ನನಗೆ ಟಿಕೆಟ್‌ ತಪ್ಪಲು ಬಿ.ಎಲ್‌. ಸಂತೋಷ ಕಾರಣ ಎಂದು ನೇರ ಆರೋಪ ಮಾಡಿದ್ದೇನೆ. ಅದಕ್ಕೆ ಅವರು ಉತ್ತರಿಸದೇ ಲಿಂಗಾಯತ ನಾಯಕರಿಂದ ನನ್ನ ವಿರುದ್ಧ ವಾಗ್ದಾಳಿ ಮಾಡಿಸುತ್ತಿದ್ದಾರೆ. ಇದು ಬಿಜೆಪಿಯಲ್ಲಿನ ಕೆಲವರ ಒಡೆದಾಳುವ ನೀತಿ ಎಂಬುದಕ್ಕೆ ಸ್ಪಷ್ಟ ಸಾಕ್ಷಿ. ಇದನ್ನು ನನ್ನ ವಿರುದ್ಧ ಟೀಕಿಸುವ ಯಡಿಯೂರಪ್ಪ ಸೇರಿದಂತೆ ಲಿಂಗಾಯತ ನಾಯಕರು ಅರ್ಥ ಮಾಡಿಕೊಳ್ಳಬೇಕು: ಜಗದೀಶ್‌ ಶೆಟ್ಟರ್‌. 

ಹುಬ್ಬಳ್ಳಿ(ಏ.27): ಒಬ್ಬ ಲಿಂಗಾಯತ ನಾಯಕನ ವಿರುದ್ಧ ಮತ್ತೊಬ್ಬ ಲಿಂಗಾಯತ ನಾಯಕನನ್ನು ಎತ್ತಿಕಟ್ಟುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ. ಕೆಲ ನಾಯಕರು ತಾವು ನೇರ ಹೋರಾಟಕ್ಕೆ ಬಾರದೇ ಇನ್ನೊಬ್ಬರ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು. ಇದೇ ವೇಳೆ ಯಡಿಯೂರಪ್ಪ ಅಸಹಾಯಕರಾಗಿ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಅವರು ನನ್ನ ವಿರುದ್ಧ ಮಾಡಿರುವ ಟೀಕೆಗಳೆಲ್ಲ ನನಗೆ ಆಶೀರ್ವಾದವಿದ್ದಂತೆ ಎಂದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಟಿಕೆಟ್‌ ತಪ್ಪಲು ಬಿ.ಎಲ್‌. ಸಂತೋಷ ಕಾರಣ ಎಂದು ನೇರ ಆರೋಪ ಮಾಡಿದ್ದೇನೆ. ಅದಕ್ಕೆ ಅವರು ಉತ್ತರಿಸದೇ ಲಿಂಗಾಯತ ನಾಯಕರಿಂದ ನನ್ನ ವಿರುದ್ಧ ವಾಗ್ದಾಳಿ ಮಾಡಿಸುತ್ತಿದ್ದಾರೆ. ಇದು ಬಿಜೆಪಿಯಲ್ಲಿನ ಕೆಲವರ ಒಡೆದಾಳುವ ನೀತಿ ಎಂಬುದಕ್ಕೆ ಸ್ಪಷ್ಟ ಸಾಕ್ಷಿ. ಇದನ್ನು ನನ್ನ ವಿರುದ್ಧ ಟೀಕಿಸುವ ಯಡಿಯೂರಪ್ಪ ಸೇರಿದಂತೆ ಲಿಂಗಾಯತ ನಾಯಕರು ಅರ್ಥ ಮಾಡಿಕೊಳ್ಳಬೇಕು. ಲಿಂಗಾಯತ ಮುಖಂಡರ ವಿರುದ್ಧ ಲಿಂಗಾಯತರನ್ನೇ ಎತ್ತಿಕಟ್ಟುವ ಕೆಲಸ ಮಾಡಲಾಗುತ್ತಿದೆ. ಮತ್ತೊಬ್ಬರ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಮಿತ್ ಶಾ ಮಾತನಾಡಿದ್ರು ವಿಶ್ವಾಸ ದ್ರೋಹ ಮಾಡಿ ಶೆಟ್ಟರ್ ಹೋಗಿದ್ದಾರೆ: ಬಿ.ಎಸ್.ಯಡಿಯೂರಪ್ಪ

ನನಗೆ ಟಿಕೆಟ್‌ ಕೊಡಿಸುವ ಸಲುವಾಗಿ ಯಡಿಯೂರಪ್ಪ ಬಹಳಷ್ಟುಶ್ರಮಿಸಿದ್ದರು. ಶೆಟ್ಟರ ಅವರಿಗೆ ಟಿಕೆಟ್‌ ತಪ್ಪಿಸಿದರೆ ಪಕ್ಷಕ್ಕೆ ತುಂಬಾ ಡ್ಯಾಮೇಜ್‌ ಆಗಲಿದೆ ಎಂದೂ ಹೇಳಿದ್ದರು. ಆದರೆ, ಅವರ ಮಾತಿಗೂ ಬಿಜೆಪಿಯ ಕೆಲವರು ಮನ್ನಣೆ ನೀಡಲಿಲ್ಲ. ಈಗ ಅವರು ಅಸಹಾಯಕರಾಗಿ ಬೇರೆಯವರ ಒತ್ತಡದಿಂದ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ವಿಷಾಧಿಸಿದರು.

ಯಡಿಯೂರಪ್ಪ ಹಿರಿಯರು. ನನ್ನ ಬೆಳವಣಿಗೆಗೆ ಅವರು ಬಹಳಷ್ಟುಕಾರಣೀಕರ್ತರು. ಅಂತಹ ಹಿರಿಯ ಮುಖಂಡರ ವಿರುದ್ಧ ನಾನು ಟೀಕೆ ಮಾಡುವುದಿಲ್ಲ. ಅವರ ಟೀಕೆಗಳೆಲ್ಲ ನನಗೆ ಆಶೀರ್ವಾದಗಳು. ಅವುಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದು ಶೆಟ್ಟರ್‌ ಮಾರ್ಮಿಕವಾಗಿ ನುಡಿದರು.

ಕೆಜೆಪಿ ಕಟ್ಟಿದ್ದು ಏಕೆ?

ಯಡಿಯೂರಪ್ಪ ವಿರುದ್ಧ ಟೀಕೆ ಮಾಡುವುದಿಲ್ಲ. ಆದರೆ, ಅವರೇ 2013ರಲ್ಲಿ ಬಿಜೆಪಿಯಿಂದ ಹೊರಹೋಗಿ ಕೆಜೆಪಿ ಕಟ್ಟಿಪಕ್ಷವನ್ನು ಇಬ್ಭಾಗ ಮಾಡಿದ್ದರಲ್ಲ. ಆಗ ಅವರ ತತ್ವ ಸಿದ್ಧಾಂತ ಎಲ್ಲಿ ಹೋಗಿತ್ತು ಎಂದಷ್ಟೇ ಪ್ರಶ್ನಿಸುವೆ. ನಾನು ಪಕ್ಷಕ್ಕೆ ದ್ರೋಹ ಮಾಡಿಲ್ಲ. ಆದರೆ, ನನ್ನ ವಿರುದ್ಧ ಷಡ್ಯಂತ್ರ ನಡೆದಿರುವುದಕ್ಕೆ, ಸ್ವಾಭಿಮಾನಕ್ಕೆ ಧಕ್ಕೆ ಬಂದಿರುವುದಕ್ಕೆ ಬಿಜೆಪಿ ಬಿಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಕೆಜೆಪಿ ಕಟ್ಟಿದಾಗ ಇದೇ ಯಡಿಯೂರಪ್ಪ ಅವರೊಂದಿಗೆ ಬೊಮ್ಮಾಯಿ ಹೋಗುತ್ತೇನೆ ಎಂದು ವಚನ ನೀಡಿದ್ದರು. ಆದರೆ ಬೊಮ್ಮಾಯಿ ಯಡಿಯೂರಪ್ಪ ಅವರಿಗೆ ಕೈಕೊಟ್ಟು ಬಿಜೆಪಿಯಲ್ಲೇ ಉಳಿದಿದ್ದರು. ಆಗ ಬೊಮ್ಮಾಯಿ ವಿರುದ್ಧ ವಚನಭ್ರಷ್ಟಅಂತೆಲ್ಲ ಯಡಿಯೂರಪ್ಪ ಮಾತನಾಡಿದ್ದರು. ಆದರೆ, ಆ ಚುನಾವಣೆಯಲ್ಲಿ ಬೊಮ್ಮಾಯಿ ಗೆದ್ದರು. ಹಾಗೆಯೇ ಯಡಿಯೂರಪ್ಪನವರು ನನ್ನ ವಿರುದ್ಧ ಏನೇ ಟೀಕೆ ಮಾಡಿದರೂ ನನ್ನ ಗೆಲುವು ತಪ್ಪಿಸಲು ಸಾಧ್ಯವಿಲ್ಲ. ಅವೆಲ್ಲವೂ ನನಗೆ ಆಶೀರ್ವಾದವೇ ಎಂದರು.

ನಾನು ಬಡಪಾಯಿ:

ನಾನೊಬ್ಬ ಬಡಪಾಯಿ. ಅಮಿತ್‌ ಶಾ, ಶೆಟ್ಟರ ಅವರನ್ನು ಸೋಲಿಸಬೇಕೆಂಬ ಮಾತು ಆಡಿದ್ದಾರೆ. ಜತೆಗೆ ಯಡಿಯೂರಪ್ಪ ಅವರೂ ಪ್ರಮುಖರ ಸಭೆ ನಡೆಸಿ ನನ್ನನ್ನು ಸೋಲಿಸಲು ಆಂದೋಲನ ಆರಂಭಿಸಿದ್ದಾರೆ. ಬಡಪಾಯಿ ಶೆಟ್ಟರನನ್ನು ಸೋಲಿಸಲು ಬಿಜೆಪಿ ಯಾಕೆ ಪಣ ತೊಟ್ಟಿದೆಯೋ ಗೊತ್ತಿಲ್ಲ ಎಂದು ವಿಷಾಧಿಸಿದರು.

ರಾಜ್ಯದಲ್ಲಿ ನಾನೊಬ್ಬನೇ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆ ಆಗಿಲ್ಲ, ನನ್ನಂತೆಯೇ ಆಯನೂರು ಮಂಜುನಾಥ, ಲಕ್ಷ್ಮಣ ಸವದಿ, ಯಲ್ಲಾಪುರದಲ್ಲಿ ಮಾಜಿ ಶಾಸಕ ವಿ.ಎಸ್‌. ಪಾಟೀಲ, ಎನ್‌.ಆರ್‌. ಸಂತೋಷ ಸೇರಿದಂತೆ ಹಲವರು ಬಿಜೆಪಿ ತೊರೆದು ಕಾಂಗ್ರೆಸ್‌, ಜೆಡಿಎಸ್‌ ಪಕ್ಷವನ್ನು ಸೇರ್ಪಡೆ ಆಗಿದ್ದಾರೆ. ಆದರೆ ನಾನು ಯಾವುದೋ ಅಪರಾಧ ಮಾಡಿದಂತೆ ನನ್ನನ್ನು ಗುರಿಯಾಗಿಟ್ಟುಕೊಂಡು ಪ್ರಶ್ನೆ ಮಾಡುತ್ತಿರುವುದು ನೋವು ತಂದಿದೆ ಎಂದರು.

Party Rounds: ಹುಬ್ಬಳ್ಳಿ ಅಖಾಡಕ್ಕೆ ರಾಜಾಹುಲಿ ಎಂಟ್ರಿ, ಬದಲಾಯ್ತು ಕಾಂಗ್ರೆಸ್‌ ರಣತಂತ್ರ!

ತತ್ವ ಸಿದ್ಧಾಂತಕ್ಕೆ ತೀಲಾಂಜಲಿ

ಶೆಟ್ಟರ್‌ ಯಾವುದೇ ತತ್ವ ಸಿದ್ಧಾಂತ ಇಲ್ಲದ ಕಾಂಗ್ರೆಸ್‌ ಸೇರಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿಕೆ ನೀಡಿದ್ದಾರೆ. ಐಡಿಯಾಲಾಜಿ ಬಗ್ಗೆ ಮಾತನಾಡುವ ಜೋಶಿಯವರೇ, ಇಂತಹ ರಾಜಕಾರಣ ಬಹಳ ದಿನ ನಡೆಯುವುದಿಲ್ಲ. ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಮೇಲೆ 80ಕ್ಕೂ ಹೆಚ್ಚು ಕ್ರಿಮಿನಲ್‌ ಕೇಸ್‌ಗಳಿವೆ. ಅವರಿಗೆ ಯಾಕೆ ಟಿಕೆಟ್‌ ಕೊಟ್ಟೀರಿ? ಸಿಡಿ ಹೆದರಿಕೆಗೆ ತಡೆಯಾಜ್ಞೆ ತಂದ ಏಳೆಂಟು ಜನರಿಗೆ ಟಿಕೆಟ್‌ ಕೊಟ್ಟಿದ್ದು ಯಾವ

ಐಡಿಯಾಲಾಜಿ? ಆಪರೇಷನ್‌ ಕಮಲ ಮಾಡಿ ಸರ್ಕಾರ ರಚನೆ ಮಾಡಿದಾಗಲೇ ಬಿಜೆಪಿ ತನ್ನ ತತ್ವ ಸಿದ್ಧಾಂತಗಳಿಗೆ ತೀಲಾಂಜಲಿ ಇಟ್ಟಿದೆ. ಬಿಜೆಪಿಯಲ್ಲಿ ಯಾವುದೇ ಐಡಿಯಾಲಾಜಿ ಉಳಿದಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ವಕ್ತಾರ ರೋಹನ್‌ ಗುಪ್ತ, ಮುಖಂಡರಾದ ರಜತ್‌ ಉಳ್ಳಾಗಡ್ಡಿಮಠ, ಮಲ್ಲಿಕಾರ್ಜುನ ಸಾಹುಕಾರ, ಸದಾನಂದ ಡಂಗನವರ, ನಾಗೇಶ ಕಲಬುರಗಿ, ಶರಣಪ್ಪ ಕೊಟಗಿ ಸೇರಿದಂತೆ ಅನೇಕರು ಇದ್ದರು.