾನ ನೀಡಿದರೆ ಮಾತ್ರ ಬಿಜೆಪಿ ಸೇರುತ್ತಾರೋ ಅಥವಾ ಬೇಷರತ್ ಬಿಜೆಪಿ ಸೇರ್ಪಡೆಗೊಳ್ಳುತ್ತಾರೋ ಎಂಬುದು ಇನ್ನೂ ಅಂತಿಮವಾಗಿಲ್ಲ.
ಬೆಂಗಳೂರಲ್ಲಿ ಬಿಜೆಪಿ ಸೇರ್ಪಡೆ?:
ಮೂಲಗಳ ಪ್ರಕಾರ ಎಲ್ಲವೂ ನಿರೀಕ್ಷೆಯಂತೆ ಸಾಗಿದರೆ ಅರುಣ್ ಕುಮಾರ್ ಪುತ್ತಿಲ ಅವರು ಈ ವಾರಾಂತ್ಯದಲ್ಲೇ ಬೆಂಗಳೂರಿನಲ್ಲಿ ರಾಜ್ಯ ನಾಯಕರ ಸಮ್ಮುಖ ಬಿಜೆಪಿ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ವಿಜಯೇಂದ್ರ ಸಲಹೆಯಂತೆ ಮೊದಲು ಪಕ್ಷ ಸೇರ್ಪಡೆ, ಬಳಿಕ ಸ್ಥಾನಮಾನ ಬಗ್ಗೆ ನಿರ್ಧಾರ ಎಂಬುದಕ್ಕೆ ಅರುಣ್ ಕುಮಾರ್ ಪುತ್ತಿಲ ಒಪ್ಪಿದರೆ ಕರಾವಳಿಯ ಹಿಂದು ಮುಖಂಡನ ಬಿಜೆಪಿ ಸೇರ್ಪಡೆ ಭರ್ಜರಿಯಾಗಿ ನಡೆಯಲಿದೆ.
ಇಂದು ಪುತ್ತೂರು ಪುತ್ತಿಲ ಪರಿವಾರ ಸಮಾಲೋಚನಾ ಸಭೆ: ರಾಜಕೀಯ ಬೆಳವಣಿಗೆಗೆ ದಿಕ್ಸೂಚಿ?
ಅರುಣ್ ಕುಮಾರ್ ಪುತ್ತಿಲಗೆ ಜಿಲ್ಲಾ ಮಟ್ಟದ ಸ್ಥಾನ?
ಪುತ್ತೂರು ಮಂಡಲ ಅಧ್ಯಕ್ಷ ಸ್ಥಾನದ ಬೇಡಿಕೆ ಇರಿಸಿರುವ ಅರುಣ್ ಕುಮಾರ್ ಪುತ್ತಿಲಗೆ ಅದಕ್ಕಿಂತಲೂ ಉನ್ನತ ಸ್ಥಾನ ನೀಡುವ ಸಾಧ್ಯತೆಯನ್ನು ಹೇಳಲಾಗುತ್ತಿದೆ. ಮಂಡಲ ಅಧ್ಯಕ್ಷ ಸ್ಥಾನಕ್ಕೆ ಪುತ್ತೂರು ಬಿಜೆಪಿಯಲ್ಲೇ ವಿರೋಧವಿದ್ದು, ಮಾಜಿ ಶಾಸಕ ಸಂಜೀವ ಮಠಂದೂರು ಕೂಡ ಆಕ್ಷೇಪವೆತ್ತಿದ್ದರು. ಅಲ್ಲದೆ ಸಂಘಪರಿವಾರ ಕೂಡ ಪುತ್ತಿಲ ಬಿಜೆಪಿ ಪ್ರವೇಶಕ್ಕೆ ಅಸಮ್ಮತಿ ಸೂಚಿಸಿತ್ತು. ಇಂತಹ ಸನ್ನಿವೇಶದಲ್ಲಿ ಅರುಣ್ ಕುಮಾರ್ ಪುತ್ತಿಲಗೆ ದ.ಕ.ಜಿಲ್ಲಾ ಮಟ್ಟದ ಸ್ಥಾನಮಾನ ನೀಡುವ ಬಗ್ಗೆ ಸಮಾಲೋಚನೆ ನಡೆಯುತ್ತಿದೆ. ಪುತ್ತಿಲ ಬಿಜೆಪಿ ಸೇರ್ಪಡೆಗೊಂಡ ಕೂಡಲೇ ಪುತ್ತೂರು ಮಂಡಲ ಅಧ್ಯಕ್ಷರ ಘೋಷಣೆಯೂ ಪ್ರಕಟಗೊಳ್ಳಲಿದೆ.
ಪಕ್ಷ ಮೂಲಗಳ ಪ್ರಕಾರ ಪುತ್ತಿಲಗೆ ಜಿಲ್ಲಾ ಉಪಾಧ್ಯಕ್ಷ ಸ್ಥಾನ ನೀಡುವ ಸಂಭವವೇ ಜಾಸ್ತಿ ಎನ್ನಲಾಗುತ್ತಿದೆ. ಈಗಾಗಲೇ ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಲಾಗಿದೆ. ಅದರಲ್ಲಿ ಒಟ್ಟು ಎಂಟರಲ್ಲಿ ಏಳು ಮಂದಿ ಉಪಾಧ್ಯಕ್ಷರನ್ನು ನೇಮಿಸಲಾಗಿದೆ. ಇನ್ನು ಒಂದು ಸ್ಥಾನ ಬಾಕಿ ಇದೆ, ಆ ಸ್ಥಾನಕ್ಕೆ ಅರುಣ್ ಕುಮಾರ್ ಪುತ್ತಿಲ ಅವರನ್ನು ನೇಮಿಸಿ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಪುತ್ತೂರು ಮಂಡಲದಲ್ಲಿ ಬಿಜೆಪಿ ಅತ್ಯಧಿಕ ಮತ ಗಳಿಸಿಕೊಡುವ ಟಾಸ್ಕ್ ನೀಡುವ ಬಗ್ಗೆ ಚಿಂತನೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ.