ಇತ್ತೀಚೆಗೆ ನಡೆದಿರುವ ಐಟಿ ದಾಳಿಯಲ್ಲಿ ಸಿಕ್ಕಿರುವುದು ಬಿಜೆಪಿಯ ಮುಖಂಡರಿಗೆ ಸೇರಿದ ಹಣವಾಗಿದೆ, ಈ ಹಣಕ್ಕೂ ಕಾಂಗ್ರೆಸ್‌ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಈ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡಿರುವುದು ಬಿಜೆಪಿ ಸರ್ಕಾರ, ಇದು ಬಿಜೆಪಿಯ ಪಾಪದ ಕೂಸು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ.  

ಬೆಂಗಳೂರು (ಅ.18): ಇತ್ತೀಚೆಗೆ ನಡೆದಿರುವ ಐಟಿ ದಾಳಿಯಲ್ಲಿ ಸಿಕ್ಕಿರುವುದು ಬಿಜೆಪಿಯ ಮುಖಂಡರಿಗೆ ಸೇರಿದ ಹಣವಾಗಿದೆ, ಈ ಹಣಕ್ಕೂ ಕಾಂಗ್ರೆಸ್‌ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಈ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡಿರುವುದು ಬಿಜೆಪಿ ಸರ್ಕಾರ, ಇದು ಬಿಜೆಪಿಯ ಪಾಪದ ಕೂಸು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದಾಳಿಯ ವೇಳೆ ಕೆಲವು ಡೈರಿ, ಪುಸ್ತಕಗಳು ಸಿಕ್ಕಿವೆ ಎಂಬ ಮಾಹಿತಿ ತಮಗೆ ಬಂದಿದೆ. ದಾಖಲೆಗಳು ಬಹಿರಂಗಗೊಂಡರೆ ದಾಳಿಯಲ್ಲಿ ಸಿಕ್ಕಿರುವ ಹಣ ಯಾರಿಗೆ ಸಿಕ್ಕಿದೆ ಎಂಬ ಸತ್ಯಾಂಶ ಹೊರ ಬರುತ್ತದೆ. 

ರಾಜ್ಯದಲ್ಲಿ ಬಿಜೆಪಿ ಭ್ರಷ್ಟಾಚಾರ ಮಾಡಿದೆ, ಭ್ರಷ್ಟಾಚಾರಕ್ಕೆ ಬಿಜೆಪಿಯೇ ಅಡಿಪಾಯ. ಅದರ ಭ್ರಷ್ಟಾಚಾರ ಹಿಮಾಲಯ ಇದ್ದಂತೆ, ಆ ಕಾರಣದಿಂದ ರಾಜ್ಯದ ಜನರು ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸದಿದ್ದಾರೆ ಎಂದರು. ಐಟಿ ದಾಳಿಯಿಂದ ಕಾಂಗ್ರೆಸ್‌ ಹೈಕಮಾಂಡ್‌ ನಡುಗುತ್ತಿದೆ ಎಂದು ಬಿಜೆಪಿ ಮುಖಂಡ ಆರ್‌. ಅಶೋಕ್ ಅವರ ಮಾತಿಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಅವರು, ನಡುಗುತ್ತಿರುವುದು ಕಾಂಗ್ರೆಸ್‌ ಹೈಕಮಾಂಡ್‌ ಅಲ್ಲ, ಬಿಜೆಪಿ ಹೈಕಮಾಂಡ್‌, ಈ ಭ್ರಷ್ಟಾಚಾರಕ್ಕೆ ಅಡಿಪಾಯ ಆರ್‌. ಅಶೋಕ್‌, ನಕಲಿಸ್ವಾಮಿ, ಲೂಟಿ ರವಿ. 

ಕೋಟಿ ನಗದು ಪತ್ತೆ ಬಗ್ಗೆ ಸಿಬಿಐ ತನಿಖೆ ನಡೆಸಿ: ಬಿ.ಎಸ್‌.ಯಡಿಯೂರಪ್ಪ

ನವರಂಗಿ ನಾರಾಯಣ, ಬ್ಲಾಕ್‌ ಮೇಲರ್‌ಗಳು. ಈ ಅಕ್ರಮದ ಹಿಂದೆ ಇವರ ಹೆಸರಿದೆ. ಅವರು ಯಾರಿಂದ ತನಿಖೆ ಮಾಡಿಸುತ್ತಾರೋ ಮಾಡಿಸಲಿ, ತನಿಖೆ ಆಗಲಿ ಎಂದೇ ನಮ್ಮ ನಾಯಕರು ಹೇಳುತ್ತಿದ್ದಾರೆ ಎಂದು ಹೇಳಿದರು. ಐಟಿ ಅಧಿಕಾರಿಗಳು ಅಧಿಕೃತ ಹೇಳಿಕೆ ನೀಡಲಿ ಎಂದು ಈವರೆಗೆ ಮಾತನಾಡಿರಲಿಲ್ಲ. ನಿನ್ನೆ ಅಧಿಕಾರಿಗಳು ಪ್ರಕಟಣೆ ನೀಡಿದ್ದಾರೆ. ಈಗ ಎಲ್ಲ ತನಿಖಾ ಸಂಸ್ಥೆಗಳು ಅವರ ಬಳಿ ಇವೆ, ಅವುಗಳನ್ನು ಬಿಚ್ಚಿಡಬೇಕು ಎಂದು ಡಿ.ಕೆ. ಶಿವಕುಮಾರ್‌ ಆಗ್ರಹಿಸಿದರು.

ಒರಿಜಿನಲ್‌ ಜೆಡಿಎಸ್‌ಗೆ ನಾನೇ ಅಧ್ಯಕ್ಷ, ಇಂಡಿಯಾಕ್ಕೆ ನಮ್ಮ ಬೆಂಬಲ: ಇಬ್ರಾಹಿಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಉದ್ದೇಶಿಸಿ ‘ಕಲೆಕ್ಷನ್‌ ಮಾಸ್ಟರ್‌’ ಪೋಸ್ಟರ್‌ ಬಿಡುಗಡೆ ಮಾಡಿರುವ ಬಗ್ಗೆ ಉತ್ತರಿಸಿದ ಅವರು, ಬಿಜೆಪಿಯ ಭ್ರಷ್ಟಾಚಾರ ಹಿಮಾಲಯದಷ್ಟಿದೆ, ಸಿಎಂ ಹುದ್ದೆಗೆ 2500 ಕೋಟಿ ರು. ಕಲೆಕ್ಷನ್‌ ನಡೆದಿತ್ತು. ಮುಖ್ಯಮಂತ್ರಿಗಳ ಕಚೇರಿಯಲ್ಲಿ ಎಷ್ಟು ಭ್ರಷ್ಟಾಚಾರ ನಡೆದಿತ್ತು ಎಂಬುದನ್ನು ಅವರ ಶಾಸಕರು, ಮಾಜಿ ಮಂತ್ರಿಗಳೇ ಹೇಳಿದ್ದಾರೆ. ಈಗ ನಮ್ಮನ್ನು ಟೀಕಿಸುವವರು ಒಮ್ಮೆ ಅದನ್ನು ನೋಡಲಿ ಎಂದು ತಿರುಗೇಟು ನೀಡಿದರು.