Asianet Suvarna News Asianet Suvarna News

ಕಾಂಗ್ರೆಸ್ ಸರ್ಕಾರದಿಂದ ರಾಮಭಕ್ತರ ಬೆದರಿಸುವ ಕೆಲಸ: ಆರ್‌.ಅಶೋಕ್

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ 19-20 ದಿನ ಇರುವಾಗಲೇ ರಾಮ ಭಕ್ತರ ಬೆದರಿಸುವ ಕೆಲಸ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್ ವಾಗ್ದಾಳಿ ನಡೆಸಿದರು. 

BJP Opposition Leader R Ashok Slams On Congress Govt At Davanagere gvd
Author
First Published Jan 4, 2024, 3:55 PM IST

ದಾವಣಗೆರೆ (ಜ.04): ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ 19-20 ದಿನ ಇರುವಾಗಲೇ ರಾಮ ಭಕ್ತರ ಬೆದರಿಸುವ ಕೆಲಸ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್ ವಾಗ್ದಾಳಿ ನಡೆಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದು, ಲೋಕಸಭೆಯಲ್ಲಿ ಸೋಲಿನ ಭೀತಿಯಿಂದ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದರು. ಲೋಕಸಭೆ ಚುನಾವಣೆ ಹಿನ್ನೆಲೆಯ ಎಲ್ಲಾ ಸಮೀಕ್ಷೆಗಳಲ್ಲೂ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆಂಬ ಅಭಿಪ್ರಾಯ ವ್ಯಕ್ತವಾಗಿದೆ. 

ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಂದಾಗ ಕಾಂಗ್ರೆಸ್ ನವರು ರಾಮನ ಬಗ್ಗೆ ಮಾತನಾಡಿದ್ದರು. ರಾಮಾಯಣವೇ ಇಲ್ಲವೆಂದು, ಶ್ರೀರಾಮಚಂದ್ರ ಕೇವಲ ಕಲ್ಪನೆಯೆಂಬುದಾಗಿ ಹೇಳಿದ್ದು ಇದೇ ಕಾಂಗ್ರೆಸ್ ಎಂದು ದೂರಿದರು. ಶ್ರೀರಾಮ ಮಂದಿರ ಇರುವುದು ಕಾಂಗ್ರೆಸ್ಸಿನವರಿಗೆ ಇಷ್ಟ ಇಲ್ಲ. ಅಲ್ಲಿ ಬಾಬ್ರಿ ಮಸೀದಿ ಕಾಂಗ್ರೆಸ್ಸಿಗರಿಗೆ ಇರಬೇಕಿತ್ತು. ಈ ಹಿನ್ನೆಲೆಯಲ್ಲಿ 31 ವರ್ಷದ ನಂತರ ಕರ ಸೇವಕರ ಮೇಲೆ ಕೇಸ್ ಹಾಕಿ ಬಂಧಿಸಿದ್ದಾರೆ. ಕರ ಸೇವಕರ ಮೇಲೆ ಹಾಕಿದ ಕೇಸ್ ಗಳಿಗೆ ಸಾಕ್ಷಿ ಇಲ್ಲವೆಂದು ಕೋರ್ಟ್ ಹೇಳಿದೆ ಎಂದು ತಿಳಿಸಿದರು.

ಭಾರತ ಹಿಂದು ರಾಷ್ಟ್ರವಾದರೆ ಅದಕ್ಕಿಂತ ಅಪಾಯ ಮತ್ತೊಂದಿಲ್ಲ: ಯತೀಂದ್ರ ಸಿದ್ದರಾಮಯ್ಯ

ಬಿಜೆಪಿಯವರಿಗೆ ಕಾನೂನು ಗೊತ್ತಿದೆಯೇ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳುತ್ತಾರೆ. ನಾನು ಕೇಳುತ್ತೇನೆ, ನಿಮಗೆ ಕಾನೂನು ಗೊತ್ತಿದೆಯೇ ಸಿದ್ದರಾಮಯ್ಯನವರೇ? ಹುಬ್ಬಳ್ಳಿಯಲ್ಲಿ ಆಟೋ ಓಡಿಸಿ ಅಲ್ಲಿ ಓಡಾಡುತ್ತಿದ್ದ, ತಲೆ ಮರೆಸಿಕೊಂಡಿದ್ದಾನೆಂದು ಹೇಳುತ್ತಾರೆ. ಆಟೋ ಓಡಿಸಿಕೊಂಡಿದ್ದವನು ಪೊಲೀಸ್ ಸ್ಟೇಷನ್ ಮುಂದೆ ಓಡಾಡಿಕೊಂಡಿದ್ದವನು ಕಣ್ಣಿಗೆ ಕಾಣಲಿಲ್ವಾ? ಅವನಿಗೆ ನೋಟಿಸ್‌ ನೀಡಿಲ್ಲ. ನಾನು ಇವತ್ತು ಆ ಎಲ್ಲರ ಮನೆಗೆ ಭೇಟಿ ನೀಡುತ್ತೇವೆ. ಆ ಎಲ್ಲರ ಮೇಲಿನ ಕೇಸ್ ಹಿಂಪಡೆದು, ಸಂಬಂಧಿಸಿದ ಪೊಲೀಸ್ ಅಧಿಕಾರಿಯ ಅಮಾನತುಪಡಿಸಬೇಕು ಎಂದು ತಾಕೀತು ಮಾಡಿದರು.

ಹಿಂದೂ ಕಾರ್ಯಕರ್ತರ ಹೆದರಿಸಿ, ತಮ್ಮ ನಾಯಕಿ ಮೆಚ್ಚಿಸಲು ಸಿದ್ದರಾಮಯ್ಯ ಸರ್ಕಾರ ಹೀಗೆಲ್ಲಾ ಮಾಡುತ್ತಿದೆ. ರಾಜ್ಯದಲ್ಲಿ ಟಿಪ್ಪು ಸಿದ್ಧಾಂತ ಸಿದ್ದರಾಮಯ್ಯ ಹೇರುತ್ತಿದ್ದಾರೆ. ದೇಶಾದ್ಯಂತ ರಾಮ ಮಂದಿರದ ಮಂತ್ರಾಕ್ಷತೆ ನೀಡಲಾಗುತ್ತಿದೆ. ನಾನು ನಮ್ಮ ರಾಜ್ಯದಲ್ಲಿ ಟಿಪ್ಪು ಆಡಳಿತ ನಡೆಸುತ್ತಿದ್ದೇವೆ, ನೋಡಿ ಎಂಬುದಾಗಿ ಹೇಳಲು ಸಿದ್ದರಾಮಯ್ಯ ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ಸಿಗೆ ಜನತೆ ತಕ್ಕ ಉತ್ತರ: ಟಿಪ್ಪು ಒಬ್ಬ ಹೇಡಿಯಾಗಿದ್ದು, ಯುದ್ಧ ಮಾಡಲಾಗದೇ ಮಕ್ಕಳನ್ನೇ ಅಡ ಇಟ್ಟವನು. ಅಂತಹವನನ್ನು ಸ್ವಾತಂತ್ರ್ಯ ಹೋರಾಟಗಾರನೆಂದು ಬಿಂಬಿಸಿದ್ದಾರೆ. ಯಾರು ಮಂತ್ರಾಕ್ಷತೆ ತೆಗೆದುಕೊಂಡವರು ಧೈರ್ಯವಾಗಿ ಶ್ರೀರಾಮಚಂದ್ರನ ಪೂಜೆ ಮಾಡಿ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಜನತೆ ತಕ್ಕ ಉತ್ತರ ನೀಡುತ್ತಾರೆ ಎಂದು ಆರ್.ಅಶೋಕ ಎಚ್ಚರಿಸಿದರು. ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ, ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ಟಿ.ಶ್ರೀನಿವಾಸ ದಾಸಕರಿಯಪ್ಪ ಇತರರಿದ್ದರು.

ಅಯೋಧ್ಯ ಅಭಿಯಾನ ಕಾಂಗ್ರೆಸ್‌ಗೆ ಭಯ: ಹುಬ್ಬಳ್ಳಿಯಲ್ಲಿ ನಡೆಯುವ ಹೋರಾಟವು ನ್ಯಾಯ ಸಿಗುವವರೆಗೂ ಇಡೀ ರಾಜ್ಯಾದ್ಯಂತ ಬಿಜೆಪಿ ಹೋರಾಟ ನಡೆಸಲಿದೆ. ಇಡೀ ರಾಜ್ಯದಲ್ಲಿ ಅಯೋಧ್ಯ ಅಭಿಯಾನದ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಭಯ ಉಂಟು ಮಾಡುತ್ತಿದೆ. ಭಯ ಬಿದ್ದು ಹಿಂದು ಕಾರ್ಯಕರ್ತರು ಮನೆ ಸೇರಿಕೊಳ್ಳಬೇಕೆಂಬ ವಾತಾವರಣ ಹುಟ್ಟು ಹಾಕುವ ಕೆಲಸ ಸರ್ಕಾರ ಮಾಡುತ್ತಿದೆ. ಹಿಂದೂ ಕಾರ್ಯಕರ್ತರು ಹೆದರುವ ಅವಶ್ಯಕತೆ ಇಲ್ಲ. ನಿಮ್ಮೊಂದಿಗೆ ನಾವು ಇದ್ದೇವೆ.

ಕಾಂಗ್ರೆಸ್‌ ಸರ್ಕಾರಕ್ಕೆ 5ನೇ ಗ್ಯಾರಂಟಿಯೇ ಪ್ರಮುಖ ಅಸ್ತ್ರ: ಸಚಿವ ಮಧು ಬಂಗಾರಪ್ಪ

ಪಿಎಫ್‌ಐ ಕಾರ್ಯಕರ್ತರ ಬಿಡುಗಡೆ ಕಾಂಗ್ರೆಸ್‌ ಸ್ಲೋಗನ್: ಪಿಎಫ್ಐ ಕಾರ್ಯಕರ್ತರ ಮೇಲಿನ 175 ಕೇಸ್ ವಾಪಸ್‌ ಪಡೆದಿದ್ದು, 1700 ಜನರ ಮೇಲಿನ ಕೇಸ್ ಹಿಂದಕ್ಕೆ ತಗೊಂಡಿದ್ದೀರಿ. ಕೇರಳದಲ್ಲಿ ಪಿಎಫ್‌ಐ ಕಾರ್ಯಕರ್ತರ ಮೇಲೆ 40 ಕೊಲೆ ಕೇಸ್ ಇದೆ. ಕೇರಳ ಸರ್ಕಾರ ಅಫಿಡವಿಟ್ ನೀಡಿದೆ. ಪಿಎಫ್‌ಐ ಕಾರ್ಯಕರ್ತರ ಬಿಡುಗಡೆಗೊಳಿಸುವ ಕೆಲಸ ಮಾಡುತ್ತೀರಾ? ಶ್ರೀರಾಮ ಭಕ್ತರ ಬಂಧಿಸಿ, ಪಿಎಫ್‌ಐ ದೇಶದ್ರೋಹಿಗಳ ಬಿಡುಗಡೆ ಮಾಡಿ ಎಂಬುದಾಗಿ ಕಾಂಗ್ರೆಸ್‌ನ ಸ್ಲೋಗನ್ ಆಗಿದೆ ಎಂದು ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದರು.

Follow Us:
Download App:
  • android
  • ios