ಮೋದಿ ರಾಜ್ಯ ಪ್ರವಾಸ ಟೀಕಿಸಿದ ಸಿದ್ದುಗೆ ಬಿಜೆಪಿ ಗುದ್ದು
- ಕೋವಿಡ್ ವೇಳೆ ಬರದ ಮೋದಿ ಈಗ ಯೋಗಕ್ಕೆ ಬಂದಿದ್ದಾರೆ: ಸಿದ್ದು
- ಕೋವಿಡ್ ವೇಳೆ ಆಕ್ಸಿಜನ್ ಕೊಟ್ಟಿದ್ದು ಮೋದಿ, ಸಿಎಂ, ಕಟೀಲ್ ತಿರುಗೇಟು
- ಕಾಂಗ್ರೆಸ್ ಸರ್ಕಾರವಿದ್ದಾಗ ಆರೋಗ್ಯ ವ್ಯವಸ್ಥೆ ಹದಗೆಟ್ಟಿತ್ತು: ಬಿಜೆಪಿ ಕಿಡಿ
ಬೆಂಗಳೂರು (ಜೂನ್ 22): ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಪ್ರವಾಸ ಕೈಗೊಂಡಿರುವುದನ್ನು ಟೀಕಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟೀಕಾಪ್ರಹಾರ ನಡೆಸಿದ್ದು, ಇಡೀ ದೇಶಕ್ಕೆ ಬಂದೊದಗಿದ್ದ ಕೋವಿಡ್ ಸಂಕಷ್ಟವನ್ನು ಯಶಸ್ವಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ವಹಿಸಿರುವುದನ್ನು ಇಡೀ ವಿಶ್ವವೇ ಕೊಂಡಾಡುತ್ತಿರುವಾಗ ಇಂತಹ ಹೇಳಿಕೆಗಳು ಕೇವಲ ರಾಜಕೀಯ ಪ್ರಲಾಪವಷ್ಟೇ ಎಂದು ಟೀಕಿಸಿದೆ.
‘ಪ್ರವಾಹ, ಕೋವಿಡ್ ವೇಳೆ ಬಾರದೇ ಜನದ್ರೋಹ ಮಾಡಿದ ಪ್ರಧಾನಿ ಮೋದಿ ಈಗ ಯೋಗ ಮಾಡಲು ಬಂದಿದ್ದಾರೆ’ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ಮುಖಂಡರು ತೀವ್ರ ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಕೋವಿಡ್ ವೇಳೆ ಕರ್ನಾಟಕಕ್ಕೆ ಸಾವಿರಾರು ಕೋಟಿ ರು. ಅನ್ನು ನೀಡಿದ್ದಾರೆ. ಕೋವಿಡ್ ನಿರ್ವಹಣೆ, ಔಷಧಿಗಳು, ಲಸಿಕೆಗಳು, ವೆಂಟಿಲೇಟರ್ಸ್, ಆಕ್ಸಿಜನ್ ಉತ್ಪಾದಿಸುವ ಉಪಕರಣಗಳು ಕೇಂದ್ರದಿಂದ ನೀಡಿರುವುದು ಎಲ್ಲರಿಗೂ ತಿಳಿದಿದೆ. ಆದರೂ ರಾಜಕೀಯವಾಗಿ ಮಾತನಾಡುವುದು ಸರಿಯಲ್ಲ. ಜನರಿಗೆ ಎಲ್ಲವೂ ನೆನಪಿದೆ. ಮೋದಿಯವರು ಕೋವಿಡ್ ವೇಳೆ ರಾಜ್ಯಕ್ಕೆ ಮಾಡಿರುವ ಸಹಾಯ, ಅವರ ಜನಪ್ರಿಯತೆಯನ್ನು ಕಂಡು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
VIJAYANAGARA; ಕೆಲಸಕ್ಕೂ ಮುನ್ನ ಯೋಗ ಮಾಡಿದ ನರೇಗಾ ಕಾರ್ಮಿಕರು
ಕಟೀಲ್ ಕಿಡಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಮಾತನಾಡಿ, ‘ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಾಗಿದ್ದರೆ, ಅದಕ್ಕೆ ಕಾರಣ ಕಾಂಗ್ರೆಸ್ ಪಕ್ಷವೇ ಹೊರತು ಪ್ರಧಾನಿ ನರೇಂದ್ರ ಮೋದಿಯಲ್ಲ. 60 ವರ್ಷಗಳಲ್ಲಿ ಏನೂ ಕೊಡಲು ಸಾಧ್ಯವಾಗದ ಹೇಡಿ ಕಾಂಗ್ರೆಸ್ ಪಕ್ಷದ ನಾಯಕರು ಮೋದಿ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದರೆ, ಅದಕ್ಕೆ ಅರ್ಥವಿಲ್ಲ. ಜನ ಇಂತಹವರನ್ನು ಮೂರ್ಖರು ಎನ್ನುತ್ತಾರೆ. ಮೋದಿ ಅವರು ಕೋವಿಡ್ ನಿಯಂತ್ರಣ ಉಚಿತ ಲಸಿಕೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ವೆಂಟಿಲೇಟರ್ ಒದಗಿಸಿದ್ದಾರೆ. ಪ್ರತಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿದರು. ಹಿಂದೆ ಮಲೇರಿಯಾ ಬಂದಾಗ ಕಾಂಗ್ರೆಸ್‌ಗೆ ಔಷಧ ಕೊಡಕ್ಕಾಗಲಿಲ್ಲ. ಆದರೆ, ಮೋದಿ ಸರ್ಕಾರ ಕೋವಿಡ್ ಬಂದಾಗ ಲಸಿಕೆ ಕೊಟ್ಟಿದೆ’ ಎಂದು ಹೇಳಿದರು.
‘ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಆಕ್ಸಿಜನ್ ಪ್ಲಾಂಟ್ ಮಾಡಲಿಲ್ಲ. ಅವರ ಕಾಲದಲ್ಲಿ ವೆಂಟಿಲೇಟರ್‌ಗಳು ಜಿಲ್ಲಾಸ್ಪತ್ರೆಗಳಲ್ಲಿ ಇರಲಿಲ್ಲ. ವೈದ್ಯರು, ಹಾಸಿಗೆಗಳು, ದಾದಿಯರು ಇರಲಿಲ್ಲ. 60 ವರ್ಷದಲ್ಲಿ ಇದೆಲ್ಲವನ್ನು ಕೊಡಲಾಗದೆ ಕಾಂಗ್ರೆಸ್‌ನ ಹೇಡಿ ನಾಯಕರು ಈಗ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿ ಮೈಸೂರಿಗೆ ಬಂದು ಕನ್ನಡ ನಾಡಿನ ಜನತೆಯ ಜತೆ ಯೋಗ ಮಾಡಿ ಜಗತ್ತಿಗೆ ಸಂದೇಶ ಕೊಟ್ಟಿದ್ದಾರೆ’ ಎಂದರು.
ASSAM FLOODS; ಆಸ್ಸಾಂನ ಭೀಕರ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 82ಕ್ಕೇರಿಕೆ
ಸಿದ್ದು ಯಾವ ಲೋಕದಲ್ಲಿದ್ದಾರೆ? : ಉನ್ನತ ಶಿಕ್ಷಣಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ, ‘ಸಿದ್ದರಾಮಯ್ಯ ಅವರು ಈ ಲೋಕದಲ್ಲಿ ಇದ್ದಾರಾ? ಅಥವಾ ಬೇರೆ ಲೋಕದಲ್ಲಿ ಇದ್ದಾರಾ? ಎಂಬ ಅನುಮಾನ ಮೂಡಿದೆ. ಈ ದೇಶದ ಆರೋಗ್ಯ ವ್ಯವಸ್ಥೆಯನ್ನು ಕಾಂಗ್ರೆಸ್ ಯಾವ ಸ್ಥಿತಿಯಲ್ಲಿ ಬಿಟ್ಟು ಹೋಗಿತ್ತು ಎಂಬುದು ಜನತೆಗೆ ಗೊತ್ತಿದೆ. ಈಗ ಬಿಜೆಪಿ ಸರ್ಕಾರವು ಅತಿ ಹೆಚ್ಚು ಆಕ್ಸಿಜನ್ ಉತ್ಪಾದನೆ, ಆರೋಗ್ಯ ವ್ಯವಸ್ಥೆಗೆ ಬೇಕಾದ ಅನುಕೂಲವನ್ನು ಸುಧಾರಿಸಲಾಗಿದೆ. ಸಿದ್ದರಾಮಯ್ಯ ಅವರು ಹೇಳಿಕೆ ನೀಡುವಾಗ ಯೋಚಿಸಿ ಹೇಳಿಕೆ ನೀಡಬೇಕು’ ಎಂದು ಟೀಕಾಪ್ರಹಾರ ನಡೆಸಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೀಳು ಅಭಿರುಚಿಯ ರಾಜಕಾರಣಿ. ಅವರ ಬಗ್ಗೆ ನಾನು ಮಾತನಾಡಲು ಹೋಗಲ್ಲ. ಸಿದ್ದರಾಮಯ್ಯ ಎಲ್ಲರ ಬಗ್ಗೆ ಅಸಡ್ಡೆಯಾಗಿ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.