4 ದಶಕ ರಾಜಕೀಯ ಮಾಡಿದ್ದರೂ ಸಿದ್ದುಗೆ ಸೋಲಿನ ಭೀತಿ: ಸಿ.ಟಿ.ರವಿ
ನಾಲ್ಕು ದಶಕಗಳ ಕಾಲ ರಾಜಕಾರಣ ಮಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಬಾದಾಮಿ ಅಥವಾ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಬರುವ ವಿಶ್ವಾಸವಿಲ್ಲ. ಎರಡು ಕಡೆ ಸೋಲಿನ ಭೀತಿಯಿಂದಾಗಿ ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯಲು ಮುಂದಾಗಿದ್ದಾರೆ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ಬೆಂಗಳೂರು (ಜ.14): ನಾಲ್ಕು ದಶಕಗಳ ಕಾಲ ರಾಜಕಾರಣ ಮಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಬಾದಾಮಿ ಅಥವಾ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಬರುವ ವಿಶ್ವಾಸವಿಲ್ಲ. ಎರಡು ಕಡೆ ಸೋಲಿನ ಭೀತಿಯಿಂದಾಗಿ ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯಲು ಮುಂದಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ. ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸ್ವಂತ ಜಿಲ್ಲೆ ಮೈಸೂರಿನಲ್ಲಿ ನಿಂತು ಗೆಲ್ಲುವ ವಿಶ್ವಾಸ ಸಿದ್ದರಾಮಯ್ಯ ಅವರಿಗಿಲ್ಲ. ಬಾದಾಮಿಯಲ್ಲಿ ಮತ್ತೊಮ್ಮೆ ಕಣಕ್ಕಿಳಿದು ಗೆಲ್ಲುವ ವಿಶ್ವಾಸವೂ ಇಲ್ಲ.
ವಿಶ್ವಾಸ ಇದ್ದಿದ್ದರೆ ಬಾದಾಮಿ, ಚಾಮುಂಡೇಶ್ವರಿಯಲ್ಲಿ ನಿಂತು ಗೆಲ್ಲುತ್ತಿದ್ದರು. ಎರಡು ಕಡೆಯಲ್ಲಿ ಸೋಲಿನ ಭೀತಿ ಇರುವುದರಿಂದಾಗಿ ಕೋಲಾರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರ ವಿರುದ್ಧ ಬಿಜೆಪಿ ಗೆಲುವು ಸಾಧಿಸಲಿದೆ. ಈ ಚುನಾವಣೆಯು ಸಿದ್ಧಾಂತ ನಡುವಿನ ಹೋರಾಟವೇ ಹೊರತು, ಅವರ ವ್ಯಕ್ತಿಗತವಾಗಿ ಅಲ್ಲ ಎಂದು ಟಾಂಗ್ ಕೊಟ್ಟರು. ಸಿದ್ದರಾಮಯ್ಯ ಅವರದ್ದು ಓಲೈಕೆ ರಾಜನೀತಿಯಾಗಿದೆ. ಪಿಎಫ್‌ಐ, ಎಸ್‌ಡಿಪಿಐ ಓಲೈಕೆ ಮಾಡುತ್ತಾರೆ. ಹೀಗಾಗಿ ಅವರು ಯಶಸ್ಸು ಕಾಣಲು ಸಾಧ್ಯವಿಲ್ಲ. ಅವರ ವಿರುದ್ಧ ಕೋಲಾರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ತಿರುಗೇಟು ನೀಡಿದರು.
ಅಂಬೇಡ್ಕರ್ ಹೆಸರು ಭಾರತರತ್ನಕ್ಕೆ ಶಿಫಾರಸು ಮಾಡಿದ್ದು ಅಟಲ್: ಸಿ.ಟಿ.ರವಿ
ಜನ ಗುಡಿಸಿದ್ದಾರೆ: ದೇಶದ ಜನ ಒಂದೊಂದೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಗುಡಿಸುತ್ತಿದ್ದಾರೆ. ಪಂಜಾಬ್‌ನಲ್ಲಿ ಅಧಿಕಾರದಲ್ಲಿದ್ದಾಗ ಜನರು ಗುಡಿಸಿದರು. ದೆಹಲಿಯಲ್ಲಿ ಡೆಪಾಸಿಟ್ ಇಲ್ಲದಂತೆ ಗುಡಿಸಿದ್ದಾರೆ, ಉತ್ತರ ಪ್ರದೇಶದಲ್ಲಿ 399 ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡಿತ್ತು. 387 ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡರು. ಜನರೇ ಕಾಂಗ್ರೆಸ್ ಪಕ್ಷವನ್ನು ಗುಡಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರೇ ಮಾಲೀಕರು, ಅವರೇ ತೀರ್ಮಾನ ಮಾಡುವುದು, ಅವರೇ ಗುಡಿಸುತ್ತಾರೆ ಎಂದು ಹೇಳಿದರು.
ಪ್ರತಿಯೊಬ್ಬರೂ ಜೀವನದಲ್ಲಿ ಮುಂದೆ ಬರಬೇಕು: ಜೀವನದಲ್ಲಿ ಪ್ರತಿಯೊಬ್ಬರು ಮುಂದೆ ಬರಬೇಕು ಎಂದು ಶಾಸಕ ಸಿ.ಟಿ.ರವಿ ಹೇಳಿದರು. ಚಿಕ್ಕಮಗಳೂರು ಹಬ್ಬದ ಅಂಗವಾಗಿ ಏರ್ಪಡಿಸಲಾಗಿದ್ದ ವಾಕಥಾನ್‌ಗೆ ಇಲ್ಲಿನ ಜಿಲ್ಲಾ ಆಟದ ಮೈದಾನದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬರಿಗೂ ಜೀವನದಲ್ಲಿ ಮುಂದೆ ಬರಬೇಕೆಂಬ ಆಪೇಕ್ಷೆ ಸ್ವಾಭಾವಿಕವಾಗಿ ಇರುತ್ತದೆ. ಎಲ್ಲರೂ ಮುಂದೆ ಬಂದರೆ ಸ್ವಾಭಾವಿಕವಾಗಿ ದೇಶ ಮುಂದೆ ಬರುತ್ತದೆ. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳು ಆತ್ಮನಿರ್ಭರ ಭಾರತ ಎಂದು ಹೇಳಿದರು. ದೇಶದ ಪ್ರತಿ ಪ್ರಜೆ ಮುಂದೆ ಬಂದರೆ 138 ಕೋಟಿ ಹೆಜ್ಜೆ ದೇಶ ಮುಂದೆ ಹೋಗುತ್ತದೆ. ಎರಡು ಹೆಜ್ಜೆ ಮುಂದೆ ಹೋದರೆ ಅದು 276 ಕೋಟಿ ಹೆಜ್ಜೆ ಮುಂದೆ ಹೋಗುತ್ತದೆ.
ಹಳೆ ಮೈಸೂರಲ್ಲಿ ಒಕ್ಕಲಿಗರ ಸೆಳೆಯಲು ಬಿಜೆಪಿ ತಂತ್ರ: ಸಿ.ಟಿ.ರವಿ
ನಮ್ಮ ಬದುಕಿನಲ್ಲಿ ಎಷ್ಟು ಹೆಜ್ಜೆ ಮುಂದೆ ಹೋಗುತ್ತೇವೆಯೋ ಅಷ್ಟು ಹೆಜ್ಜೆ ನಮ್ಮ ದೇಶ ಮುಂದೆ ಹೋಗುತ್ತದೆ. ಈ ರೀತಿ ಜೀವನದಲ್ಲಿ ಪ್ರತಿಯೊಬ್ಬರು ಮುಂದೆ ಬರೋಣ ಎಂದು ಹೇಳಿದರು. ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, ನಮ್ಮ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶೇಷತೆ ಇದೆ, ಹಬ್ಬ ಎಂದರೆ ಮನಸ್ಸುಗಳನ್ನು ಬೆಸೆಯುವ ಕಾರ್ಯಕ್ರಮ. ಹಿಂದೆ ಹಬ್ಬ ಹರಿದಿನಗಳಲ್ಲಿ ಎಲ್ಲರೂ ಒಂದೆಡೆ ಸೇರುತ್ತಿದ್ದರು, ಸಂಬಂಧಗಳನ್ನು ಬೆಳೆಸುವ ಕೆಲಸವಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಎಲ್ಲೋ ಒಂದು ಕಡೆ ಹಿಂದಿನ ವ್ಯವಸ್ಥೆ ಮಾಯವಾಗಿರುವುದನ್ನು ಕಾಣುತ್ತಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪ್ರಭು, ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ, ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ರಾಜೇಶ್ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.