ಇಂದು ಪುತ್ತೂರು ಪುತ್ತಿಲ ಪರಿವಾರ ಸಮಾಲೋಚನಾ ಸಭೆ: ರಾಜಕೀಯ ಬೆಳವಣಿಗೆಗೆ ದಿಕ್ಸೂಚಿ?
ಎರಡು ದಿನಗಳ ಹಿಂದೆಯಷ್ಟೆ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಪುತ್ತಿಲ ಬಿಜೆಪಿ ಸೇರ್ಪಡೆಗೆ ಮೂರು ಷರತ್ತುಗಳ ಬಗ್ಗೆ ಹೇಳಿಕೆ ನೀಡಿರುವುದು ಪುತ್ತಿಲ ಪರಿವಾರ ವ್ಯಗ್ರವಾಗುವಂತೆ ಮಾಡಿದೆ. ಈ ನಡುವೆ ಇಂದು ಮುಂದಿನ ನಡೆ ಬಗ್ಗೆ ಪುತ್ತಿಲ ಪರಿವಾರ ಪುತ್ತೂರಲ್ಲಿ ಸಭೆ ಏರ್ಪಡಿಸಿದೆ. ಈ ಸಭೆಯ ತೀರ್ಮಾನ ಪುತ್ತೂರಿನ ಮುಂದಿನ ರಾಜಕೀಯ ಬೆಳವಣಿಗೆಗಳಿಗೆ ದಿಕ್ಸೂಚಿಯಾಗುವ ನಿರೀಕ್ಷೆ ಇದೆ.
ಮಂಗಳೂರು/ಪುತ್ತೂರು(ಫೆ.05): ಪುತ್ತೂರಿನ ಹಿಂದು ಸಂಘಟಕ ಅರುಣ್ ಕುಮಾರ್ ಪುತ್ತಿಲ ಬಿಕ್ಕಟ್ಟು ಇನ್ನೂ ಇತ್ಯರ್ಥವಾಗದೇ ಇರುವುದು ಬಿಜೆಪಿ ಮತ್ತು ಪುತ್ತಿಲ ಪರಿವಾರ ಇಬ್ಬರಿಗೂ ನುಂಗಲಾರದ ತುತ್ತಾಗಿ ಪರಿಣಮಿಸಿದೆ!. ಎರಡು ದಿನಗಳ ಹಿಂದೆಯಷ್ಟೆ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಪುತ್ತಿಲ ಬಿಜೆಪಿ ಸೇರ್ಪಡೆಗೆ ಮೂರು ಷರತ್ತುಗಳ ಬಗ್ಗೆ ಹೇಳಿಕೆ ನೀಡಿರುವುದು ಪುತ್ತಿಲ ಪರಿವಾರ ವ್ಯಗ್ರವಾಗುವಂತೆ ಮಾಡಿದೆ. ಈ ನಡುವೆ ಫೆ.5ರಂದು ಮುಂದಿನ ನಡೆ ಬಗ್ಗೆ ಪುತ್ತಿಲ ಪರಿವಾರ ಪುತ್ತೂರಲ್ಲಿ ಸಭೆ ಏರ್ಪಡಿಸಿದೆ. ಈ ಸಭೆಯ ತೀರ್ಮಾನ ಪುತ್ತೂರಿನ ಮುಂದಿನ ರಾಜಕೀಯ ಬೆಳವಣಿಗೆಗಳಿಗೆ ದಿಕ್ಸೂಚಿಯಾಗುವ ನಿರೀಕ್ಷೆ ಇದೆ.
ಪುತ್ತಿಲ ಜತೆಗಿನ ಸಂಧಾನ ಮಾತುಕತೆಯನ್ನು ಒಂದು ಹಂತದಲ್ಲಿ ಬಿಜೆಪಿ ಕೈಬಿಟ್ಟಿತ್ತು. ಆದರೆ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಪುನರಪಿ ಪುತ್ತೂರು ಬಿಕ್ಕಟ್ಟು ಪರಿಹರಿಸಲು ರಾಜ್ಯ ನಾಯಕರು ಆಸಕ್ತಿ ತೋರಿಸಿದ್ದರು. ರಾಜ್ಯ ನಾಯಕರ ಸೂಚನೆ ಮೇರೆಗೆ ಸಂಘಪರಿವಾರ ಅಖಾಡಕ್ಕೆ ಇಳಿದಿತ್ತು. ಹಲವು ಸುತ್ತಿನ ಮಾತುಕತೆ ಬಳಿಕ ಕೊನೆಗೆ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಕುಂತೂರು ನೇತೃತ್ವದಲ್ಲಿ ಬಿಕ್ಕಟ್ಟು ಶಮನ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಷರತ್ತು ರಹಿತವಾಗಿ ಪಕ್ಷಕ್ಕೆ ಸೇರ್ಪಡೆಗೊಳಿಸುವ ಬಗ್ಗೆ ಪ್ರಸ್ತಾಪಗೊಂಡಿದೆ. ಆದರೆ ಈ ಷರತ್ತನ್ನು ಪುತ್ತಿಲ ಪರಿವಾರ ಸಮ್ಮತಿಸುತ್ತದೆಯೇ ಅಥವಾ ಇಲ್ಲವೇ ಎನ್ನುುದು ಫೆ.5ರ ಸಭೆಯಲ್ಲಿ ತೀರ್ಮಾನವಾಗಲಿದೆ.
ಮಂಗಳೂರು: ಅರುಣ್ ಕುಮಾರ್ ಪುತ್ತಿಲ ಜತೆಗಿನ ಬಿಜೆಪಿ ಸಂಧಾನ ಬಾಗಿಲು ಬಂದ್?
ಮೂಲಗಳು ಹೇಳುವಂತೆ, ‘ಬಿಜೆಪಿ ಪಕ್ಷದಲ್ಲಿ ಅಧಿಕೃತ ಜವಾಬ್ದಾರಿ ಘೋಷಿಸಿದ ಬಳಿಕವೇ ಸೇರ್ಪಡೆ ಮಾತು’ ಎಂದು ಅರುಣ್ ಕುಮಾರ್ ಪುತ್ತಿಲ ಪಟ್ಟುಹಿಡಿದಿದ್ದಾರೆ ಎನ್ನಲಾಗಿದ್ದು, ‘ಬೇಷರತ್ತಾಗಿ ಪಕ್ಷಕ್ಕೆ ಬನ್ನಿ, ಬಳಿಕ ಹುದ್ದೆಯ ಮಾತು’ ಎಂದು ಪಕ್ಷ ನಾಯಕರು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಪುತ್ತಿಲ ಪರಿವಾರ ವಿಸರ್ಜನೆಗೂ ನಿರಾಕರಿಸಿದ್ದು, ಇತ್ತಂಡಗಳ ಬಿಗಿ ಪಟ್ಟಿನಿಂದಾಗಿ ಸದ್ಯ ಈ ಬಿಕ್ಕಟ್ಟು ಹೀಗೆಯೇ ಮುಂದುವರಿದಿದೆ.
ಬಿಜೆಪಿಗೂ ನಿರ್ಣಾಯಕ ಸಭೆ!:
ಫೆ.5ರಂದು ಪುತ್ತೂರಲ್ಲಿ ನಡೆಯುವ ಪುತ್ತಿಲ ಪರಿವಾರದ ಸಭೆ ಪುತ್ತಿಲ ಪರಿವಾರಕ್ಕೆ ಮಾತ್ರವಲ್ಲ ಬಿಜೆಪಿಗೂ ನಿರ್ಣಾಯಕ ಎನಿಸಲಿದೆ. ಯಾಕೆಂದರೆ ಅಸೆಂಬ್ಲಿ ಚುನಾವಣೆ ಬಳಿಕ ಇದುವರೆಗೆ ಪುತ್ತೂರಿನಲ್ಲಿ ಬಿಜೆಪಿ ಹಾಗೂ ಸಂಘಪರಿವಾರದ ನಿದ್ದೆಗೆಡಿಸಿರುವುದು ಪುತ್ತಿಲ ಪರಿವಾರ. ಈ ಹಿನ್ನೆಲೆಯಲ್ಲಿ ಸೋಮವಾರ ನಡೆಯುವ ಪುತ್ತಿಲ ಪರಿವಾರದ ಸಮಾಲೋಚನಾ ಸಭೆ ಸೂಕ್ತ ನಿರ್ಧಾರ ಕೈಗೊಂಡು ಬಿಕ್ಕಟ್ಟು ಬಗೆಹರಿದರೆ ಬಿಜೆಪಿ ಕೂಡ ನಿಟ್ಟುಸಿರುವ ಬಿಡುವಂತೆ ಆಗಲಿದೆ. ಇಲ್ಲದಿದ್ದರೆ ಪುತ್ತಿಲ ಪರಿವಾರ ಲೋಕಸಭಾ ಚುನಾವಣೆಗೂ ಬಿಜೆಪಿಗೆ ಮಗ್ಗುಲ ಮುಳ್ಳಾಗಿ ಕಾಡುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ.
ಪುತ್ತಿಲ ಪರಿವಾರದ ನಡೆ ಏನು?:
ಸೋಮವಾರ ನಡೆಯುವ ಪುತ್ತಿಲ ಪರಿವಾರದ ಸಮಾಲೋಚನಾ ಸಭೆ ಕೈಗೊಳ್ಳುವ ನಿರ್ಧಾರದ ಬಗ್ಗೆ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ಆರಂಭವಾಗಿದೆ. ಅರುಣ್ ಕುಮಾರ್ ಪುತ್ತಿಲ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕು, ಬಿಜೆಪಿಗೆ ಸೇರ್ಪಡೆಗೊಂಡು ಸೂಕ್ತ ಜವಾಬ್ದಾರಿ ವಹಿಸಿಕೊಳ್ಳಬೇಕು, ಲೋಕಸಭಾ ಚುನಾವಣೆಯಲ್ಲಿ ತಟಸ್ಥ ಧೋರಣೆ ಕೈಗೊಳ್ಳಬೇಕು.. ಹೀಗೆ ನಾನಾ ಅಭಿಪ್ರಾಯಗಳು ವ್ಯಕ್ತಗೊಳ್ಳುತ್ತಿವೆ.
ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿಗೆ ‘ಪುತ್ತಿಲ ಹೊಡೆತ’: ಕಾಂಗ್ರೆಸ್ಗೆ ಮತ್ತೆ ಗೆಲುವು
ಮೂಲಗಳ ಪ್ರಕಾರ ಪುತ್ತಿಲ ಪರಿವಾರ ಸಭೆಯಲ್ಲಿ ಅರುಣ್ ಕುಮಾರ್ ಅವರು ಪಕ್ಷೇತರನಾಗಿ ಸ್ಪರ್ಧಿಸಿ ಬಿಜೆಪಿಗೆ ಮತ್ತೆ ಸವಾಲೊಡ್ಡುವ ಸಾಧ್ಯತೆಯೇ ಹೆಚ್ಚು ಎಂದು ತರ್ಕಿಸಲಾಗುತ್ತಿದೆ. ಬಿಜೆಪಿ ಸೇರ್ಪಡೆಗೆ ವಿಧಿಸಿರುವ ಷರತ್ತು, ನಿಖರಗೊಳ್ಳದ ಸೂಕ್ತ ಸ್ಥಾನಮಾನದ ಭರವಸೆ ಕಾರಣದಿಂದ ಈಗಾಗಲೇ ಪುತ್ತಿಲ ಪರಿವಾರ ಕಾರ್ಯಕರ್ತರು ಸ್ವಯಂ ಸ್ಪರ್ಧೆಗೆ ಅಭಿಪ್ರಾಯಿಸುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹವಾ ಎದುರು ಅರುಣ್ ಕುಮಾರ್ ಪುತ್ತಿಲ ಅವರು ಲೋಕಸಭಾ ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧಿಸಿ ಬಿಜೆಪಿಯನ್ನು ಎದುರಿಸುವ ಸವಾಲಿಗೆ ಮುಂದಾಗುತ್ತಾರಾ ಎಂಬುದು ಕುತೂಹಲದ ಪ್ರಶ್ನೆಯಾಗಿದೆ.
ಇನ್ನೊಂದೆಡೆ ಅರುಣ್ ಕುಮಾರ್ ಪುತ್ತಿಲ ಸ್ಪರ್ಧಿಸದೆ ತಟಸ್ಥ ಧೋರಣೆಗೆ ನಿರ್ಧರಿಸಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಒಂದು ವೇಳೆ ಸ್ಪರ್ಧಿಸಲು ಹಿಂದೇಟು ಹಾಕಿದರೆ, ಪುತ್ತಿಲ ಪರಿವಾರದ ಕಾರ್ಯಕರ್ತರ ಬೇಡಿಕೆಗೆ ಮನ್ನಣೆ ನೀಡದ ಆಕ್ರೋಶಕ್ಕೆ ತುತ್ತಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಇದು ಪುತ್ತಿಲ ಪರಿವಾರದ ವಿಭಜನೆಗೆ ಕಾರಣವಾದರೂ ಅಚ್ಚರಿ ಇಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ. ಪುತ್ತಿಲ ಪರಿವಾರ ಬಿಜೆಪಿ ಸೇರ್ಪಡೆ ಅಥವಾ ಲೋಕಸಭಾ ಚುನಾವಣೆಯಲ್ಲಿ ತಟಸ್ಥ ಧೋರಣೆ ಹೊರತುಪಡಿಸಿ ಬೇರೆ ಯಾವುದೇ ನಿರ್ಣಯ ಕೈಗೊಂಡರೂ ಅದು ಬಿಜೆಪಿ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.