ಕಾಂಗ್ರೆಸ್‌ನವರು ಭಾರತ ಜೋಡಿಸುವುದನ್ನು ಬಿಜೆಪಿಯರನ್ನು ನೋಡಿ ಕಲಿಯಲಿ: ಪ್ರತಾಪ್ ಸಿಂಹ
ಇನ್ನೂ 5 ವರ್ಷ ಮತ್ತೊಂದು ಯಾತ್ರೆ ಕೈಗೊಳ್ಳಿ. ಆಗ ಡೈರೆಕ್ಟ್ ಆಗಿ ಡೆಲ್ಲಿ ಅಥವಾ ಇಟಲಿಯಿಂದ ನೇರವಾಗಿ ಮೈಸೂರಿಗೆ ಬಂದು ಲ್ಯಾಂಡ್ ಆಗಬಹುದು: ಪ್ರತಾಪ್ ಸಿಂಹ
ಮೈಸೂರು(ಅ.01): ಕಾಂಗ್ರೆಸ್‌ನವರು ಭಾರತ ಜೋಡಿಸುವುದನ್ನು ಬಿಜೆಪಿಯರನ್ನು ನೋಡಿ ಕಲಿಯಲಿ ಎಂದು ಸಂಸದ ಪ್ರತಾಪ್ ಸಿಂಹ ಸಲಹೆ ನೀಡಿದರು. ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಸುವರ್ಣ ಚತುಷ್ಪಥ ಹೆದ್ದಾರಿ ನಿರ್ಮಾಣವಾಯ್ತು. ನರೇಂದ್ರ ಮೋದಿ ಕಾಲದಲ್ಲಿ ದೇಶದ ತುಂಬೆಲ್ಲ ರಸ್ತೆ, ವಿಮಾನ, ರೈಲು ಸಂಪರ್ಕ ಆಗುತ್ತಿದೆ. ಭಾರತ ಜೋಡಿಸುವುದಕ್ಕೆ ನಡಿಗೆ ಪ್ರಾರಂಭಿಸಿರುವವರು ಭಾರತ ತೋಡೋ ತಂಡದ ಸಹವಾಸ ಬಿಡಲಿ ಎಂದರು.
ದಸರಾ ಹೊಸ್ತಿಲಲ್ಲಿ ಮೈಸೂರಿಗೆ ಬರ್ತಿದ್ದೀರಿ. ನೀವು ಬರುವ ನಂಜನಗೂಡು ಹೆದ್ದಾರಿ ಮೋದಿ ಕಾಲದಲ್ಲಿ ನಿರ್ಮಾಣವಾಗಿದ್ದು. ಹಾಗೆಯೇ ಬರುವಾಗ ಮೈಸೂರು ವಿಮಾನ ನಿಲ್ದಾಣ ನೋಡಿಕೊಂಡು ಬನ್ನಿ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬಂದು ತಾಯಿಯ ದರ್ಶನ ಪಡೆದು ಹೋಗಿ. ಮೈಸೂರು- ಬೆಂಗಳೂರು ಹೆದ್ದಾರಿ ಅಭಿವೃದ್ಧಿಯಾಗಿದೆ. ಮುಂದೆ ಹೊಸಕೋಟೆ ಬಳ್ಳಾರಿ ಭಾಗಕ್ಕೆ ಹೋಗ್ತೀರಿ. ಮೋದಿ ಸರ್ಕಾರ ಭಾರತವನ್ನು ಹೇಗೆ ಜೋಡಿಸಿದೆ ಅನ್ನೋದನ್ನು ನೋಡ್ಕೊಂಡು ಹೋಗಿ ಎಂದರು.
ಭಾರತ್ ಜೋಡೋ ಕಾಂಗ್ರೆಸ್‌ಗೆ ಹೊಸ ಸಂಜೀವಿನಿ: ಜೈರಾಂ ರಮೇಶ್
ಇನ್ನೂ 5 ವರ್ಷ ಮತ್ತೊಂದು ಯಾತ್ರೆ ಕೈಗೊಳ್ಳಿ. ಆಗ ಡೈರೆಕ್ಟ್ ಆಗಿ ಡೆಲ್ಲಿ ಅಥವಾ ಇಟಲಿಯಿಂದ ನೇರವಾಗಿ ಮೈಸೂರಿಗೆ ಬಂದು ಲ್ಯಾಂಡ್ ಆಗಬಹುದು. ಸೂಪರ್ ಬೈಕ್‌ನಲ್ಲೋ, ಸೂಪರ್ ಕಾರ್‌ನಲ್ಲೊ ಯಾತ್ರೆ ಮಾಡಬಹುದು. ಕಾಂಗ್ರೆಸ್‌ಗೆ ಇನ್ನು 25 ವರ್ಷ ಭವಿಷ್ಯವಿಲ್ಲ. ಅಲ್ಲಿಯವರೆಗೆ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿ ಇರುತ್ತದೆ ಎಂದು ಅವರು ಹೇಳಿದರು.
ನೆಹರು, ಇಂದಿರಾರಿಂದಲೇ RSS ತುಳಿಯಲು ಸಾಧ್ಯವಾಗ್ಲಿಲ್ಲ, ಸಿದ್ದರಾಮಯ್ಯ ಯಾವ ಲೆಕ್ಕ?: ಈಶ್ವರಪ್ಪ
ಭಾರತ್ ಜೋಡೋ ಯಾತ್ರೆಯಲ್ಲಿ ಮೈಸೂರಿಗೆ ಆಗಮಿಸುತ್ತಿರುವ ರಾಹುಲ್ ಗಾಂಧಿಗೆ ಸ್ವಾಗತ ಕೋರಿದ ಸಂಸದ ಪ್ರತಾಪ್ ಸಿಂಹ ಅವರು, ಮತ ಪ್ರಚಾರಕ ಪ್ಯಾಸ್ಟರ್ ಭೇಟಿ ಮಾಡಿ ಆರಂಭವಾದ ಯಾತ್ರೆ ಇದು. ಜೀಸಸ್ ಒಬ್ಬನೇ ದೇವರು ಎನ್ನುವವನನ್ನು ಕೇರಳದಲ್ಲಿ ನೀವು ಭೇಟಿ ಮಾಡಿದಿರಿ. ಇದರಿಂದ ನಿಮ್ಮ ಉದ್ದೇಶ ಏನೆಂಬುದು ಗೊತ್ತಾಗಿದೆ. ಇದು ಜೋಡಿಸುವ ಯಾತ್ರೆ ಅಲ್ಲ, ಇದು ಒಡೆಯುವ ಯಾತ್ರೆ ಎಂದು ಕಿಡಿಕಾರಿದರು.
ರಾಜ್ಯಕ್ಕೆ ಬಂದಾಗ ಮಲೆ ಮಹದೇಶ್ವರರ ದೇವಸ್ಥಾನಕ್ಕೆ ಹೋಗಿ ಬನ್ನಿ. ಕೆರೆಗಳಿಗೆ ನೀರು ತುಂಬಿದ್ದರೆ ಅಲ್ಲಿಗೆ ಹೋಗಿ ಬನ್ನಿ. ಚಾಮರಾಜನಗರ ಮೊದಲು ಹಿಂದುಳಿದ ಜಿಲ್ಲೆಯಾಗಿತ್ತು, ಅಲ್ಲೀಗ ಆಗಿರುವ ಅಭಿವೃದ್ಧಿ ನೋಡಿಕೊಂಡು ಬನ್ನಿ ಎಂದು ಅವರು ಸಲಹೆ ನೀಡಿದರು.
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ:
ಆರ್‌ಎಸ್‌ಎಸ್ ಬಿಜೆಪಿಯ ಪಾಪದ ಕೂಸು ಎಂದು ಟೀಕಿಸಿರುವ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ಅಂದ್ರೆ ಯಾರನ್ನೋ ಬೈಯ್ಯೋದು. ಹೀಗಳೆಯೋದು ಎನ್ನುವಂತಾಗಿದೆ. ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದ 40 ವರ್ಷ ಕಾಲ ನೆಹರುರನ್ನು ದೇಶ ವಿಭಜಕ ಅಂತಿದ್ರು. ಇಂದಿರ ಗಾಂಧಿಯರವನ್ನು ಪ್ರಜಾಪ್ರಭುತ್ವದ ಕೊಲೆಗಾರ್ತಿ ಅಂತಿದ್ರು. ಈಗ 15 ವರ್ಷದಿಂದ ಅವರ ಸೊಸೆ ಸೋನಿಯಾ ಗಾಂಧಿಯನ್ನು ಅಧಿನಾಯಕಿ ಅಂತಿದಾರೆ. ಮೊಮ್ಮಗನನ್ನು ರಾಜಕುಮಾರ ಅಂತಾವ್ರೆ. ಯಾವ ಕುಟುಂಬದ ಬಗ್ಗೆಯೂ ಸಿದ್ದರಾಮಯ್ಯಗೆ ವಿಚಾರ ಸ್ಪಷ್ಟತೆ ಇಲ್ಲ. ಸಿದ್ದರಾಮಯ್ಯರಿಂದ ಕಲಿಯಬೇಕಾದದ್ದು ಏನು ಇಲ್ಲ ಎಂದು ಕಿಡಿಕಾರಿದರು. ಆಧಾರ್, ಪಾನ್ ಲಿಂಕ್ ಮಾಡಿಸಿಲ್ಲ. ಸ್ಮಾರ್ಟ್‌ಪೋನ್ ಬಳಸೋದು ಗೊತ್ತಿಲ್ಲ ಅನ್ನೋ ಸಿದ್ದರಾಮಯ್ಯ ಯಾವ ಸೀಮೆಯ ಅರ್ಥಶಾಸ್ತ್ರಜ್ಞ ಎಂದು ಅವರು ವಾಗ್ದಾಳಿ ನಡೆಸಿದರು.