Asianet Suvarna News Asianet Suvarna News

Council Election Result : ಕಾಂಗ್ರೆಸ್ ಜಯದ ಕಾರಣ : ಬಿಜೆಪಿ ಸಂಸದ, ಸಚಿವರಿಂದಲೂ ಸಿಕ್ಕಿತ್ತು ಬೆಂಬಲ

  •  ಬಿಜೆಪಿ ಸಂಸದ, ಸಚಿವರಿಂದಲೂ ಬೆಂಬಲ :  ಕಾಂಗ್ರೆಸ್‌ಗೆ ಒಲಿದ ಜಯ
  • ಸ್ವ-ಜಾತಿ, ಪರಸ್ಪರ ಮುನಿಸು, ಕೋಪದಿಂದಾಗಿ ಕಾಂಗ್ರೆಸ್‌ಗೆ ಒಲಿದ ಗೆಲುವು
  • ಕಾಂಗ್ರೆಸ್‌ ಪರ ಕೆಲಸ ಆರೋಪ -  ಹೈಕಮಾಂಡ್‌ಗೆ ದೂರು ನೀಡಲು ನಿರ್ಧಾರ
BJP MP Sanganna karadi  halappa Achar Supports Congress in Raichur MLC Election snr
Author
Bengaluru, First Published Dec 16, 2021, 2:55 PM IST | Last Updated Dec 16, 2021, 2:56 PM IST

 ರಾಯಚೂರು (ಡಿ.16): ಬಿಜೆಪಿಯ ಜನಪ್ರತಿನಿಧಿಗಳು, ಸದಸ್ಯರು ಒಬ್ಬರ ಮೇಲಿನ ಕೋಪ, ಇಗೋ, ಪ್ರಾಂತೀಯತೆ ಹಾಗೂ ಸ್ವ-ಜಾತಿಗರು ಎಂದು ತೋರಿದ ಉದಾರತೆಯ ಫಲವಾಗಿ ವಿಧಾನ ಪರಿಷತ್‌ಗೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ ಬನಹಟ್ಟಿವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿ ಜಯಗಳಿಸಿರುವುದು ರಾಯಚೂರು-ಕೊಪ್ಪಳ ಜಿಲ್ಲೆಗಳ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ. ವಿಧಾನ ಪರಿಷತ್‌ ಚುನಾವಣೆಯಲ್ಲಿ (MLC Election) ಬಿಜೆಪಿ (BJP) ಬನಹಟ್ಟಿ 2942 ಮತ ಪಡೆದರೆ, ಕಾಂಗ್ರೆಸ್‌ (Congress) ಬಯ್ಯಾಪುರ 3369 ಮತಗಳನ್ನು ಪಡೆದು, 427 ಮತಗಳ ಅಂತರದಿಂದ ಗೆದ್ದ ಬಳಿಕ ಉಭಯ ಪಕ್ಷಗಳ ಮುಖಂಡರು ಸೋಲು-ಗೆಲುವಿನ ವಿಶ್ಲೇಷಣೆಯಲ್ಲಿ ಮುಳುಗಿದ್ದಾರೆ. ಈ ಸಮಯದಲ್ಲಿ ಕೆಲ ಸತ್ಯಾಂಶಗಳು ಬೆಳಕಿಗೆ ಬಂದಿರುವುದು ಪಕ್ಷದಲ್ಲಿ ಅಸಮಾಧಾನ ಸ್ಫೋಟಕ್ಕೆ ಕಾರಣವಾಗಿದೆ.

ಪರೋಕ್ಷವಾಗಿ ಕಾಂಗ್ರೆಸ್‌ ಪರ ಕೆಲಸ:  ಬಿಜೆಪಿಯ (BJP) ಕೊಪ್ಪಳ ಸಂಸದ ಸಂಗಣ್ಣ ಕರಡಿ (Sanganna Karadi), ಉಸ್ತುವಾರಿ ಸಚಿವ ಹಾಲಪ್ಪ ಆಚಾರ (Halappa Achar), ಸ್ಥಳೀಯ ಶಾಸಕ ಡಾ.ಶಿವರಾಜ ಪಾಟೀಲ್‌ ಸೇರಿದಂತೆ ನಗರಸಭೆ, ಪುರಸಭೆ, ಪಪಂ ಹಾಗೂ ಗ್ರಾಪಂಗಳ ಸದಸ್ಯರು ಪಕ್ಷ ನಿಷ್ಟೆಯನ್ನು ಗಾಳಿಗೆ ತೂರಿ ಸ್ವ-ಜಾತಿಯತೆ, ಪ್ರಾಂತೀಯತೆ, ಹಳೆಯ ಸ್ನೇಹ ಸಂಬಂಧ, ದೇವದುರ್ಗ ಶಾಸಕ ಕೆ.ಶಿವನಗೌಡ ಮೇಲಿನ ಕೋಪ, ಇಗೋದಿಂದಾಗಿ ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ ಕಾಂಗ್ರೆಸ್‌ (Congress) ಪರ ಕೆಲಸ ಮಾಡಿರುವುದರಿಂದ ಮೇಲ್ಮನೆ ಕದನದಲ್ಲಿ ಬಿಜೆಪಿ ಸೋಲು ಕಾಣುವಂತಾಗಿದೆ ಎನ್ನುವ ವಿಚಾರಗಳು ನಿಷ್ಠಾವಂತ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿದೆ.

ಆಡಿಯೋದಲ್ಲಿ ಬಯಲು:  ಬಿಜೆಪಿಯ ಸಚಿವ ಹಾಲಪ್ಪ ಆಚಾರ, ಸಂಸದ ಸಂಗಣ್ಣ ಕರಡಿ ಅವರು ಕಾಂಗ್ರೆಸ್‌ (Congress) ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಅದಕ್ಕಾಗಿಯೇ ಪರಿಷತ್‌ ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು. ಸ್ವ-ಜಾತಿಯತೆ, ಹಳೆಯ ಸ್ನೇಹ ಸಂಬಂಧ ಸೇರಿದಂತೆ ಇತರೆ ವಿಷಯಗಳನ್ನು ಚರ್ಚಿಸಿರುವ ಫೋನ್‌ (Phone) ಮುದ್ರಿತ ಆಡಿಯೋ ಇದೀಗ ವೈರಲ್‌ಗೊಂಡಿದೆ. ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್‌ ಬೆಂಬಲಿಗರು, ಹಾಲಪ್ಪ ಆಚಾರ ಅವರ ಆಪ್ತರು ಹಾಗೂ ಅಲ್ಲಿಯ ನಗರಸಭೆ ಸದಸ್ಯೆಯೊಬ್ಬರ ಪತಿಯೊಂದಿಗೆ ನಡೆದ ಸಂಭಾಷಣೆ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.

ಒಬ್ಬಂಟಿಯಾದ ಶಿವನಗೌಡ:  ಮೇಲ್ಮನೆ ಕದನದಲ್ಲಿ ಬಿಜೆಪಿಯಿಂದ (BJP) ಸ್ಪರ್ಧಿಸಿರುವ ವಿಶ್ವನಾಥ ಬನಹಟ್ಟಿಅವರು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಪರಮ ಆಪ್ತರಾಗಿದ್ದಾರೆ. ಎಂಎಲ್ಸಿ ಚುನಾವಣೆ ಘೊಷಣೆಯಾದ ನಂತರ ಬನಹಟ್ಟಿಗೆ ಟಿಕೆಟ್‌ ನೀಡುವ ವಿಷಯವಾಗಿಯೇ ಬಿಜೆಪಿಯ ಅನೇಕರಲ್ಲಿ ಅಸಮಾಧಾನವಿತ್ತು. ಆದರೆ ಶಾಸಕ ಶಿವನಗೌಡ ಎಲ್ಲವನ್ನು ಮೀರಿ ತಮ್ಮ ಆಪ್ತರಾದ ಬನಹಟ್ಟಿಗೆ ಟಿಕೆಟ್‌ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದರು. ಅದೇ ರೀತಿ ರಾಯಚೂರು-ಕೊಪ್ಪಳ ಜಿಲ್ಲೆಯಾದ್ಯಂತ ಬಿರುಸಿನ ಪ್ರಚಾರದ ಜೊತೆಗೆ ಹಣ ಇತರೆ ಆಮೀಷಗಳನ್ನು ಪೂರೈಸಿ ಮತದಾರರನ್ನು ಸಿದ್ಧಪಡಿಸಿದ್ದರು. ಒಂದು ವೇಳೆ ಎಲೆಕ್ಷನ್‌ನಲ್ಲಿ ಬಿಜೆಪಿ ಗೆದ್ದರೆ ಅದರ ಸಂಪೂರ್ಣ ಕ್ರೆಡಿಟ್‌ ಶಿವನಗೌಡರಿಗೆ ಸೇರುತ್ತದೆ ಎನ್ನುವ ಇಗೋ, ಅವರ ಮೇಲಿನ ಕೋಪದಿಂದಾಗಿ ಉಭಯ ಜಿಲ್ಲೆಗಳ ಜನಪ್ರತಿನಿಧಿಗಳು ಕೈ ಬಳಗದೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಬಿಜೆಪಿಯನ್ನು ಸೋಲಿಸಿದ್ದಾರೆ ಎನ್ನುವ ಗಂಭೀರ ಆರೋಪಗಳು ಪಕ್ಷದಲ್ಲಿ ಹರಿದಾಡುತ್ತಿವೆ.

ದೂರು ನೀಡಲು ಸಿದ್ಧತೆ:  ರಾಯಚೂರಿನ ( Raichur) ಮೇಲ್ಮನೆ ಕದನದಲ್ಲಿ ಬಿಜೆಪಿ ಅನುಭವಿಸಿದ ಸೋಲು, ಪಕ್ಷ ನಿಷ್ಠೆ ಮರೆತ ಜನಪ್ರತಿನಿಧಿಗಳ ಕುರಿತು ಹೈಕಮಾಂಡ್‌ ಗಮನಕ್ಕೆ ತರುವುದರ ಜೊತೆಗೆ ಅವರ ವಿರುದ್ಧ ದೂರು ನೀಡಲು ಪಕ್ಷದ ಕೆಲ ಮುಖಂಡರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಸಚಿವ ಕೆ.ಎಸ್‌.ಈಶ್ವರಪ್ಪಗೆ (KS eshwarappa) ಮೌಖಿಕ ವರದಿ ನೀಡಿರುವ ಬಿಜೆಪಿಗರು, ಇಷ್ಟರಲ್ಲಿಯೇ ನಿಯೋಗ ತೆರಳಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ (Basavaraj Bommai) ದೂರು ಸಲ್ಲಿಸಿ ಮೋಸ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರುವುದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮತದಾರರು ನೀಡಿದ ತೀರ್ಪು ಗೌರವಿಸಲಾಗುವುದು. ಕೊಪ್ಪಳದಲ್ಲಿ (Koppal)  ಪಕ್ಷದ ಮುಖಂಡರು ಫೋನಿನಲ್ಲಿ ಮಾತನಾಡಿಕೊಂಡಿರುವ ಆಡಿಯೋ ಕ್ಲಿಪ್‌ ನನಗೆ ಬಂದಿಲ್ಲ. ಚುನಾವಣೆಯಲ್ಲಿ (Election) ಬಿಜೆಪಿಗೆ ಉಂಟಾಗಿರುವ ಹಿನ್ನಡೆ ಹಾಗೂ ಸೋಲಿನ ಕಾರಣಗಳ ಕುರಿತು ಸಭೆ ನಡೆಸಿ ಪರಾಮರ್ಶೆ ನಡೆಸಲಾಗುವುದು. ಅದನ್ನು ಹೈಕಮಾಂಡ್‌ ಗಮನಕ್ಕೆ ತರಲಾಗುವುದು. ಈ ಎಲೆಕ್ಷನ್‌ನಲ್ಲಿ ಪಕ್ಷದಿಂದ ಆಗಿರುವಂತಹ ಲೋಪದೋಷಗಳನ್ನು ಸರಿಪಡಿಸಿಕೊಂಡು ಮುಂದಿನ ತಾಪಂ, ಜಿಪಂ ಸಮರ್ಥವಾಗಿ ಎದುರಿಸಲಾಗುವುದು.

- ರಮಾನಂದ ಯಾದವ್‌, ಬಿಜೆಪಿ ಜಿಲ್ಲಾಧ್ಯಕ್ಷ, ರಾಯಚೂರು

Latest Videos
Follow Us:
Download App:
  • android
  • ios