ಭಾಲ್ಕಿ: ಕಾಂಗ್ರೆಸ್ ಪ್ರಜಾಧ್ವನಿ ನಿಮಿತ್ತ ಖಾಸಗಿ ಶಾಲೆಗಳಿಗೆ ರಜೆಗೆ ಬಿಜೆಪಿ ಆಕ್ಷೇಪ
ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ ಖಾಸಗಿ ಶಾಲೆಗಳಿಗೆ ರಜೆ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ, ಮಾಜಿ ಶಾಸಕ ಪ್ರಕಾಶ ಖಂಡ್ರೆ ನೇತೃತ್ವದಲ್ಲಿ ಬಿಜೆಪಿಯಿಂದ ಬಿಇಒ ಕಚೇರಿ ಎದುರು ಪ್ರತಿಭಟನೆ.
ಭಾಲ್ಕಿ(ಫೆ.04): ಪಟ್ಟಣದ ಬಿಕೆಐಟಿ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಶುಕ್ರವಾರ ಸಂಜೆ ನಡೆದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಸ್ಥಳೀಯ ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಶಾಲಾ ವಾಹನಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ತಾಲೂಕು ಬಿಜೆಪಿ ಶುಕ್ರವಾರ ಬಿಇಒ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.
ಮಾಜಿ ಶಾಸಕ ಪ್ರಕಾಶ ಖಂಡ್ರೆ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಬಿಇಒ ಕಚೇರಿಗೆ ಮುತ್ತಿಗೆ ಹಾಕಲು ಆಗಮಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಹಜರ್ ಹುಸೇನ್ ರಜೆ ಹಿನ್ನಲೆಯಲ್ಲಿ ಪ್ರಭಾರಿ ಬಿಇಒ ಮನೋಹರ್ ಹೋಳ್ಕರ್ ಕಚೇರಿಯಲ್ಲಿ ಇರಲಿಲ್ಲ. ಇದರಿಂದ ಕೆರಳಿದ ಕಾರ್ಯಕರ್ತರು ಮುಖಂಡರ ಸೂಚನೆ ಮೇರೆಗೆ ಕಚೇರಿಗೆ ಚಿಲಕ ಜಡಿದು ಶಾಸಕರ ಅಣತಿಯಿಂದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕುಣಿಯುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಮನವಿ ಸಲ್ಲಿಸಲು ಕಚೇರಿಗೆ ಬರುವುದಾಗಿ ಮುಂಚೆಯೆ ಮಾಹಿತಿ ನೀಡಿದ್ದರು ಕೂಡ ಪ್ರಭಾರ ವಹಿಸಿಕೊಂಡ ಅಧಿಕಾರಿ ಕರ್ತವ್ಯ ಸ್ಥಳದಲ್ಲಿ ಇರದಿದ್ದರೇ ಹೇಗೆ? ಏನಾದರೂ ಘಟನೆ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದರು. ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆಯೇ ಬಿಜೆಪಿ ಮುಖಂಡರು ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.
Bidar: ಸಿ.ಟಿ.ರವಿಗೆ ಜೆಡಿಎಸ್ ಟಿಕೆಟ್ ಆಫರ್ ಕೊಟ್ಟ ಬಂಡೆಪ್ಪ ಖಾಶೆಂಪೂರ್
ಈ ಸಂದರ್ಭದಲ್ಲಿ ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ನಮ್ಮ ಜಿಲ್ಲೆ ತೀರಾ ಹಿಂದುಳಿದಿದೆ. ಆದರೆ ಸರ್ಕಾರದ ವ್ಯವಸ್ಥೆಯಲ್ಲಿರುವ ಅಧಿಕಾರಿಗಳು ಒಂದು ಪಕ್ಷದ ಏಜೆಂಟರಂತೆ ವರ್ತಿಸುತ್ತಿರುವುದು ಸರಿಯಲ್ಲ.
ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಪಟ್ಟಣದ ಖಾಸಗಿ ಶಾಲಾ ಕಾಲೇಜುಗಳನ್ನು ರಜೆ ಘೋಷಿಸಲಾಗಿದೆ ಹಾಗೂ ಶಾಲೆಯ ವಾಹನಗಳು ಕಾರ್ಯಕರ್ತರನ್ನು ಕರೆತರಲು ಬಳಸಿಕೊಳ್ಳಲಾಗಿದೆ. ಇದರಿಂದ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀಳುತ್ತದೆ. ಇದಕ್ಕೆ ಅನುಮತಿ ನೀಡಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಬೇಕೆಂದರು.
ರೈಲ್ವೆ ಪ್ರಯಾಣಿಕರ ಸಲಹಾ ಸಮಿತಿ ಸದಸ್ಯ ಶಿವರಾಜ ಗಂದಗೆ, ಜನಾರ್ಧನ ಬಿರಾದಾರ್, ತಾಲೂಕು ಬಿಜೆಪಿ ಅಧ್ಯಕ್ಷ ಪಂಡಿತ ಶಿರೋಳೆ, ಗೋವಿಂದರಾವ ಬಿರಾದಾರ್, ವಿಜಯಕುಮಾರ ಕಣಜಿ, ಸುರೇಶ ಹುಬಳಿಕರ್, ಸಂತೋಷ ಪಾಟೀಲ್, ಪಾಂಡುರಂಗ ಕನಸೆ, ಸುಧಾಕರ ಸೂರ್ಯವಂಶಿ ಸೇರಿದಂತೆ ಇನ್ನಿತರರು ಇದ್ದರು.